ಭಾನುವಾರ, ಜನವರಿ 26, 2020
23 °C

ಮಕ್ಕಳಲ್ಲಿ ಜನ್ಮಜಾತ ಹೃದಯ ಸಮಸ್ಯೆ: ಪೌಷ್ಟಿಕ ಆಹಾರ ಕಡ್ಡಾಯ

ಡಾ. ಸಾಜನ್ ಕೋಶಿ Updated:

ಅಕ್ಷರ ಗಾತ್ರ : | |

Prajavani

ಕಂಜೆನಿಟಲ್ ಹೃದ್ರೋಗ ಸಮಸ್ಯೆ (ಸಿಎಚ್‌ಡಿ) ಎಂಬುದು ಹುಟ್ಟಿನೊಂದಿಗೆ ಶಿಶುಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ. ಕೆಲವೊಮ್ಮೆ ಗಂಭೀರ ಸ್ವರೂಪದಲ್ಲಿರುವ ಈ ತೊಂದರೆಗೆ ವಂಶವಾಹಿನಿ ಅಥವಾ ಪರಿಸರಾತ್ಮಕ ಕಾರಣಗಳು ಇರಬಹುದು. ಚಿಕ್ಕ ಮಗುವಿನ ಈ ತೊಂದರೆಯಿಂದ ಸಹಜವಾಗಿಯೇ ಪೋಷಕರಲ್ಲಿ ಆತಂಕ ಮೂಡುವುದು ಸಹಜ. ಮುಂದೇನು? ಇದರ ಆರೈಕೆ ಹೇಗೆ? ಇತ್ಯಾದಿ ಪ್ರಶ್ನೆಗಳು ಮೂಡಬಹುದು.

ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ಅನ್ವಯ ಜನಿಸುವ ಪ್ರತಿ ಸಾವಿರ ಮಕ್ಕಳಲ್ಲಿ 9 ಮಕ್ಕಳಿಗೆ ಈ ಸಮಸ್ಯೆ ಇದೆ. ಸಿಎಚ್‌ಡಿಯನ್ನು ಸ್ಯಾನೋಟಿಕ್ ಮತ್ತು ಅಕ್ಯನೋಟಿಕ್ ಹೃದ್ರೋಗ ಸಮಸ್ಯೆ ಎಂದು ಎರಡು ರೀತಿಯಲ್ಲಿ ವಿಂಗಡಿಸಬಹುದು.
ಹೃದಯ ಸಂಬಂಧಿ ಸಮಸ್ಯೆಯುಳ್ಳ ಮಗುವಿನ ಆರೈಕೆಯು ಭಾವನಾತ್ಮಕವಾಗಿ ಹೆಚ್ಚು ಒತ್ತಡ ಮೂಡಿಸಲಿದ್ದು, ಪೋಷಕರು ಈ ಕುರಿತು ವಾಸ್ತವ ಸಂಗತಿಯನ್ನು ತಿಳಿದಿರುವುದು ಅಗತ್ಯ. ಆರಂಭಿಕ ಹಂತದಲ್ಲಿಯೇ ಶಿಶುವಿಗೆ ಹೃದಯ ಸಂಬಂಧಿ ಸಮಸ್ಯೆ ಇದೆಯೇ ಎಂಬುದನ್ನು ಅರಿಯಲು ಸೋನೊಗ್ರಫಿ ಎಂಬುದು ಪರಿಣಾಮಕಾರಿಯಾದ ತಪಾಸಣೆ. ವೈದ್ಯರ ಸಮಾಲೋಚನೆಯೊಂದಿಗೆ ಇದನ್ನು ಮಾಡಬಹುದು.

ಲಕ್ಷಣಗಳು

ಚರ್ಮ, ಉಗುರು, ತುಟಿಯಲ್ಲಿ ಕಂದು ಬಣ್ಣದ ಕಲೆಗಳು ಇರುವುದು.

ಜೋರಾಗಿ ಉಸಿರಾಡುವುದು, ಉಸಿರಾಟ ಕಡಿಮೆ ಇರುವುದು.

ಕಡಿಮೆ ತೂಕವಿರುವುದು.

ವೇಗವಾದ ಹೃದಯ ಬಡಿತ ಇರುವುದು.

ಉಸಿರಾಟಕ್ಕೆ ಸಂಬಂಧಿಸಿದ ಸೋಂಕು ಸಮಸ್ಯೆಯು ಅಂತಿಮವಾಗಿ ಯಕೃತ್ತು ಮತ್ತು ಶ್ವಾಸನಾಳಕ್ಕೆ ಧಕ್ಕೆ ಉಂಟು ಮಾಡಬಹುದು.

ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ

ಇನ್‌ಫ್ಲುಯೆಂಜಾ ನಿರೋಧಕ ಲಸಿಕೆ ಪಡೆಯುವುದು

ಧೂಮಪಾನ, ಮದ್ಯಪಾನ ಬಿಡುವುದು ಅಥವಾ ವೈದ್ಯರ ಶಿಫಾರಸು ಇಲ್ಲದೇ ಔಷಧ ತೆಗೆದುಕೊಳ್ಳದಿರುವುದು.

ಸೋಂಕುಪೀಡಿತ ಜನರಿಂದ ದೂರ ಇರುವುದು

ಮಧುಮೇಹ ಸಮಸ್ಯೆ ಉಳ್ಳವರು ಆಹಾರದ ಪಥ್ಯ, ಪೌಷ್ಟಿಕ ಆಹಾರ ಕುರಿತು ವೈದ್ಯರ ಸಲಹೆ ಪಡೆಯುವುದು

ಉಗುರು ಬಣ್ಣ, ಉಗುರು ಬಣ್ಣ ತೆಗೆಯುವ ರಾಸಾಯನಿಕದಿಂದ ದೂರ ಇರುವುದು.

ಮಕ್ಕಳು ಆರೋಗ್ಯಕರ ಜೀವನಶೈಲಿ ಅನುಸರಿಸಿದರೆ ಭವಿಷ್ಯದಲ್ಲಿ ಹೃದಯ ಸಂಬಂಧಿ ಸಮಸ್ಯೆ ಬಾಧಿಸುವುದನ್ನು ತಪ್ಪಿಸಬಹುದು. ಈ ಅಭ್ಯಾಸಗಳು ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡುವುದಷ್ಟೇ ಅಲ್ಲ, ಶಿಶುವಿನ ಆರೋಗ್ಯಕರ ಬೆಳವಣಿಗೆಗೆ ಪೂರಕವೂ ಹೌದು.

ಹೀಗೆ ಮಾಡಿ

ಪ್ರತಿ ನಿತ್ಯ 30 ನಿಮಿಷ ಕಾಲ ಚೇತೋಹಾರಿ ಚಟುವಟಿಕೆಗಳು.

ಪ್ರತಿ ದಿನ 60 ನಿಮಿಷ ಅವಧಿಯ ದೈಹಿಕ ಚಟುವಟಿಕೆಗಳು ಅಂದರೆ ಸೈಕ್ಲಿಂಗ್, ಈಜು ಇತ್ಯಾದಿ.

ಟಿವಿ, ಲ್ಯಾಪ್‌ಟಾಪ್ ಮತ್ತು ವಿಡಿಯೊ ಗೇಮ್ ಆಡುವುದಕ್ಕೆ ಮಿತಿ ಹೇರಬೇಕು.

ಆಹಾರದಲ್ಲಿ ಆದಷ್ಟು ಹಸಿರು ತರಕಾರಿ ಇರುವಂತೆ ನೋಡಿಕೊಳ್ಳಬೇಕು.

ಜಂಕ್ ಫುಡ್‌ಗಳನ್ನು ಆದಷ್ಟು ದೂರವಿಡಿ. ಇದರ ಬದಲಾಗಿ, ಹಣ್ಣು ಮತ್ತು ಮಿಲ್ಕ್ ಶೇಕ್‌ ಇನ್ನಿತರ ಆಹಾರವನ್ನು ನೀಡಿ.

(ಸೀನಿಯರ್ ಕನ್ಸಲ್ಟೆಂಟ್, ಶಿಶು ಹೃದ್ರೋಗ ತಜ್ಞ, ಅಸ್ಟೆರ್ ಮೆಡ್‌ಸಿಟಿ, ಕೊಚ್ಚಿ )

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು