ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಭೌತಶಾಸ್ತ್ರ ಪಾಠ-ಅಧ್ಯಾಯ-10| ಬೆಳಕು, ಪ್ರತಿಫಲನ ಮತ್ತು ವಕ್ರೀಭವನ

Last Updated 2 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಭೌತಶಾಸ್ತ್ರ ಅಧ್ಯಾಯ-10

ಒಂದು ವಸ್ತುವಿನ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿದಾಗ, ಪ್ರತಿಫಲಿತ ಬೆಳಕನ್ನು ನಮ್ಮ ಕಣ್ಣುಗಳು ಸ್ವೀಕರಿಸಿದಾಗ ವಸ್ತುಗಳು ನಮಗೆ ಗೋಚರಿಸುತ್ತವೆ. ಬೆಳಕು ಯಾವಾಗಲೂ ಸರಳರೇಖೆಯ ಪಥದಲ್ಲಿ ಚಲಿಸುತ್ತದೆ. ಬೆಳಕಿನ ಹಾದಿಯಲ್ಲಿ ಅಪಾರದರ್ಶಕ ವಸ್ತುವು ಬಂದಾಗ ನೆರಳನ್ನು ಉಂಟು ಮಾಡುತ್ತದೆ.

ಬೆಳಕಿನ ಪ್ರತಿಫಲನ

ದರ್ಪಣದಂತಹ ಹೆಚ್ಚು ನಯಗೊಳಿಸಿದ ಮೇಲ್ಮೈಗಳು ತಮ್ಮ ಮೇಲೆ ಬೀಳುವ ಬೆಳಕನ್ನು ಹಿಂದಕ್ಕೆ ಪ್ರತಿಫಲಿಸುತ್ತವೆ. ಈ ಕ್ರಿಯೆಯನ್ನು ಬೆಳಕಿನ ಪ್ರತಿಫಲನ ಎನ್ನುವರು.

ಪ್ರತಿಫಲದ ನಿಯಮಗಳು

1. ಪತನ ಕೋನವು ಪ್ರತಿಫಲನ ಕೋನಕ್ಕೆ ಸಮನಾಗಿರುತ್ತದೆ.

2. ಪತನ ಕಿರಣ ಪತನ ಬಿಂದುವಿನಲ್ಲಿ ಪ್ರತಿಫಲನದ ಮೇಲ್ಮೈಗೆ ಎಳೆದ ಲಂಬ ಮತ್ತು ಪ್ರತಿ ಫಲಿತ ಕಿರಣ ಈ ಮೂರು ಒಂದೇ ಸಮತಲದಲ್ಲಿರುತ್ತವೆ.

ಸಮತಲ ದರ್ಪಣದಲ್ಲಿ ಉಂಟಾಗುವ ಪ್ರತಿಬಿಂಬದ ಲಕ್ಷಣಗಳು

ಉಂಟಾದ ಪ್ರತಿಬಿಂಬವು ಯಾವಾಗಲೂ ಮಿಥ್ಯ ಮತ್ತು ನೇರವಾಗಿರುತ್ತದೆ.

ಪ್ರತಿಬಿಂಬದ ಗಾತ್ರವು ವಸ್ತುವಿನ ಗಾತ್ರಕ್ಕೆ ಸಮನಾಗಿರುತ್ತದೆ.

ವಸ್ತುವು ದರ್ಪಣದ ಮುಂದೆ ಎಷ್ಟು ದೂರದಲ್ಲಿದೆಯೋ, ಅಷ್ಟೆ ಹಿಂದೆ ಪ್ರತಿಬಿಂಬವು ಉಂಟಾಗುತ್ತದೆ.

ವಕ್ರ ಮೇಲ್ಮೈ ದರ್ಪಣಗಳು (ಗೋಳೀಯ ದರ್ಪಣಗಳು)

1) ನಿಮ್ಮ ದರ್ಪಣ:ಗೋಳೀಯ ದರ್ಪಣದ, ಪ್ರತಿಫಲಿಸುವ ಮೇಲ್ಮೈ ಒಳಮುಖವಾಗಿ ಬಾಗಿದ್ದರೆ ಅಂದರೆ, ಗೋಳದ ಕೇಂದ್ರದ ಕಡೆಗೆ ಮುಖ ಮಾಡಿದ್ದರೆ ಅದನ್ನು ನಿಮ್ನ ದರ್ಪಣ ಎಂದು ಕರೆಯುತ್ತಾರೆ.

2) ಪೀನದರ್ಪಣ:ಗೋಳೀಯ ದರ್ಪಣದ ಪ್ರತಿಫಲಿಸುವ ಮೇಲ್ಮೈ ಹೊರಮುಖವಾಗಿದ್ದರೆ ಅದನ್ನು ಪೀನ ದರ್ಪಣ ಎನ್ನುವರು.

ಗೋಳೀಯ ದರ್ಪಣಗಳ ಕೆಲ ಮುಖ್ಯ ಅಂಶಗಳು

ಧ್ರುವ (P): ಒಂದು ಬಿಂದುವಾಗಿದ್ದು, ಗೋಳಾಕಾರದ ಪ್ರತಿಫಲಿಸುವ ಮೇಲ್ಮೈಯ ಕೇಂದ್ರವಾಗಿದೆ.

ವಕ್ರತಾ ಕೇಂದ್ರ (C): ಇದು ಗೋಳೀಯ ದರ್ಪಣದ ಪ್ರತಿಫಲಿಸುವ ಮೇಲ್ಮೈ ರೂಪಿಸುವ ಗೋಳದ ಕೇಂದ್ರವಾಗಿದೆ. ಇದು ನಿಮ್ನ ದರ್ಪಣದಲ್ಲಿ ಅದರ ಮುಂಭಾಗದಲ್ಲಿಯೂ, ಪೀನ ದರ್ಪಣದಲ್ಲಿ ಅದರ ಹಿಂಭಾಗದಲ್ಲಿಯೂ ಇರುತ್ತದೆ.

ವಕ್ರತಾ ತ್ರಿಜ್ಯ (R): ಗೋಳೀಯ ದರ್ಪಣದ ಪ್ರತಿಫಲಿಸುವ ಭಾಗವನ್ನು ಹೊಂದಿರುವ ಗೋಳದ ತ್ರಿಜ್ಯವನ್ನು ದರ್ಪಣದ ವಕ್ರತಾ ತ್ರಿಜ್ಯ ಎನ್ನುವರು.

ಪ್ರಧಾನಾಕ್ಷ: ಗೋಳೀಯ ದರ್ಪಣದ ವಕ್ರತಾ ಕೇಂದ್ರ ಮತ್ತು ಧ್ರುವದ ಮೂಲಕ ಹಾದು ಹೋಗುವ ಸರಳ ರೇಖೆಯಾಗಿದೆ.

ಸಂಗಮ ಬಿಂದು (F): ನಿಮ್ನ ದರ್ಪಣದಲ್ಲಿ ಪ್ರತಿಫಲಿತ ಕಿರಣಗಳು ದರ್ಪಣದ ಪ್ರಧಾನಾಕ್ಷದ ಮೇಲಿರುವ ಒಂದು ಬಿಂದುವಿನಲ್ಲಿ ಸಂಧಿಸುತ್ತವೆ. ಇದನ್ನು ನಿಮ್ನದರ್ಪಣದ ಸಂಗಮ ಬಿಂದು ಎನ್ನುವರು.

ಪೀನ ದರ್ಪಣದಲ್ಲಿ ಪ್ರತಿಫಲಿತ ಕಿರಣಗಳು ಪ್ರಧಾನಾಕ್ಷದ ಮೇಲಿರುವ ಒಂದು ಬಿಂದುವಿನಿಂದ ಬಂದಂತೆ ಭಾಸವಾಗುತ್ತದೆ. ಈ ಬಿಂದುವನ್ನು ಪೀನದರ್ಪಣದ ಸಂಗಮ ಬಿಂದು ಎನ್ನುವರು.

ಸಂಗಮ ದೂರ (f): ಇದು ಗೋಳೀಯ ದರ್ಪಣದ ಧ್ರುವ ಮತ್ತು ಸಂಗಮ ಬಿಂದುಗಳ ನಡುವಿನ ದೂರವಾಗಿದೆ.

ಅಪರ್ಚರ್: ಇದು ಗೋಳೀಯ ದರ್ಪಣದ ಪ್ರತಿಫಲಿಸುವ ಮೇಲ್ಮೈನ ವ್ಯಾಸವಾಗಿದೆ.

ವಕ್ರತಾ ತ್ರಿಜ್ಯ ಮತ್ತು ಸಂಗಮ ದೂರಗಳ ನಡುವಿನ ಸಂಬಂಧ: ಗೋಳೀಯ ದರ್ಪಣದ ವಕ್ರತಾ ತ್ರಿಜ್ಯ R ಮತ್ತು ಸಂಗಮ ದೂರ f ಗಳ ನಡುವಿನ ಸಂಬಂಧವು R=2f ಆಗಿದೆ. ಅಂದರೆ ವಕ್ರತಾ ತ್ರಿಜ್ಯ ಸಂಗಮ ದೂರ ಎರಡರಷ್ಟಿರುತ್ತದೆ ಮತ್ತು ಸಂಗಮ ಬಿಂದುವು ದರ್ಪಣದ ಧ್ರುವ ಮತ್ತು ವಕ್ರತಾ ಕೇಂದ್ರವನ್ನು ಸೇರಿಸುವ ರೇಖೆಯ ಮಧ್ಯಭಾಗದಲ್ಲಿರುತ್ತದೆ.

ನಿಮ್ಮ ದರ್ಪಣದ ಉಪಯೋಗಗಳು

ಟಾರ್ಚ್‌ಗಳಲ್ಲಿ, ತಪಾಸಣಾ ದೀಪಗಳಲ್ಲಿ ಮತ್ತು ವಾಹನಗಳ ಮುಂಭಾಗದ ದೀಪಗಳಲ್ಲಿ ಬೆಳಕಿನ ಸಮಾಂತರ ಕಿರಣ ಪುಂಜವನ್ನು ಪಡೆಯಲು ಬಳಸಲಾಗುತ್ತದೆ.

ಕ್ಷೌರ ದರ್ಪಣಗಳಲ್ಲಿ ಮುಖದ ದೊಡ್ಡ ಪ್ರತಿಬಿಂಬ ಪಡೆಯಲು ಬಳಸುತ್ತಾರೆ.

ದಂತ ವೈದ್ಯರು ರೋಗಿಯ ಹಲ್ಲುಗಳ ದೊಡ್ಡ ಪ್ರತಿಬಿಂಬವನ್ನು ಪಡೆಯಲು ಬಳಸುತ್ತಾರೆ.

ಸೌರ ಕುಲುಮೆಗಳಲ್ಲಿ ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಲು ಬಳಸುತ್ತಾರೆ

ಪೀನದರ್ಪಣದ ಉಪಯೋಗಗಳು

ವಾಹನಗಳಲ್ಲಿ ಹಿನ್ನೋಟ ದರ್ಪಣಗಳಾಗಿ ಉಪಯೋಗಿಸುತ್ತಾರೆ. ಇದು ಅವರ ಹಿಂಭಾಗದ ಹೆಚ್ಚಿನ ಕ್ಷೇತ್ರವನ್ನು ವೀಕ್ಷಿಸಲು ಸಹಾಯಕವಾಗಿದೆ.

ಸಂಚಾರಿ ದರ್ಪಣಗಳಾಗಿ ಬಳಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT