ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ವರಕ್ಕೆ ದಿವ್ಯೌಷಧ ಅಮೃತ ಬಳ್ಳಿ

Last Updated 26 ಜೂನ್ 2020, 19:30 IST
ಅಕ್ಷರ ಗಾತ್ರ

ಕಾಯಿಲೆ, ಸೋಂಕು ಬಂದ ಮೇಲೆ ಪರದಾಡುವುದಕ್ಕಿಂತ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಒಳಿತು. ಈಗಂತೂ ಇದು ಹೆಚ್ಚು ಪ್ರಸ್ತುತ ಕೂಡ. ವ್ಯಾಧಿ ಕ್ಷಮತೆ ಹೆಚ್ಚಿಸಲು, ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿ ಬಳಸಬಹುದಾದ ಆಯುರ್ವೇದ, ವನಸ್ಪತಿ ಔಷಧಗಳಲ್ಲಿ ಅಮೃತ ಬಳ್ಳಿಯ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಇದು ಆಯುರ್ವೇದದಲ್ಲಿ ಒಂದು ಚಿರಪರಿಚಿತವಾದ ಔಷಧಿ ಸಸ್ಯ. ಎಲ್ಲ ತರಹದ ಜ್ವರ, ಮಧುಮೇಹ, ಮೂತ್ರನಾಳದ ಸೋಂಕು, ರಕ್ತಹೀನತೆ, ಕಾಮಾಲೆ, ಉಬ್ಬಸ, ಹೃದಯದ ಕಾಯಿಲೆ ಮುಂತಾದವುಗಳಲ್ಲಿ ಬಳಸಲಾಗುತ್ತಿದೆ. ಇದು ‘ಇಮ್ಯುನೋ ಮಾಡ್ಯುಲೇಟರ್’ ಆಗಿರುವುದರಿಂದ ರೋಗನಿರೋಧಕ ಶಕ್ತಿಯನ್ನು ಜಾಸ್ತಿ ಮಾಡಲು ಬಳಸುತ್ತಾರೆ.

ಅಮೃತ ಬಳ್ಳಿಯು ಹೆಸರಿಗೆ ತಕ್ಕಂತೆ ಹಲವಾರು ಅಮೂಲ್ಯ ಔಷಧೀಯ ಗುಣಗಳನ್ನು ಹೊಂದಿದೆ. ಸುಮಾರು 75ಕ್ಕೂ ಹೆಚ್ಚು ಕಾಯಿಲೆಗಳಿಗೆ ಇದರ ಉಪಯೋಗವಿದೆ. ಎಲ್ಲಾ ವಯಸ್ಸಿನವರಿಗೂ ಅಮೃತಬಳ್ಳಿಯನ್ನು ಕೊಡಬಹುದು. ಆಯುರ್ವೇದದ ಹಲವಾರು ಔಷಧಿಗಳಲ್ಲಿ ಅಲ್ಲದೆ ಅಲೋಪಥಿ ಔಷಧಿಗಳ ತಯಾರಿಕೆಯಲ್ಲಿಯೂ ಇದನ್ನು ಹೇರಳವಾಗಿ ಬಳಸುತ್ತಾರೆ. ಸಂಸ್ಕೃತದಲ್ಲಿ ಇದಕ್ಕೆ ಚಿನ್ನರುಹಾ ಎನ್ನುತ್ತಾರೆ, ಅಂದರೆ ರೋಗಗಳನ್ನು ಛಿನ್ನ ಛಿನ್ನವಾಗಿ ಮಾಡಿ ಪೂರ್ತಿಯಾಗಿ ಹೋಗಲಾಡಿಸುತ್ತದೆ. ಹಾಗೆಯೇ ಹಿಂದಿಯಲ್ಲಿ ಗಿಲೋಯ್‌ ಎಂಬ ಶಬ್ದ ಜನಪ್ರಿಯವಾಗಿದೆ. ಉಪಯುಕ್ತ ಭಾಗಗಳೆಂದರೆ ಕಾಂಡ, ಎಲೆ ಹಾಗೂ ಬೇರು.

ಗುಣ ಲಕ್ಷಣಗಳು

ಸೂಕ್ಷ್ಮ ಜೀವಿ ವಿರೋಧಿ, ಆ್ಯಂಟಿ ವೈರಲ್‌, ವ್ಯಾಧಿ ಕ್ಷಮತೆ ಹೆಚ್ಚಿಸುವ ಗುಣ ಇದರಲ್ಲಿದ್ದು, ದೇಹಕ್ಕೆ ನವಚೈತನ್ಯ ನೀಡುತ್ತದೆ. ಕ್ಯಾನ್ಸರ್‌ ವಿರುದ್ಧ ಹೋರಾಡುವ ಗುಣವೂ ಇದರಲ್ಲಿದೆ. ಇದರಲ್ಲಿ ಕ್ಯಾಲ್ಸಿಯಂ, ಪಾಸ್ಫರಸ್, ಕಬ್ಬಿಣ, ತಾಮ್ರ, ಸತು, ಮ್ಯಾಂಗನೀಸ್ ಮೊದಲಾದ ಪೋಷಕಾಂಶಗಳಿವೆ.

ಮನೆ ಮದ್ದು

* ಎಲ್ಲ ತರಹದ ಜ್ವರ ಅಂದರೆ ಮಲೇರಿಯಾ, ಡೆಂಗಿ ಜ್ವರದಂತಹ ವೈರಲ್ ಸೋಂಕಿಗೂ ತುಂಬಾ ಪರಿಣಾಮಕಾರಿ.

* ಆರ್ಥ್ರೈಟಿಸ್- ಸಂದಿ ನೋವಿಗೆ: ಅಮೃತ ಬಳ್ಳಿ ಮತ್ತು ಹಸುವಿನ ತುಪ್ಪ ಸೇವಿಸಬಹುದು.

* ಮಲಬದ್ಧತೆಗೆ:ಅಮೃತ ಬಳ್ಳಿ ಮತ್ತು ಬೆಲ್ಲ ಸೇರಿಸಿ ಕೊಡಬಹುದು.

* ಪಿತ್ತದ ತೊಂದರೆ, ಚರ್ಮದ ತೊಂದರೆ, ಗ್ಯಾಸ್ಟ್ರೈಟಿಸ್, ತಲೆ ಸುತ್ತುವುದು ಮತ್ತು ಯಕೃತ್ತಿನ ತೊಂದರೆಗೆ: ಅಮೃತ ಬಳ್ಳಿ ಮತ್ತು ಕಲ್ಲು ಸಕ್ಕರೆ ದಿವ್ಯೌಷಧ.

* ಗೌಟ್‌ ಸಂದಿವಾತಕ್ಕೆ: ಅಮೃತ ಬಳ್ಳಿಕಷಾಯ ಮತ್ತು ಹರಳೆಣ್ಣೆ

* ಋತುಮಾನದ ಅಲರ್ಜಿಗೆ: ಅಮೃತ ಬಳ್ಳಿಯ ಪುಡಿ/ ಸತ್ವದ ಜೊತೆ ತ್ರಿಕಟು ಪುಡಿ ಮತ್ತು ಚಿಟಕೆ ಅರಿಸಿನವನ್ನು ಜೇನು ತುಪ್ಪದ ಜೊತೆಗೆ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು.

* ಅಮೃತ ಬಳ್ಳಿ ಎಲೆಗಳ ಪೇಸ್ಟ್‌ ಜೊತೆಗೆ ಅರಿಸಿನ ಸೇರಿಸಿ ಸೋರಿಯಾಸಿಸ್, ಎಕ್ಸಿಮಾದಂತಹ ಚರ್ಮದ ಕಾಯಿಲೆಗಳಿಗೆ ಹಚ್ಚಿದರೆ ಒಳ್ಳೆಯದು.

ರೋಗನಿರೋಧಕ ಶಕ್ತಿಗೆ: ಅಮೃತ ಬಳ್ಳಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜ್ವರವನ್ನು ತಡೆಗಟ್ಟುವಲ್ಲಿ ತುಂಬಾ ಪರಿಣಾಮಕಾರಿ. ಇದು ಆ್ಯಂಟಿ ವೈರಲ್ ಆಗಿ ಕೆಲಸ ಮಾಡುವುದರಿಂದ ಈಗಿನ ಪರಿಸ್ಥಿತಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದನ್ನು ಬಳಸಬಹುದು. ಕಷಾಯ ಅಥವಾ ಹರ್ಬಲ್ ಟೀ ರೂಪದಲ್ಲಿ ಸೇವಿಸಬಹುದು. ಪೌಡರ್ ಒಂದು ಚಮಚ ದಿನಕ್ಕೆ ಎರಡು ಬಾರಿ ಊಟದ ನಂತರ ಸೇವಿಸಬಹುದು. ಇದು ಮಾತ್ರೆ ರೂಪದಲ್ಲೂ ಲಭ್ಯ. ಅಮೃತಬಳ್ಳಿ, ಅಶ್ವಗಂಧ, ಪಿಪ್ಪಲಿ ಹಾಗೂ ನುಗ್ಗೆಕಾಯಿ ಸೊಪ್ಪಿನ ಪುಡಿಗಳನ್ನು ಸೇರಿಸಿ ಕುಡಿದರೆ ಒಳ್ಳೆಯದು.

ಯಾವುದಕ್ಕೂ ವೈದ್ಯರ ಸಲಹೆ ಪಡೆದು ಸೇವಿಸಿ.

(ಲೇಖಕಿ: ಆಯುರ್ವೇದ ವೈದ್ಯೆ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT