ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸದ ಸ್ಥಳವನ್ನು ಸುಂದರಗೊಳಿಸುವುದು ಸೌಹಾರ್ದದ ಮಧುರತೆ

Last Updated 15 ನವೆಂಬರ್ 2021, 20:45 IST
ಅಕ್ಷರ ಗಾತ್ರ

ಯಾವ ಸಂಸ್ಥೆಯಲ್ಲಿ ಉದ್ಯೋಗಿಗಳು ನಿರಾಳವಾಗಿ, ಆನಂದವಾಗಿ ಇರುತ್ತಾರೋ ಅಲ್ಲಿನ ಕೆಲಸಗಳು ಹೆಚ್ಚು ಕ್ರಿಯಾಶೀಲವಾಗಿ, ಹೆಚ್ಚು ಪರಿಣಾಮಕಾರಿಯಾಗಿ ನಡೆಯುತ್ತವೆ ಎಂದು ಸಂಶೋಧನೆಗಳು ದೃಢಪಡಿಸಿವೆ.

‘ಗುಡ್ ಮಾರ್ನಿಂಗ್ ಸರ್’, ‘ಗುಡ್ ಮಾರ್ನಿಂಗ್ ಮೇಡಂ’ ಎಂದು ಬೆಳಿಗ್ಗೆ ನಮ್ಮ ಉದ್ಯೋಗದ ಸ್ಥಳಕ್ಕೆ ಕಾಲಿಟ್ಟ ಕೂಡಲೇ ಹೇಳುವುದು ಸಾಮಾನ್ಯ ವಾಡಿಕೆ. ಜೊತೆಗೆ ಸೀನಿಯರ್‌ಗಳ ಮುಖಭಾವವನ್ನೂ ಓದುವುದು. ಅವರು ಪ್ರಸನ್ನಚಿತ್ತರಾಗಿದ್ದಾರೋ, ಧುಮುಧುಮು ಅನ್ನುತ್ತಿದ್ದಾರೋ, ಮನೆಯಲ್ಲೇನಾದರೂ ಚಕಮಕಿಯಾಗಿ ಅದರ ಪ್ರಭಾವ ನಮ್ಮ ಮೇಲೆ ಆಗುವುದೋ ಎನ್ನುವ ಅಳುಕನ್ನು ತುಂಬಿಕೊಂಡು ಕೆಲಸ ಆರಂಭಿಸುವುದು ಸಾಮಾನ್ಯ.

ಇದಕ್ಕೆ ಹೊರತಾಗಿ ‘ಹಾಯ್ ಗುಡ್ ಮಾರ್ನಿಂಗ್. ಗುಡ್ ಮಾರ್ನಿಂಗ್, ಗುಡ್ ಮಾರ್ನಿಂಗ್’ ಎಂದು ನಗುಮೊಗದಿಂದ ಹೇಳಿ, ಪ್ರತಿ ಪಡೆಯುತ್ತ ಇಂದೆಲ್ಲ ಒಳಿತೇ ಆಗುತ್ತದೆ ಎಂದುಕೊಂಡು ಕೆಲಸ ಶುರುಮಾಡುವುದು ನಮಗೆ ನಾವೇ ನೆಮ್ಮದಿಯನ್ನು ಹುಡುಕಿಕೊಳ್ಳುವ ಪರಿ.‌

ಸೌಹಾರ್ದತೆ, ವಿಶ್ವಾಸ, ಆದರ, ಸ್ನೇಹ, ಪರಸ್ಪರ ಸಹಕಾರ, ಗೌರವ ಜೊತೆಗೆ ನಂಬಿಕೆಗಳು ಉದ್ಯೋಗದ ಸ್ಥಳದಲ್ಲಿ ವಿಶಿಷ್ಟ ಪಾತ್ರವನ್ನು ನಿರ್ವಹಿಸುತ್ತದೆ. ಕಾರ್ಯಕ್ಷೇತ್ರಗಳಲ್ಲಿ ಘರ್ಷಣೆ ಉಂಟಾಗಲು ಪ್ರಮುಖ ಕಾರಣ ಮನುಷ್ಯರ ಹಮ್ಮು, ಬಿಮ್ಮು, ಭೇದಭಾವ, ಕಾರ್ಯದೊತ್ತಡ, ಕೆಲಸದ ಬಗೆಗಿನ ಅರಿವಿನ ಕೊರತೆ, ಗುರಿಯಿಲ್ಲದಿರುವುದು, ಅಪನಂಬಿಕೆ, ಸೂಕ್ತ ಸಂವಹನದ ಕೊರತೆ, ಋಣಾತ್ಮಕ ಯೋಚನೆಗಳು ಇತ್ಯಾದಿ.

ಘರ್ಷಣೆ ಉಂಟಾಗದಂತೆ ತೂಗಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ನೋವಿಲ್ಲದ, ಸಂಕಟವಿಲ್ಲದ, ಕಷ್ಟವಿಲ್ಲದ ವ್ಯಕ್ತಿ ಯಾರಿದ್ದಾರೆ? ಅದನ್ನು ಮೀರಿ ಪರಸ್ಪರರನ್ನು ಕಂಡಾಗ ಮಂದಹಾಸವನ್ನು ಬೀರುವುದು ಸೌಹಾರ್ದಯುತ ವಾತಾವರಣದ ಮೊದಲ ಹೆಜ್ಜೆ. ಮಾಡಿದ ಕೆಲಸವನ್ನು ಗುರುತಿಸಿ ಬೆನ್ನು ತಟ್ಟುವುದು ಮತ್ತಷ್ಟು ಒಳ್ಳೆಯ ಕೆಲಸಕ್ಕೆ ನಾಂದಿಯಾಗುವುದು. ಪರಸ್ಪರ ಸಹಕಾರ ಎನ್ನುವುದು ಮನುಷ್ಯರಿಗೆ ಪ್ರತಿಹೆಜ್ಜೆಯಲ್ಲೂ ಅವಶ್ಯಕ. ಉದ್ಯೋಗದಲ್ಲಂತೂ ಪರಸ್ಪರಾವಲಂಬನೆ ಸಹಜ. ಮತ್ತೊಬ್ಬರು ನಮ್ಮ ಕೆಲಸಕ್ಕೆ ನೆರವಾದಾಗ ಕೃತಜ್ಞತೆಯನ್ನು ಸಲ್ಲಿಸುವುದು ಮತ್ತಷ್ಟು ಆತ್ಮೀಯತೆಗೂ ಹೆಚ್ಚಿನ ಕಾರ್ಯಕ್ಷಮತೆಗೂ ಅನುಕೂಲಕರ.

ನಿಖರತೆ ಹೆಚ್ಚಾಗಬೇಕಾದರೆ ಮನಸ್ಸು ಶಾಂತವಾಗಿರಬೇಕು. ಒತ್ತಡದಲ್ಲಿ ಕೆಲಸಮಾಡುವುದು ಹೆಚ್ಚಿನ ತಪ್ಪುಗಳಿಗೆ ಎಡೆಮಾಡಿಕೊಡುತ್ತದೆ. ನಾವು ಕೆಲಸ ಮಾಡುವ ಸ್ಥಳದಲ್ಲಿ ಗಾಳಿ ಬೆಳಕು ಎಷ್ಟು ಅವಶ್ಯಕವೋ, ಕೆಲಸ ಮಾಡುವ ಉದ್ಯೋಗಿಗಳ ನಡುವೆ ಸ್ನೇಹಪೂರ್ಣ ನಡವಳಿಕೆಯೂ ಅಷ್ಟೇ ಮುಖ್ಯ.

ಸ್ನೇಹ ಎನ್ನುವುದು ಕೈಕೈಹಿಡಿದು ಮರಳುಮನೆಗಳ ಕಟ್ಟಿ ಆಟವಾಡುವುದು ಮಾತ್ರವಲ್ಲ; ಜೊತೆಗೆ ಪರಸ್ಪರರ ಕಷ್ಟ ಸುಖಗಳನ್ನು ಅರಿತು ಕೈ ಹಿಡಿದು ನಡೆಸುವುದೂ. ಇದು ಕೇವಲ ಬಾಲ್ಯಸ್ನೇಹಕ್ಕೆ ಸೀಮಿತವಾಗಿರಬೇಕಿಲ್ಲ; ಉದ್ಯೋಗದ ಸಂದರ್ಭದಲ್ಲಿಯೂ ಇಡೀ ಸಂಸ್ಥೆಯನ್ನು ಮುನ್ನಡೆಸುವಲ್ಲಿ ದೊಡ್ಡ ಹೆಜ್ಜೆಯೇ.

ಹೊಸ ಹೊಸ ಯೋಚನೆ ಕಲ್ಪನೆಗಳು ಕಾರ್ಯನಿರ್ವಹಿಸುವಾಗ ಹೆಚ್ಚಿನ ಫಲಿತಾಂಶವನ್ನು ನೀಡುತ್ತದೆ. ಅದು ಹಿರಿಯರಿರಲಿ, ಕಿರಿಯರಿರಲಿ ಹೊಸ ಯೋಚನೆ/ಯೋಜನೆಯ ಬಗ್ಗೆ ಹೇಳಿದಾಗ ಕೇಳುವ ಸಹನೆಯನ್ನು ಬೆಳೆಸಿಕೊಳ್ಳುವುದು ಮತ್ತಷ್ಟು ಒಳ್ಳೆಯ ವಾತಾವರಣವನ್ನು ಸೃಷ್ಟಿಸುತ್ತದೆ. ಕೆಲಸ ಕೆಲಸ ಕೆಲಸ ಎಂದು ಕುಟುಂಬವನು, ಆರೋಗ್ಯವನ್ನ್ನು ನಿರ್ಲಕ್ಷಿಸುವುದೋ ಅಥವಾ ಕುಟುಂಬವೇ ಎಂದು ಅನ್ನ ನೀಡುವ ಸಂಸ್ಥೆಯಲ್ಲಿ ಕೆಲಸಗಳ್ಳತನ ಮಾಡುವುದೋ ಎರಡೂ ಅಪಾಯಕಾರಿ. ಕೌಟುಂಬಿಕ ಜೀವನ ಮತ್ತು ಉದ್ಯೋಗ ಜೀವನದ ಸಮತೋಲನ ಇಂದಿನ ಜರೂರುಗಳಲ್ಲಿ ಒಂದು. ಇದರ ಸಮತೋಲನ ಸಮಯದ ಸೂಕ್ತ ನಿರ್ವಹಣೆಯಿಂದ ಸುಲಭಸಾಧ್ಯವಾಗುತ್ತದೆ. ಯಾವುದಕ್ಕೆ ಆದ್ಯತೆ ಕೊಡಬೇಕೆನ್ನುವುದನ್ನು ಅರಿತು ಅದನ್ನು ಇತರರೊಂದಿಗೂ ಹಂಚಿಕೊಂಡರೆ ಇದು ಸಾಧ್ಯ.

ಯಾವ ಸಂಸ್ಥೆಯಲ್ಲಿ ಉದ್ಯೋಗಿಗಳು ನಿರಾಳವಾಗಿ, ಆನಂದವಾಗಿ ಇರುತ್ತಾರೋ ಅಲ್ಲಿನ ಕೆಲಸಗಳು ಹೆಚ್ಚು ಕ್ರಿಯಾಶೀಲವಾಗಿ, ಹೆಚ್ಚು ಪರಿಣಾಮಕಾರಿಯಾಗಿ ನಡೆಯುತ್ತವೆ ಎಂದು ಸಂಶೋಧನೆಗಳು ದೃಢಪಡಿಸಿವೆ. ಅಲ್ಲಿ ಯಾವ ಭೇದಭಾವವೂ ಸಲ್ಲ. ಹೆಚ್ಚು ಕಡಿಮೆ ಎಂಬ ಪರಿಕಲ್ಪನೆಯನ್ನು ಹೊರತು ಎಲ್ಲರೂ ಸಂಸ್ಥೆಯ ಉದ್ಯೋಗಿಗಳು ಎಂಬ ಭಾವದಿಂದ ದುಡಿಯುವಂತಾದರೆ ಎಲ್ಲರಲ್ಲೂ ಉತ್ಸಾಹ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

ಸೌಹಾರ್ದಯುತವಾದ ವಾತಾವರಣಕ್ಕೆ ವಿರಾಮದ ಸಮಯದಲ್ಲಿ, ಊಟದ ಸಮಯದಲ್ಲಿ ನಾವುಗಳು ಕಳೆಯುವ ನಿರಾಳದ ಸಮಯ ಹೆಚ್ಚು ಪ್ರೇರಕ-ಕಾರಕ. ನನ್ನ ಸ್ವಾನುಭವವೆಂದರೆ ಈ ಹಿಂದೆ ಕೆಲಸ ಮಾಡುತ್ತಿದ್ದ ನನ್ನ ಶಾಖೆಯಲ್ಲಿನ ಎಲ್ಲ ಸಹೋದ್ಯೋಗಿಗಳೂ ಸ್ನೇಹಿತರೇ ಆಗಿದ್ದರು. ಒಬ್ಬರು ಹೊಸ ಬಟ್ಟೆ ಹಾಕಿದರೆಂದರೆ ಉಳಿದವರು ಪಾರ್ಟಿ ಎಲ್ಲಿ ಎಂದು ಪೀಡಿಸುತ್ತಿದ್ದೆವು, ಅವರ ಮನೆಯ ಸಮಾರಂಭಗಳು ನಮ್ಮ ಮನೆಯ ಸಂಭ್ರಮವಾಗುತ್ತಿತ್ತು. ಅವರ ನೋವುಗಳಿಗೆ ನಾವೆಲ್ಲ ಹೆಗಲು ಕೊಡುತ್ತಿದ್ದೆವು. ಊಟದ ಹಾಲ್ ಎಂದರೆ ಅದು ವಿನೋದದ ತಾಣವೇ. ಒಬ್ಬರ ಕಾಲೊಬ್ಬರು ಎಳೆಯುತ್ತ ಅರ್ಧ ಗಂಟೆ ಜಾರಿಹೋಯಿತು ಎಂದು ಪರಿತಪಿಸುವಂತಾಗುತ್ತಿತ್ತು. ಆದರೆ ಕೆಲಸದ ವಿಷಯಕ್ಕೆ ಬಂದರೆ ಬದ್ಧತೆಯಲ್ಲೂ ಸ್ಪರ್ಧೆಯೇ. ಸ್ಪರ್ಧೆಗಳು ಆರೋಗ್ಯಕರವಾಗಿರುತ್ತಿತ್ತು. ಆರೋಗ್ಯಕರ ಪೈಪೋಟಿ ಕಾರ್ಯಕ್ಷೇತ್ರದ ಮಾಧುರ್ಯವನ್ನು ಹೆಚ್ಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT