ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಾವಸ್ಥೆಯ ಮಧುಮೇಹ ನಿರ್ವಹಣೆ ಹೇಗೆ?

Last Updated 8 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಮಧುಮೇಹ ಕಾಯಿಲೆ ಸುಮಾರು 7.8 ಕೋಟಿ ಭಾರತೀಯರನ್ನು ಬಾಧಿಸುತ್ತಿದೆ. ಗರ್ಭಾವಸ್ಥೆಯ ಮಧುಮೇಹದಿಂದ ಬಳಲುವ ಮಹಿಳೆಯರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಈ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು, ಕ್ರಮಗಳು ಯಾವವು?

ಚಯಾಪಚಯ ಕ್ರಿಯೆಯಲ್ಲಾಗುವ ವ್ಯತ್ಯಾಸದಿಂದ ಬರುವ ಮಧುಮೇಹ (ಡಯಾಬಿಟಿಸ್‌ ಮೆಲ್ಲಿಟಸ್‌) ಭಾರತ ಸೇರಿದಂತೆ ಜಗತ್ತಿನ ಕೋಟ್ಯಂತರ ಜನರನ್ನು ಬಾಧಿಸುತ್ತಿದೆ. ರಕ್ತದಲ್ಲಿನ ಸಕ್ಕರೆ ಅಂಶದ ಮಟ್ಟ ಜಾಸ್ತಿಯಾಗುವ ಈ ಆರೋಗ್ಯ ಸಮಸ್ಯೆ ದೇಹದ ಇತರ ಅಂಗಾಂಗಗಳು, ಉದಾಹರಣೆಗೆ ಕಣ್ಣು, ಕಿಡ್ನಿ, ರಕ್ತನಾಳ ಮೊದಲಾದವುಗಳ ಮೇಲೆ ದುಷ್ಪರಿಣಾಮ ಬೀರುವಂತಹದ್ದು.

ಇನ್ಸುಲಿನ್ ಒಂದು ಬಗೆಯ ಹಾರ್ಮೋನ್. ಇದು ರಕ್ತದಲ್ಲಿನ ಸಕ್ಕರೆ (ಗ್ಲೂಕೋಸ್)ಯನ್ನು ದೇಹದ ಜೀವಕೋಶಗಳಿಗೆ ಇಂಧನವಾಗಿ ಬಳಸಲು ಸಹಾಯ ಮಾಡುತ್ತದೆ. ದೇಹವು ಇನ್ಸುಲಿನ್ ಉತ್ಪಾದಿಸಲು ಸಾಧ್ಯವಿಲ್ಲದ ಸ್ಥಿತಿಯನ್ನು ಟೈಪ್‌–1 ಮಧುಮೇಹ ಹಾಗೂ ಇನ್ಸುಲಿನ್ ಉತ್ಪಾದನೆಯಾದರೂ ಅದನ್ನು ಜೀವಕೋಶಗಳು ಸರಿಯಾಗಿ ಬಳಸಲು ಸಾಧ್ಯವಾಗದ ಸ್ಥಿತಿಯನ್ನು ಟೈಪ್‌–2 ಮಧುಮೇಹ ಎನ್ನಲಾಗುತ್ತದೆ. ಇವೆರಡು ಬಗೆಯನ್ನು ಬಿಟ್ಟರೆ ಇನ್ನೊಂದು ಗರ್ಭಿಣಿಯರಲ್ಲಿ ಕಂಡುಬರುವ ಮಧುಮೇಹ (ಜೆಸ್ಟೇಶನಲ್‌ ಡಯಾಬಿಟೀಸ್‌ ಮೆಲ್ಲಿಟಸ್‌ ಅಥವಾ ಜಿಡಿಎಂ).

ಇತರೆ ರೀತಿಯ ಮಧುಮೇಹದಂತೆಯೇ ಇದು ಕೂಡ ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ, ಇದು ಗರ್ಭಿಣಿ ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಭಾರತದಲ್ಲೇ ಸುಮಾರು 6 ದಶಲಕ್ಷ ಮಕ್ಕಳು ಜನನದ ಸಂದರ್ಭದಲ್ಲಿ ಅನೇಕ ಬಗೆಯ ಮಧುಮೇಹದಿಂದಲೇ (ಹೈಪರ್‌ಗ್ಲೈಸಿಮಿಯಾ) ಸಮಸ್ಯೆಗೆ ಈಡಾಗುತ್ತಾರೆ ಎಂದು ಅಂತರರಾಷ್ಟ್ರೀಯ ಡಯಾಬಿಟಿಸ್ ಫೆಡರೇಶನ್ ಅಂದಾಜಿಸಿದೆ. ಅದರಲ್ಲಿ ಶೇ 90ರಷ್ಟು ಪ್ರಕರಣಗಳಿಗೆ ಗರ್ಭಾವಸ್ಥೆಯಲ್ಲಿ ಬರುವ ಮಧುಮೇಹ ಅಥವಾ ಜಿಡಿಎಂ ಕಾರಣ ಎನ್ನಲಾಗಿದೆ.

ಗರ್ಭಾವಸ್ಥೆಯಲ್ಲಿ ಮಧುಮೇಹಕ್ಕೆ ಕಾರಣವೇನು?

ಕೆಲವು ಮಹಿಳೆಯರಿಗೆ ಗರ್ಭಿಣಿಯಾಗುವ ಮೊದಲೇ ಮಧುಮೇಹವಿರುತ್ತದೆ. ಇದನ್ನು ಪ್ರಿಜೆಸ್ಟೇಶನಲ್ ಡಯಾಬಿಟಿಸ್ ಎಂದು ಕರೆಯಲಾಗುತ್ತದೆ. ಮಹಿಳೆಯ ದೇಹವು ಬಳಸುವ ಗ್ಲೂಕೋಸ್ ಗರ್ಭಾವಸ್ಥೆ ಸಂದರ್ಭದಲ್ಲಿ ಬದಲಾವಣೆ ಹೊಂದುತ್ತಿರುತ್ತದೆ. ಇದು ಮಧುಮೇಹವನ್ನು ಇನ್ನಷ್ಟು ಹದಗೆಡಿಸಬಹುದು ಅಥವಾ ಗರ್ಭಾವಸ್ಥೆಯ ಮಧುಮೇಹಕ್ಕೆ ಕಾರಣವಾಗಬಹುದು.

ಗರ್ಭಾವಸ್ಥೆಯಲ್ಲಿ ಪ್ಲಾಸೆಂಟಾ ಬೆಳೆಯುತ್ತಿರುವ ಭ್ರೂಣಕ್ಕೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ನೀಡುತ್ತದೆ. ಇದು ಹಾರ್ಮೋನ್‌ಗಳನ್ನು ಸಹ ಉತ್ಪತ್ತಿ ಮಾಡುತ್ತದೆ. ತಾಯಿಯ ಮಧುಮೇಹಕ್ಕೆ ಮುಖ್ಯ ಕಾರಣವೆಂದರೆ ಇನ್ಸುಲಿನ್ ತಡೆಯುವ ಹಾರ್ಮೋನ್‌ಗಳ ಉತ್ಪಾದನೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದ ಏರಿಕೆಯನ್ನು ಪ್ರಚೋದಿಸುತ್ತದೆ ಮತ್ತು ಮಗುವಿನ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಮುಖ್ಯವಾದ ಅಂಶವೆಂದರೆ ತಾಯಿಯ ಮಧುಮೇಹವನ್ನು ಪತ್ತೆಹಚ್ಚಲು ಯಾವುದೇ ಗಮನಾರ್ಹ ಚಿಹ್ನೆಗಳು ಅಥವಾ ಲಕ್ಷಣಗಳಿಲ್ಲ. ಆದರೆ ಮಂಜಾಗುವ ದೃಷ್ಟಿ, ಆಯಾಸ, ಅತಿಯಾದ ಬಾಯಾರಿಕೆ, ಆಗಾಗ ಮೂತ್ರ ವಿಸರ್ಜನೆ ಮಾಡುವುದು, ತೂಕ ಇಳಿಕೆ ಮತ್ತು ವಿಶೇಷವಾಗಿ ಯೋನಿ, ಚರ್ಮ ಮತ್ತು ಮೂತ್ರಕೋಶದಲ್ಲಿ ಸೋಂಕಿನ ಅಪಾಯದಂತಹ ಲಕ್ಷಣಗಳು ಕಂಡುಬಂದರೆ ಮಹಿಳೆ ವೈದ್ಯರನ್ನು ಕೂಡಲೇ ಸಂಪರ್ಕಿಸಬೇಕು.

ರೋಗ ಪತ್ತೆ ಹೇಗೆ?

ಗರ್ಭಾವಸ್ಥೆಯ ಮಧುಮೇಹಕ್ಕೆ ವೈದ್ಯರು ಗರ್ಭಧಾರಣೆಯ ಮೊದಲ ಮೂರು ತಿಂಗಳಲ್ಲೇ ತಪಾಸಣೆಯಲ್ಲಿ ನಡೆಸುತ್ತಾರೆ ಮತ್ತು ಗರ್ಭಧಾರಣೆಯ 24– 28 ವಾರಗಳಲ್ಲಿ ಅದು ಸಾಮಾನ್ಯವಾಗಿದ್ದರೆ ಮತ್ತೊಮ್ಮೆ ಪರೀಕ್ಷೆ ನಡೆಸುತ್ತಾರೆ.

ಪರೀಕ್ಷೆಯ ಅತ್ಯಂತ ಸಾಮಾನ್ಯ ಪದ್ಧತಿಯೆಂದರೆ ಗ್ಲೂಕೋಸ್ ಚಾಲೆಂಜ್ ಟೆಸ್ಟ್. ಇಲ್ಲಿ, ನಿಮ್ಮ ವೈದ್ಯರು ಅಥವಾ ಇತರ ಆರೋಗ್ಯ ತಜ್ಞರು ನಿಮ್ಮನ್ನು ಸಕ್ಕರೆ ಪಾನೀಯವನ್ನು ಕುಡಿಯಲು ಕೇಳುತ್ತಾರೆ (ಗ್ಲೂಕೋಸ್ ದ್ರಾವಣ) ಮತ್ತು ರಕ್ತದಲ್ಲಿನ ಸಕ್ಕರೆಯನ್ನು 1 ಅಥವಾ 2 ಗಂಟೆಗಳ ನಂತರ ಪರೀಕ್ಷಿಸಲಾಗುತ್ತದೆ ಮತ್ತು ಇದರ ಫಲಿತಾಂಶವನ್ನು ಅವಲಂಬಿಸಿ ಒಜಿಟಿಟಿ (ಓರಲ್‌ ಗ್ಲೂಕೋಸ್ ಟಾಲರನ್ಸ್‌ ಟೆಸ್ಟ್‌) ಮಾಡುತ್ತಾರೆ. ಮಧುಮೇಹ ಗರ್ಭಾವಸ್ಥೆಯಲ್ಲಿ ಮತ್ತು ಗರ್ಭಾವಸ್ಥೆಯ ನಂತರವೂ ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

*ಹೆಚ್ಚಾಗಿ ಇನ್ಸುಲಿನ್ ಚುಚ್ಚುಮದ್ದು ಅಗತ್ಯವಿರುತ್ತದೆ.

*ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ತುಂಬಾ ಕಡಿಮೆ ಇದ್ದರೆ ಕೂಡಲೇ ಚಿಕಿತ್ಸೆ ನೀಡದಿದ್ದರೆ ಮಾರಣಾಂತಿಕವಾಗಬಹುದು.

*ಹೆರಿಗೆ ನಂತರ ಟೈಪ್ 2 ಡಯಾಬಿಟಿಸ್ ಬರುವ ಸಾಧ್ಯತೆ ಹೆಚ್ಚು. ಸಮಸ್ಯೆಗಳು

*ತಾಯಿಗೆ ಉಂಟಾಗುವ ತೊಡಕುಗಳು

*ತೀವ್ರ ರಕ್ತದೊತ್ತಡ

*ಅವಧಿಪೂರ್ವ ಪ್ರಸವ

*ದೊಡ್ಡ ಮಗು ಅಥವಾ ಹೆರಿಗೆಯ ಸಮಯದಲ್ಲಿ ಅಧಿಕ ರಕ್ತಸ್ರಾವ

ನಿರ್ವಹಣೆ ಮತ್ತು ಚಿಕಿತ್ಸಾ ವಿಧಾನ

*ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಾಮಾನ್ಯ ಮಟ್ಟದಲ್ಲಿ ಇಡುವುದಕ್ಕೆ ಚಿಕಿತ್ಸೆ ನೀಡಬೇಕಾಗುತ್ತದೆ.

*ಡಯಟ್‌ ಸಲುವಾಗಿ ಆಹಾರ ತಜ್ಞರ ಜೊತೆ ಚರ್ಚಿಸಿ.

*ಗರ್ಭಾವಸ್ಥೆಯಲ್ಲಿ ತೂಕ ಏರದಂತೆ ಗಮನ ನೀಡಬೇಕು.

*ಆರೋಗ್ಯಕರ ಆಹಾರವನ್ನು ಸೇವಿಸಿ. ನಾರಿನಂಶವಿರುವ ಮತ್ತು ಕಡಿಮೆ ಕೊಬ್ಬು ಮತ್ತು ಕ್ಯಾಲೊರಿ ಹೊಂದಿರುವ ಆಹಾರವನ್ನು ಸೇವಿಸಿ. ಅಲ್ಲದೆ, ಅಹಾರದ ಪ್ರಮಾಣದ ಮೇಲೂ ನಿಗಾ ಇಡಿ.

ಔಷಧಿ

ರಕ್ತದಲ್ಲಿನ ಸಕ್ಕರೆ ಸಾಮಾನ್ಯವಾಗದಿದ್ದರೆ ಮೆಟ್‌ಫಾರ್ಮಿನ್ ಮತ್ತು / ಅಥವಾ ಇನ್ಸುಲಿನ್‌ನಂತಹ ಆಂಟಿ-ಡಯಾಬಿಟಿಕ್ ಔಷಧಿಗಳನ್ನು ವೈದ್ಯರು ಪ್ರಾರಂಭಿಸಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆಗಾಗ ಪರೀಕ್ಷಿಸಲು ಗ್ಲೂಕೋಮೀಟರ್‌ ಇಟ್ಟುಕೊಳ್ಳಿ.

ಗರ್ಭಾವಸ್ಥೆಯ ಮಧುಮೇಹ ಹೊಂದಿರುವ ಕೆಲವು ಮಹಿಳೆಯರಿಗೆ ಟೈಪ್ 2 ಮಧುಮೇಹ ಬರುವ ಅಪಾಯವಿದೆ. ಆದ್ದರಿಂದ ವರ್ಷದಲ್ಲಿ ಒಮ್ಮೆಯಾದರೂ ರಕ್ತದಲ್ಲಿನ ಸಕ್ಕರೆ ಪರೀಕ್ಷೆಯನ್ನು ಶಿಫಾರಸು ಮಾಡಲಾಗುತ್ತದೆ.

ಅಪಾಯಕಾರಿ ಅಂಶಗಳು

*25 ವರ್ಷಕ್ಕಿಂತ ಮೇಲ್ಪಟ್ಟವರು

*ಬೊಜ್ಜು ದೇಹ ಇರುವ ಮಹಿಳೆಯರು

*ಕುಟುಂಬದಲ್ಲಿ ಯಾರಿಗಾದರೂ ಮಧುಮೇಹ ಇದ್ದರೆ

*ಮೊದಲು ಗರ್ಭಿಣಿಯಾದಾಗಲೂ ಗರ್ಭಾವಸ್ಥೆಯ ಮಧುಮೇಹವಿದ್ದರೆ, ಎರಡನೇ ಮಗು ಮಾಡಿಕೊಳ್ಳುವಾಗಲೂ ಅಪಾಯ ಇದ್ದೇ ಇರುತ್ತದೆ.

*ಅವಧಿಪೂರ್ವ ಪ್ರಸವ ಇದ್ದರೂ ಕೂಡ ಜನನ ಸಂದರ್ಭದಲ್ಲಿ 9 ಪೌಂಡ್‌ಗಳಷ್ಟು ತೂಗುವ ಮಗು

*ಹಿಂದಿನ ಗರ್ಭಾವಸ್ಥೆಯಲ್ಲಿ ಸತ್ತು ಹುಟ್ಟಿರುವ ಮಗು

ಮಗುವಿಗೆ ಉಂಟಾಗುವ ತೊಡಕುಗಳು

*ಜನಿಸುವಾಗ ಹೆಚ್ಚಿನ ದೇಹತೂಕ
*ಭುಜದ ಡಿಸ್ಟೊಸಿಯಾ
*ತೀವ್ರ ನಿಗಾ ಘಟಕದಲ್ಲಿ ಹೆಚ್ಚಿನ ವಾಸ್ತವ್ಯ
*ಜನನ ದೋಷಗಳು
*ಹೃದಯ ಸಂಬಂಧಿ ತೊಂದರೆಗಳು
*ನರಗಳ ಸಮಸ್ಯೆ ಮತ್ತು ಅದರ ವಿರೂಪಗಳು
*ರಕ್ತದಲ್ಲಿ ಸಕ್ಕರೆಯ ಅಂಶದ ಇಳಿಕೆ
*ಉಸಿರಾಟದ ತೊಂದರೆಗಳು

(ಲೇಖಕಿ ಕನ್ಸಲ್ಟೆಂಟ್‌ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಕ್ಲೌಡ್‌ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT