ಮಂಗಳವಾರ, ಆಗಸ್ಟ್ 16, 2022
21 °C

ಕೊರೊನಾ ಒಂದಿಷ್ಟು ತಿಳಿಯೋಣ: ಲಸಿಕೆಯ ಸಾಧಕ– ಬಾಧಕಗಳೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ನಿಯಂತ್ರಣದಲ್ಲಿ ಮಹತ್ವದ ಹೆಜ್ಜೆ ಎಂಬಂತೆ ಹಲವಾರು‌ ಲಸಿಕೆಗಳು ಆವಿಷ್ಕಾರಗೊಳ್ಳುತ್ತಿದ್ದು, ಕೆಲವು ಲಸಿಕೆಗಳು ತ್ವರಿತಗತಿಯಲ್ಲಿ ಪ್ರಯೋಗದ ಹಲವು ಹಂತಗಳನ್ನು ಪೂರೈಸಿಬಿಟ್ಟಿವೆ ಮತ್ತು ಬಳಕೆಗೆ ಲಭ್ಯವೆನಿಸಿಬಿಟ್ಟಿವೆ. ಇಂತಹ ಲಸಿಕೆಗಳ ಕುರಿತು ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಮಕ್ಕಳ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಕೆ.ಬಿ. ರಂಗಸ್ವಾಮಿ ಒಂದಿಷ್ಟು ಮಾಹಿತಿ ನೀಡಿದ್ದಾರೆ.

ಮಾನವನ ಶರೀರದಲ್ಲಿ ಕೊರೊನಾ ವೈರಾಣು ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡದಂತೆ ತಕ್ಕಮಟ್ಟಿಗೆ ತಡೆಗಟ್ಟಬಲ್ಲವೆಂದು ಪರಿಗಣಿಸಲಾದ ನಾಲ್ಕು ಲಸಿಕೆಗಳೆಂದರೆ–

1 ಅಮೆರಿಕಾದ ಫೈಝರ್/ ಬಯೋ ಎನ್ ಟೆಕ್ ಲಸಿಕೆ

2 ಅಮೆರಿಕಾದ ಮೊಡರ್ನಾ ಲಸಿಕೆ

3 ಬ್ರಿಟನ್‌ನ ಆಕ್ಸ್‌ಫರ್ಡ್/ ಆಸ್ಟ್ರಾಝೆ‌ನಿಕಾ ಲಸಿಕೆ

4 ರಷ್ಯಾದ ಸ್ಪುಟ್ನಿಕ್ ಲಸಿಕೆ

ಈ ಎಲ್ಲಾ ಲಸಿಕೆಗಳು ಬೇರೆ ಬೇರೆ ರೀತಿಯಲ್ಲಿ ಕಾರ್ಯನಿರ್ವಹಿಸಿ, ಕೊರೊನಾ ವೈರಾಣುವಿನ ಸೋಂಕನ್ನು ನಿಯಂತ್ರಿಸಬಲ್ಲಂಥ ರೋಗನಿರೋಧಕ ಶಕ್ತಿಯನ್ನು ಶರೀರಕ್ಕೆ ನೀಡಬಲ್ಲವು. ಇವುಗಳಲ್ಲಿ ಮೊದಲೆರಡು ಲಸಿಕೆಗಳು ವೈರಾಣುವಿನ ಎಂಆರ್‌ಎನ್‌ಎ (ಮೆಸೆಂಜರ್)ಯಿಂದ ಅಭಿವೃದ್ಧಿಪಡಿಸಲಾದ ಲಸಿಕೆಗಳಾದರೆ, ಉಳಿದೆರಡು ಲಸಿಕೆಗಳು ಫ್ಲೂ ಮತ್ತು ಎಂಎಂಆರ್ ಲಸಿಕೆಗಳಂತೆ ಜೀವಂತ ವೈರಾಣುವನ್ನು ನಿಷ್ಕ್ರಿಯಗೊಳಿಸಿ ಅಭಿವೃದ್ಧಿಪಡಿಸಲಾದ ಲಸಿಕೆಗಳು. ಎಂಆರ್‌ಎನ್‌ಎಯನ್ನು ಬಳಸಿ ತಯಾರಿಸಲ್ಪಟ್ಟ ಲಸಿಕೆಗಳು ಹಲವಾರು ಸಂಕೀರ್ಣ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದು, ಅತ್ಯಂತ ಸುರಕ್ಷಿತವೆಂದು ಆಯಾ ಕಂಪೆನಿಗಳು ಘೋಷಿಸಿದ್ದರೂ, ದೀರ್ಘಕಾಲದಲ್ಲಿ ಮಾನವನ ವಂಶವಾಹಿನಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಆತಂಕ ಕೆಲವು ವಿಜ್ಞಾನಿಗಳದ್ದು. ಆದರೆ ಇಂತಹ ಆತಂಕಗಳು ನಿರಾಧಾರವೆಂದು ಕೆಲವು ವಿಜ್ಞಾನಿಗಳು ಅಲ್ಲಗಳೆಯುತ್ತಿದ್ದಾರೆ. ಈ ಎಲ್ಲಾ ದ್ವಂದ್ವಗಳ ನಡುವೆಯೂ ಫೈಝರ್ ಲಸಿಕೆಯನ್ನು ಬ್ರಿಟನ್‌ನಲ್ಲಿ ಮಾನವನ ಮೇಲೆ ಪ್ರಯೋಗಿಸಲಾಗಿದೆ. ಈಗ ಅಮೆರಿಕದಲ್ಲೂ ಸಾವಿರಾರು ಮಂದಿಗ ನೀಡಲಾಗಿದೆ. ಈ ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಉಷ್ಣತೆಯಲ್ಲಿ ಸಾಗಾಣಿಕೆ ಮಾಡಬೇಕಾಗುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ ಜೀವಂತ ವೈರಾಣುವನ್ನು ನಿಷ್ಕ್ರಿಯಗೊಳಿಸಿ ತಯಾರಿಸಲಾದ ಆಸ್ಟ್ರಾಝೆನಿಕಾದಂಥ ಲಸಿಕೆಯನ್ನು ಇತರೆಲ್ಲಾ ಲಸಿಕೆಗಳಂತೆ 2–8 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣತೆಯಲ್ಲಿ ಹಲವು ದಿನಗಳ ಕಾಲ ಸಂರಕ್ಷಿಸಬಹುದು. ಹಾಗಾಗಿ ಭಾರತದಂಥ ಸಮಶೀತೋಷ್ಣ ದೇಶಗಳಿಗೆ ಈ ಲಸಿಕೆ ಅತ್ಯಂತ ಸೂಕ್ತವಾದುದಾಗಿದೆ. ಹಾಗೆಯೇ ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ಮೈನಸ್ 18 ರಷ್ಟು ಉಷ್ಣತೆಯಲ್ಲಿ ಸಂರಕ್ಷಿಸಬೇಕಾಗಿದ್ದರೂ ನಮ್ಮ ದೇಶದಲ್ಲಿ ಇದನ್ನು ಹೇಗೋ ಸಾಕಾರಗೊಳಿಸಬಹುದು. ಈ ಎರಡು ಬಗೆಯ ಲಸಿಕೆಗಳನ್ನು ತಯಾರಿಸಿ  ಜನಸಾಮಾನ್ಯರಿಗೆ ವಿತರಿಸುವ ಅಭಿಯಾನಕ್ಕೆ ಕೇಂದ್ರ ಸರ್ಕಾರ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಈ ಎಲ್ಲಾ ಲಸಿಕೆಗಳ ಬಳಕೆಯಿಂದ ಕೆಲವು ವ್ಯಕ್ತಿಗಳಲ್ಲಿ ಒಂದೆರಡು ‌ಪಾರ್ಶ್ವ ಪರಿಣಾಮಗಳು ಕಾಣಿಸಿಕೊಂಡಿವೆಯಾದರೂ ಮಾನವನ ಶರೀರಕ್ಕೆ ನೀಡಲಾಗುವ ಯಾವುದೇ ಲಸಿಕೆಯೂ ಇಂಥವುಗಳಿಂದ ಹೊರತಾಗಿಲ್ಲ.

ಲಸಿಕೆ ಪಡೆದುಕೊಂಡ ಮಾತ್ರಕ್ಕೆ ಉದಾಸೀನ ಧೋರಣೆ ತಾಳದೆ ಪ್ರತಿಯೊಬ್ಬರೂ ವೈಯಕ್ತಿಕ ಅಂತರ, ಮುಖಗವಸು ಧರಿಸುವಿಕೆ, ಕೈಗಳ ಸ್ವಚ್ಛತೆ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಕೊರೊನಾದ ಹಾವಳಿಯನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು