ಶುಕ್ರವಾರ, ಫೆಬ್ರವರಿ 26, 2021
29 °C

ಬಿಟ್ಟೇನೆಂದರೂ ಬಿಡದ ಸಖ ‘ಆತಂಕ’

ರಮ್ಯಾ ಶ್ರೀಹರಿ Updated:

ಅಕ್ಷರ ಗಾತ್ರ : | |

Deccan Herald

ಹೆಚ್ಚಿನ ಜನ ‘ನನಗೆ ಆತಂಕವಾಗುತ್ತಿದೆ’ ಎಂದು ಹೇಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆತಂಕ ನಿವಾರಣೆಗಾಗಿ ಗುಳಿಗೆಗಳನ್ನು ತೆಗೆದುಕೊಳ್ಳುವವರ ಸಂಖ್ಯೆಯೂ ಕಡಿಮೆ ಇಲ್ಲ.'ಆತಂಕ'ದಿಂದ ಕೆಟ್ಟ ಚಟಗಳಿಗೆ ದಾಸರಾಗುವ ಯುವಕ–ಯುವತಿಯರಂತೂ ನಮ್ಮ ನಡುವೆ ಅನೇಕರಿದ್ದಾರೆ. ಪ್ರತಿಯೊಬ್ಬರೂ ಒಂದಲ್ಲಾ ಒಂದು ಸಂದರ್ಭದಲ್ಲಿ ಆತಂಕಕ್ಕೆ ಒಳಗಾಗುವರೇ! ಹಾಗಾದರೆ, ‘ಆತಂಕ’ ಎಂದರೇನು?

ನಿಮ್ಮ ಆತಂಕದ ಅನುಭವವನ್ನು ವಿವರಿಸಿ ಎಂದರೆ ಪದಗಳಿಗಾಗಿ ತಡಕಾಡುವಂತಾಗುತ್ತದೆ. ಭಯ, ಹೆದರಿಕೆ, ದುಃಖ ಉಂಟುಮಾಡಿದ ಘಟನೆ, ವಿವರಗಳ ಕುರಿತು ಹೇಳುತ್ತಾರೆ. ವಾಸ್ತವವಾಗಿ ಭಯ ಹಾಗೂ ಆತಂಕ (fear and anxiety) ಎರಡೂ ವಿಭಿನ್ನ ಅನುಭವಗಳು. ಭಯ ಯಾವುದಾದರೂ ನಿರ್ದಿಷ್ಟ ವಿಷಯದ ಕುರಿತು ಆಗಿರುತ್ತದೆ. ಆದರೆ ಆತಂಕಕ್ಕೆ ಅಂತಹ ನಿರ್ದಿಷ್ಟತೆ ಇರುವುದಿಲ್ಲ. ಭಯ ನಿವಾರಿಸುವುದು ಸುಲಭ, ತಾರ್ಕಿಕ ವಿಚಾರಗಳಿಗೆ ಮುಖಾಮುಖಿಯಾಗುತ್ತಿದ್ದಂತೆ ಭಯ ಓಡಿಹೋಗುತ್ತದೆ, ಆದರೆ ಆತಂಕ ಹಾಗಲ್ಲ. ಆತಂಕದ ನಿವಾರಣೆ ಹಾಗೂ ನಿರ್ವಹಣೆ ಸುಲಭವೂ ಅಲ್ಲ. ತಾರ್ಕಿಕ ಆಲೋಚನೆಗಳು ಆತಂಕವನ್ನು ಬಗ್ಗುಬಡಿಯುವಲ್ಲಿ ವಿಫಲವಾಗುತ್ತವೆ.

ಭಯವು ಹೊರಗಿನ ವಿದ್ಯಮಾನಗಳನ್ನು, ಘಟನೆಗಳನ್ನು ಕುರಿತದ್ದಾಗಿರುತ್ತದೆ. ಆದರೆ, ಆತಂಕವು ಆಂತರಿಕವಾದ, ಭಾವನಾತ್ಮಕ ಅಭದ್ರತೆಯಿಂದ ಉಂಟಾದದ್ದು. (ಮೂಢನಂಬಿಕೆಗಳ ಮೂಲ ಆತಂಕವೇ ಹೊರತು ತಾರ್ಕಿಕ ಆಲೋಚನೆಯ ಕೊರತೆಯಲ್ಲ. ಹಾಗಾಗಿಯೇ ಮೂಢನಂಬಿಕೆಗಳ ನಿರ್ಮೂಲನೆ ಅಷ್ಟು ಸುಲಭವಲ್ಲ. ಅದು ರಕ್ತಬೀಜಾಸುರನಂತೆ ಒಂದನ್ನು ಸಂಹರಿಸಿದರೆ ಮತ್ತೊಂದು ತಲೆ ಎತ್ತುತ್ತದೆ.) ಆತಂಕವು ವ್ಯಕ್ತಿತ್ವದಲ್ಲಿ ಹಾಸುಹೊಕ್ಕಾಗಿರುತ್ತದೆ, ಕೇವಲ ಹೊರಗಿನ ಪ್ರಪಂಚದಿಂದ ಉಂಟಾದದ್ದಲ್ಲ. ಉದಾ: ಕತ್ತಲ ಕಾಡಿನಲ್ಲಿ ಕಾಲಿಡುತ್ತಿದ್ದಂತೆ ಹಾವುಗಳ ಕುರಿತು ಭಯವಾಗಬಹುದು. ಆಗ ಆ ಕಾಡನ್ನು ಅಭ್ಯಾಸ ಮಾಡಿರುವ ಪರಿಸರ ಪರಿಣತರು ಯಾರಾದರು ಬಂದು ‘ಈ ಕಾಡಿನಲ್ಲಿ ಹಾವುಗಳಿಲ್ಲ, ಇದ್ದರೂ ಈ ಹೊತ್ತಿನಲ್ಲಿ ಅವು ನಮಗೆ ಎದುರಾಗುವುದಿಲ್ಲ’ ಎಂದು ವಿವರಿಸಿದರೆ ನಾವು ಒಪ್ಪಿ ಕಾಡಿಗೆ ಕಾಲಿಡಬಹುದು. ಆದರೆ ಕತ್ತಲನ್ನು ನೋಡಿದ ಕೂಡಲೇ ಏನೋ ಅವ್ಯಕ್ತ ದಿಗಿಲಾದರೆ, ಮನದಲ್ಲಿ ದುಗುಡದ ಛಾಯೆ ಉಂಟಾದರೆ, ಬೇಡ ಬೇಡವೆಂದರೂ ಬೇಡದ ನೆನಪುಗಳು ಉಕ್ಕುಕ್ಕಿ ಬಂದರೆ, ಕಣ್ಣೀರು ಅವ್ಯಾಹತವಾಗಿ ಹರಿದರೆ, ಎದೆಬಡಿತ ಎಲ್ಲೋ ಲಯ ತಪ್ಪಿದಂತಾದರೆ, ಇನ್ನು ಒಂದಡಿಯೂ ಮುಂದಿಡಲಾರದಷ್ಟು ನಿತ್ರಾಣವಾದರೆ ಅದನ್ನು ಆತಂಕ ಎನ್ನಬಹುದು.

ಮನುಷ್ಯನಿಗಷ್ಟೇ ಆತಂಕ!

‘ಭಯ’ ಎಂಬುದು ಪ್ರತಿಯೊಂದು ಜೀವಿಗೂ ಸ್ವಾಭಾವಿಕವಾದದ್ದು. ಆದರೆ ‘ಆತಂಕ’ ಮನುಷ್ಯನಿಗಷ್ಟೇ ಸೀಮಿತ. ಅಸ್ತಿತ್ವದ ಅರಿವಿರುವ, ಸಾವಿನ ಕುರಿತಾದ ಜಿಜ್ಞಾಸೆ ಮಾಡಬಲ್ಲ ಮನುಷ್ಯಜೀವಿ ಮಾತ್ರ ‘ಇರುವ–ಇಲ್ಲದಿರುವ’ ಎರಡರ ಕುರಿತೂ ಆತಂಕಗೊಳ್ಳುವುದು ಸಾಧ್ಯ. ಆತಂಕ ಎನ್ನುವುದು ಅಸ್ತಿತ್ವಕ್ಕೆ ತಳುಕು ಹಾಕಿಕೊಂಡಿರುವ ತಲ್ಲಣವಾದ್ದರಿಂದ ಅದನ್ನು ‘ಅಸ್ತಿತ್ವದ ತಲ್ಲಣ’ (existential angst) ಎನ್ನಬಹುದೇನೋ?

ಒಂದು ಶಿಖರದ ತುತ್ತ ತುದಿಯಲ್ಲಿ ನಿಂತವಳಿಗೆ ‘ನಾನು ಆಯತಪ್ಪಿ ಕೆಳಗೆ ಬಿದ್ದುಬಿಟ್ಟರೆ’ ಎನ್ನುವುದು ಭಯವಾದರೆ, ‘ನಾನು ಕೆಳಗೆ ಧುಮುಕಬಹುದು, ಅದು ನನ್ನ ಕೈಯಲ್ಲಿದೆ, ಅದು ನನಗೆ ಸಾಧ್ಯವಿದೆ, ನಾನೀಗ ಈ ಕ್ಷಣ ಧುಮುಕಿದರೆ ಹೇಗೆ, ಅಯ್ಯೋ ನಾನು ಧುಮುಕಿಬಿಟ್ಟರೆ, ನಾನು ಧುಮುಕದೆಯೂ ಇರಬಹುದು, ನಾನು ಧುಮುಕದೇ ಇಲ್ಲೇ ಇದ್ದರೆ, ಇಲ್ಲೇ ಉಳಿದುಬಿಟ್ಟರೆ, ಇಲ್ಲೇ ಉಳಿಯಲೋ ಧುಮುಕಲೋ’ – ಈ ಹೊಯ್ದಾಟ ‘ಅಸ್ತಿತ್ವದ ತಲ್ಲಣ’ ಎನಿಸಿಕೊಳ್ಳುತ್ತದೆ. ಇಲ್ಲಿ ನಮಗೆ ಇರುವ ಆಯ್ಕೆಯ ಸ್ವಾತಂತ್ರ್ಯ ಹಾಗೂ ನಾವು ಆಯ್ದುಕೊಂಡದ್ದನ್ನು ಕಾರ್ಯಗತಗೊಳಿಸುವ ಇಚ್ಛಾಶಕ್ತಿ, ಸಾಮರ್ಥ್ಯವೇ ಬಂಧನವಾಗಿರುವುದು ದುರಂತ.

‘ಅಕ್ಕಿ ಮೇಲಾಸೆ ನೆಂಟರ ಮೇಲೆ ಪ್ರೀತಿ’, ‘ಹಾವೂ ಸಾಯಬಾರದು ಕೋಲು ಮುರಿಯಬಾರದು’ ರೀತಿಯ ಗಾದೆಗಳನ್ನು ವ್ಯಕ್ತಿಗಳ ಜಾಯಮಾನಕ್ಕೆ ಸಂಬಂಧಿಸಿದಂತೆ ಬಳಸುತ್ತೇವೆ. ನಾವು ದಿನನಿತ್ಯ ಕಾಣುವ ಅಕ್ಕಿ/ ನೆಂಟ, ಹಾವು/ ಕೋಲು ಇಂಥವೇ ಸುಲಭ ಆಯ್ಕೆಗಳಿಗೆ ಸಂಬಂಧಪಟ್ಟಿದ್ದರೆ ಬದುಕು ಎಷ್ಟೋ ಸರಳವಾಗಿರುತ್ತಿತ್ತು. ಆದರೆ ಆಯ್ಕೆ ಎಂಬುದು, ಆಡಮನು ದೇವರು ನಿಷೇಧಿಸಿದ ಹಣ್ಣನ್ನು ತಿನ್ನಲೋ ಬೇಡವೋ ಎಂಬ ತುಮುಲಕ್ಕೆ ಒಳಗಾದಂತಹ ಕ್ಷಣಗಳಲ್ಲಿ ಉದ್ಭವಿಸುವಂತಹ ‘ನಾನೇನು ಮಾಡಲಿ? ತಿಂದರೆ ಶಾಪ, ತಿನ್ನದಿದ್ದರೆ ಆತ್ಮವಂಚನೆ?’ ಎಂಬಂತಹ ಜಟಿಲ ಪ್ರಶ್ನೆಗಳಿಗೆ ಸಂಬಂಧಿಸಿದ್ದು.

ಆಯ್ಕೆಯ ಇಬ್ಬಂದಿತನ

ನಿಮ್ಮೆದುರಿಗೆ ಎರಡು ಹಾದಿಗಳಿವೆ ಎಂದು ಭಾವಿಸಿ. ಎರಡೂ ಒಂದಲ್ಲ ಒಂದು ರೀತಿಯಿಂದ ನಿಮಗೆ ಒಪ್ಪಿಗೆಯಾಗಿರುವಂತದ್ದೇ. ಆದರೆ ಆ ಹಾದಿ ಎಲ್ಲಿಗೆ ಕರೆದೊಯ್ಯುವುದು ಎಂಬುದು ಮಾತ್ರ ಸ್ಪಷ್ಟವಿಲ್ಲ. ಯಾವುದೇ ಹಾದಿ ಆಯ್ದುಕೊಂಡರೂ ಮತ್ತೊಂದು ಹಾದಿಯಲ್ಲಿ ಸಿಗಬಹುದಾದ ಏನೋ ಒಂದನ್ನು ಕಳೆದುಕೊಳ್ಳಲೇಬೇಕಾಗಿರುವುದು. ಯಾವುದೇ ಹಾದಿ ಆಯ್ದರೂ ಅದಕ್ಕೆ ಅದರದೇ ಆದ ಸವಾಲುಗಳಿರುವುದು ಅನಿವಾರ್ಯ ಸಂಗತಿ. ಹೋಗಲಿ, ಯಾವುದೇ ದಾರಿ ಆಯ್ದುಕೊಳ್ಳದೆ ಹಾಗೆಯೇ ನಿಂತರೆ ಹೇಗೆ? ಆಗಲೂ ನೆಮ್ಮದಿಯಿಲ್ಲ, ಖಾಲಿತನ, ಏಕತಾನತೆಯ ಬೇಸರ, ಕೊಳೆಯುವ, ಪಳೆಯುಳಿಕೆಯಾಗಿಬಿಡುವ ಭಯ. ನಿಂತರೂ ನಿಲ್ಲದಿದ್ದರೂ, ಯಾವ ಹಾದಿಯಲ್ಲಿ ನಡೆದರೂ ಚಿಂತೆ ಮತ್ತು ಆತಂಕ ಎಡಬಿಡದೆ ಹಿಂಬಾಲಿಸುವ, ನಮ್ಮ ಇರುವಿಕೆಯ ಮೂಲದಲ್ಲೇ ಅಡಗಿರುವಂತಹ ಈ ಅಸ್ತಿತ್ವದ ತಲ್ಲಣವೇ ನಮಗೆ ಆಗಾಗ ಅನಿರ್ವಚನೀಯ ಭಯ, ದಿಗಿಲು, ದುಗುಡ, ಖಿನ್ನತೆಯಾಗಿ ಎದುರಿಗೆ ಬಂದು ನಿಲ್ಲುತ್ತಿರುತ್ತದೆ.

ಯಾವುದೇ ಹಾದಿಯನ್ನು ಆಯ್ದುಕೊಂಡರೂ ಅದರ ಸಂಪೂರ್ಣ ಹೊಣೆಗಾರಿಕೆಯನ್ನು ತಾನೇ ಅನುಭವಿಸಬೇಕಾದ ಆತಂಕ ನಿವಾರಿಸಲೆಂದೋ ಏನೋ ಮನುಷ್ಯ ದೇವರನ್ನು, ಪಾಪ, ಪುಣ್ಯ,ಕರ್ಮ, ಹಣೆಬರಹ ಇವುಗಳ ಸೃಷ್ಟಿ ಮಾಡಿದನೋ? ಒಂದಂತೂ ನಿಜ, ದೇವರ ಅಸ್ತಿತ್ವದ, ಅನುಗ್ರಹದ ಅವಶ್ಯಕತೆ ಇಲ್ಲದ ಮನುಷ್ಯ ಆಯ್ಕೆಯ ಸ್ವಾತಂತ್ರ್ಯ ತರುವ ಇಬ್ಬಂದಿತನವನ್ನು, ದ್ವಂದ್ವವನ್ನು ಅದರೊಟ್ಟಿಗಿನ ತಲ್ಲಣಗಳನ್ನು ಏಕಾಂಗಿಯಾಗಿ ಅನುಭವಿಸಬೇಕಾಗುವುದು.

ಜಗತ್ತಿಗೇ ಕಣ್ಣಾದ, ದಿನದಿನವೂ ಪ್ರಖರವಾಗಿ ಪ್ರಜ್ವಲಿಸುವ, ಕಾರಿರುಳಿಗೂ ತಿಳಿ ಬೆಳಕ ಸೊಬಗ ತರುವ ಸೂರ್ಯ ಚಂದ್ರರಿಗೇ ಗ್ರಹಣ ಹಿಡಿಯುವುದಾದರೆ, ದೇವಾನುದೇವತೆಗಳೇ ಅಪವಾದಕ್ಕೆ, ಅಪಮಾನಕ್ಕೆ, ವನವಾಸಕ್ಕೆ ಗುರಿಯಾಗುವುದಾದರೆ, ಪರಾಕ್ರಮದಿಂದ ಭೂಮಿಯನ್ನು ರಾಜ್ಯವನ್ನು ಗೆದ್ದು, ಜಗತ್ತನ್ನೇ ಮುಷ್ಠಿಯಲ್ಲಿಟ್ಟು ಆಳಿದ ರಾಜಾಧಿರಾಜರೇ ಮಣ್ಣುಮುಕ್ಕಿದರೆ, ಮಾನವ ಮತಿಯ ಉತ್ತುಂಗ ಸಾಧನೆಯಾದ ವಿಜ್ಞಾನವೇ ವಿನಾಶಕಾರೀ ಯುದ್ಧಕ್ಕೆ ಕಾರಣವಾದರೆ, ಸೌಹಾರ್ದತೆಯೇ ಮೂಲಮಂತ್ರವಾದ ಧರ್ಮವೇ ರಾಜಕಾರಣದೊಟ್ಟಿಗೆ ಸೇರಿ ಮನಸ್ಸುಗಳನ್ನು ಒಡೆದರೆ, ಚೈತನ್ಯದ ಚಿಲುಮೆಯಾಗಬೇಕಿದ್ದ ಸಾಹಿತ್ಯ–ಕಲೆಗಳೆಲ್ಲ ಯಾವುದೋ ಸಿದ್ಧಾಂತಕ್ಕೆ ಕಟ್ಟುಬಿದ್ದು ಬರೀ ಮಾತಿನ ಬುದ್ಧಿಯ ಕಸರತ್ತಾದರೆ, ಮಾನವೀಯತೆ ಬರೀ ಭಾಷಣಕ್ಕಷ್ಟೇ ಸೀಮಿತವಾದರೆ – ಇದೆಲ್ಲವೂ ಆಗುವುದಾದರೆ ನಾವು ಇದ್ದು ಮಾಡಬೇಕಾದ್ದೇನು? ಏನು ಮಾಡಿದರೆ ಈ ಬದುಕು ಅರ್ಥವನ್ನು ಪಡೆದುಕೊಳ್ಳುತ್ತದೆ? ಅರ್ಥ, ಹಾಗೆಂದರೇನು? ಅದು ಇದೆಯೇ? ಹುಡುಕಬೇಕೆ? ಏಕೆ?

ಆತಂಕ ಎನ್ನುವುದು ಈ ವಿಭ್ರಾಂತಿಗೆ, ಭ್ರಮನಿರಸನಕ್ಕೆ ಸಂಬಂಧಪಟ್ಟಿದ್ದು. ಏನು ಮಾಡಿದರೂ ಮನುಷ್ಯನ ಮೂಲಭೂತ ಸ್ಥಿತಿಯನ್ನು ಬದಲಾಯಿಸಲಾಗದು, ಏನನ್ನೂ ಮಾಡದಿರುವುದು ಅದು ಸೋಲೊಪ್ಪಿಕೊಂಡಂತೆ, ಅದು ಮನುಷ್ಯನ ಜಾಯಮಾನಕ್ಕೆ ಹೊಂದದು. ಇದು ಅಸ್ತಿತ್ವದ ತಲ್ಲಣ. 'ಮನುಷ್ಯನ ಮೂಲಭೂತ ಸ್ಥಿತಿಯ ಕಂಡು ಹತಾಶನಾದವನು ಹೇಡಿ, ಅದಕ್ಕಾಗಿ ಮನದಲ್ಲಿ ಆಸೆಯ ಬೆಳಕು ಹತ್ತಿಸಿ ಇಟ್ಟುಕೊಂಡವನು ಮೂರ್ಖ' ಎಂಬ ಆಲ್ಬರ್ಟ್ ಕಮುವಿನ ಮಾತು ಈ ಹಿನ್ನೆಲೆಯಲ್ಲಿ ಮನನಾರ್ಹವಾಗಿದೆ. ಮನುಷ್ಯನ ಮನಸ್ಸು ಸದಾ ಅರ್ಥಕ್ಕಾಗಿ (meaning), ಮೌಲ್ಯಕ್ಕಾಗಿ ಹಾತೊರೆಯುತ್ತಾ ಅವುಗಳನ್ನು ಅನ್ವೇಷಿಸುತ್ತಿದ್ದರೂ ನಿರರ್ಥಕವಾದ, ಮೌಲ್ಯರಹಿತವಾದ, ಕಾರ್ಯಕಾರಣ ಸಂಬಧವಷ್ಟೇ ಹೂರಣವಾದ, ಒರಟು ಭೌತಿಕ ಜಗತ್ತು ಹಾಗೂ ಅದರ ಆಗುಹೋಗುಗಳು, ಮಾನವನ ಅಂತರಂಗದ ಮಿಡಿತಗಳಿಗೆ ತುಡಿಯದಿರುವ ಈ ಅರಿವನ್ನೇ ಅಸಂಗತತೆ (absurdity) ಎಂದು ಅಸ್ತಿತ್ವವಾದಿಗಳು ಕರೆದಿರುವುದು.

ಆತಂಕದ ನಿರ್ವಹಣೆ

ಸರಿ, ಇಷ್ಟರವರೆಗೂ ಕಾಲಹರಣದ ಮಾತಾಡಿದ್ದು ಸಾಕು, ಆತಂಕದ ನಿರ್ಮೂಲನೆ ಹೇಗೆ ಎಂದು ಕೇಳಿದಿರಾ?

ಅದನ್ನೇ ನಾನು ಹೇಳಲು ಹೊರಟಿದ್ದು. Not a day goes by that a man doesn't have to choose. Between what he wants and what he's afraid to lose' ಎನ್ನುವ ರಾಬರ್ಟ್ ಕ್ರೇಯ್‌ನ ಹಾಡಿನ ಸಾಲುಗಳು ನೆನಪಾಗುತ್ತವೆ. 'ಮೂಗಿರುವ ತನಕ ಶೀತ ತಪ್ಪಿದ್ದಲ್ಲ' ಎಂಬಂತೆ, ಉಸಿರಿರುವವರೆಗೂ ನಾವು ಒಂದಲ್ಲಾ ಒಂದು ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಿರುತ್ತೇವೆಯಾದ್ದರಿಂದ ಆತಂಕ ನಮ್ಮ ಇರುವಿಕೆಗೆ ಅಂಟಿದ್ದು. ಅದರಿಂದ ಬಿಡುಗಡೆ ಸಾಧ್ಯವಿಲ್ಲ. ಆದರೆ ನಿರ್ವಹಣೆ ಸಾಧ್ಯವಿದೆ.

ಆತಂಕಕ್ಕೂ ಅನಿಶ್ಚಿತತೆಗೂ ಅಸ್ಪಷ್ಟತೆಗೂ ಗಾಢವಾದ ಸಂಬಂಧ ಇದೆ. ಮುಂದೇನಾಗುವುದೋ? ಎಂಬ ಅಸ್ಪಷ್ಟತೆ ನಮ್ಮನ್ನು ಆತಂಕಕ್ಕೀಡು ಮಾಡುತ್ತದೆಯಾದರೂ, ಒಂದು ವೇಳೆ ಹಾಗಿಲ್ಲದೆ ‘ಇದು ಹೀಗೆ ಹೀಗೆ ನಡೆಯುವುದು’ ಎಂಬ ಭವಿಷ್ಯ ಜ್ಞಾನ ಉಂಟಾದರೆ ಬದುಕು ಎಷ್ಟು ನೀರಸ ಊಹಿಸಿ. ಆದ್ದರಿಂದ ಅನಿಶ್ಚಿತತೆಯು ಬದುಕಿನ ಅನಿವಾರ್ಯ ಸಂಗತಿ ಹಾಗೂ ಇದು ಎಲ್ಲರಿಗೂ ಅನ್ವಯಿಸುವಂತದ್ದು ಎಂದು ಅದನ್ನು ಒಪ್ಪಿ ಬಾಳುವುದು ಆತಂಕ ನಿರ್ವಹಣೆಯ ಮೊದಲ ಹೆಜ್ಜೆ.

ಆತಂಕಕ್ಕೂ ಅಭದ್ರತೆಗೂ ಅಷ್ಟೇ ನಿಕಟವಾದ ಸಂಬಂಧ ಇದೆ. ಈ ಅಭಧ್ರತೆಯ ಭಾವನೆ ಬಾಲ್ಯದ ನಮ್ಮ ತಂದೆ ತಾಯಿ/ ಪೋಷಕರೊಡನೆಯ ನಮ್ಮ ಸಂಬಂಧದಲ್ಲಿ ನಿರ್ಣಯವಾಗುವಂತದ್ದು. ಆದರೆ ಇದೇನು ಬದಲಾಯಿಸಿಕೊಳ್ಳಲಾಗದ್ದಲ್ಲ. ಈ ಆತಂಕ ಮತ್ತು ಅಭದ್ರತೆಗಳೇ ನಮ್ಮ ಜೀವನದ ಬಹು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕಾಣದ ಕೈಗಳಂತೆ ಕೆಲಸ ಮಾಡುತ್ತವೆ.

ಒಬ್ಬೊಬ್ಬರ ಅಭದ್ರತೆಯ ಬಗೆಯೂ ಒಂದೊಂದು ರೀತಿ. ಆತಂಕ ಮತ್ತು ಅಭದ್ರತೆ ಕೌಟುಂಬಿಕ ಹಾಗು ಸಾಮಾಜಿಕ ವ್ಯವಸ್ಥೆಯ ಪ್ರಕ್ರಿಯೆಗಳಲ್ಲಿ ಒಳಗೊಂಡಿರುವಂತಹದ್ದು. ಉದಾ: ತಾಯಿಯೊಬ್ಬಳು ಮಗುವನ್ನು ಅತೀ ರಕ್ಷಣೆ ಮಾಡುವ ಭರದಲ್ಲಿ ‘ಅಲ್ಲಿ ಹೋಗಬೇಡ, ಅವರೊಡನೆ ಮಾತನಾಡಬೇಡ, ಅವರು ಮೋಸಗಾರರು, ಇವರು ನಯವಂಚಕರು’ ಎಂದು ತನ್ನದೇ ಭಯಗಳ ಆರೋಪಿಸುವ ತರಾತುರಿಯಲ್ಲಿ ಮಗುವಿನ ಮನಸಿನಲ್ಲಿ ‘ಪ್ರಪಂಚ ನಂಬಿಕೆಗೆ ಅನಾರ್ಹವಾದುದು’ ಎನ್ನುವ ಕಲ್ಪನೆಯನ್ನು ಬೆಳೆಸುತ್ತಿರುತ್ತಾಳೆ. ಇಂತಹ ನಂಬಿಕೆ ಹೊತ್ತ ಮಗು ಮುಂದೆ ಓದಿನ ಸಲುವಾಗಿಯೋ ಕೆಲಸದ ಸಲುವಾಗಿಯೋ ಹೊರದೇಶಕ್ಕೆ ಹೋಗುವ ಅವಕಾಶ ಬಂದಾಗ ಎಂತಹ ಉಭಯ ಸಂಕಟಕ್ಕೆ ಒಳಗಾಗಬಹುದು ಊಹಿಸಿ. ಹಾಗೆಂದು ‘ನನ್ನ ತಂದೆ ತಾಯಿ ಸರಿಯಾಗಿ ಬೆಳೆಸದ್ದರಿಂದಲೋ ನಾನು ಬಡವನಾಗಿರುವುದರಿಂದಲೋ ಕುರೂಪಿಯಾಗಿರು
ವುದರಿಂದಲೋ ಹೆಣ್ಣಾಗಿರುವುದರಿಂದಲೋ ಬುದ್ಧಿಗೇಡಿಯಾಗಿರುವುದರಿಂದಲೋ ನನಗೆ ಸರಿಯಾಗಿ ಆಯ್ಕೆ ಮಾಡಿ ಆತಂಕವನ್ನು ನಿಭಾಯಿಸಲಾಗುತ್ತಿಲ್ಲ’ ಎಂದು ತಿಳಿಯಬೇಡಿ. ನೀವು ಯಾವುದೇ ಪರಿಸ್ಥಿತಿಯಲ್ಲಿ ಇದ್ದರೂ, ಒಂದಲ್ಲ ಒಂದು ಆತಂಕಕ್ಕೆ ಒಳಗಾಗಬೇಕಾಗಿರುವುದು ಮನುಷ್ಯರಾಗಿರುವ ನಿಮ್ಮ ಮೂಲಭೂತ ಬಿಕ್ಕಟ್ಟು (human predicament).

ಧೈರ್ಯವೇ ಸಾಧನ!

ಮುಂದಿನ ಬಾರಿ ನೀವು ಆತಂಕಕ್ಕೆ ಒಳಗಾದಾಗ ಸೂಕ್ಷ್ಮವಾಗಿ ಗಮನಿಸಿ. ಅಲ್ಲಿ ‘ನಾನೇನೋ ಮಾಡಬೇಕೀಗ, ಏನು ಮಾಡಲಿ?’ ಎಂಬ ತಳಮಳ ಇದೆಯೇ? ಹಾಗಾದಾಗ ಸಂದರ್ಭವನ್ನು ದೂಷಿಸಿ ಅದನ್ನು ನಿರ್ವಹಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳದೆ, ನಿಮಗೆ ಆತಂಕವಾಗುತ್ತಿರುವುದನ್ನು ಒಪ್ಪಿ, ಅದನ್ನು ಸಂಪೂರ್ಣವಾಗಿ ಅನುಭವಿಸಿ, ಧೈರ್ಯವಾಗಿ ಎದುರಿಸಿ. ಯಾವ ಆಯ್ಕೆ ಮಾಡಿದರೂ ಆತಂಕದಿಂದ ಬಿಡುಗಡೆ ಇಲ್ಲ, ಆಯ್ಕೆ ಮಾಡದೆ ಇರುವಂತೆಯೂ ಇಲ್ಲ ಎನ್ನುವುದನ್ನು ಮನಗಂಡು ಶಾಂತವಾಗಿರಿ.

ಆತಂಕವನ್ನು ಘಟನೆಯ ಬಾಹ್ಯ ವಿವರಗಳಿಗಷ್ಟೇ ಸೀಮಿತಗೊಳಿಸದೆ ಅದನ್ನು ಆಂತರ್ಯದ ಅನುಭವದ ಮುಖೇನ ಗುರುತಿಸಿ. ಆತಂಕವಾದಾಗ ನಿಮ್ಮಲ್ಲಿ ಉದ್ಭವವಾಗುವ ವಿಚಾರಗಳು ಎಂಥವು ಎಂದು ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ಏಕಾಂಗಿತನದಿಂದ ಆತಂಕದ ನಿರ್ವಹಣೆ ಮತ್ತೂ ಕ್ಲಿಷ್ಟಕರವಾಗುವುದರಿಂದ ಆತ್ಮೀಯತೆ ಸಾಧಿಸುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನವಿರಲಿ. ನೀವು ಹೇಗಿರುವಿರೋ ಹಾಗೆ, ಮುಖವಾಡಗಳಿಲ್ಲದೆ ನಿಮ್ಮನ್ನು ನೀವು ಆತ್ಮೀಯರೆದುರಿಗೆ ಬಿಚ್ಚಿಡಿ. ಪ್ರವಾಸ, ಕ್ಲಬ್ಬು, ಸ್ನೇಹಿತರ ಒಡನಾಟ, ಯೋಗ , ಧ್ಯಾನ, ಆಟ ಎಲ್ಲವೂ ತುಂಬಾ ಹಿತಕರವೇ ಆದರೂ – ವ್ಯಕ್ತಿ ಸ್ವಾತಂತ್ಯ, ಸ್ವಾಯತ್ತತೆ ತರುವ ಸಂದಿಗ್ಧಗಳ ಅರಿವು, ವ್ಯಕ್ತಿತ್ವದ ಪ್ರಬುದ್ಧತೆಯ ಜೊತೆ ಇಲ್ಲದಿದ್ದಲ್ಲಿ ಅವುಗಳೆಲ್ಲ ಆತಂಕ ನಿರ್ವಹಣೆಯ ಹಾದಿಯಲ್ಲಿ ಬರೀ ಅಲಂಕಾರಗಳು ಎನಿಸಿಕೊಳ್ಳುತ್ತವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು