ಬುಧವಾರ, ನವೆಂಬರ್ 25, 2020
20 °C
ಕೊರೊನಾ ಒಂದಿಷ್ಟು ತಿಳಿಯೋಣ

ಪಟಾಕಿ ಹೊಗೆಯಿಂದ ಚೇತರಿಕೆಯೂ ನಿಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ.ಹರ್ಷ ಡಿ.ಎಸ್‌.

ಮಂಗಳೂರು: ‘ಪಟಾಕಿ ಸಿಡಿಸುವುದರಿಂದ ವಾತಾವರಣದಲ್ಲಿ ಹೊಗೆ, ದೂಳಿನ ಪ್ರಮಾಣ ಏಕಾಏಕಿ ಹೆಚ್ಚಳವಾಗುತ್ತದೆ. ಸೀಸ, ತಾಮ್ರದ ಅಂಶ, ಮೆಗ್ನೆಷಿಯಂ ಮತ್ತಿತರ ರಾಸಾಯನಿಕ ಪದಾರ್ಥಗಳು ಗಾಳಿಯಲ್ಲಿ ಸೇರುವುದರಿಂದ ಕೋವಿಡ್‌ ರೋಗಿಗಳಿಗೆ ಮಾತ್ರವಲ್ಲ, ಆರೋಗ್ಯವಂತ ವ್ಯಕ್ತಿಯ ಉಸಿರಾಟಕ್ಕೂ ತೊಂದರೆಯಾಗುತ್ತದೆ. ಕೆಮ್ಮು, ಅಧಿಕ ಕಫ, ದೀರ್ಘಕಾಲದ ಕೆಮ್ಮು ಮತ್ತಿತರ ಕಾಯಿಲೆ ಬರುವ ಸಾಧ್ಯತೆ ಅಧಿಕವಾಗಿರುತ್ತದೆ’ ಎಂದು ಮಂಗಳೂರಿನ ಎ.ಜೆ. ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ.ಹರ್ಷ ಡಿ.ಎಸ್‌. ಹೇಳುತ್ತಾರೆ.

‘ಕೋವಿಡ್‌–19 ರೋಗಿಗಳಿಗೆ, ನ್ಯೂಮೊನಿಯಾಗೆ ಚಿಕಿತ್ಸೆ ಪಡೆಯುತ್ತಿರುವವರಿಗೆ, ತೀವ್ರ ನಿಗಾ ಘಟಕದಲ್ಲಿದ್ದು ಮನೆಗೆ ವಾಪಸಾದವರಿಗೆ ಪಟಾಕಿಯ ಹೊಗೆ, ದೂಳಿನಿಂದ ಉಸಿರಾಟಕ್ಕೆ ತೊಂದರೆಯಾಗಿ ಅವರ ಚೇತರಿಕೆ ನಿಧಾನವಾಗಬಹುದು. ಕೋವಿಡ್‌ನಿಂದ ವ್ಯಕ್ತಿಗಳ ಶ್ವಾಸಕೋಶಕ್ಕೆ ಹಾನಿಯಾಗುವುದನ್ನು ನಾವು ನೋಡುತ್ತಿದ್ದೇವೆ. ಇದು ಇನ್ನಷ್ಟು ಹೆಚ್ಚಳವಾಗುವ ಆತಂಕವೂ ಇದೆ’ ಎಂದು ಅವರು ಎಚ್ಚರಿಸುತ್ತಾರೆ.

ಬಹುತೇಕ ಕೋವಿಡ್‌ ರೋಗಿಗಳು ತೀವ್ರತರವಲ್ಲದ ಜ್ವರ, ಶೀತ, ಕಫ, ಕೆಮ್ಮು ಬಂದು ವಾಸಿಯಾಗಿದ್ದಾರೆ. ಈ ಮಧ್ಯೆ ಪಟಾಕಿ ಹೊಗೆಯಿಂದಾಗಿ ವಾತಾವರಣದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾದರೆ ಮತ್ತೆ ರೋಗಿಗಳಲ್ಲಿ ಕೆಮ್ಮು, ದಮ್ಮು ಜಾಸ್ತಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಆಸ್ತಮಾ, ಸಿಒಪಿಡಿ (ಧೂಮಪಾನದಿಂದ ಶ್ವಾಸಕೋಶಕ್ಕೆ ತೊಂದರೆಯಾದವರು) ಕಾಯಿಲೆ ಇರುವವರಿಗೆ ಈ ಹೊಗೆಯಿಂದ ಶ್ವಾಸಕೋಶದ ಕಾರ್ಯ ಏಕಾಏಕಿ ಕಡಿಮೆ ಆಗಬಹುದು. ಇದರಿಂದ ತೀವ್ರ ಉಸಿರಾಟದ ಸಮಸ್ಯೆ ಕಂಡು ಬರಬಹುದು. ಆಸ್ಪತ್ರೆಗೆ ದಾಖಲಾಗಬೇಕಾದ ಅಥವಾ ಹೆಚ್ಚುವರಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಎದುರಾಗಬಹುದು.

8 ವರ್ಷದ ಕೆಳಗಿನ ಮಕ್ಕಳಲ್ಲಿ ಶ್ವಾಸಕೋಶ ಬೆಳವಣಿಗೆ ಹಂತದಲ್ಲಿರುವುದರಿಂದ ಪಟಾಕಿಯ ಮಾಲಿನ್ಯ ಅದಕ್ಕೆ ತೊಂದರೆ ಕೊಡಬಹುದು. ಅವರನ್ನು ಇಂತಹ ಮಾಲಿನ್ಯದಿಂದ ದೂರ ಇರಿಸಿದರೆ ಉತ್ತಮ. ಇಲ್ಲದಿದ್ದರೆ ಭವಿಷ್ಯದಲ್ಲಿ ತೊಂದರೆ ಎದುರಾಗಬಹುದು.

ಯೌವನದ ನಂತರ ಮನುಷ್ಯನ ಅಂಗಾಂಗಗಳ ಕಾರ್ಯ ನಿರ್ವಹಣೆ ಮಾಡುವುದು ಕಡಿಮೆಯಾಗುತ್ತಾ ಹೋಗುತ್ತದೆ. ಅಂತೆಯೇ ವೃದ್ಧರಲ್ಲಿ ಶ್ವಾಸಕೋಶವು ಕಡಿಮೆ ಸ್ತರದಲ್ಲಿ ಕೆಲಸ ಮಾಡುತ್ತಿರುತ್ತದೆ. ದೈನಂದಿನ ಜೀವನಕ್ಕೆ ಅದು ಸಾಕಾಗುತ್ತದೆ. ಈ ವೇಳೆ ವಾಯುಮಾಲಿನ್ಯ ಹೆಚ್ಚಾದಲ್ಲಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಜಾಸ್ತಿಯಾಗಿರುತ್ತದೆ.

ಈಗಾಗಲೇ ಹೆಚ್ಚು ವಾಯುಮಾಲಿನ್ಯ ಇರುವ ನವದೆಹಲಿಯಂತಹ ಪ್ರದೇಶಗಳಲ್ಲಿ ಮತ್ತೆ ಪಟಾಕಿ ಸಿಡಿಸಿದರೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಏಕಾಏಕಿ ಏರಿಕೆಯಾಗುತ್ತದೆ. ಇದರಿಂದ ವ್ಯಕ್ತಿಯ ಆರೋಗ್ಯದ ಮೇಲೆ ಮಾತ್ರವಲ್ಲ, ಆತನ ಇಡೀ ದೈನಂದಿನ ಚಟುವಟಿಕೆ ಮೇಲೂ ಪ್ರತಿಕೂಲ ಪ‍ರಿಣಾಮ ಬೀರುತ್ತದೆ.

‘ಪಟಾಕಿಯಿಂದ ಇಷ್ಟೆಲ್ಲಾ ತೊಂದರೆಯಿದೆ ಎಂದು ಹಿಂದೆ ಊಹಿಸಿರಲಿಲ್ಲ. ಈಗ ಅದರ ಬಗ್ಗೆ ಜನರಲ್ಲಿ ತಿಳಿವಳಿಕೆ ಹೆಚ್ಚಾಗಿದೆ. ಬೇರೆ ಬೇರೆ ಕಾರಣಗಳಿಂದ ವಾಯುಮಾಲಿನ್ಯ ಈಗಾಗಲೇ ಹೆಚ್ಚಳವಾಗಿದೆ. ಅಂತಹ ಸಮಯದಲ್ಲಿ ನಾವು ಬುದ್ಧಿವಂತರಾಗಿ ಯೋಚಿಸಬೇಕು. ದೀಪವನ್ನು ಬೆಳಗಿಸುವ ಮೂಲಕ ನಾವೆಲ್ಲರೂ ದೀಪಾವಳಿಯನ್ನು ಆಚರಿಸಿದರೆ ಭವಿಷ್ಯಕ್ಕೆ ಉತ್ತಮ ಸಂದೇಶವನ್ನು ಕೊಡಬಹುದು’ ಎಂದು ಅವರು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು