ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡದಿರಲಿ ರಕ್ತಹೀನತೆ

Last Updated 27 ಫೆಬ್ರುವರಿ 2023, 20:15 IST
ಅಕ್ಷರ ಗಾತ್ರ

ರಕ್ತಹೀನತೆ ಎಲ್ಲ ವಯೋಮಾನದವರನ್ನೂ ಕಾಡಬಹುದಾದಂತಹ ಆರೋಗ್ಯಸಮಸ್ಯೆ. ಮಹಿಳೆಯರಲ್ಲಿ ಮತ್ತು ಹದಿಹರೆಯದ ಹೆಣ್ಣುಮಕ್ಕಳಲ್ಲಿ ಇದು ಸ್ವಲ್ಪ ಹೆಚ್ಚೇ ಎನ್ನಬಹುದು. ಸಮಸ್ಯೆ ಸೌಮ್ಯಸ್ವರೂಪದಿದ್ದಾಗ ಗುಣಲಕ್ಷಣಗಳು ವ್ಯಕ್ತಿಯನ್ನು ಹೆಚ್ಚು ಬಾಧಿಸದೆ ಇರುವುದರಿಂದ ಇದು ಪತ್ತೆಯಾಗದೆಯೇ ಉಳಿಯುವ ಸಂಭವವೂ ಇದೆ. ಅಷ್ಟೇ ಅಲ್ಲ, ಒಮ್ಮೊಮ್ಮೆ ಅದರ ವೈವಿಧ್ಯ ಗುಣಲಕ್ಷಣಗಳು ವೈದ್ಯರನ್ನು ಬೇರಾವುದೋ ಆರೋಗ್ಯ ಸಮಸ್ಯೆ ಎಂದು ಯೋಚಿಸುವಂತೆಯೂ ಮಾಡಬಹುದು. ಹಾಗಾಗಿಯೇ ಒಮ್ಮೆ ಸರಳ ರಕ್ತಪರೀಕ್ಷೆಯಿಂದ ರಕ್ತದ ಹಿಮೊಗ್ಲೋಬಿನ್ ಅಂಶದ ಪ್ರಮಾಣವನ್ನು ತಿಳಿಯುವುದು ಸೂಕ್ತ.

ರಕ್ತದ ಕೆಂಪುರಕ್ತಕಣದಲ್ಲಿರುವ ‘ಹಿಮೊಗ್ಲೋಬಿನ್’ ಎಂಬ ಅಂಶವು ಶರೀರದ ಎಲ್ಲ ಅಂಗಾಂಶಗಳಿಗೆ ಆಮ್ಲಜನಕವನ್ನು ಪೂರೈಸುವ ಮುಖ್ಯ ಜವಾಬ್ದಾರಿಯ ಕೆಲಸವನ್ನು ನಿರ್ವಹಿಸುತ್ತದೆ. ಜೀವಕೋಶಗಳ ಕಾರ್ಯಕ್ಷಮತೆಗೆ ಆಮ್ಲಜನಕ ಅತ್ಯವಶ್ಯ. ಜೀವಕೋಶಗಳಿಗೆ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯವಾದಾಗ ಅವುಗಳ ಕಾರ್ಯಕ್ಷಮತೆ ಕುಗ್ಗುತ್ತದೆ. ಹಾಗಾಗಿಯೇ ರಕ್ತಹೀನತೆಯು ಶರೀರದ ಎಲ್ಲ ಅಂಗಾಂಗ ವ್ಯವಸ್ಥೆಗಳ ಮೇಲೆಯೂ ಪರಿಣಾಮ ಬೀರುತ್ತದೆ.

ಸಾಮಾನ್ಯವಾಗಿ ಪುರುಷರಲ್ಲಿ ಪ್ರತಿ ಡೆಸಿ ಲೀಟರ್ ರಕ್ತದಲ್ಲಿ 14ರಿಂದ 18 ಹಾಗೂ ಮಹಿಳೆಯರಲ್ಲಿ 12ರಿಂದ 16 ಗ್ರ್ಯಾಮ್ ಹಿಮೊಗ್ಲೋಬಿನ್ ಇರುತ್ತದೆ. ಈ ಹಿಮೊಗ್ಲೋಬಿನ್ ಅಂಶವು ವ್ಯಕ್ತಿಯ ವಯಸ್ಸು ಮತ್ತು ಲಿಂಗಕ್ಕೆ ಅನುಗುಣವಾಗಿ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವುದನ್ನು ರಕ್ತಹೀನತೆ ಎಂದು ಕರೆಯುತ್ತೇವೆ.

ಮುಖ್ಯ ಕಾರಣಗಳು

• ರಕ್ತಕಣಗಳ ಅಥವಾ ಹಿಮೊಗ್ಲೋಬಿನ್ ಅಣುವಿನಲ್ಲಿನ ನೂನ್ಯತೆಗಳು.

• ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ.

• ಆಹಾರದಲ್ಲಿ ಪೌಷ್ಟಿಕಾಂಶಗಳ ಕೊರತೆ.

• ಅಸ್ಥಿಮಜ್ಜೆಯ / ಪಿತ್ತಜನಕಾಂಗದ / ಮೂತ್ರಪಿಂಡದ ಕಾಯಿಲೆಗಳು.

ಗುಣಲಕ್ಷಣಗಳು

• ಆಯಾಸ, ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದ ನಂತರ, ಮೆಟ್ಟಿಲುಗಳನ್ನು ಏರಿದಾಗ ದಣಿವಾಗುವುದು.

• ತೀವ್ರತರವಾದ ಎದೆಬಡಿತ, ಎದೆನೋವು.

• ತಲೆನೋವು, ತಲೆ ಸುತ್ತುವಿಕೆ

• ಕಣ್ಣು ಕತ್ತಲು ಬಂದಂತಾಗುವುದು, ಕಿವಿಯಲ್ಲಿ ಒಂದು ಬಗೆಯ ಶಬ್ದ ಕೇಳಿದಂತಾಗುವುದು.

• ಕಣ್ಣುಗಳ ರೆಪ್ಪೆಯ ಒಳಗಿನ ಬಿಳಿ ಭಾಗ, ಚರ್ಮ, ನಾಲಿಗೆ, ಉಗುರು – ಇವು ಬಿಳಿಚಿಕೊಳ್ಳುವುದು.

• ಉಸಿರಾಡಲು ತೊಂದರೆ / ದಮ್ಮು /ಮೇಲುಸಿರು ಬಂದಂತಾಗುವುದು.

• ಯಾವುದೇ ಕಾರ್ಯದಲ್ಲಿ ಏಕಾಗ್ರತೆಗೆ ತೊಂದರೆಯೆನಿಸುವುದು.

ಈ ಮೇಲಿನ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷಿಸದೆ ವೈದ್ಯರನ್ನು ಕಾಣಬೇಕು. ಸರಳವಾದ ರಕ್ತಪರೀಕ್ಷೆಯ ಸಹಾಯದಿಂದ ನಿಮ್ಮ ಹಿಮೊಗ್ಲೋಬಿನ್‌ ಹಾಗೂ ಸಂಬಂಧಿಸಿದ ಇತರ ಅಂಶಗಳ ಪ್ರಮಾಣವನ್ನು ಕಂಡುಕೊಳ್ಳಬಹುದು. ತೀವ್ರತೆಯನ್ನು ಹಾಗೂ ಮೂಲಕಾರಣವನ್ನು ಗಮನದಲ್ಲಿರಿಸಿ ವೈದ್ಯರು ಚಿಕಿತ್ಸೆಯನ್ನು ಸೂಚಿಸುತ್ತಾರೆ. ಹಿಮೊಗ್ಲೋಬಿನ್ ಅಂಶವು 5ಕ್ಕಿಂತ ಕಡಿಮೆಯಾಗಿದ್ದಾಗ ರಕ್ತವರ್ಗಾವಣೆಯ ಅವಶ್ಯಕತೆಯೂ ಇರಬಹುದು. ಕಬ್ಬಿಣಾಂಶ ಮತ್ತು ವಿಟಮಿನ್ ಬಿ-12 ಚುಚ್ಚುಮದ್ದುಗಳು ಹಾಗೂ ಗುಳಿಗೆಗಳೂ ಸಹಕಾರಿಯಾಗಬಲ್ಲವು.

ಪರಿಣಾಮಗಳು

• ವ್ಯಕ್ತಿಯ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುವುದು.

• ವಿವಿಧ ಬಗೆಯ ಸೋಂಕಿಗೆ ತುತ್ತಾಗಬಹುದು.

• ಹೃದಯದ ಕಾರ್ಯದಲ್ಲಿ ವೈಫಲ್ಯ.

ಮುನ್ನೆಚ್ಚರಿಕೆಯ ಕ್ರಮಗಳು

ಆಹಾರಕ್ರಮವನ್ನು ಸರಿಪಡಿಸಿಕೊಳ್ಳಿರಿ:ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಸಿದ್ಧಪಡಿಸಿದ ಹಾಗೂ ಸಂಸ್ಕರಿಸಿದ ಆಹಾರಪದಾರ್ಥಗಳಲ್ಲಿ ಒಳ್ಳೆಯ ಪೋಷಕಾಂಶಗಳು ಇರುವುದಿಲ್ಲ. ಹಾಗಾಗಿಯೇ ಆದಷ್ಟು ನೈಸರ್ಗಿಕ ಆಹಾರವನ್ನು ಬಳಸುವುದಕ್ಕೆ ಒತ್ತು ಕೊಡಬೇಕು. ಕಬ್ಬಿಣಾಂಶ ಹೇರಳವಾಗಿರುವ ಆಹಾರಗಳಾದ ಬೆಲ್ಲ, ರಾಗಿ, ಹಸಿರು ಎಲೆಗಳುಳ್ಳ ತರಕಾರಿಗಳು, ಪಾಲಕ್ ಸೊಪ್ಪು, ಬೀಟ್‍ರೂಟ್, ನುಗ್ಗೇಸೊಪ್ಪು, ಬಟಾಣಿ, ಶೇಂಗಾ, ಸೋಯಾಕಾಳುಗಳು; ಒಣ ಹಣ್ಣುಗಳಾದ ಖರ್ಜೂರ, ಒಣದ್ರಾಕ್ಷಿ, ತಾಜಾಹಣ್ಣುಗಳಾದ ಸೇಬು, ದಾಳಿಂಬೆ; ಮೀನು, ಕೋಳಿಮಾಂಸ ಮುಂತಾದುವನ್ನು ನಿಯಮಿತವಾಗಿ ಸೇವಿಸಬೇಕು. ಅಂತೆಯೇ ವಿಟಮಿನ್ ಬಿ–12 ಹೇರಳವಾಗಿರುವ ಮೊಟ್ಟೆ, ಹಾಲು, ಮೊಸರು ಹಾಗೂ ಹಾಲಿನ ಇತರ ಉತ್ಪನ್ನಗಳು, ಫೋಲಿಕ್ ಆ್ಯಸಿಡ್ ಹೇರಳವಾಗಿರುವ ಎಲೆಕೋಸು, ಪಾಲಕ್ ಸೊಪ್ಪು, ಬೀನ್ಸ್‌ಕಾಳುಗಳು ನಮ್ಮ ನಿತ್ಯದ ಆಹಾರದಲ್ಲಿ ಇರುವಂತೆ ಗಮನ ವಹಿಸಬೇಕು. ಊಟ, ಉಪಹಾರದ ಬಳಿಕ ಚಹಾ ಅಥವಾ ಕಾಫಿಸೇವನೆಯೂ ಒಳ್ಳೆಯ ಅಭ್ಯಾಸವಲ್ಲ. ಇದು ಕರುಳುಗಳಲ್ಲಿ ಕಬ್ಬಿಣಾಂಶದ ಹೀರುವಿಕೆಗೆ ತೊಡಕನ್ನು ಉಂಟುಮಾಡಿದರೆ, ವಿಟಮಿನ್ ಸಿ ಸೇವನೆಯು ಕಬ್ಬಿಣಾಂಶದ ಹೀರುವಿಕೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಉಪಹಾರದ ಬಳಿಕ ಕಾಫಿ/ಚಹಾದ ಬದಲು ನಿಂಬೆಹಣ್ಣಿನ ರಸವನ್ನು ಕುಡಿಯುವುದು ಉತ್ತಮ.

• ಜಂತುಹುಳುವಿನ ಬಾಧೆಯ ನಿಯಂತ್ರಣ: ಕರುಳುಗಳಲ್ಲಿ ರಕ್ತವನ್ನು ಹೀರುವ ಜಂತುಹುಳುಗಳೂ ಒಮ್ಮೊಮ್ಮೆ ರಕ್ತಹೀನತೆಗೆ ಕಾರಣವಾಗಬಹುದು. ಆ ಕಾರಣಕ್ಕಾಗಿಯೇ, ಬರಿಗಾಲಿನಲ್ಲಿ ನಡೆಯದಿರುವುದು, ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಕೈಕಾಲುಗಳ ಬೆರಳುಗಳ ಉಗುರುಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳುವುದು, ಊಟದ ಮೊದಲು ಹಾಗೂ ಶೌಚಾಲಯಕ್ಕೆ ಹೋಗಿ ಬಂದ ನಂತರ ಕೈಕಾಲುಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು ಹಾಗೂ ಪ್ರತಿ ಆರು ತಿಂಗಳಿಗೊಮ್ಮೆ ಜಂತುಹುಳುವಿಗಾಗಿ ಔಷಧ ತೆಗೆದುಕೊಳ್ಳುವುದನ್ನು ತಪ್ಪದೆ ರೂಢಿಸಿಕೊಳ್ಳಬೇಕು.

• ಯಾವುದೇ ರೀತಿಯ ರಕ್ತಸ್ರಾವದಿಂದ ಬಳಲುತ್ತಿದ್ದರೆ (ಉದಾಹರಣೆಗೆ, ಮೂಲವ್ಯಾಧಿ, ಮಹಿಳೆಯರಲ್ಲಿ ಹೆಚ್ಚಾದ ಋತುಸ್ರಾವ ಮೊದಲಾದುವು) ಅದಕ್ಕೆ ವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದು, ಚಿಕಿತ್ಸೆ ಮಾಡಿಕೊಳ್ಳುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT