ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಃಖದ ಆಳದಲ್ಲಿದೆ ಸಂತೋಷದ ಬೆಳಕು!

Last Updated 23 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಅದು ಕಡಲ ತೀರಕ್ಕೆ ಹೊಂದಿಕೊಂಡ ಪುಟ್ಟ ಹಳ್ಳಿ. ಅಲ್ಲೊಂದು ಮನೆಯ ಪುಟ್ಟ ಹುಡುಗಿ. ಸ್ಕೂಲಿನಿಂದ ಸಂಜೆ ಮನೆಗೆ ಓಡೋಡಿ ಬಂದು, ಗೆಳೆಯರೊಟ್ಟಿಗೆ ಸಮುದ್ರತೀರಕ್ಕೆ ಹೋದಳು. ಹೋಗಿ ಬೇಕಾದಷ್ಟು ಆಟವಾಡಿದಳು. ಬಳಿಕ ಕಪ್ಪೆ ಗೂಡೊಂದನ್ನು ಕಟ್ಟುವುದರಲ್ಲಿ ಮಗ್ನವಾದಳು; ತನ್ನ ಕಲ್ಪನಾಲೋಕದ ಅನೇಕ ವಸ್ತು ವಿಶೇಷಗಳಿಗೆ ಆಕಾರವನ್ನು ಕೊಡುತ್ತಿದ್ದಳು.

ಯಾವುದರ ಪರಿವೆಯೂ ಇರದೇ ಆಡುತ್ತಿದ್ದ ಹುಡುಗಿ ಸುಮ್ಮನೆ ಕತ್ತೆತ್ತಿ ನೋಡುತ್ತಾಳೆ, ಯಾರೂ ಇಲ್ಲ, ಅರೆ ಗೆಳೆಯರೆಲ್ಲ ಎಲ್ಲಿ ಹೋದರು? ಆಗಲೇ ಆಗಸದ ಕತ್ತಲು ಸಮುದ್ರದ ಕತ್ತಲು ಒಂದಾಗುತ್ತಿದೆಯಲ್ಲ? ಮತ್ತೆ ತೀರದುದ್ದಕ್ಕೂ ನೋಡಿದಳು; ಒಂದೂ ನರಪಿಳ್ಳೆಯ ಸುಳಿವೂ ಇಲ್ಲ. ಸಮುದ್ರಡೆದೆ ನೋಡಿದಳು; ಒಮ್ಮೆಲೇ ತಲೆಯೊಳಗೆ ಸಿಡಿಲು ಹೊಡೆದಂತಾಯಿತು. ಅಜ್ಜಿ ರಾತ್ರಿ ಹೇಳಿದ್ದ ಸಮುದ್ರ ರಾಕ್ಷಸ ಅಲೆಗಳ ರೂಪ ತಳೆದು ಬರುವ ಕಥೆಯ ನೆನಪಾಯಿತು.

ಆ ಕಥೆಯಲ್ಲಿರುವಂತೆಯೇ, ಕತ್ತಲಾಗುತ್ತಿದ್ದಂತೆ ದೈತ್ಯ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತಿದ್ದವು. ಆ ಕಥೆಯ ನತದೃಷ್ಟ ನಾಯಕಿ ತಾನೇ ಎಂದು ಭಾವಿಸಿಕೊಂಡಳು. ಅಷ್ಟರಲ್ಲೇ ಅಲೆಗಳು ಮತ್ತೂ ಜೋರಾಗಿ ಅಪ್ಪಳಿಸಿ ಅವಳು ಕಟ್ಟಿದ್ದ ಗೂಡನ್ನು, ಅಲ್ಲೇ ಬಿದ್ದ ಅವಳ ಆಟಿಕೆ, ಗೊಂಬೆಗಳನ್ನು ಸೆಳೆದುಕೊಂಡು ಹೋದದ್ದಲ್ಲದೆ ಅದರ ರಭಸಕ್ಕೆ ಅವಳ ಕಾಲ ಕೆಳಗಿನ ಮರಳೂ ಸ್ವಲ್ಪವೇ ಜಾರಿತು. ಇನ್ನೇನು ತಾನು ಸಮುದ್ರದ ಪಾಲಾದೆ ಎಂದು ಕಲ್ಪಿಸಿಕೊಂಡ ಹುಡುಗಿ ಚಿಟ್ಟನೆ ಚೀರಿ ಅಲ್ಲೇ ಪ್ರಜ್ಞೆ ತಪ್ಪಿದಳು. ಇತ್ತ ಆಟಕ್ಕೆ ಹೋದ ಮಗು ಇಷ್ಟು ಹೊತ್ತಾದರೂ ಮನೆಗೆ ಬಾರದ್ದನ್ನು ಕಂಡ ಮನೆಯವರು ಅವಳನ್ನು ಹುಡುಕಿದರು. ತೀರದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಮಗುವನ್ನು ಮನೆಗೆ ಕರೆದುಕೊಂಡು ಬಂದು ಉಪಚರಿಸಿದರು. ಹುಡುಗಿ ಎದ್ದು ಕೂತಿತು. ಆದರೆ ಹುಟ್ಟಿನಿಂದ ಕಾಣುತ್ತ ಬಂದಿದ್ದ ಸಮುದ್ರ ಯಾಕೋ ಈಗ ಗೆಳೆಯನಂತೆ ಕಾಣಲಿಲ್ಲ. ಸರಿಯಾದ ಸಮಯಕ್ಕೆ ಹೊಂಚು ಹಾಕಿ ಕುಳಿತು ಇವಳನ್ನು ತನ್ನೊಳಗಿನ ಕತ್ತಲಿಗೆ ಸೆಳೆದುಬಿಡುವ ಸಮಯಸಾಧಕ, ನಯವಂಚಕನಂತೆಯೇ ಕಾಣಿಸುತ್ತಿತ್ತು. ಸಮುದ್ರರಾಕ್ಷಸ ಆ ಮಗುವನ್ನು ಅರಬ್ಬೀ ಸಮುದ್ರದ ಕತ್ತಲೆಗೆ ಎಳೆಯಲಿಲ್ಲ ನಿಜ, ಆದರೆ ಅಂತರಂಗ ಸಮುದ್ರದ ಕತ್ತಲ ದರ್ಶನವಂತೂ ಮಾಡಿಸಿಬಿಟ್ಟ.

ಯಾವುದು ಕಸಿಯಿತು ಮಗುವಿನ ಆಟ, ತುಂಟಾಟಗಳನ್ನು? ಅದರ ಬಾಲ್ಯದ ಚೆಲುವನ್ನು? ಅದರ ಮುಗ್ಧ ಆಸೆ, ಹಂಬಲಗಳನ್ನು? ಅದರ ಕ್ರಿಯಾಶೀಲತೆಯನ್ನು ಕಿತ್ತು ಪ್ರಜ್ಞೆ ತಪ್ಪಿಸಿದ ರಾಕ್ಷಸ ಯಾರು? ಸಮುದ್ರವೇ? ಅಜ್ಜಿ ಹೇಳಿದ ಕಥೆಯೇ? ಮನುಷ್ಯನ ಮೂಲಭೂತ ಸ್ವಭಾವ ಭಯವೇ? ಗೆಳೆಯರೆಲ್ಲ ಬಿಟ್ಟು ಹೋಗಿದ್ದೇ? ಕಥೆಗೂ ವಾಸ್ತವತೆಗೂ ವ್ಯತ್ಯಾಸ ತಿಳಿಯದ ಬಾಲ್ಯಸಹಜ ಉತ್ಪ್ರೇಕ್ಷೆಯೇ? ಆದ ಅನುಭವವನ್ನು, ಆಘಾತವನ್ನು ಪದಗಳಲ್ಲಿ ಹೇಳಿಕೊಳ್ಳಲಾಗದ ನಿಸ್ಸಹಾಯಕತೆಯೇ? ಮಗುವಿನ ಭಾಷೆ ತಿಳಿಯದ ದೊಡ್ಡವರೇ? ಮತ್ತೆಂದೂ ಸಮುದ್ರದೊಡನೆ ಗೆಳೆತನ ಕಟ್ಟಿಕೊಳ್ಳಲಾಗದ ಬದುಕಿನ ಪರಿಸ್ಥಿತಿಗಳೇ? ಆ ಕಥೆಯ ನತದೃಷ್ಟ ನಾಯಕಿ ತಾನೇ ಇರಬೇಕು ಎಂಬ ನಂಬಿಕೆಯೇ? ಅಥವಾ ದಿನವೂ ಕಾಣುವ ಸತ್ಯವಾದ ಸಮುದ್ರದ ಮೇಲಿನ ಅಪನಂಬಿಕೆಯೇ?

ಯಾವುದು ಈ ನಂಬಿಕೆ, ಅಪನಂಬಿಕೆಗಳ ಮೂಲ? ಯಾಕೆ ಬೇಕು ಇವೆಲ್ಲ? ಇವುಗಳ ಹಿಡಿತದಿಂದ ತಪ್ಪಿಸಿಕೊಳ್ಳುವುದು ಹೇಗೆ? ಅದು ಸಾಧ್ಯವೇ? ಯಾವುದದು ಆ ಶಕ್ತಿ, ಆ ನಂಬಿಕೆ, ಆ ಸೆಳೆತ, ಬದುಕಿನ ಕರಾಳತೆಯನ್ನು ಎದುರಿಸಿಯೂ ಮತ್ತೆ ಮತ್ತೆ ಬದುಕಿನೊಟ್ಟಿಗಿನ ಗೆಳೆತನವನ್ನು, ಜೀವನದ ಸೌಂದರ್ಯವನ್ನು ಸಾಧಿಸಿಕೊಡುವ ಆ ಬೆಳಕು ಯಾವುದು? ಕೆಳಗೆ ಬಿದ್ದಷ್ಟೂ ಮತ್ತೆ ಪುಟಿದೇಳುವ ಸಾಮರ್ಥ್ಯವನ್ನು ಯಾವ ಅನುಭವ, ಯಾವ ಕಲಿಕೆ, ಯಾವ ಸ್ನೇಹ, ಯಾವ ಪ್ರೀತಿ ತಂದುಕೊಡಬಲ್ಲುದು?

ಈ ಎಲ್ಲ ಪ್ರಶ್ನೆಗಳಿಗೂ ಘನಮೌನವೇ ಉತ್ತರವಾಗುವ ಇಂಥ ಘಳಿಗೆಗಳಲ್ಲಿ ಅನ್ನಿಸುವುದಿದೆ, ‘ಸಂತೋಷ ಎಂಬುದು ಒಂದು ಗುರಿಯಲ್ಲ, ಅದೊಂದು ದಿಕ್ಸೂಚಿ ಮಾತ್ರ; ಅದು ಬದುಕಿನ ಮಹಾಕಾವ್ಯದಲ್ಲಿ ಅಲ್ಲಲ್ಲಿ ಬಂದು ಹೋಗುವ ಉಪಕಥೆಗಳಂತೆ ಇರಬಹುದೇ’ ಎಂದು. ಸಂತೋಷ ಎನ್ನುವುದು ಒಂದು ಅನುಭವವೇ ಅಥವಾ ಕೇವಲ ಒಂದು ಪರಿಕಲ್ಪನೆಯೇ? ಸುಖ ಎನ್ನುವುದು ದುಃಖದ ಅಭಾವವಷ್ಟೇ ಅಲ್ಲದೆ ಮತ್ತೂ ಏನಾದರೂ ನಮ್ಮ ಅನುಭವಕ್ಕೆ ನಿಲುಕುತ್ತದೆಯೇ? ಎಲ್ಲಕ್ಕಿಂತ ಸೋಜಿಗದ್ದೆಂದರೆ ದುಃಖದ ಅನುಭವಕ್ಕೆ ಅಭಿವ್ಯಕ್ತಿಯ ಬೆಂಬಲ ದೊರೆತಾಗ ಅದು ಸಂತೋಷದ ಅನುಭವವೇ ಆಗಿಬಿಡುತ್ತದಲ್ಲ? ಹಾಗಿದ್ದಾಗ ನಿಜವಾದ ಸಂತೋಷವೆಂದರೆ ದುಃಖದ ಅಪಾರ ಕತ್ತಲ ಪಾತಾಳವನ್ನು ಮುಟ್ಟಿ, ದುಃಖಸಾಗರವನ್ನು ಮಥಿಸಿ, ಅರ್ಥೈಸುವಿಕೆ, ಅಭಿವ್ಯಕ್ತಿ ಎಂಬ ಅಮೃತವನ್ನು ತರುವುದೇ ಆಗಿರಬಹುದೇ? ಆ ಅಮೃತದ ಸವಿಯಲ್ಲದೆ ಮತ್ತಾವುದು ತರಬಲ್ಲುದು ತೀರದಲ್ಲಿ ಆಘಾತಗೊಂಡು, ನಿಷ್ಕ್ರಿಯವಾಗಿ ಬಿದ್ದ ಮಗುವಿಗೆ ಹೊಸ ಚೇತನವನ್ನು, ಹೊಸ ಭರವಸೆಯನ್ನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT