ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಶ: ಆಗದಿರಲಿ ಅನಾರೋಗ್ಯದ ಪಾಶ

Published 15 ಏಪ್ರಿಲ್ 2024, 22:28 IST
Last Updated 15 ಏಪ್ರಿಲ್ 2024, 22:28 IST
ಅಕ್ಷರ ಗಾತ್ರ

ಸೌಂದರ್ಯ ಮತ್ತು ಆರೋಗ್ಯವನ್ನು ಕೂದಲಿನ ಮೂಲಕ ಅಳೆಯಬಹುದು. ಸೊಂಪಾದ ನೀಳಕೇಶ ಕೂದಲಿನ ಆರೋಗ್ಯ ಸೂಚಕವೂ ಹೌದು. ಬೇಸಿಗೆಯಲ್ಲಿ ತಾಪಮಾನ ಏರುತ್ತಿರುವಾಗ ಕೂದಲು ಉದುರುವುದು, ಒರಟು ಕೂದಲು, ಸೀಳು ಕೂದಲು, ತಲೆಹೊಟ್ಟು, ಬೆವರಿನ ಗುಳ್ಳೆಗಳು ಸಾಮಾನ್ಯವಾಗಿ ಕಾಡುವುದು.

ಕೂದಲಿನ ಆರೈಕೆ ಹೀಗಿರಲಿ:

• ಬೆವರುವ ವಾತಾವರಣದಲ್ಲಿ ದಿನವೂ ತಲೆಸ್ನಾನವನ್ನು ಮಾಡುವುದು ಸೂಕ್ತ. ವಾರಕ್ಕೊಮ್ಮೆ ಮಾತ್ರ ತಲೆಯನ್ನು ತೊಳೆಯುವುದು ಬೆವರಿನ ಗುಳ್ಳೆ, ತಲೆಹೊಟ್ಟು, ಉದುರುವುದಕ್ಕೆ ಕಾರಣ. ಕೂದಲಿನಿಂದ ಕೂಡಿದ ತಲೆಯ ಭಾಗದಲ್ಲಿ ಬೆವರು ನಿಂತು, ಕೂದಲಿನ ಬುಡದಲ್ಲಿ ಉಷ್ಣತೆ ಹೆಚ್ಚಿ, ಕೇಶಕೂಪವು ಮುಚ್ಚಿಕೊಂಡು ಕೂದಲಿನ ಪೋಷಣೆಗೆ ಹಾನಿ ತರುತ್ತದೆ. ಚಳಿಗಾಲದಲ್ಲಿ ವಾರಕ್ಕೆ ಮೂರು ಬಾರಿ ತಲೆಯ ಸ್ನಾನವನ್ನು ಮಾಡಬಹುದು. ಅಥವಾ ವೃತ್ತಿ, ದಿನಚರಿಯ ಆಧಾರದ ಮೇಲೆ ಬೆವರುವಿಕೆ, ತಾಪಮಾನಕ್ಕೆ ತಲೆಯನ್ನು ಒಡ್ಡುವುದನ್ನು ಗಮನಿಸಿ ತಲೆಸ್ನಾನವನ್ನು ಮಾಡಬಹುದು.
• ತಲೆಸ್ನಾನಕ್ಕೂ ಮುನ್ನ ಕೂದಲಿನ ಬುಡಕ್ಕೆ ಎಣ್ಣೆಯನ್ನು ಮೃದುವಾಗಿ ಸವರುವುದು ಕೂದಲು, ಕಣ್ಣು, ಕಿವಿಗಳನ್ನು, ಮುಖದ ಚರ್ಮಕ್ಕೂ ಪೋಷಣೆಯನ್ನು ನೀಡುತ್ತದೆ. ಒರಟು, ಸೀಳು ಕೂದಲಿನ ಸಮಸ್ಯೆ, ತಲೆಹೊಟ್ಟು, ಬೆವರುಸಾಲೆ, ಉದುರುವುದನ್ನು ಎಣ್ಣೆಯನ್ನು ಹಚ್ಚುವುದರಿಂದ ತಡೆಯಬಹುದು, ಹೋಗಲಾಡಿಸಬಹುದು. ಇದು ‘ಶಿರೋಭ್ಯಂಗ’ ಎಂಬ ದಿನಚರಿ; ನಿತ್ಯವೂ ಮಾಡಿಕೊಳ್ಳಬೇಕಾದ ಆರೈಕೆ. ಶಿರೋಭ್ಯಂಗದಿಂದ ಮುಖದ ಕಾಂತಿ, ಕಣ್ಣಿನ ದೃಷ್ಟಿಶಕ್ತಿ, ಕಿವಿಯ ಕಾರ್ಯಕ್ಷಮತೆ, ಕೂದಲಿನ ಆರೋಗ್ಯವು ದೀರ್ಘಕಾಲ ಉಳಿಯುತ್ತದೆ.
• ರಾಸಾಯನಿಕ, ತೀಕ್ಷ್ಣ ಮಾರ್ಜಕಗಳ ಪ್ರಯೋಗವನ್ನು ಮಾಡಿದಷ್ಟೂ ಕೂದಲಿನ ಸಹಜವಾದ ಮೃದುತ್ವವು ಮಾಯವಾಗುತ್ತದೆ. ನಿತ್ಯವೂ ತಣ್ಣೀರಿನಿಂದ ತಲೆಯನ್ನು ಚೆನ್ನಾಗಿ ತೊಳೆಯುವುದು ಸೂಕ್ತ. ಮೂರು ದಿನಗಳಿಗೊಮ್ಮೆ ಶೀಗೆ, ಅಂಟವಾಳದ ನೊರೆ, ದಾಸವಾಳ, ಮೆಂತೆಕಾಳಿನ ಲೋಳೆ, ಇವುಗಳನ್ನು ಉಪಯೋಗಿಸಿ ತಲೆಯನ್ನು ತೊಳೆಯಬಹುದು. ಪ್ರಾಕೃತಿಕ ಮಾರ್ಜಕಗಳು ಕೂದಲಿನ ಸಹಜವಾದ ವರ್ಣ, ಮೃದುತ್ವವನ್ನು ಕಾಪಾಡುತ್ತವೆ. ಮೃದುವಾದ, ತೀಕ್ಷ್ಣಮಾರ್ಜಕಗಳಿರದ ಶಾಂಪೂ, ಹೇರ್‌ವಾಶ್‍ಗಳನ್ನು ಬಳಸಬಹುದು.
• ಕೃತ್ರಿಮಬಣ್ಣಗಳ ಪ್ರಯೋಗದಿಂದ ಕಣ್ಣು, ತಲೆಯ ಚರ್ಮ, ಕೂದಲಿನ ಆರೋಗ್ಯಕ್ಕೆ ಹಾನಿ. ಕ್ರಮೇಣವಾಗಿ ದೃಷ್ಟಿಮಂಜಾಗುವುದು, ಕೂದಲು ಒರಟಾಗುವುದು, ಸೀಳುವುದು, ಉದುರುವುದು. ನೈಸರ್ಗಿಕವಾಗಿ ಲಭ್ಯವಿರುವ ಕೇಶಕ್ಕೆ ಹಾನಿಕರವೂ ಅಲ್ಲದ ಕೂದಲಿಗೆ ಬಣ್ಣವನ್ನು, ಅಂದವನ್ನೂ ನೀಡುವ ದಾಸವಾಳದ ಎಲೆ-ಹೂವು, ಮೆಂತೆಕಾಳಿನ ಕಲ್ಕ, ಮತ್ತಿಸೊಪ್ಪು, ನೀಲಿನಿ, ಮದರಂಗಿ ಎಲೆಗಳನ್ನು ಬಳಸಬಹುದು.
• ತಲೆಯ ಸ್ನಾನಕ್ಕೆ ಚಳಿಗಾಲ, ಮಳೆಗಾಲದಲ್ಲಿ ಅತ್ಯಂತ ಬೆಚ್ಚಗಿನ ನೀರು ಹಿತಕರ. ಬೇಸಿಗೆಯಲ್ಲಿ ತಣ್ಣೀರು ಸ್ನಾನವೇ ಹಿತಕರ. ನಂತರ ಹತ್ತಿಯ ಬಟ್ಟೆಯನ್ನು ಸುತ್ತಿಕೊಂಡು ಒಳಗೆ ಬಿಸಿಯೆನಿಸಿದ ಮೇಲೆ, ಬಟ್ಟೆ ತೆಗೆದು ಹಾಗೆಯೇ ಕೂದಲು ಆರಲು ಬಿಡಬೇಕು.
• ಫ್ಯಾನ್, ಎ.ಸಿ.ಯಂತಹ ಶೀತಲೀಕರಣ ವಿಧಾನಕ್ಕೆ ಸತತವಾಗಿ ತಲೆ-ಮೈ ಒಡ್ಡುವುದು ಕೂದಲಿನ ಒರಟುತನ, ತಲೆಹೊಟ್ಟು, ಉದುರುವುದಕ್ಕೆ ಕಾರಣ. ಅಗತ್ಯವಿದ್ದಾಗ ಮಿತವಾಗಿಯೇ ಬಳಕೆಯಿರಲಿ. ತಲೆಗೆ ತೆಳುಬಟ್ಟೆಯ ಹೊದಿಕೆಯಿರಲಿ.
• ತಲೆಯನ್ನು ಸುತ್ತಿಕೊಳ್ಳದೆ, ಕೂದಲನ್ನು ಕಟ್ಟದೆ ಬಿಚ್ಚಿಕೊಂಡು ಪ್ರಯಾಣಿಸುವುದು ಒರಟುತನಕ್ಕೆ ಕಾರಣ. ಕೂದಲಿನ ಬುಡಕ್ಕೆ ಹಾನಿಕರ. ಬೀಸುವ ಗಾಳಿ, ಬಿಸಿಲು, ಹೇರ್ ಡ್ರೈಯರ್‌ನಿಂದ ತಲೆಒಣಗಿಸುವುದು ಕೂಡ ಹಾನಿಕರ. ಅತಿಶೀತ, ಅತಿಉಷ್ಣ –  ಇವೆರಡೂ ಕೂದಲಿಗೆ ಹಾನಿಕರ.
• ರಾತ್ರಿ ಮಲಗುವಾಗ ತಲೆಗೆ ಎಣ್ಣೆ ಸುರಿದುಕೊಳ್ಳುವ ಅಭ್ಯಾಸದಿಂದ ಕೂದಲಿನ ಬುಡವು ಮುಚ್ಚಿಹೋಗುವುದು. ಇದರಿಂದ ಕೂದಲು ಉದುರುವುದು, ತಲೆಹೊಟ್ಟು ಕಾಣಿಸಿಕೊಳ್ಳುವುದು. ಆದ್ದರಿಂದ ಸ್ನಾನಕ್ಕೂ ಮುನ್ನ ಅರ್ಧ ಗಂಟೆ ಮೊದಲು ಎಣ್ಣೆಯನ್ನು ಸವರುವುದು ಸೂಕ್ತ.
• ತಡರಾತ್ರಿ ಊಟ, ರಾತ್ರಿಯ ಆಹಾರದ ನಂತರ ನೀರು, ಹಾಲು, ಬಾಳೇಹಣ್ಣು ಇತ್ಯಾದಿ ತಿನ್ನುವ / ಕುಡಿಯುವ ಅಭ್ಯಾಸ, ರಾತ್ರಿ ಮೊಸರು, ಮಜ್ಜಿಗೆ ಕುಡಿಯುವ ಅಭ್ಯಾಸಗಳಿಂದ ತಲೆಹೊಟ್ಟು ಕಾಣಿಸಿಕೊಳ್ಳುವುದು. ಖಾರ, ಹುಳಿ, ಉಪ್ಪುರುಚಿಯ ಗೊಜ್ಜು, ಉಪ್ಪಿನಕಾಯಿ, ಮಸಾಲೆಪದಾರ್ಥಗಳ ಬಳಕೆಯಿಂದ ಕೂದಲು ಉದುರುವುದು, ಕಳೆಗುಂದುವುದು. ಇಂತಹ ಆಹಾರಗಳ ಸೇವನೆಯಲ್ಲಿ ಮಿತವಿರಲಿ. ರಕ್ತವನ್ನು ಕೆಡಿಸುವ ಅತಿಯಾದ ತೀಕ್ಷ್ಣ, ಕ್ಷಾರೀಯ ಪದಾರ್ಥಗಳು ಕೂದಲಿನ ಅನಾರೋಗ್ಯಕಾರಕ. ಸೋಡಾ, ಕಾರ್ಬೋನೇಟೆಡ್ ಡ್ರಿಂಕ್ಸ್, ಮದ್ಯಪಾನ, ಧೂಮಪಾನ ಇವುಗಳು ಕೂಡ ಕೂದಲಿನ ಅನಾರೋಗ್ಯಕ್ಕೆ ಕಾರಣ.
• ರಾತ್ರಿ ಜಾಗರಣೆಯ ಅಭ್ಯಾಸದಿಂದ ಕೂದಲು ಉದುರುವುದು, ಕಳೆಗುಂದುವುದು, ತಲೆಹೊಟ್ಟಿಗೂ ಕಾರಣ. ಆದ್ದರಿಂದ ರಾತ್ರಿ ಬೇಗನೆ ಮಲಗುವ ಅಭ್ಯಾಸ ಹಿತಕರ.
• ಆಹಾರದಲ್ಲಿ ಹಾಲು, ಬೆಣ್ಣೆ, ತುಪ್ಪ, ತೆಂಗಿನಕಾಯಿ, ಕೊಬ್ಬರಿಎಣ್ಣೆ, ತೆಂಗಿನ ಕಾಯಿಯ ಹಾಲು, ಎಣ್ಣೆಕಾಳುಗಳಾದ ಬಾದಾಮಿ, ವಾಲ್‍ನಟ್, ಚಿರೋಂಜಿ ಮೊದಲಾದ ಉತ್ತಮವಾದ ಕೊಬ್ಬುಪದಾರ್ಥಗಳ ಬಳಕೆಯು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.
• ಸಕಾಲದಲ್ಲಿ ಆಹಾರ, ರಾತ್ರಿ ಬೇಗನೆ ನಿದ್ರೆ, ಹಗಲಲ್ಲಿ ಹಿತ-ಮಿತ ಚಟುವಟಿಕೆ, ದೇಹದ ಅಗತ್ಯಗಳನ್ನು ಸಕಾಲದಲ್ಲಿ ಪೂರೈಸುವುದು ಸದಾ ಆರೋಗ್ಯಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT