ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗನಿರೋಧಕ ಶಕ್ತಿ ವೃದ್ಧಿಗೆ ಆಹಾರ ಕ್ರಮವೇ ಮುಖ್ಯ

Last Updated 27 ಮಾರ್ಚ್ 2020, 20:15 IST
ಅಕ್ಷರ ಗಾತ್ರ

ರೋಗನಿರೋಧಕ ಶಕ್ತಿ ಅಥವಾ ವ್ಯಾಧಿ ಕ್ಷಮತೆ ಹೆಚ್ಚಿದ್ದರೆ ಹಲವು ಕಾಯಿಲೆಗಳನ್ನು ಸಮರ್ಥವಾಗಿ ಎದುರಿಸಬಹುದು. ಇಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಂಬಾರು ಪದಾರ್ಥಗಳು ಹಾಗೂ ಹಣ್ಣು– ತರಕಾರಿಗಳು ನಮ್ಮ ನಡುವೆ ಬೇಕಾದಷ್ಟಿವೆ. ಅವುಗಳ ಬಗ್ಗೆ ವಿವರ ಇಲ್ಲಿದೆ.

ರೋಗನಿರೋಧಕ ಶಕ್ತಿ ಎಂದರೆ ವ್ಯಕ್ತಿಗೆ ರೋಗಗಳು ಬಾರದಂತೆ ಕಾಪಾಡುವ ಆಂತರಿಕ ಶಕ್ತಿ. ಇದು ಹುಟ್ಟಿದಾಗಿನಿಂದ ಸಾಯುವವರೆಗೂ ಸದಾ ಕೆಲಸ ಮಾಡುತ್ತಲೇ ಇರುತ್ತದೆ. ಚಿಕ್ಕ ಮಕ್ಕಳಲ್ಲಿ ಹಾಗೂ 65– 70 ವರ್ಷ ವಯಸ್ಸಾದವರಲ್ಲಿ, ಮಧುಮೇಹದಂತಹ ಕಾಯಿಲೆ ಇರುವವರಲ್ಲಿ ಈ ಶಕ್ತಿ ಕಡಿಮೆ ಇರಬಹುದು.

ರೋಗನಿರೋಧಕ ಶಕ್ತಿಯನ್ನು ಸರಿಯಾದ ಆಹಾರ ಕ್ರಮಗಳಿಂದ ಹಾಗೂ ಇತರೆ ಒಳ್ಳೆಯ ಅಭ್ಯಾಸಗಳಿಂದ ವೃದ್ಧಿಸಿಕೊಂಡರೆ ನಾವು ಆರೋಗ್ಯವಂತರಾಗಿರಬಹುದು. ಕಾಯಿಲೆ ವಿರುದ್ಧ ಯಶಸ್ವಿಯಾಗಿ ಹೋರಾಡಬಹುದು. ಯಾವ ಆಹಾರಗಳು ಈ ರೋಗನಿರೋಧಕ ಶಕ್ತಿಯನ್ನು ಕಾಪಾಡಲು ಹಾಗೂ ವೃದ್ಧಿಸಲು ಸಹಾಯಕ ಎಂದು ತಿಳಿಯೋಣ .

ಅರಿಸಿನ: ವೈರಸ್ ಪ್ರತಿಬಂಧಕ, ಉರಿಯೂತ ಹಾಗೂ ಸೂಕ್ಷ್ಮಾಣು ಜೀವಿ ನಿರೋಧಕ ಗುಣಗಳನ್ನು ಹೊಂದಿದ್ದು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ತುಂಬಾ ಸಹಾಯಕಾರಿ. ನಿತ್ಯ ಅಡುಗೆಯಲ್ಲಿ ಬಳಸಬಹುದು.

ಮೆಣಸಿನಕಾಯಿ: ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಏಜಿಂಗ್ ಗುಣ ಇದರಲ್ಲಿದ್ದು, ವಿಟಮಿನ್ ಸಿ ಹೇರಳವಾಗಿರುತ್ತದೆ. ಇದರ ದಿನನಿತ್ಯ ಸೇವನೆಯಿಂದ ಮೇಲಿಂದ ಮೇಲೆ ಬರುವ ನೆಗಡಿ, ಸೈನುಸೈಟಿಸ್ ನಿಯಂತ್ರಿಸಬಹುದು.

ಕಾಳುಮೆಣಸು: ಇದು ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ. ಕಫದ ತೊಂದರೆ ಇರುವವರು ಆಹಾರದಲ್ಲಿ ಖಾರದ ಪುಡಿಯ ಬದಲಾಗಿ ಇದನ್ನು ಬಳಸಿದರೆ ಒಳ್ಳೆಯದು.

ಲವಂಗ: ಇದರಲ್ಲಿ ಹೆಚ್ಚಾಗಿ ಆ್ಯಂಟಿ ಆಕ್ಸಿಡೆಂಟ್‌ ಇರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ .

ಶುಂಠಿ: ಸೂಕ್ಷ್ಮಾಣು ಪ್ರತಿಬಂಧಕ ಗುಣ ಹೊಂದಿರುವ ಕಾರಣದಿಂದಾಗಿ ರೋಗಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯ ಶುಂಠಿಯಲ್ಲಡಗಿದೆ. ಇದನ್ನು ಆಹಾರದಲ್ಲಿ ಹಾಗೂ ಚಹಾದ ಜೊತೆಗೆ ಕುದಿಸಿ ಸೇವಿಸಬಹುದು.

ಬೆಳ್ಳುಳ್ಳಿ: ಇದು ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಬಾರದಂತೆ ತಡೆಗಟ್ಟುತ್ತದೆ. ಇದರಲ್ಲಿ ವಿಟಮಿನ್ ಸಿ , ಬಿ1, ಬಿ6 ಮತ್ತು ಆಲಿಸನ್ ಎಂಬ ವಸ್ತು ಇರುವುದರಿಂದ ಅತ್ಯುತ್ತಮ ರೋಗನಿರೋಧಕವಾಗಿದೆ. ಜೀರಿಗೆ ಮತ್ತು ಚಕ್ಕೆ ಕೂಡಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಹಣ್ಣುಗಳು

ಸಿಟ್ರಸ್ ಹಣ್ಣುಗಳು: ವಿಟಮಿನ್ ಸಿ ಇರುವುದರಿಂದ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ. ನಿಂಬೆ ಹಣ್ಣು, ದ್ರಾಕ್ಷಿ, ಕಿತ್ತಳೆ ಹಣ್ಣು, ಪಪ್ಪಾಯಿ, ಸೀಬೆ ಹಣ್ಣು, ಕೆಂಪು ಮತ್ತು ಹಳದಿ ದಪ್ಪ ಮೆಣಸು ಇತ್ಯಾದಿಗಳನ್ನು ದಿನನಿತ್ಯ ಸೇವಿಸಬೇಕು .

ತೆಂಗಿನಕಾಯಿ: ಇದರಲ್ಲಿ (ನೀರು, ಎಣ್ಣೆ ಹಾಗೂ ತಿರುಳಿನಲ್ಲಿ) ಸೂಕ್ಷ್ಮ ಪೋಷಕಾಂಶಗಳು ಹೇರಳವಾಗಿರುವುದರಿಂದ ದಿನಾ ಅಡುಗೆಯಲ್ಲಿ ಬಳಸಬಹುದು. ತೆಂಗಿನಎಣ್ಣೆಯನ್ನು ಉತ್ತಮವಾದ ಕೊಬ್ಬು ಎನ್ನುತ್ತಾರೆ ಹಾಗೂ ಉಳಿದೆಲ್ಲ ಎಣ್ಣೆಗಳಿಗಿಂತ ತೆಂಗಿನಎಣ್ಣೆಯಿಂದ ಅಡುಗೆ ಮಾಡುವುದು ಅತ್ಯುತ್ತಮ ಎನ್ನಲಾಗಿದೆ.

ಗೆಣಸು: ಇದರಿಂದ ವಿಟಮಿನ್ ಎ ಸಿಗುತ್ತದೆ, ಚರ್ಮದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ನಿತ್ಯ ಸೇವಿಸುವ ಆಹಾರಗಳು

ಅಕ್ಕಿ: ಪಾಲಿಷ್ ಮಾಡದೇ ಇರುವ ಹಳೆಯ ಕೆಂಪು ಅಕ್ಕಿಯು ಹೆಚ್ಚು ವೀರ್ಯ ಉಳ್ಳದ್ದು ಹಾಗೂ ಜೀರ್ಣವಾಗಲು ಹಗುರ. ಇದು ಉತ್ತಮವಾದ ಪೌಷ್ಟಿಕ ಆಹಾರ.

ಗೋಧಿ: ಹೆಚ್ಚು ಫೈಬರ್, ಕಡಿಮೆ ಕಾರ್ಬೊಹೈಡ್ರೇಟ್ ಹೊಂದಿದೆ.

ಹೆಸರುಬೇಳೆ: ಬೇಯಿಸಿದ ಬೇಳೆಯಲ್ಲಿ ಹೆಚ್ಚು ಪೌಷ್ಟಿಕಾಂಶವಿದ್ದು, ಫೈಬರ್ ಕೂಡ ಇರುತ್ತದೆ. ಆದರೆ ಬೇಯಿಸದೆ ತಿನ್ನಬಾರದು.

ಬಾರ್ಲಿ: ಈಗಿನ ಜೀವನಶೈಲಿಗೆ ಇದೊಂದು ಅತ್ಯುತ್ತಮ ದಿನನಿತ್ಯದ ಆಹಾರ. ಇದರಲ್ಲಿರುವ ಕಡಿಮೆ ಕೊಬ್ಬು, ಕಡಿಮೆ ಕಾರ್ಬೊಹೈಡ್ರೇಟ್ / ಪಿಷ್ಟ ಹಾಗೂ ಸಕ್ಕರೆಯಿಂದಾಗಿ ಕಾಯಿಲೆಯನ್ನುತಡೆಗಟ್ಟಲು ಉತ್ತಮ ಆಹಾರ ಎನ್ನಬಹುದು. ಇದನ್ನು ಗಂಜಿ ಅಥವಾ ಹುರಿದು ಸ್ನ್ಯಾಕ್ ರೂಪದಲ್ಲಿ ತಿನ್ನಬಹುದು.

ತುಪ್ಪ: ನಿತ್ಯ ಸೇವಿಸಬಹುದಾದ ಒಳ್ಳೆಯ ಕೊಬ್ಬು. ಒಳ್ಳೆಯ ಕೊಲೆಸ್ಟ್ರಾಲ್‌ ತಯಾರಿಸಲು ಉತ್ತೇಜಿಸು
ತ್ತದೆ. ಮಕ್ಕಳಿಗೆ ಕೊಡಲೇಬೇಕಾದ ದ್ರವ್ಯ. ಇದನ್ನು ಬುದ್ಧಿವರ್ಧಕ ಎಂದೂ ಕರೆಯುವುದು ರೂಢಿ.

ಸೈಂಧವ ಲವಣ: ಸಂಸ್ಕರಿಸದ ಕಲ್ಲುಪ್ಪು. ನಿತ್ಯ ಬಳಕೆಗೆ ಉತ್ತಮ. ಐದು ಬಗೆಯ ಉಪ್ಪುಗಳಲ್ಲಿಯೇ ಶ್ರೇಷ್ಠ ಹಾಗೂ ರಸಾಯನ ಎಂದೂ ಕರೆಯುವ ರೂಢಿಯಿದೆ.

ಜೇನುತುಪ್ಪ: ಸೂಕ್ಷ್ಮಾಣು ಪ್ರತಿಬಂಧಕ, ಫಂಗಸ್ ನಿರೋಧಕ ಹಾಗೂ ಆ್ಯಂಟಿ ಆಕ್ಸಿಡೆಂಟ್ ಗುಣಧರ್ಮ
ಗಳಿಂದ ಭರ್ತಿಯಾಗಿರುವುದರಿಂದ ಇದು ರೋಗನಿರೋಧಕ.

ಸೇವಿಸಬಾರದ/ ಹಾನಿಕಾರಕ ಆಹಾರಗಳು

ಕಡಲೆ ಬೇಳೆ,ಕೆಂಪು ಮಾಂಸ,ಸೋಡಾ,ಸಂಸ್ಕರಿಸಿದ (ಪ್ಯಾಕೆಟ್) ಆಹಾರ,ಹೆಚ್ಚಾಗಿ ಸಕ್ಕರೆ ಇರುವ ಆಹಾರ ಮತ್ತು ಪಾನೀಯ,
ಮದ್ಯ.

ಇವೆಲ್ಲವನ್ನು ಹೊರತುಪಡಿಸಿ ಪ್ರಾದೇಶಿಕವಾಗಿ ಬೆಳೆದ ಆಹಾರ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳು ಆಯಾ ಪ್ರದೇಶಗಳ ಜನರಿಗೆ ತುಂಬಾ ಯೋಗ್ಯವಾದದ್ದು.

ನೀರು: ಎಲ್ಲ ಕಾಲಗಳಲ್ಲಿಯೂ ಉಗುರುಬೆಚ್ಚಗಿನ ನೀರನ್ನು ಕುಡಿದರೆ ಚಯಾಪಚಯ ಕ್ರಿಯೆ ಹೆಚ್ಚಾಗಿ, ರೋಗನಿರೋಧಕ ಶಕ್ತಿ ಕಾಪಿಡುತ್ತದೆ. .

(ಲೇಖಕಿ ವೈದ್ಯೆ, ಲೋಟಸ್ ಆಯುರ್‌ಕೇರ್ ಆಯುರ್ವೇದ ಆಸ್ಪತ್ರೆ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT