ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಾಘಾತದ ಚಿಕಿತ್ಸೆಯ ನಂತರ....

Published 2 ಅಕ್ಟೋಬರ್ 2023, 23:35 IST
Last Updated 2 ಅಕ್ಟೋಬರ್ 2023, 23:35 IST
ಅಕ್ಷರ ಗಾತ್ರ

ನಮ್ಮನ್ನು ಕಾಡುವ ಕಾಯಿಲೆಗಳನ್ನು ಸ್ಥೂಲವಾಗಿ ಎರಡು ಬಗೆಯಾಗಿ ವಿಂಗಡಿಸಬಹುದು. ಮೊದಲನೆಯದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆಗಳು. ಇದಕ್ಕೆ ಕಾರಣ ರೋಗಾಣುಗಳು. ಈ ರೋಗಾಣುಗಳು ಗಾಳಿ, ನೀರು, ಆಹಾರ, ಸ್ಪರ್ಶ ಮೊದಲಾದ ಮಾಧ್ಯಮಗಳ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ. ಇಂತಹ ರೋಗಾಣುಗಳನ್ನು ಪತ್ತೆ ಮಾಡಿ, ಅವು ನಿಗ್ರಹಕ್ಕೆ ಬರುವಂತಹ ಜೀವಿರೋಧಕ ಔಷಧಗಳನ್ನು ಸರಿಯಾದ ಪ್ರಮಾಣದಲ್ಲಿ ಸಾಕಷ್ಟು ಅವಧಿಗೆ ಸೇವಿಸಿದರೆ ಕಾಯಿಲೆ ಇಲ್ಲವಾಗುತ್ತದೆ. ಇದನ್ನು ಸಂಪೂರ್ಣ ಚಿಕಿತ್ಸೆ ಎನ್ನಬಹುದು.

ಎರಡನೆಯದು, ಒಬ್ಬರಿಂದ ಮತ್ತೊಬ್ಬರಿಗೆ ನೇರವಾಗಿ ಹರಡದ ಕಾಯಿಲೆಗಳು. ಉದಾಹರಣೆಗೆ ಮಧುಮೇಹ, ಸಂಧಿವಾತ, ಪಾರ್ಶ್ವವಾಯು, ಕ್ಯಾನ್ಸರ್, ನರಗಳ ದೌರ್ಬಲ್ಯ, ಸ್ನಾಯುಗಳ ಸಮಸ್ಯೆ ಮೊದಲಾದುವು. ಇವು ದೀರ್ಘಕಾಲಿಕ ಕಾಯಿಲೆಗಳು. ಇವುಗಳಿಗೆ ಸಂಪೂರ್ಣ ಚಿಕಿತ್ಸೆ ಎಂಬುದಿಲ್ಲ. ಆದರೆ, ಈ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು, ಜೀವನವನ್ನು ಸರಾಗವಾಗಿ ನಡೆಸುವುದು ಸಾಧ್ಯ. ಇದಕ್ಕಾಗಿ ಜೀವನಶೈಲಿಯ ಬದಲಾವಣೆ, ಆಹಾರದಲ್ಲಿ ಸಂಯಮ, ಶಿಸ್ತಿನ ಬದುಕು, ನಿಯಮಿತ ಔಷಧ ಬಳಕೆ, ಸೂಕ್ತವಾದ ವ್ಯಾಯಾಮ, ಕ್ಲುಪ್ತ ಸಮಯದಲ್ಲಿ ಪರೀಕ್ಷೆಗಳನ್ನು ಮಾಡಿಸಿಕೊಂಡು ವೈದ್ಯರ ಸಲಹೆ ಪಡೆಯುವುದು ಮೊದಲಾದ ದಾರಿಗಳಿವೆ. ಇಂತಹ ಕಾಯಿಲೆಗಳ ಪೈಕಿ ಹೃದ್ರೋಗ ಪ್ರಮುಖವಾದದ್ದು.

ಹೃದ್ರೋಗಗಳಲ್ಲಿ ಹಲವಾರು ವಿಧಗಳು ಇವೆಯಾದರೂ ಬಹಳ ಜನರ ಸಮಸ್ಯೆ ಹೃದಯಾಘಾತದ್ದು. ಹೃದಯಕ್ಕೆ ರಕ್ತದ ಸರಬರಾಜು ಮಾಡುವ ರಕ್ತನಾಳಗಳಲ್ಲಿ ಕೊಬ್ಬಿನ ಶೇಖರಣೆಯಾದಾಗ ರಕ್ತದ ಹರಿವಿಗೆ ಅಡಚಣೆಯಾಗುತ್ತದೆ. ಇದು ಒಂದು ಪ್ರಮಾಣವನ್ನು ಮೀರಿದಾಗ ಹೃದಯದ ಮಾಂಸಖಂಡಗಳಿಗೆ ರಕ್ತದ ಪೂರೈಕೆ ಇಲ್ಲದಂತಾಗಿ, ಅವು ನಶಿಸುತ್ತವೆ. ಇದನ್ನು ‘ಹೃದಯಾಘಾತ’ ಎನ್ನಬಹುದು. ಇಂತಹ ಸಂದರ್ಭದಲ್ಲಿ ಸಾಧ್ಯವಾದಷ್ಟೂ ಬೇಗ ರಕ್ತನಾಳಗಳಲ್ಲಿ ಇರುವ ಅಡಚಣೆಯನ್ನು ನಿವಾರಿಸಿ, ರಕ್ತದ ಪೂರೈಕೆಯನ್ನು ಸರಾಗವಾಗಿಸಬೇಕು. ಇದಕ್ಕೆ ಹಲವಾರು ದಾರಿಗಳಿವೆ. ‘ಆಂಜಿಯೋಗ್ರಾಂ’ ಮೂಲಕ ಅಡಚಣೆ ಇರುವ ರಕ್ತನಾಳವನ್ನು ಗುರುತಿಸಿ, ಅದರೊಳಗೆ ತೆಳುವಾದ ನಳಿಕೆಯನ್ನು ತೂರಿಸಿ, ಅಡಚಣೆ ಇರುವ ಭಾಗವನ್ನು ಬಲೂನುಗಳ ಮೂಲಕ ಹಿಗ್ಗಿಸಿ, ಅದು ಪುನಃ ಕುಸಿಯದಂತೆ ‘ಸ್ಟೆಂಟ್’ ಎನ್ನುವ ಲೋಹದ ಸುರಳಿಯ ಆಸರೆಯನ್ನು ನೀಡಬೇಕು. ಇದನ್ನು ‘ಆಂಜಿಯೋಪ್ಲಾಸ್ಟಿ’ ಎನ್ನುತ್ತಾರೆ. ಇದು ಸಾಧ್ಯವಾಗದಿದ್ದರೆ ಹೃದಯದ ಶಸ್ತ್ರಚಿಕಿತ್ಸೆ ಮಾಡಿ, ಅಡಚಣೆ ಇರುವ ರಕ್ತನಾಳದ ಭಾಗವನ್ನು ತೆಗೆದುಹಾಕಿ, ಅದರ ಸ್ಥಾನದಲ್ಲಿ ಬೇರೊಂದು ಆರೋಗ್ಯವಂತ ರಕ್ತನಾಳವನ್ನು ಜೋಡಿಸಬೇಕು. ಇದನ್ನು ‘ಬೈಪಾಸ್’ ಶಸ್ತ್ರಚಿಕಿತ್ಸೆ ಎನ್ನಲಾಗುತ್ತದೆ. ಇವೆರಡೂ ಸಾಧ್ಯವಿಲ್ಲದಾಗ ರಕ್ತನಾಳಗಳ ಅಡಚಣೆಯನ್ನು ಕರಗಿಸಬಲ್ಲ ಔಷಧಿಗಳನ್ನು ನೀಡಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ನಿವಾರಿಸಿಕೊಳ್ಳಬೇಕು.

ಈ ಯಾವುದೇ ಚಿಕಿತ್ಸೆಗಳೂ ಹೃದಯವನ್ನು ಮತ್ತೆ ಕೆಲಸ ಮಾಡುವ ಸ್ಥಿತಿಗೆ ತರಬಲ್ಲವಾದರೂ, ಬಹುತೇಕ ಸಂದರ್ಭಗಳಲ್ಲಿ ನೂರು ಪ್ರತಿಶತ ಆರೋಗ್ಯವಂತ ಹೃದಯವನ್ನು ಮತ್ತೆ ನೀಡಲಾರವು. ಅಲ್ಲದೆ, ಒಂದು ಬಾರಿ ಚಿಕಿತ್ಸೆಯಾದ ನಂತರ ಪುನಃ ಇದೇ ರೀತಿ ಆಗುವುದಿಲ್ಲ ಎಂದೇನೂ ಇಲ್ಲ. ಹೃದಯಕ್ಕೆ ರಕ್ತದ ಸರಬರಾಜು ಮಾಡುವ ಮೂರು ಮುಖ್ಯ ರಕ್ತನಾಳಗಳಿವೆ. ಅದರಲ್ಲಿ ಒಂದು ನಾಳಕ್ಕೆ ಘಾಸಿಯಾದರೂ ಹೃದಯಾಘಾತ ಆಗಬಹುದು. ಈ ಮುನ್ನ ಚಿಕಿತ್ಸೆಗೆ ಒಳಪಟ್ಟ ರಕ್ತನಾಳದಲ್ಲೂ ಮತ್ತೆ ಸಮಸ್ಯೆ ಕಾಣಬಹುದು. ಅಥವಾ, ಉಳಿದೆರಡು ರಕ್ತನಾಳಗಳು ತೊಂದರೆಗೆ ಒಳಗಾಗಬಹುದು. ಒಟ್ಟಾರೆ, ಹೃದಯಾಘಾತದ ಚಿಕಿತ್ಸೆಯ ನಂತರ ಹೃದಯವನ್ನು ಮತ್ತಷ್ಟು ಜತನದಿಂದ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕೆ ಕೆಲವು ಮಾರ್ಗಗಳನ್ನು ಪರಿಗಣಿಸಬಹುದು’

1. ಹೃದಯಾಘಾತದ ಚಿಕಿತ್ಸೆಯ ನಂತರ ಹಲವಾರು ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಬೇಕಾಗುತ್ತದೆ. ಪ್ರಸ್ತುತ ಚಿಕಿತ್ಸೆಯ ಸಾಫಲ್ಯಕ್ಕೆ ಮತ್ತು ಮುಂದಿನ ಅವಘಡವನ್ನು ತಪ್ಪಿಸುವುದಕ್ಕೆ ಈ ಔಷಧಗಳು ಸಹಕಾರಿ. ಯಾವುದೇ ಕಾರಣಕ್ಕೂ ಔಷಧ ಸೇವನೆಯನ್ನು ತಪ್ಪಿಸಬಾರದು. ಇದರಲ್ಲಿ ಯಾವುದೇ ಮಾರ್ಪಾಡನ್ನೂ ಸ್ವತಃ ವೈದ್ಯರೇ ಸೂಚಿಸಬೇಕೇ ಹೊರತು, ರೋಗಿಗಳು ಖುದ್ದಾಗಿ ಮಾಡಬಾರದು.

2. ಹೃದಯಾಘಾತದ ತೀವ್ರತೆಯನ್ನು ಅವಲಂಬಿಸಿ ಅದನ್ನು ಮತ್ತೆ ಚೇತರಿಸಿಕೊಳ್ಳುವಂತೆ ಮಾಡಲು ವ್ಯವಸ್ಥಿತ ವಿಧಾನಗಳಿವೆ. ಎಂತಹ ಮತ್ತು ಎಷ್ಟು ವ್ಯಾಯಾಮ ಬೇಕು; ಮಾನಸಿಕ ಒತ್ತಡದ ನಿರ್ವಹಣೆ; ಆಹಾರದಲ್ಲಿ ಸೂಕ್ತ ಮಾರ್ಪಾಡು; ಜೀವನಶೈಲಿಯ ಬದಲಾವಣೆ; ಕೆಟ್ಟ ಚಟಗಳಿಂದ ದೂರವಿರುವುದು; ಸಮಾನಮನಸ್ಕರ ಒಡನಾಟ; ಮೊದಲಾದ ವಿಷಯಗಳ ಬಗ್ಗೆ ತಜ್ಞರ ಸಲಹೆ ಪಡೆದು ಕಟ್ಟುನಿಟ್ಟಾಗಿ ಪಾಲಿಸಬೇಕು.

3. ವೈದ್ಯರು ಸೂಚಿಸಿದ ವೇಳೆಗೆ ಅವರನ್ನು ಕಂಡು ಅಗತ್ಯವಾದ ಪರೀಕ್ಷೆಗಳನ್ನು ಮಾಡಿಸಿ, ಹೃದಯದ ಸ್ಥಿತಿಗತಿಗಳನ್ನು ಅರಿತುಕೊಳ್ಳಬೇಕು. ಚಿಕಿತ್ಸೆಯ ಸೂಕ್ತ ಮಾರ್ಪಾಡಿಗೆ ಇದು ಬಹಳ ಸಹಕಾರಿ. ಇಂತಹ ಭೇಟಿಗಳನ್ನು ನಿರ್ಲಕ್ಷಿಸಬಾರದು.

4. ಹೃದಯಾಘಾತವನ್ನು ಸೂಚಿಸಬಲ್ಲ ಯಾವುದೇ ಲಕ್ಷಣಗಳು ಕಂಡುಬಂದರೆ, ಅದನ್ನು ಶೀಘ್ರವಾಗಿ ವೈದ್ಯರ ಗಮನಕ್ಕೆ ತರಬೇಕು. ಈ ಮೊದಲಿನ ಅನಾರೋಗ್ಯದ ಅನುಭವವನ್ನು ಮುಂದಿನ ಆರೋಗ್ಯ ನಿರ್ವಹಣೆಯ ಕಲಿಕೆಗೆ ಸೂಕ್ತವಾಗಿ ಬಳಸಿಕೊಳ್ಳಬೇಕು.

5. ಮತ್ತೊಮ್ಮೆ ಹೃದಯಾಘಾತಕ್ಕೆ ಕಾರಣವಾಗಬಲ್ಲ ಮಧುಮೇಹದಂತಹ ಕಾಯಿಲೆಗಳ ಸಮಗ್ರ ನಿರ್ವಹಣೆ, ಅಧಿಕ ರಕ್ತದೊತ್ತಡದ ನಿಗ್ರಹಗಳಿಗೆ ತಜ್ಞರ ಸಲಹೆ ಪಡೆದು ಸರಿಯಾಗಿ ಪಾಲಿಸಬೇಕು. ಹೃದಯಾಘಾತದ ಚಿಕಿತ್ಸೆಯ ವೇಳೆ ಇವು ಏರುಪೇರಾಗುವ ಸಾಧ್ಯತೆಗಳಿರುತ್ತವೆ. ಸಾಮಾನ್ಯವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮುನ್ನ ಈ ಅನಾರೋಗ್ಯಗಳನ್ನು ತಹಬಂದಿಗೆ ತರಲು ವೈದ್ಯರು ಶ್ರಮಿಸಿರುತ್ತಾರೆ. ಇಂತಹ ವೇಳೆಯಲ್ಲಿ ಮಧುಮೇಹದ ನಿಯಂತ್ರಣಕ್ಕೆ ಈ ಮೊದಲು ತೆಗೆದುಕೊಳ್ಳುತ್ತಿದ್ದ ಔಷಧಗಳ ಪ್ರಮಾಣ ಬದಲಾಗಬಹುದು. ಇದನ್ನು ವೈದ್ಯರ ಬಳಿ ಸರಿಯಾಗಿ ಚರ್ಚಿಸಿ, ಸೂಕ್ತವಾದ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

6. ಹೃದಯಾಘಾತದ ನಂತರದ ಅವಧಿಯಲ್ಲಿ ದೇಹತೂಕದ ನಿರ್ವಹಣೆ ಕಷ್ಟವಾಗುತ್ತದೆ. ಶರೀರದ ಚಲನೆಯಲ್ಲಿ, ವ್ಯಾಯಾಮದಲ್ಲಿ ಮಿತಿಗಳನ್ನು ವಹಿಸುವುದರಿಂದ, ಕೆಲವು ಔಷಧಗಳ ಅಡ್ಡಪರಿಣಾಮಗಳಿಂದ ಬೊಜ್ಜಿನ ಸಾಧ್ಯತೆ ಅಧಿಕವಾಗುತ್ತದೆ. ಶರೀರದ ತೂಕವನ್ನು ಜಾಣತನದಿಂದ ನಿರ್ವಹಿಸುವುದು ಅಗತ್ಯ. ಕ್ಯಾಲರಿಗಳು ಹೆಚ್ಚಾಗದಂತೆ ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದರಲ್ಲಿ ಆಹಾರತಜ್ಞರು ನೆರವಾಗಬಲ್ಲರು.

ಹೃದಯಾಘಾತದ ಚಿಕಿತ್ಸೆ ಒಂದು ಸಮಸ್ಯೆಯ ತಾತ್ಕಾಲಿಕ ಅಂತ್ಯವೂ ಹೌದು; ಮತ್ತೊಂದು ದೀರ್ಘಕಾಲಿಕ ಜವಾಬ್ದಾರಿಯೂ ಹೌದು. ಇದರ ಬಗ್ಗೆ ಅರಿವನ್ನು ಮೂಡಿಸಿಕೊಂಡು, ಸಮಸ್ಯೆ ಮತ್ತೊಮ್ಮೆ ಉಲ್ಬಣಗೊಳ್ಳದಂತೆ ಆರೋಗ್ಯವನ್ನು ಕಾಯ್ದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT