ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಕೋವಿಡ್‌ ಲಸಿಕೆ 2.0: ಹೆಸರು ನೋಂದಣಿ, ಲಸಿಕೆ ಪಡೆಯುವುದು ಹೇಗೆ?

Last Updated 1 ಮಾರ್ಚ್ 2021, 4:59 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ 27 ಕೋಟಿ ಜನರಿಗೆ ಕೋವಿಡ್‌ ಲಸಿಕೆ ನೀಡುವ, ಜಗತ್ತಿನ ಅತಿ ದೊಡ್ಡ ಲಸಿಕಾ ಅಭಿಯಾನ 2.0 ಇಂದಿನಿಂದ ( ಮಾ.1) ಆರಂಭವಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೊವ್ಯಾಕ್ಸಿನ್‌ ಲಸಿಕೆ ಪಡೆಯುವ ಮೂಲಕ ಎರಡನೇ ಹಂತದ ಕೋವಿಡ್‌ ಲಸಿಕೆ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ದೇಶದಾದ್ಯಂತ 20 ಸಾವಿರ ಸರ್ಕಾರಿ ಆಸ್ಪತ್ರೆಗಳು ಹಾಗೂ 10 ಸಾವಿರ ಖಾಸಗಿ ಆಸ್ಪತ್ರೆಗಳ ಮೂಲಕ 27 ಕೋಟಿ ನಾಗರಿಕರಿಗೆ ಲಸಿಕೆ ಹಾಕಲಾಗುವುದು. ಈ ಬೃಹತ್‌ ಯೋಜನೆಗಾಗಿ ಕೇಂದ್ರ ಸರ್ಕಾರವು₹35,000 ಕೋಟಿ ಖರ್ಚು ಮಾಡಲಿದೆ.

ಲಸಿಕೆ ಪಡೆಯಲು ಯಾರು ಅರ್ಹರು?
ಎರಡನೇ ಹಂತದ ಲಸಿಕಾ ಅಭಿಯಾನದಲ್ಲಿ 60 ವರ್ಷಕ್ಕೂ ಮೇಲ್ಪಟ್ಟವರು ಹಾಗೂ ಆರೋಗ್ಯ ಸಂಬಂಧಿ ಹಲವು ಸಮಸ್ಯೆಗಳಿಂದ ಬಳಲುವ 45– 59 ವರ್ಷದೊಳಗಿನ ವಯಸ್ಸಿನವರು ಮಾತ್ರ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ.

ಲಸಿಕೆ ಪಡೆಯುವುದು ಎಲ್ಲಿ?
ದೇಶದ ಸರ್ಕಾರಿ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಸೇರಿದಂತೆ ಕೇಂದ್ರ ಸರ್ಕಾರ ಗುರುತಿಸಿರುವ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬಹುದು. ಸುಮಾರು 30 ಸಾವಿರ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ.

ಲಸಿಕೆ ಶುಲ್ಕ ಎಷ್ಟು?
ಲಸಿಕೆ ಹಾಕಿಸಿಕೊಳ್ಳಲು ನೋಂದಾಯಿಸಿಕೊಂಡವರು ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಹಾಕಿಸಿಕೊಳ್ಳಬಹುದು. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವ ನಾಗರಿಕರು ₹250 ಪಾವತಿ ಮಾಡಬೇಕು. ಈ ಮೊತ್ತದಲ್ಲಿ ₹150 ಲಸಿಕೆ ಬೆಲೆ ಹಾಗೂ ₹100 ಸೇವಾ ಶುಲ್ಕ ಸೇರಿರುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಲಸಿಕೆಗೆ ಹೆಸರು ನೋಂದಾಯಿಸುವುದು ಹೇಗೆ?
60 ವರ್ಷಕ್ಕೂ ಮೇಲ್ಪಟ್ಟವರು ಹಾಗೂ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರು (45– 59 ವರ್ಷದೊಳಗಿನವರು) ಹೆಸರು ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ಕೇಂದ್ರದ ಆರೋಗ್ಯ ಸಚಿವಾಲಯ ಮೂರು ನೋಂದಣಿ ವಿಧಾನಗಳನ್ನು ನೀಡಿದೆ.

*ಲಸಿಕೆ ಪಡೆಯಲು ಇಚ್ಚಿಸುವವರು ‘ಕೋ–ವಿನ್‌ 2.0’ಆನ್‌ಲೈನ್‌ ಸಾಫ್ಟ್‌ವೇರ್‌ ಮೂಲಕ ಹೆಸರು ನೋಂದಾಯಿಸಬಹುದು. (ವೆಬ್‌ಸೈಟ್‌ www.cowin.gov.in)
* ದೇಶದಾದ್ಯಂತ ಇರುವ ಸರ್ಕಾರಿ ಹಾಗೂ ಖಾಸಗಿಯ 30,000 ಲಸಿಕಾ ಕೇಂದ್ರಗಳಿಗೆ ತೆರಳಿ ಅಗತ್ಯ ಗುರುತಿನ ದಾಖಲೆಗಳನ್ನು ನೀಡಿ ಲಸಿಕೆಗೆ ನೇರವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು.
* ರಾಜ್ಯ ಸರ್ಕಾರಗಳು ಆರೋಗ್ಯ ಕಾರ್ಯಕರ್ತರ ಮೂಲಕ ಅರ್ಹರನ್ನು ಗುರುತಿಸಿ ಲಸಿಕಾ ಕೇಂದ್ರಗಳಿಗೆ ಫಲಾನುಭವಿಗಳನ್ನು ಕರೆತಂದು ಲಸಿಕೆ ಹಾಕಿಸಬಹುದು.

ಲಸಿಕೆ ನೋಂದಣಿಗೆ ನೀಡಬೇಕಾದ ದಾಖಲೆಗಳು ಯಾವುವು?
ಲಸಿಕೆ ಪಡೆಯಲು ಇಚ್ಚಿಸುವವರು ಹೆಸರು ನೋಂದಣಿ ಸಂದರ್ಭದಲ್ಲಿ ಅಗತ್ಯ ಗುರುತಿನ ದಾಖಲೆಗಳನ್ನು ನೀಡುವುದು ಕಡ್ಡಾಯವಾಗಿದೆ. ಅರ್ಹ ಫಲಾನುಭವಿಗಳು ಆಧಾರ್‌ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾಬ್‌ ಕಾರ್ಡ್‌, ಚಾಲನ ಪರವಾನಗಿ ಸೇರಿದಂತೆ ಸರ್ಕಾರ ನೀಡಿರುವ ಯಾವುದೇ ಅಧಿಕೃತ ದಾಖಲೆಗಳನ್ನು ನೀಡಬಹುದು.

ಲಸಿಕೆ ಹಾಕುವ ಪ್ರಕ್ರಿಯೆ ಹೇಗಿರುತ್ತದೆ?
ಹೆಸರು ನೋಂದಾಯಿಸಿಕೊಂಡ ಬಳಿಕ ಲಸಿಕೆ ಹಾಕುವ ದಿನಾಂಕವನ್ನು ಅರ್ಹ ಫಲಾನುಭವಿಗಳು ಆಯ್ಕೆ ಮಾಡಿಕೊಳ್ಳಬಹುದು. ನಿಗದಿತ ದಿನದಂದು ಲಸಿಕೆ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬಹುದು. ಲಸಿಕೆ ಹಾಕುವ ಸ್ಥಳದಲ್ಲಿ ಲಸಿಕೆ ಅಭಿಯಾನದ ಪ್ರಕ್ರಿಯೆಗಾಗಿ ಮೂರು ಪ್ರತ್ಯೇಕ ಕೊಠಡಿಗಳಿರುತ್ತವೆ.

*ಕಾಯುವ ಕೊಠಡಿ:ಲಸಿಕೆ ಹಾಕುವುದಕ್ಕೂ ಮುನ್ನ ಫಲಾನುಭವಿಗಳು ಇಲ್ಲಿ ಕುಳಿತು ತಮ್ಮ ಸರದಿಗಾಗಿ ಕಾಯಬೇಕು,
*ಲಸಿಕೆ ಕೊಠಡಿ:ಇಲ್ಲಿ ಫಲಾನುಭವಿಗಳಿಗೆ ವೈದ್ಯರು ಅಥವಾ ವೈದ್ಯಾಧಿಕಾರಿ ಲಸಿಕೆ ಹಾಕುತ್ತಾರೆ,
*ಮೇಲ್ವಿಚಾರಣಾ ಕೊಠಡಿ: ಲಸಿಕೆ ಪಡೆದ ಬಳಿಕ ವ್ಯಕ್ತಿಯನ್ನು 30 ನಿಮಿಷಗಳ ಕಾಲ ಮೇಲ್ವಿಚಾರಣೆಯಲ್ಲಿ ಇರಿಸಿಕೊಂಡು ಆತನ ಮೇಲೆ ಲಸಿಕೆ ಪ್ರತಿಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.

ಯಾವ ಲಸಿಕೆ ನೀಡಲಾಗುತ್ತದೆ?
ಕೇಂದ್ರ ಸರ್ಕಾರ ಅನುಮತಿ ನೀಡಿರುವ ಆಕ್ಸ್ ಫರ್ಡ್‌ ವಿಶ್ವವಿದ್ಯಾಲಯದ ಕೋವಿಶೀಲ್ಡ್‌ ಮತ್ತು ಭಾರತ್‌ ಬಯೊಟೆಕ್‌ನ ಕೊವ್ಯಾಕ್ಸಿನ್‌ ಲಸಿಕೆ ನೀಡಲಾಗುವುದು.

ಹೆಸರು ನೋಂದಾಯಿಸುವ ವೆಬ್‌ಸೈಟ್‌: www.cowin.gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT