ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ಪ್ರಜ್ಞೆ ತಪ್ಪುವುದು ಲಸಿಕೆಯ ಅಡ್ಡ ಪರಿಣಾಮವಲ್ಲ

Last Updated 5 ಜನವರಿ 2021, 21:15 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ಲಸಿಕೆ ಪಡೆದ ನಂತರ ನರ್ಸ್‌ ಒಬ್ಬರು ಮೂರ್ಛೆ ಹೋಗಿದ್ದು ಭಾರಿ ಸುದ್ದಿ ಮಾಡಿತ್ತು. ಕೆಲವರು ಇದು ಲಸಿಕೆಯ ಅಡ್ಡ ಪರಿಣಾಮ ಎಂದು ಭಯಭೀತರಾಗಿದ್ದರು. ಆದರೆ ಲಸಿಕೆ ಹಾಕಿಸಿಕೊಂಡ ನಂತರ ಕೆಲವರಿಗೆ ಕಣ್ಣು ಕತ್ತಲು ಬಂದಂತಾಗಿ ಮೂರ್ಛೆ ಹೋಗುವುದು (ವೆಸೊವೇಗಲ್‌ ಸಿಂಕೊಪೆ) ಸಾಮಾನ್ಯ ಎಂದು ಸಿಡಿಸಿ (ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಶನ್‌) ಸ್ಪಷ್ಟಪಡಿಸಿದೆ.

ಈ ಪ್ರಜ್ಞೆ ತಪ್ಪುವುದು ಹಿಂದೆ ಬೇರೆ ಕಾರಣಗಳಿಗಾಗಿ ಲಸಿಕೆ ಪಡೆದುಕೊಂಡವರಲ್ಲೂ ಕಂಡು ಬಂದಿತ್ತು. ಇದು ಹದಿಹರೆಯದವರಲ್ಲಿ
ಶೇ 60ರಷ್ಟು ಹೆಚ್ಚು ಎಂದು ‘ವ್ಯಾಕ್ಸಿನ್‌ ಅಡ್‌ವರ್ಸ್‌ ಈವೆಂಟ್‌ ರಿಪೋರ್ಟಿಂಗ್‌ ಸಿಸ್ಟಂ’ ವರದಿ ಮಾಡಿದೆ.

ಇಂತಹ ಸಂದರ್ಭದಲ್ಲಿ ಮೂರ್ಛೆಗೆ ಕಾರಣ ರಕ್ತನಾಳವು ಅಗಲವಾಗಿ ರಕ್ತದೊತ್ತಡ ಕಡಿಮೆಯಾಗುವುದು. ಹೀಗಾಗಿ ಮೆದುಳಿಗೆ ರಕ್ತದ ಪೂರೈಕೆ ಕಡಿಮೆಯಾಗಿ ಮೂರ್ಛೆ ಸಂಭವಿಸುತ್ತದೆ. ಇದರಿಂದ ಅಂತಹ ತೊಂದರೆಯೇನೂ ಇಲ್ಲ. ಆದರೆ ವ್ಯಕ್ತಿ ನಿಂತುಕೊಂಡಾಗ ಅಥವಾ ವಾಹನ ಚಾಲನೆ ಮಾಡುತ್ತಿದ್ದಾಗ ಸಂಭವಿಸಿದರೆ ಅವಗಢ ಉಂಟಾಗಬಹುದು; ತಲೆಗೆ ಏಟು ಬೀಳಬಹುದು.

ನೋವು, ಆತಂಕ, ನಿರ್ಜಲೀಕರಣವೂ ಇದಕ್ಕೆ ಕಾರಣ. ಜೊತೆಗೆ ರಕ್ತವನ್ನು ನೋಡಿದಾಗ, ತಕ್ಷಣಕ್ಕೆ ಎದ್ದು ನಿಂತಾಗ ಮೂರ್ಛೆ ಸಂಭವಿಸಬಹುದು. ಲಸಿಕೆ ಪಡೆಯಲು ಬಹಳ ಹೊತ್ತು ಸರತಿ ಸಾಲಿನಲ್ಲಿ ನಿಂತರೆ, ಹೆದರಿಕೆಯಾದರೆ ಕೂಡ ಕಣ್ಣು ಕತ್ತಲೆ ಬಂದು ಮೂರ್ಛೆ ಹೋಗಬಹುದು. ಹೀಗಾಗಿ ಅಂಥವರನ್ನು ತಕ್ಷಣ ಸ್ವಲ್ಪ ಪಾದ ಎತ್ತರಿಸಿ ಮಲಗಿಸುವುದರಿಂದ ಮೆದುಳಿಗೆ ಸರಿಯಾಗಿ ರಕ್ತ ಪೂರೈಕೆಗೊಂಡು ಸ್ವಲ್ಪ ಸಮಯದಲ್ಲೇ ಸರಿ ಹೋಗುತ್ತದೆ.

ವಾಕರಿಕೆ, ಮೈ ಬಿಸಿಯಾಗುವುದು, ಮುಖ ಬಿಳುಪೇರುವುದು, ಅಂಗೈ ಬೆವರುವುದು, ತಲೆ ಸುತ್ತುವುದು, ದೃಷ್ಟಿ ಮಂಜಾಗುವುದು ಇದರ ಮುನ್ಸೂಚನೆ.

ಈ ರೀತಿ ಸಮಸ್ಯೆ ಸಂಭವಿಸಿದಾಗ ಲಸಿಕೆ ಹಾಕುವವರು ಮೊದಲೇ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಲಸಿಕೆ ಹಾಕಿಸಿಕೊಳ್ಳುವವರಿಗೆ ಅದರ ಪ್ರಕ್ರಿಯೆ ಬಗ್ಗೆ ವಿವರಿಸಬೇಕಾಗುತ್ತದೆ. ಮೂರ್ಛೆ ಹೋದಾಗ ಬೀಳುವುದನ್ನು ತಪ್ಪಿಸಲು ವ್ಯಕ್ತಿಯನ್ನು ಕೂರಿಸಿ ಅಥವಾ ಮಲಗಿಸಿ ನೀಡಬೇಕು. ಲಸಿಕೆ ನೀಡುವ ಮುನ್ನ ದೀರ್ಘವಾಗಿ ಉಸಿರೆಳೆದುಕೊಂಡು ಆರಾಮವಾಗಿರುವಂತೆ ಸೂಚಿಸಬೇಕು. ವ್ಯಕ್ತಿಯ ಜೊತೆ ಸಂಭಾಷಣೆಯಲ್ಲಿ ತೊಡಗುತ್ತ, ಗಮನವನ್ನು ಬೇರೆ ಕಡೆ ತಿರುಗಿಸಬೇಕು. ಲಸಿಕೆ ನೀಡಿದ ನಂತರ 15 ನಿಮಿಷಗಳ ಕಾಲ ನಿಗಾ ವಹಿಸಬೇಕು ಎಂದು ಸಿಡಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT