ಬುಧವಾರ, ಜೂನ್ 3, 2020
27 °C
ಜೀವ ವೈವಿಧ್ಯದ ದೊಡ್ಡ ಜಾಲ

ಬಿಸಿಲೂರಿನಲ್ಲೊಂದು ಹಸಿರಿನ ‘ಜೋಗ’

ಶಶಿಕಾಂತ ಎಸ್. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Deccan Herald

ಮಂಜಿನ ಹೊದಿಕೆ ಸರಿಸುತ್ತಾ ಸಾಗಿದರೆ ಬೆಟ್ಟಗಳ ಸಾಲುಗಳು ಮಸುಕಾಗಿ ತೆರೆದುಕೊಳ್ಳುತ್ತವೆ. ಗುಡ್ಡಗಳ ನಡುವೆ ಕಿರಿದಾದ ಮಾರ್ಗದಲ್ಲಿ ಸಾಗಿದರೆ, ದಾರಿಯಂಚಿನಲ್ಲಿ ಸಿಗುವ ಸಣ್ಣ ಕೆರೆಗಳು, ನೀರಿನ ಝರಿಗಳ ಜಲ ಜಲ ನಾದ..ಜತೆಗೆ ಹಳ್ಳ–ಕೊಳ್ಳಗಳ ನರ್ತನ.. ಅದು ‘ಜೋಗ’ದ ದರ್ಶನ.

ಜೋಗ ಎಂದರೆ ಅದು ಜಲಪಾತಗಳ ಜೋಗವಲ್ಲ. ಬಿರುಬಿಸಿಲಿನಿಂದಲೇ ಹೆಸರಾಗಿರುವ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಜೋಗ ಗ್ರಾಮ. ಹಚ್ಚ ಹಸಿರಿನ ಗಿರಿ ಕಂದರಗಳಿಂದ ಕೂಡಿರುವ ಈ ಗ್ರಾಮಕ್ಕೆ ಹೋದರೆ ಥೇಟ್‌ ಮಲೆನಾಡಿಗೆ ಹೋದಂತೆ ಭಾಸವಾಗುತ್ತದೆ.

ಮೂಲಕ ಜೋಗಕ್ಕೆ ಹೋಗುವುದೇ ವಿಶೇಷ ಅನುಭವ. ದಾರಿಯಲ್ಲಿ ಸಿಗುವ ಕಿರಿದಾದ ಹಳ್ಳ–ಕೊಳ್ಳಗಳು ಮನಸ್ಸಿಗೆ ಮುದ ನೀಡುತ್ತವೆ. ರಸ್ತೆಯ ಎರಡೂ ಬದಿಯಲ್ಲಿರುವ ಭತ್ತದ ಗದ್ದೆಗಳು ಹಸಿರಿನ ಹೊದಿಕೆ ಹಾಸಿದಂತೆ ಗೋಚರಿಸುತ್ತವೆ. ಎಲ್ಲೆಡೆ ಸ್ವಚ್ಛಂದವಾಗಿ ನವಿಲುಗಳು ನಲಿದಾಡುತ್ತವೆ. ಅವುಗಳ ನಲಿದಾಟ ಪುಳಕಗೊಳಿಸುತ್ತದೆ.

200ಕ್ಕೂ ಹೆಚ್ಚು ಜಾತಿಗೆ ಸೇರಿದ ಪಕ್ಷಿ ಸಂಕುಲ ಇಲ್ಲಿ ನೆಲೆಸಿದೆ. ಮಾರ್ಗದುದ್ದಕ್ಕೂ ಅವುಗಳ ಚಿಂವ್‌.. ಚಿಂವ್‌.. ಶಬ್ದ ಕಿವಿಗೆ ಅಪ್ಪಳಿಸುತ್ತದೆ. ಚಿರತೆ, ಕರಡಿ, ಕಾಡುಹಂದಿ ಸೇರಿದಂತೆ ದೊಡ್ಡ ಜೀವಜಾಲವೇ ಇಲ್ಲಿದೆ. ಆದರೆ, ಅವು ತಮ್ಮ ಪಾಡಿಗೆ ಕಾಡಿನಲ್ಲಿ ವಿಹರಿಸುತ್ತವೆ. ಹವ್ಯಾಸಿ ಛಾಯಾಗ್ರಾಹಕರು, ಚಾರಣಿಗರು, ಸಸ್ಯಶಾಸ್ತ್ರದ ಅಧ್ಯಯನಕಾರರು, ಪಕ್ಷಿ ವೀಕ್ಷಕರಿಗೆ, ವನ್ಯಜೀವಿ ಪ್ರೇಮಿಗಳಿಗೆ ಈ ಸ್ಥಳ ಹೇಳಿ ಮಾಡಿಸಿದಂತಿದೆ.

ಜೋಗದಿಂದ ಐದು ಕಿ.ಮೀ ದೂರದಲ್ಲಿ ಅನ್ನಪೂರ್ಣೇಶ್ವರಿ ಮಠದ ದೇವರ ಕೊಳ್ಳ ಇದೆ. ಸುತ್ತ ಹಸಿರಿನ ತಾಣ, ನಡುವೆ ದೇವಸ್ಥಾನವಿದೆ. ಬೆಟ್ಟದ ತುದಿಯಲ್ಲಿರುವ ಮಠಕ್ಕೆ ಅಂಕು ಡೊಂಕಾದ ಮೆಟ್ಟಿಲುಗಳ ಮೂಲಕ ಹಾದು ಹೋಗಬೇಕು. ಮೇಲಕ್ಕೆ ಹೋಗುತ್ತಿದ್ದಂತೆ ಇಡೀ ಪ್ರಕೃತಿಯ ಸೊಬಗು ಕಣ್ಮನ ತಣಿಸುತ್ತದೆ. ಆಯಾಸವೆಲ್ಲ ಕ್ಷಣಾರ್ಧದಲ್ಲಿ ದೂರವಾಗುತ್ತದೆ. ಅಕ್ಕಪಕ್ಕದ ಬೆಟ್ಟಗುಡ್ಡಗಳ ಸಾಲಿನಿಂದ ಮೋಡಗಳು ಚಲಿಸಿ ಹೋಗುವ ದೃಶ್ಯ ನೋಡುತ್ತಿದ್ದರೆ ಮೈ ಮರೆಯುವುದು ಸಹಜ.

***

ಹೋಗುವುದು ಹೇಗೆ?

ಸಂಡೂರು ತಾಲ್ಲೂಕು ವ್ಯಾಪ್ತಿಗೆ ಬರುವ ಜೋಗವು ಹೊಸಪೇಟೆಯಿಂದ 23 ಕಿ.ಮೀ ದೂರದಲ್ಲಿದೆ. ಬಳ್ಳಾರಿ ರಸ್ತೆಯ ಮೂಲಕ ಕಾಕುಬಾಳು ಗ್ರಾಮಕ್ಕೆ ಹೋಗಬೇಕು. ಅಲ್ಲಿಂದ ಮುಂದೆ ಮೂರು ಕಿ.ಮೀ ದೂರದಲ್ಲಿ ಜೋಗ ಇದೆ. ದೇವರ ಕೊಳ್ಳಕ್ಕೆ ಹೋಗಲು ಜೋಗದಿಂದ ಮತ್ತೆ ಐದು ಕಿ.ಮೀ ಸಂಚರಿಸಬೇಕು.

ಗ್ರಾಮದಿಂದ ಮಠದ ವರೆಗೆ ಉತ್ತಮ ರಸ್ತೆಯಿದ್ದು, ದ್ವಿಚಕ್ರ ವಾಹನ, ಕಾರಿನಲ್ಲಿಯೂ ಹೋಗಬಹುದು. ಮಠ ಇರುವ ಅಂಚಿನ ಜಾಗಕ್ಕೆ ತಲುಪಿ, ಅಲ್ಲಿಂದ ಮೆಟ್ಟಿಲುಗಳನ್ನು ಹತ್ತಿಕೊಂಡು ದೇವರ ಕೊಳ್ಳ ಸೇರಬಹುದು. ಕೊಳ್ಳದ ಮೇಲೆ ನಿಂತುಕೊಂಡು ಸುತ್ತಮುತ್ತಲಿನ ಪರಿಸರವನ್ನು ನೋಡುತ್ತಿದ್ದರೆ ವರ್ಣಿಸಲಾಗದಂತಹ ಅನುಭವ ಆಗುತ್ತದೆ. ಕುಟುಂಬ ಸದಸ್ಯರೊಂದಿಗೆ ಒಂದು ದಿನದ ಪಿಕ್‌ನಿಕ್‌ಗೆ ಹೇಳಿ ಮಾಡಿಸಿದ ಸ್ಥಳವಿದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.