ಸೋಮವಾರ, ಮಾರ್ಚ್ 1, 2021
29 °C

ಕೊರೊನಾ ತಿಳಿಯೋಣ: ಕೋವಿಡ್‌ ಸಾಮಾನ್ಯ ನೆಗಡಿಗೆ ತಿರುಗಬಹುದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌–19 ಪ್ರಕರಣಗಳು ಕೆಲವು ಕಡೆ ಏರಿಕೆಯಾದರೆ, ಇನ್ನು ಕೆಲವು ಕಡೆ ಇಳಿಮುಖವಾಗಿವೆ. ಈ ಮಧ್ಯೆ ಕೋವಿಡ್ ಪಿಡುಗು ಮುಂದೇನಾಗಬಹುದು ಎಂಬುದರ ಮೇಲೆ ಹೊಸ ಅಧ್ಯಯನವೊಂದು ಬೆಳಕು ಚೆಲ್ಲುವ ಯತ್ನ ಮಾಡಿದೆ.

ಸಾರ್ಸ್‌ ಕೋವ್‌–2 ವೈರಸ್‌ ಮುಂದೊಂದು ದಿನ ಸಾಮಾನ್ಯ ನೆಗಡಿಯ ವೈರಸ್‌ ರೂಪ ತಾಳಬಹುದು. ಅಂದರೆ ಕೊರೊನಾ ವೈರಸ್‌ ಎನ್ನುವುದು ಬೇರೆ ಕೆಲವು ಸೂಕ್ಷ್ಮಾಣುಗಳಂತಾಗಿ ತುಂಬಾ ಕಡಿಮೆ ಮಟ್ಟದಲ್ಲಿ ತನ್ನ ಅಸ್ತಿತ್ವ ತೋರಿಸಬಹುದು ಎಂದು ಅಮೆರಿಕದ ಎಮೊರಿ ಆ್ಯಂಡ್‌ ಪೆನ್‌ ಸ್ಟೇಟ್‌ ವಿಶ್ವವಿದ್ಯಾಲಯದ ಸಂಶೋಧಕರು ಭವಿಷ್ಯ ನುಡಿದಿದ್ದಾರೆ.

ಆರು ಬಗೆಯ ಕೊರೊನಾ ವೈರಸ್‌ನ ಅಂಕಿ– ಅಂಶ ಸಂಗ್ರಹಿಸಲಾಗಿದ್ದು, ಈ ಅಧ್ಯಯನ ವರದಿಯನ್ನು ‘ಸೈನ್ಸ್‌’ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಸಾರ್ಸ್‌, ಮೆರ್ಸ್‌ ಹಾಗೂ ಸಾಮಾನ್ಯ ನೆಗಡಿಗೆ ಸಂಬಂಧಿಸಿದ ಇತರ ನಾಲ್ಕು ಕೊರೊನಾ ವೈರಸ್‌ಗಳಿವೆ. ಜನರು ಇತರ ಕೊರೊನಾ ವೈರಸ್‌ಗೆ ಹೇಗೆ ರೋಗ ನಿರೋಧಕ ಶಕ್ತಿ ಬೆಳೆಸಿಕೊಂಡಿದ್ದಾರೋ ಹಾಗೆಯೇ ಕೋವಿಡ್‌–19ಗೆ ಕಾರಣವಾಗುವ ಸಾರ್ಸ್‌ ಕೋವ್‌–2 ವೈರಸ್‌ ವಿರುದ್ಧವೂ ಲಸಿಕೆಯಿಂದ ಈ ಪ್ರತಿರಕ್ಷಣ ಗುಣ ಬೆಳೆಸಿಕೊಳ್ಳಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಶಿಶುಗಳು ಹಾಗೂ ಮಕ್ಕಳಿಗೆ ನೆಗಡಿಯಾಗುವುದು ಮಾಮೂಲು. ಕ್ರಮೇಣ ಇದರಿಂದ ರೋಗ ನಿರೋಧಕ ಶಕ್ತಿ ಪ್ರಬಲವಾಗುತ್ತದೆ. ನಂತರದ ದಿನಗಳಲ್ಲಿ ನೆಗಡಿ ಬಂದರೆ ಅಷ್ಟೊಂದು ತೊಂದರೆ ನೀಡುವುದಿಲ್ಲ. ಇದೇ ರೀತಿ ಕೋವಿಡ್ ಕೂಡ ಎಂಬುದು ಸಂಶೋಧಕರ ಪ್ರತಿಪಾದನೆ.

ಕೋವಿಡ್‌ ಲಸಿಕೆ ಪಡೆದವರಲ್ಲಿ ಭವಿಷ್ಯದಲ್ಲಿ ಕೆಲವೊಮ್ಮೆ ಲಘು ಕೋವಿಡ್ ಲಕ್ಷಣಗಳು ಕಾಣಿಸಬಹುದು. ಆದರೆ ಪ್ರತಿಕಾಯಗಳು ಇದನ್ನು ಹಿಮ್ಮೆಟ್ಟಿಸುತ್ತವೆ. ಸಾವಿನ ಸಾಧ್ಯತೆ ಇರುವುದಿಲ್ಲ ಎಂದಿರುವ ಸಂಶೋಧಕರು, ಇದಕ್ಕೆ ಖಾತರಿಯೇನೂ ಇರದಿದ್ದರೂ ಅಂಕಿ– ಅಂಶಗಳು ಒಂದಿಷ್ಟು ಆಶಾಭಾವನೆ ಮೂಡಿಸಿವೆ ಎಂದಿದ್ದಾರೆ.

ಇಂತಹ ದಿನಗಳು ಬರಲು ಒಂದರಿಂದ 10 ವರ್ಷಗಳೂ ಬೇಕಾಗಬಹುದು. ಇದು ವೈರಸ್‌ ಎಷ್ಟು ಬೇಗ ಹರಡುತ್ತದೆ ಎಂಬುದನ್ನು ಅವಲಂಬಿಸಿದೆ. ಹಾಗೆಯೇ ಎಲ್ಲರೂ ಎಷ್ಟು ಶೀಘ್ರ ಲಸಿಕೆ ಪಡೆಯುತ್ತಾರೆ ಎಂಬುದೂ ಮಹತ್ವದ ಅಂಶ. ಆದರೆ ದೀರ್ಘಾವಧಿಯಲ್ಲಿ ಈ ಸೋಂಕು ಮಾಯವಾಗಬಹುದು, ಸದ್ಯಕ್ಕಂತೂ ಇಲ್ಲ ಎಂಬ ಮಾತನ್ನೂ ಇನ್ನು ಕೆಲವು ವಿಜ್ಞಾನಿಗಳು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು