ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನುನೋವು ಮುನ್ನೆಚ್ಚರಿಕೆಯೇ ಮದ್ದು

Last Updated 15 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ನಿರಾಳವಾಗಿ ಒಮ್ಮೆ ಬೆನ್ನನ್ನು ಹಿಂದಕ್ಕೆ ಚಾಚಿ ಕುಳಿತುಕೊಳ್ಳೋಣ ಅಂತ ಅಂದುಕೊಂಡಿರಾ? ಛುಳ್‌ ಎನ್ನುವ ನೋವು ನಿಮ್ಮ ಖುಷಿಯನ್ನು ಕಸಿದುಬಿಡುತ್ತದೆ.. ನೀವು ಏಕಾಂಗಿಯಲ್ಲ, ನಿಮ್ಮೊಂದಿಗೆ ನಾನಿದ್ದೇನೆ ಎಂಬುದನ್ನು ನೋವಿನ ಮೂಲಕ ನೆನಪಿಸುತ್ತದೆ. ಲುಂಬಾಗೋ ಎಂದರೆ ಇದೇ. ಹೆಚ್ಚಿನ ಜನರಲ್ಲಿ ಕಾಡುವ ಈ ಕೆಳ ಬೆನ್ನುನೋವು ಸಾಮಾನ್ಯ ವೈದ್ಯಕೀಯ ಸಮಸ್ಯೆ. ದೇಶದಲ್ಲಿ ಪ್ರತಿ ವರ್ಷ ಈ ಲುಂಬಾಗೋಗೆ ಚಿಕಿತ್ಸೆ ಪಡೆಯುವವರ ಸಂಖ್ಯೆ 10 ದಶಲಕ್ಷವನ್ನೂ ಮೀರಿದೆ.

ಶರೀರದ ಹಿಂಭಾಗ ಸಂಕೀರ್ಣ ರಚನೆಯಿಂದ ಕೂಡಿದೆ. ಇದು ಮೂಳೆ, ಅಸ್ಥಿಮಜ್ಜೆ, ಮಾಂಸಖಂಡಗಳು, ಸ್ನಾಯುಗಳು ಹಾಗೂ ನರಗಳ ರಚನೆಯಾಗಿದೆ. ದೇಹದ ರಚನೆ ಹಾಗೂ ಸಂರಕ್ಷಣೆ ವಿಷಯದಲ್ಲಿ ಈ ಭಾಗವು ಅತ್ಯಂತ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಬೆನ್ನು ನೋವಿಗೆ ಸಂಬಂಧಿಸಿದ ಯಾವುದೇ ವಿಧದ ಸಮಸ್ಯೆಯು ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ನೋವಿಗೆ ಕಾರಣ. ಹೀಗಾಗಿ ಬೆನ್ನುನೋವನ್ನು ನಿರ್ಲಕ್ಷ್ಯಿಸದೇ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಸೂಕ್ತ.

ಬೆನ್ನುನೋವು ನೀವು ಕೆಲಸ ಮಾಡುವಾಗ, ವಿವಿಧ ಚಟುವಟಿಕೆಗಳನ್ನು ನಡೆಸುವಾಗ ಬರಬಹುದು. ಕುಳಿತಿರುವ ಕುರ್ಚಿಯಿಂದ ಮೇಲೇಳುವಾಗ, ಬಗ್ಗಿ ಒಂದು ರಟ್ಟಿನ ಬಾಕ್ಸ್ ಎತ್ತುವಾಗಲೂ ಎದುರಾಗಬಹುದು. ಬಹುತೇಕ ಜನರು ಬೆನ್ನುನೋವಿಗೆ ತಾವೇ ಚಿಕಿತ್ಸೆ ಪಡೆದುಕೊಳ್ಳಲು ಯತ್ನಿಸುತ್ತಾರೆ. ಕೆಲವೊಮ್ಮೆ ಇದು ಅತ್ಯಂತ ಅಪಾಯಕಾರಿಯಾಗಬಹುದು, ಏಕೆಂದರೆ ಈ ಔಷಧಗಳು, ಚಿಕಿತ್ಸಾ ಪದ್ಧತಿ ತುರ್ತಾಗಿ ಆ ಸಂದರ್ಭಕ್ಕೆ ನೋವಿನಿಂದ ಮುಕ್ತಿಕೊಡಬಹುದು. ಆದರೆ ಮೂಲ ಸಮಸ್ಯೆ ಪರಿಹಾರವಾಗದೇ ಸುದೀರ್ಘ ಅವಧಿಯವರೆಗೆ ಕಾಡಬಹುದು. ಇದರಿಂದ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ಸಮಸ್ಯೆಯ ಆಳ ಅರಿಯುವುದು ಹಾಗೂ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ ಮಾರ್ಗ. ಇದರಿಂದ ಸಮಸ್ಯೆಯಿಂದಾಗಿ ಮುಂದೆ ಎದುರಾಗುವ ಆತಂಕವನ್ನು ನಿವಾರಿಸಿಕೊಳ್ಳಬಹುದು.

ಬೆನ್ನುನೋವು ಎದುರಾಗುವುದಕ್ಕೆ ಉರಿಯೂತ ಅಥವಾ ನರಗಳು ಸೆಟೆದುಕೊಳ್ಳುವುದು ಕಾರಣ. ದೀರ್ಘಾವಧಿಗೆ ಇದಕ್ಕೆ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ, ಯಾವ್ಯಾವುದೋ ರೀತಿಯಲ್ಲಿ ಬಾಗುವುದರಿಂದ, ಸ್ಟ್ರೆಚಿಂಗ್‌ ಮಾಡುವುದರಿಂದ, ವಿಶ್ರಾಂತಿ ಇಲ್ಲದಿರುವುದು ಹಾಗೂ ದೀರ್ಘಾವಧಿ ವಾಹನ ಚಾಲನೆ ಮಾಡುವುದರಿಂದ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ.

ಕಾರಣಗಳು
* ಸ್ಥೂಲಕಾಯ, ಅದರಲ್ಲಿಯೂ ಸೊಂಟದ ಹಾಗೂ ಹೊಟ್ಟೆಯ ಭಾಗದ ಬೊಜ್ಜು ಗುರುತ್ವವನ್ನು ಮುಂಭಾಗಕ್ಕೆ ಬದಲಿಸುತ್ತದೆ. ಇದರಿಂದಾಗಿ ಸಹಜವಾಗಿ ಹಿಂಭಾಗದ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇನ್ನು ಧೂಮಪಾನವು ಡಿಸ್ಕ್‌ಗಳಿಗೆ ರಕ್ತ ಪರಿಚಲನೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಡಿಸ್ಕ್ ಸಮಸ್ಯೆ ಎದುರಾಗುತ್ತದೆ. ಸದಾ ಬಾಗಿ ಕೂರುವುದರಿಂದ ಹಾಗೂ ಕುಳಿತೇ ಇರುವುದರಿಂದ ಡಿಸ್ಕ್ ಒಳಗೆ ಒತ್ತಡ ಹೆಚ್ಚಾಗುತ್ತದೆ. ಇದು ಅತ್ಯಂತ ಸುಲಭವಾಗಿ ಬೆನ್ನುನೋವಾಗಿ ಪರಿವರ್ತನೆಯಾಗುತ್ತದೆ.

* ಅತ್ಯಂತ ಗಂಭೀರ ಸಮಸ್ಯೆಗಳು ಒಳಭಾಗದಲ್ಲಿ ತಲೆದೋರಬಹುದು. ಡಿಸ್ಕ್ ಅಸಮತೋಲನ, ಸಂದಿವಾತ, ಬೆನ್ನುಮೂಳೆ ಮುರಿತ ಇತ್ಯಾದಿ ಸಮಸ್ಯೆ ಎದುರಾಗಬಹುದು.

* ಕೆಲವು ಚಟುವಟಿಕೆ, ಕೆಲಸಗಳು ಬೆನ್ನುನೋವಿಗೆ ಕಾರಣವಾಗಬಹುದು.

* ನಿರ್ಮಾಣ, ಕೃಷಿ ಕಾರ್ಯಗಳನ್ನು ಸ್ವತಃ ನಿರ್ವಹಿಸುವುದು. ದೀರ್ಘಾವಧಿ ಕಂಪ್ಯೂಟರ್‌ಗಳ ಮುಂದೆ ಕುಳಿತು ಕಚೇರಿ ಕೆಲಸ ನಿರ್ವಹಿಸುವುದು.

* ಕ್ಯಾಬ್ ಚಾಲಕರು ಹಾಗೂ ಬಹು ದೂರ ವಾಹನ ಚಾಲನೆ ಮಾಡುವುದು.

* ಮೂರು ತಿಂಗಳಿಗೂ ಹೆಚ್ಚು ಕಾಲಾವಧಿಗೆ ಬೆನ್ನುನೋವು ಕಾಡಿದರೆ, ಕಾಲಿನ ಕೆಳಭಾಗದಲ್ಲಿ, ಕಾಲುಗಳಲ್ಲಿ ದೌರ್ಬಲ್ಯ ಇಲ್ಲವೇ ಮರಗಟ್ಟುವಿಕೆ ಸಮಸ್ಯೆ ಕಾಡಿದರೆ, ಬೆನ್ನುನೋವಿನ ಜತೆ ಜ್ವರವೂ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ.

**

ಸಮಸ್ಯೆ ಪರಿಹಾರಕ್ಕೆ ಸರಳ ಸೂತ್ರಗಳು

* ದೀರ್ಘಾವಧಿ ಹಾಸಿಗೆಯಲ್ಲಿ ಮಲಗಿರುವುದನ್ನು ತಪ್ಪಿಸಿ, ಇದು ಅಪಾಯಕಾರಿ. ಎಚ್ಚರವಾದ ತಕ್ಷಣ ಹಾಸಿಗೆಯಿಂದ ಎದ್ದು ಓಡಾಡುವುದು ಉತ್ತಮ. ಚಲನೆಯಲ್ಲಿರುವುದರಿಂದ ನೋವು ಆದಷ್ಟು ಬೇಗ ಕಡಿಮೆ ಆಗಬಹುದು.

* ನೋವು ನಿವಾರಣೆಗೆ ಸಹಾಯವಾಗಲು ಬಿಸಿ ಹಾಗೂ ತಣ್ಣಗಿನ ಸಂಕುಚಿತ ಪ್ಯಾಕ್ ಬಳಸುವುದು ಉತ್ತಮ. ಸ್ನಾಯುವಿನ ನೋವನ್ನು ನಿವಾರಿಸಲು ಇವು ಸಹಾಯಕ.

* ಪಕ್ಕಕ್ಕೆ ವಾಲಿ ಮಲಗುವುದರಿಂದ ಬೆನ್ನು ಹುರಿಯ ಮೇಲೆ ಒತ್ತಡ ಕಡಿಮೆ ಆಗಿ ಆರಾಮ ಸಿಗುತ್ತದೆ.

* ಕೆಲವು ವ್ಯಾಯಾಮವು ಸ್ನಾಯುಶಕ್ತಿ ವೃದ್ಧಿಗೆ ಸಹಕಾರಿ.

* ದೀರ್ಘಾವಧಿಗೆ ಒಂದೇ ಆಸನದಲ್ಲಿ ಕುಳಿತಿರುವುದು ಒಳಿತಲ್ಲ. ಆಗಾಗ ಎದ್ದುನಿಂತು, ಬೆನ್ನು ಮೂಳೆಯನ್ನು ಸ್ಟ್ರೆಚ್‌ ಮಾಡುವುದು ಒಳಿತು. ಕಚೇರಿ ಇಲ್ಲವೇ ಮನೆಯ ಒಳಗೆ ಒಂದು ಸುತ್ತು ಓಡಾಡುವುದರಿಂದ ಬೆನ್ನಿಗೆ ಕೊಂಚ ಆರಾಮ ಸಿಗುತ್ತದೆ. ನೋವೂ ಕಡಿಮೆ ಆಗುತ್ತದೆ.

* ಆದಷ್ಟು ನೋವಿನ ಮಾತ್ರೆಗಳನ್ನು ನುಂಗುವುದನ್ನು ತಪ್ಪಿಸಿ, ಇದರ ಬದಲು ನಿಮ್ಮ ವೈದ್ಯರು ಸೂಚಿಸುವ ಸರಳ ವ್ಯಾಯಾಮಗಳನ್ನು ಮಾಡುವ ಮೂಲಕ ಬೆನ್ನುನೋವು ನಿವಾರಣೆಗೆ ಪ್ರಯತ್ನಿಸಿ. ಯೋಗಾಸನ ಕೂಡ ಬೆನ್ನುನೋವಿನ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಸೂರ್ಯ ನಮಸ್ಕಾರ, ಭುಜಂಗಾಸನ, ಅರ್ಧ ಭುಜಂಗಾಸನ, ಶಲಭಾಸನ ಹಾಗೂ ಧನುರಾಸನ ಒಳಿತು.

* ತೂಕ ಇಳಿಸಿಕೊಳ್ಳುವುದು, ಒತ್ತಡವನ್ನು ನಿವಾರಿಸಿಕೊಳ್ಳುವುದು, ನಿಲುವಿನಲ್ಲಿ ಸುಧಾರಣೆ ಕೂಡ ನೋವಿಗೆ ರಾಮಬಾಣ. ಇವೆಲ್ಲವೂ ಹಂತಹಂತವಾಗಿ ಬೆನ್ನುನೋವು ನಿವಾರಣೆಗೆ ಸಹಕರಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT