ಗುಂಡ್ಲುಪೇಟೆ ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ: ಜಾಮೀನು ಅರ್ಜಿ 11ಕ್ಕೆ ಆದೇಶ

ಚಾಮರಾಜನಗರ: ಗುಂಡ್ಲುಪೇಟೆ ಕಬ್ಬೆಕಟ್ಟೆಯ ಬೆತ್ತಲೆ ಮೆರವಣಿಗೆ ಪ್ರಕರಣದ ಆರು ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇದೇ 11ಕ್ಕೆ ಕಾಯ್ದಿರಿಸಿದೆ.
ಆರೋಪಿಗಳಾದ ಶಿವಪ್ಪ, ಬಸವರಾಜು, ಮಾಣಿಕ್ಯ, ಸತೀಶ್, ಚನ್ನಕೇಶವಮೂರ್ತಿ ಮತ್ತು ಪುಟ್ಟಸ್ವಾಮಿ ಅವರ ನ್ಯಾಯಾಂಗ ಬಂಧನದ ಅವಧಿಯೂ ಅದೇ ದಿನ ಮುಕ್ತಾಯವಾಗಲಿದ್ದು, ಅಂದೇ ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಾಲಯ ನೀಡಲಿದೆ.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧಿಶ ಜಿ.ಬಸವರಾಜ ಅವರು ಶುಕ್ರವಾರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡರು.
ಪಬ್ಲಿಕ್ ಪ್ರಾಸಿಕ್ಯೂಟರ್ ಲೋಲಾಕ್ಷಿ ಅವರು ಆರೋಪಿಗಳಿಗೆ ಜಾಮೀನು ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
‘ದೇಹದ ಮಾನವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಹಕ್ಕು. ಅಂತಹದ್ದರಲ್ಲಿ ನಗ್ನವಾಗಿ ಮೆರವಣಿಗೆ ಮಾಡಲಾಗಿದೆ. ಆರೋಪಿಗಳು ಸಂತ್ರಸ್ತನ ಕೈಯನ್ನು ಕಟ್ಟಿ ಹಾಕಿದ್ದರು. ಕನಿಷ್ಠ ಪಕ್ಷ ಬಟ್ಟೆಯನ್ನಾದರೂ ತೊಡಿಸಬಹುದಿತ್ತು’ ಎಂದು ವಾದಿಸಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೊ ಹೊಂದಿದ್ದ ಸಿ.ಡಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಆರೋಪಿಗಳ ಪರ ವಾದ ಮಂಡಿಸಿದ ನಂಜನಗೂಡಿನ ವಕೀಲರಾದ ಶ್ರುತಿ ಅವರು, ‘ಉದ್ದೇಶಪೂರ್ವಕವಾಗಿ ಕೃತ್ಯ ನಡೆದಿಲ್ಲ. ಆರೋಪಿಗಳು ಈಗಾಗಲೇ 22 ದಿನಗಳಿಂದ ಜೈಲಿನಲ್ಲಿದ್ದಾರೆ. ಹಾಗಾಗಿ ಜಾಮೀನು ಮಂಜೂರು ಮಾಡಬೇಕು’ ಎಂದು ವಾದಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರು ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರೊಬ್ಬರೊಂದಿಗೆ ಮಾತನಾಡಿದ ಆಡಿಯೊ ತುಣಕು ಇರುವ ಧ್ವನಿಮುದ್ರಿಕೆಯನ್ನು ಅವರು ನ್ಯಾಯಾಧೀಶರಿಗೆ ಸಲ್ಲಿಸಿದರು.
ಎರಡೂ ಮದ್ರಿಕೆಗಳನ್ನು ಪರಿಶೀಲಿಸುವುದಾಗಿ ಹೇಳಿದ ಬಿ.ಬಸವರಾಜ ಅವರು, ‘ಆರೋಪಿಗಳಿಗೆ ಯಾಕೆ ಜಾಮೀನು ನೀಡಬಾರದು’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ಪ್ರಶ್ನಿಸಿದರು.
‘ಆರು ಆರೋಪಿಗಳ ಪೈಕಿ ಐವರ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹಾಗಾಗಿ ಜಾಮೀನು ನೀಡಬಾರದು’ ಎಂದು ಲೋಲಾಕ್ಷಿಯವರು ಹೇಳಿದರು.
ವಿಡಿಯೊ ವೈರಲ್ ಆಗಿರುವುದನ್ನು ಪ್ರಸ್ತಾಪಿಸಿದ ನ್ಯಾಯಾಧೀಶರು, ‘ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಯಾಕೆ ಪೊಲೀಸರು ಪ್ರಕರಣ ದಾಖಲಿಸಿಲ್ಲ’ ಎಂದು ಪ್ರಶ್ನಿಸಿದರು. ತನಿಖಾಧಿಕಾರಿಗಳು ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ ಎಂದು ಲೋಲಾಕ್ಷಿ ಹೇಳಿದರು.
ಎರಡು ಕಡೆಯ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು 11ಕ್ಕೆ ಆದೇಶ ನೀಡುವುದಾಗಿ ಪ್ರಕಟಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.