ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಜ್ಜು ಕರಗಿಸುವ ಮಾಯಾ ‘ದಂಡ’

Last Updated 18 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಹಳೆಯ ಕನ್ನಡ ಚಲನಚಿತ್ರಗಳಲ್ಲಿ ನಾಯಕ–ಖಳನಾಯಕನ ಹೋರಾಟ ದೃಶ್ಯಗಳಲ್ಲಿ ‘ದಂಡ’ದ ಬಳಕೆ ಸಾಮಾನ್ಯ. ಈಗಲೂ ಕುಸ್ತಿ ಅಖಾಡ, ಗರಡಿ ಮನೆ ಮತ್ತು ಹಳೆಯ ಜಿಮ್‌ ಕೇಂದ್ರಗಳಲ್ಲಿ ವ್ಯಾಯಾಮದ ಆರಂಭ ಪರಿಕರವಾಗಿ ಕೋಲನ್ನು ಬಳಸುತ್ತಾರೆ. ಸ್ಥೂಲಕಾಯದವರಿಗೆ ಬೆವರು ಹರಿಸುವ ಮತ್ತು ಬೊಜ್ಜು ಕರಗಿಸುವ ಮಾಯಾ ದಂಡವಾಗಿದೆ. ಇದನ್ನು (ಲಾಠಿ) ಸರಿಯಾದ ಕ್ರಮದಲ್ಲಿ ಬಳಸುವ ಮೂಲಕ ನಮ್ಮ ಫಿಟ್‌ನೆಸ್‌ ಅನ್ನು ಕಾಯ್ದುಕೊಳ್ಳಬಹುದಾಗಿದೆ.

ದಂಡ ಬಳಸಿ ವ್ಯಾಯಾಮ ಮಾಡುವವರಿಗೆ ಜಿಮ್‌ಗಳ ಅಗತ್ಯವೇ ಇಲ್ಲ ಎನ್ನಬಹುದು. ಅದೇನಿದ್ದರೂ ದೇಹವನ್ನು ಹುರಿಗಟ್ಟಿಸುವವರಿಗೆ. ಜಿಮ್‌ಗಳಿಗೆ ಹೋಗುವವರು ಜಿಮ್‌ನ ಅಲ್ಲೇ ಎಲ್ಲೋ ಒಂದು ಮೂಲೆಯಲ್ಲಿ ಬಿದ್ದಿರುವ ‘ದಂಡ’ವನ್ನು ಗಮನಿಸಿಯೇ ಇರುತ್ತಾರೆ.ಅಲ್ಲದೆ, ಇದರ ಕಡೆ ನಿರ್ಲಕ್ಷ್ಯದ ನೋಟವನ್ನೂ ಬೀರಿರುತ್ತಾರೆ. ಇದೇನಿದ್ದರೂವಯಸ್ಸಾದವರಿಗೆ,ಬೊಜ್ಜು ಬೆಳೆಸಿಕೊಂಡವರಿಗೆ ಎಂಬ ತೀರ್ಮಾನಕ್ಕೆ ಬಂದಿರುತ್ತಾರೆ. ಆದರೆ, ಜಿಮ್‌ನಲ್ಲಿ ಎಲ್ಲರ ಆರಂಭದ ಪಾಠಗಳು ಈ ದಂಡದೊಂದಿಗೆಯೇ ಆರಂಭವಾಗುತ್ತವೆ.

ದಂಡವನ್ನು ಜಿಮ್‌ಗಳಲ್ಲಿ ಬಳಸುವುದು ಕಡಿಮೆಯಾಗುತ್ತಿದೆ. ಆದರೆ, ಈ ‘ಲಾಠಿ’ ವ್ಯಾಯಾಮ ಫಿಟ್‌ನೆಸ್‌ ಕಾಯ್ದುಕೊಳ್ಳಬೇಕೆಂಬ ಶಿಸ್ತಿನ ಸಿಪಾಯಿಗಳಿಗೆ ಒಗ್ಗುವಂತಹದ್ದು. ಇದನ್ನು ಬಳಸಿ ನಿತ್ಯ ಅಭ್ಯಾಸ ಮಾಡುತ್ತಿದ್ದರೆ ಅದು ಬದುಕಿನ ಭಾಗವಾಗೇ ಬಿಡುತ್ತದೆ.ಸ್ಥೂಲ ಕಾಯದವರಿಗೆ ಇದು ಒಗ್ಗುತ್ತದಲ್ಲದೆ, ಅವರನ್ನು ಬಗ್ಗಿಸುತ್ತದೆ. ಅವರಿಗೆ ಬೇಸರ ತರಿಸದೆ ವ್ಯಾಯಾಮವನ್ನು ಮಾಡಿಸುವ ಇದರ ಉದ್ದ ಸುಮಾರು 5 ರಿಂದ 6 ಅಡಿ.

ಸ್ಥಿರವಾಗಿ ನಿಲ್ಲಲು ಮತ್ತು ವ್ಯಾಯಾಮ ನಿಖರವಾಗಿ ಇರಲು ಗುರುತ್ವದಂತೆ ಕೆಲಸ ಮಾಡುವ ಇದು ಎಲ್ಲ ಫಿಟ್‌ನೆಸ್‌ ಪ್ರಿಯರ ಉತ್ತಮ ಪರಿಕರವಾಗಿದೆ. ವ್ಯಾಯಾಮ ಮಾಡುವಾಗ ದೇಹದ ಮೇಲೆ ಸಮತೋಲನ ಸಾಧಿಸಲು ಇದು ಸಹಾಯ ಮಾಡುತ್ತದೆ. ತೋಳುಗಳು, ತೊಡೆಗಳು, ಪೃಷ್ಠ ಮತ್ತು ಕೀಲುಗಳ ಬಲವನ್ನು ಹೆಚ್ಚಿಸುತ್ತದೆ. ಬೊಜ್ಜನ್ನು ಹಂತ ಹಂತವಾಗಿ ಕರಗಿಸುವ ಇದು, ವ್ಯಾಯಾಮದ ವೇಗ ಮತ್ತು ನಿಯಂತ್ರಣದ ಸಮತೋಲಿತ ದಂಡದಂತೆ ವರ್ತಿಸುತ್ತದೆ. ಸ್ನಾಯು, ಮೂಳೆಗಳಿಗೆ ಬಲ ತಂದುಕೊಡುವುದಲ್ಲದೆ, ಹೃದ್ರೋಗಗಳು ಸುಳಿಯದಂತೆ ನಮ್ಮನ್ನು ಕಾಪಾಡುತ್ತದೆ.

ದೇಹವನ್ನು ಬಾಗಿಸುತ್ತದೆ:ಕೈ– ಕಾಲುಗಳನ್ನು ಹಿಗ್ಗಿಸಲು ಮತ್ತು ದೇಹವನ್ನು ಬಾಗಿಸಲು ನೆರವಾಗುವ ಕೋಲು, ದೇಹ ಸುಸ್ಥಿರವಾಗಿಡಲು ಸಹಕರಿಸುತ್ತದೆ. ಪ್ರತಿ ವ್ಯಾಯಾಮ ವಿಧಾನವನ್ನು ಕನಿಷ್ಠ 30 ಸೆಕೆಂಡ್‌ಗಳ ಕಾಲ ಮಾಡಬೇಕು. ಕೋಲು ಬಳಸಿ 30 ನಿಮಿಷಗಳಷ್ಟು ನಿರಂತರ ವ್ಯಾಯಾಮ ಮಾಡಿದರೆ 300ರಿಂದ 400 ಕ್ಯಾಲರಿ ಕರಗುತ್ತದೆ. ಇದು ದೇಹದ ಬೊಜ್ಜಿನ ಭಾಗಗಳನ್ನು ಮಾಯವಾಗಿಸುವ ಮಾಯಾ ದಂಡವಾಗಿದೆ.

‘ಸ್ಟಿಕ್‌’ ಬಳಸಿ ವ್ಯಾಯಾಮ ಮಾಡುವ ವಿಧಾನಗಳನ್ನು ಕಲಿಯಲು ಆರಂಭದಲ್ಲಿ ತರಬೇತುದಾರರಿಂದ ಮಾರ್ಗದರ್ಶನ ಪಡೆಯಬೇಕು. ಮುಂಗೈ ಬಳಸಿ ತೋಳು ಮತ್ತು ಹೆಗಲ ಮೇಲೆ ಕೋಲನ್ನು ಇರಿಸಿಕೊಂಡರೆ ವ್ಯಾಯಾಮವನ್ನು ತಂತಾನೇ ಮಾಡಿಸುತ್ತದೆ. ಸರಾಗವಾಗಿ ಮತ್ತು ಸಮತೋಲಿತವಾಗಿ ದೇಹವನ್ನು ಬಾಗಿಸಬಹುದು.ಕತ್ತು, ಮೊಣಕೈ, ಮೊಣಕಾಲುಗಳಿಗೂ ಉತ್ತಮ ವ್ಯಾಯಾಮ ಸಿಗುತ್ತದೆ. ಸೊಂಟದ ಬೊಜ್ಜು ಕರಗಿಸಿ ಸಪೂರ ದೇಹವನ್ನು ನಮ್ಮದಾಗಿಸಿಕೊಳ್ಳಬಹುದು. ಸ್ನಾಯುಗಳು ಕೂಡ ದೃಢವಾಗಿಸುತ್ತದೆ. ಅಲ್ಲದೆ, ಸ್ನಾಯು ಗಂಟುಗಳನ್ನೂ (ಮಸಲ್‌ ನಾಟ್) ಇದು ಬಿಡಿಸುತ್ತದೆ. ಇದನ್ನು ಜಾಲತಾಣಗಳ ಮೂಲಕವೂ ನಾವು ಕಲಿಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT