ಭಾನುವಾರ, ಜೂನ್ 20, 2021
25 °C

ಆ್ಯಂಡ್ರೊಪಾಸ್:‌ ಜೀವನಶೈಲಿ ಬದಲಾಯಿಸಿಕೊಳ್ಳಿ!

ಡಾ.ಸೌರಭ್ ಭಾರ್ಗವ Updated:

ಅಕ್ಷರ ಗಾತ್ರ : | |

Prajavani

ಆ್ಯಂಡ್ರೊಪಾಸ್‌ ಎಂದರೆ ಪುರುಷರ ಲೈಂಗಿಕತೆ ಉತ್ತೇಜಿಸುವ ಟೆಸ್ಟೊಸ್ಟಿರೋನ್ ಹಾರ್ಮೋನ್‌ನ ದಿಢೀರ್ ಕುಸಿತದಿಂದ ಉಂಟಾಗುವ ಸ್ಥಿತಿ. ಇದಕ್ಕೆ ಪುರುಷರ ಮೆನೋಪಾಸ್ (ಪುರುಷ ಋತುಬಂಧ) ಎನ್ನುವುದು ತೀರಾ ತಪ್ಪಾಗಿ ಅರ್ಥೈಸಲಾದ ಪದ. ವಯಸ್ಸಾದಂತೆ ಪುರುಷರಲ್ಲಿ ಟೆಸ್ಟೊಸ್ಟಿರೋನ್ ಸಂಖ್ಯೆ ಇಳಿಮುಖವಾದರೂ ಈ ಇಳಿಕೆ ನಿಧಾನವಾಗಿರುತ್ತದೆ. 40 ವರ್ಷದಾಚೆಗೆ ಶೇ 2ಕ್ಕಿಂತಲೂ ಕಡಿಮೆ ಮಂದಿ ಪುರುಷರಲ್ಲಿ ಈ ಇಳಿಕೆ ಕಂಡುಬರುತ್ತದೆ. ಈ ಕುಸಿತ ನಿಧಾನವಾಗಿರುವುದರಿಂದ ಮುಂದಿನ ಹಂತಗಳಲ್ಲಿ ಇದರಿಂದ ಸಮಸ್ಯೆಯಾಗುವ ಸಾಧ್ಯತೆ ಕಡಿಮೆ ಹಾಗೂ ದೇಹಕ್ಕೆ ಈ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಾಕಷ್ಟು ಸಮಯಾವಕಾಶ ಇರುತ್ತದೆ.


ಡಾ.ಸೌರಭ್ ಭಾರ್ಗವ

ಪುರುಷರ ಮೆನೋಪಾಸ್‌ಗೆ ಜೀವನಶೈಲಿ ಅಥವಾ ಮಾನಸಿಕ ಅಂಶಗಳು ಕಾರಣ ಎಂದು ಹೇಳಲಾಗುತ್ತದೆ. ಆದರೆ ವಾಸ್ತವವಾಗಿ ಇದು ಟೆಸ್ಟೊಸ್ಟಿರೋನ್ ಮಟ್ಟದ ಕುಸಿತಕ್ಕೆ ಸಂಬಂಧಿಸಿರಬಹುದು ಅಥವಾ ಇಲ್ಲದಿರಬಹುದು. ಟೆಸ್ಟೊಸ್ಟಿರೋನ್ ಇಳಿಕೆಯು ಸಾಮಾನ್ಯವಾಗಿ ಹೈಪೊಗೊನಾಡಿಸಮ್ ಆರಂಭದ ಲಕ್ಷಣವಾಗಿರಬಹುದು.

ಲಕ್ಷಣಗಳು

ಖಿನ್ನತೆ, ಲೈಂಗಿಕ ನಿಷ್ಕ್ರಿಯತೆ, ಚಿತ್ತ ಚಾಂಚಲ್ಯ, ಶೀಘ್ರ ಕೋಪ, ಮಾಂಸಖಂಡದ ದ್ರವ್ಯರಾಶಿ ಕಡಿಮೆಯಾಗುವುದು, ಹೊಟ್ಟೆ ದೊಡ್ಡದಾಗುವುದು, ಸ್ತನ ಉಬ್ಬಿಕೊಳ್ಳುವುದು, ಉತ್ಸಾಹದ ಕೊರತೆ, ನಿದ್ರಾಹೀನತೆ ಮತ್ತು ಏಕಾಗ್ರತೆಯ ಕೊರತೆ ಪುರುಷರ ಮೆನೋಪಾಸ್‌ನ ಪ್ರಮುಖ ಲಕ್ಷಣಗಳು. ಈ ಲಕ್ಷಣಗಳು ದೈನಂದಿನ ಚಟುವಟಿಕೆಗಳನ್ನು ಅಸ್ತವ್ಯಸ್ತಗೊಳಿಸಬಲ್ಲವು. ಉದಾಹರಣೆಗೆ ಕಾಮಾಸಕ್ತಿಯ ಕೊರತೆ ಹಾಗೂ ಲೈಂಗಿಕಾಸಕ್ತಿಯ ಚಂಚಲತೆಯು ಟೆಸ್ಟೊಸ್ಟಿರೋನ್ ಮಟ್ಟ ಕಡಿಮೆಯಾಗುವುದಕ್ಕಿಂತ ಹೆಚ್ಚಾಗಿ ಒತ್ತಡ ಅಥವಾ ಉದ್ವಿಗ್ನತೆಯ ಪರಿಣಾಮವಾಗಿರಬಹುದು ಅಥವಾ ಸರಿಯಾದ ಆಹಾರ ಕ್ರಮ ಅನುಸರಿಸದಿರುವುದು, ದೈಹಿಕ ಚಟುವಟಿಕೆಗಳ ಕೊರತೆ ಇದಕ್ಕೆ ಕಾರಣ ಇರಬಹುದು.

ಚಿಕಿತ್ಸೆ

ಚಿಕಿತ್ಸೆ ನೀಡುವ ಮುನ್ನ ಕಾರಣ ಮತ್ತು ರೋಗಲಕ್ಷಣವನ್ನು ನಿರ್ಧರಿಸುವುದು ಮುಖ್ಯ. ಜೀವನಶೈಲಿ ಅಥವಾ ಒತ್ತಡ ಅಥವಾ ಉದ್ವಿಗ್ನದಂಥ ಮಾನಸಿಕ ಸ್ಥಿತಿ ನೋಡಿಕೊಂಡು ಔಷಧಗಳನ್ನು ಅಥವಾ ಚಿಕಿತ್ಸೆಯನ್ನು ಸೂಚಿಸಬಹುದು. ಬಹಳಷ್ಟು ಪ್ರಕರಣಗಳಲ್ಲಿ ವ್ಯಾಯಾಮವು ಈ ಸಮಸ್ಯೆಯನ್ನು ನಿವಾರಿಸಬಹುದು. ಇದಕ್ಕೆ ಲಭ್ಯವಿರುವ ಮತ್ತೊಂದು ಚಿಕಿತ್ಸಾ ವಿಧಾನವೆಂಧರೆ ಹಾರ್ಮೋನ್ ಬದಲಾವಣೆ ಚಿಕಿತ್ಸೆ. ಈ ಚಿಕಿತ್ಸಾ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ, ಇದರಿಂದ ಆಗಬಹುದಾದ ಸಂಭಾವ್ಯ ಅಪಾಯಗಳು ಮತ್ತು ಅಡ್ಡ ಪರಿಣಾಮಗಳ ಬಗ್ಗೆ ಚರ್ಚಿಸುವುದು ಅಗತ್ಯ. 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಪುರುಷರು ಟೆಸ್ಟೊಸ್ಟಿರೋನ್ ಬದಲಾವಣೆ ಚಿಕಿತ್ಸೆ ಆರಂಭಿಸುವ ಮುನ್ನ ತಮ್ಮ ಪಿಎಸ್‌ಎ (ಪ್ರೋಸ್ಟೇಟ್ ಸ್ಪೆಸಿಫಿಕ್ ಆಂಟಿಜನ್) ಮಟ್ಟವನ್ನು ಅಂದಾಜಿಸುವುದು ಅಗತ್ಯ. ಟೆಸ್ಟೊಸ್ಟಿರೋನ್‌ಗಳನ್ನು ಚುಚ್ಚುಮದ್ದು, ಗುಳಿಗೆ, ಪ್ಯಾಚಸ್, ಕಸಿ ಅಥವಾ ಜೆಲ್ ರೂಪದಲ್ಲೂ ಕೊಡಬಹುದು.

ಚಿಕಿತ್ಸೆಯ ಜೊತೆಗೆ ಜೀವನಶೈಲಿಯಲ್ಲಿ ಬದಲಾವಣೆಯನ್ನು ತಂದುಕೊಳ್ಳುವುದು ಮುಖ್ಯ. ಆರೋಗ್ಯಕರ ಜೀವನಶೈಲಿ ಎಂದರೆ ಕೇವಲ ಸರಿಯಾದ ಆಹಾರ ಸೇವನೆ ಮತ್ತು ದೈಹಿಕ ವ್ಯಾಯಾಮವಷ್ಟೇ ಅಲ್ಲ. ಖುಷಿಯಿಂದ ಇರುವುದು, ಸ್ನೇಹಿತರ ಜತೆ ಸಂಪರ್ಕ ಕೂಡಾ ಸಕಾರಾತ್ಮಕ ಪರಿಣಾಮ ಬೀರಬಲ್ಲದು. ನಿದ್ರಾಹೀನತೆ, ಅತಿಯಾದ ಮದ್ಯಪಾನ, ಧೂಮ ಪಾನ, ಆತ್ಮವಿಶ್ವಾಸದ ಕೊರತೆಯಂಥ ಸಮಸ್ಯೆಗಳನ್ನು ಬಗೆಹರಿಸುವುದು ಕೂಡಾ ಪುರುಷರ ಮೆನೋಪಾಸ್ ಸಮಸೆಯನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಹೈಪೋಗೊನಾಡಿಸಮ್ ಎಂದರೇನು?

ಹೈಪೋಗೊನಾಡಿಸಮ್ (ಕಾಮಾಸಕ್ತಿ ಕೊರತೆ) ಎನ್ನುವುದು ಪುರುಷರಲ್ಲಿ ಸುಮಾರು 50ನೇ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ. ಅದರಲ್ಲೂ ಮುಖ್ಯವಾಗಿ ಬೊಜ್ಜು ಹಾಗೂ ಮಧುಮೇಹ ಇದ್ದವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಜೀವನಶೈಲಿ ಮತ್ತು ಮಾನಸಿಕ ಸಮಸ್ಯೆಗಳು ಕೂಡಾ ಈ ಸ್ಥಿತಿಗೆ ಸಾಧ್ಯತೆಗಳು ಎಂದು ಪರಿಗಣಿಸಲಾಗಿದೆ. ಈ ಹಂತದಲ್ಲಿ ವೃಷಣಗಳು ಸಮರ್ಪಕ ಪ್ರಮಾಣದಲ್ಲಿ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡಲಾರವು. ಇದು ಒಂದು ಅಸಾಮಾನ್ಯ ಸ್ಥಿತಿಯಾಗಿದ್ದು, ಟೆಸ್ಟೊಸ್ಟಿರೋನ್ ಮಟ್ಟದ ಮೂಲಕ ಹೈಪೋಗೊನಾಡಿಸಮ್ ರೋಗಲಕ್ಷಣ ಪತ್ತೆ ಮಾಡಲು ಸಾಧ್ಯ.

(ಲೇಖಕ: ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಷಾ ವೈದ್ಯಕೀಯ ಕೇಂದ್ರದ ಮೂತ್ರನಾಳ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಮತ್ತು ವೈದ್ಯಕೀಯ ಅಧೀಕ್ಷಕ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು