ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲಕ್ಕೆ ಸಿದ್ಧರಾಗಿ...

Published 4 ಡಿಸೆಂಬರ್ 2023, 23:47 IST
Last Updated 4 ಡಿಸೆಂಬರ್ 2023, 23:47 IST
ಅಕ್ಷರ ಗಾತ್ರ

ಚಳಿಗಾಲದಲ್ಲಿ ಸಮಸ್ತ ಜೀವಪ್ರಭೇದಗಳೂ ತಮ್ಮ ಆಕ್ರಮಣಶೀಲತೆಯನ್ನು ಬದಿಗಿಟ್ಟು ವಿಶ್ರಾಂತಿಯನ್ನು ಪಡೆಯುತ್ತವೆ. ಕೆಲವು ಪ್ರಾಣಿಗಳಂತೂ ‘ಹೈಬರ್ನೇಶನ್’ ಎಂಬ ದೀರ್ಘ ನಿದ್ರೆಗೆ ಜಾರುತ್ತವೆ. ಆದರೆ ನಾಗರಿಕತೆಯ ಸುಳಿಗೆ ಸಿಲುಕಿರುವ ಮನುಷ್ಯರಿಗೆ ಅಂತಹ ಐಷಾರಾಮದ ಅನುಕೂಲವಿಲ್ಲ! ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳು, ಉಸಿರಾಟದ ತೊಂದರೆ, ಸ್ನಾಯು-ಕೀಲುಗಳ ನೋವು, ಮಾನಸಿಕ ಒತ್ತಡ ಹೆಚ್ಚಾಗುತ್ತವೆ. ಶರೀರವನ್ನು ಬೆಚ್ಚಗೆ ಇರಿಸಲು ಹೆಚ್ಚು ಕ್ಯಾಲರಿಗಳ ಆವಶ್ಯಕತೆ ಇರುತ್ತದೆ. ಇದರಿಂದ ಮಧುಮೇಹದ ನಿಯಂತ್ರಣ ಕಷ್ಟವಾಗುತ್ತದೆ. ಮೈತೂಕದಲ್ಲಿ ಏರುಪೇರಾಗುತ್ತದೆ. ಹೀಗಾಗಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ಚಳಿಗಾಲದಲ್ಲಿ ವಿಶೇಷ ಪ್ರಯತ್ನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯರೂಪಕ್ಕೆ ತರಬಲ್ಲ ಕೆಲವು ಸಲಹೆಗಳನ್ನು ಪರಿಗಣಿಸಬಹುದು.

ನಿಯಮಿತ ವ್ಯಾಯಾಮವನ್ನು ತಪ್ಪಿಸಬಾರದು. ಚಳಿಗಾಲದಲ್ಲಿ ಹಾಸಿಗೆ ಬಿಟ್ಟು ಏಳುವುದು ಶ್ರಮದ ಕೆಲಸ. ಬೆಚ್ಚಗೆ ಇನ್ನೊಂದಷ್ಟು ಕಾಲ ಮಲಗಿರುವ ಬಯಕೆ ಸಾಮಾನ್ಯ. ಆದರೆ ಈ ಮನೋವಾಂಛೆ ಆರೋಗ್ಯದ ಅವನತಿಗೆ ಕಾರಣವಾಗಬಾರದು. ಉಸಿರಾಟದ ಸಮಸ್ಯೆ ಇರುವವರು ಚಳಿಗಾಳಿಗೆ ಹೋಗದೆ, ಮನೆಯ ಬೆಚ್ಚಗಿನ ವಾತವರಣದಲ್ಲಿ ವ್ಯಾಯಾಮ ಮಾಡುವುದು ಸೂಕ್ತ. ಇಂತಹ ಸಮಸ್ಯೆ ಇಲ್ಲದವರು ತಮ್ಮ ನಿಯಮಿತ ವ್ಯಾಯಾಮವನ್ನು ಜಾರಿಯಿಡಬೇಕು. ಪ್ರತಿದಿನವೂ ಸುಮಾರು 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ದೇಹವನ್ನು ಮತ್ತು ಮನಸ್ಸನ್ನು ಆರೋಗ್ಯವಾಗಿಡುತ್ತದೆ. ಸೂರ್ಯನ ಬೆಳಕಿಗೆ ಮೈಯೊಡ್ಡುವುದು ಆರೋಗ್ಯಕ್ಕೆ ಬೇಕಾದ ವಿಟಮಿನ್-ಡಿ ತಯಾರಿಕೆಗೆ ನೆರವಾಗುತ್ತದೆ.

ಆಹಾರಸೇವನೆಯಲ್ಲಿ ಶಿಸ್ತನ್ನು ಅನುಸರಿಸಬೇಕು. ಶರೀರದ ಶಾಖವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಆಹಾರದ ಅಗತ್ಯ ಇರುತ್ತದೆ. ಚಳಿಗಾಳಿಯಿಂದ ಚರ್ಮದ ಮೇಲ್ಪದರಗಳ ತೈಲಾಂಶ ಕಡಿಮೆಯಾಗುತ್ತದೆ. ಚರ್ಮದ ಅಡಿಯ ಕೊಬ್ಬಿನ ಪದರ ಹೆಚ್ಚಾದಷ್ಟೂ ದೇಹದ ತಾಪಮಾನವನ್ನು ನಿಯಂತ್ರಿಸುವುದು ಸುಲಭ. ಈ ಕಾರಣಗಳಿಗೆ ಮಿದುಳು ತೈಲಯುಕ್ತ ಆಹಾರವನ್ನು ಬಯಸಿ, ನಾಲಿಗೆಗೆ ಸಂಕೇತಗಳನ್ನು ಕಳಿಸುತ್ತದೆ. ಈ ಪ್ರಲೋಭನೆಯ ಹಿನ್ನೆಲೆಯಲ್ಲಿ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಸೇವಿಸುವ ಬಯಕೆಯಾಗುತ್ತದೆ. ಇದನ್ನು ನಿಯಂತ್ರಣದಲ್ಲಿ ಇಡಬೇಕು. ಆಹಾರದಲ್ಲಿ ಪ್ರೊಟೀನ್ ಅಂಶವನ್ನು ಹೆಚ್ಚಿಸುವುದು ಮಾಂಸಖಂಡಗಳನ್ನು ಸುಸ್ಥಿತಿಯಲ್ಲಿಟ್ಟು, ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಇಡೀ ಧಾನ್ಯಗಳು, ಬೇಳೆ-ಕಾಳುಗಳು, ಮೊಟ್ಟೆ, ಮೀನುಗಳ ಬಿಸಿಯಾದ ತಾಜಾ ಆಹಾರ ಒಳ್ಳೆಯದು. ಚಳಿಗಾಲದ ಹಣ್ಣುಗಳು ಮತ್ತು ತರಕಾರಿಗಳ ಬಳಕೆ ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ನಾರಿನ ಅಂಶಗಳನ್ನು ನೀಡಿ, ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತವೆ. ವಿಟಮಿನ್-ಸಿ ಇರುವ ಆಹಾರಪದಾರ್ಥಗಳು ಶರೀರದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಚಳಿಗಾಲದಲ್ಲಿ ದೇಹವು ಹೆಚ್ಚು ನಿದ್ರೆಯನ್ನು ಬಯಸುತ್ತದೆ. ಪ್ರತಿ ರಾತ್ರಿ 7-8 ಗಂಟೆಗಳ ಕಾಲದ ನಿದ್ರೆ ದೇಹಕ್ಕೆ ಒಳಿತು. ಆದರೆ ರಾತ್ರಿವೇಳೆಯಲ್ಲಿ ತಾಪಮಾನ ಕಡಿಮೆಯಾಗುವುದರಿಂದ ಉಸಿರಾಡುವ ಗಾಳಿ ತಂಪಾಗಿರುತ್ತದೆ. ಇದು ಶ್ವಾಸಸಂಬಂಧಿ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ಅಸ್ಮಾ (ಆಸ್ತಮಾ) ಮಾದರಿಯ ಉಸಿರಾಟದ ಸಮಸ್ಯೆಗಳು ಚಳಿಗಾಲದಲ್ಲಿ ಉಲ್ಬಣಗೊಳ್ಳುತ್ತವೆ. ಶ್ವಾಸನಾಳಗಳ ಗಾತ್ರ ಕಿರಿದಾಗಿ ಕಫ ಹೊರಬರುವುದು ಕಷ್ಟವಾಗುತ್ತದೆ. ರಾತಿಯ ವೇಳೆ ಮಲಗುವ ಕೋಣೆಯನ್ನು ಬೆಚ್ಚಗೆ ಇಟ್ಟುಕೊಳ್ಳುವುದು ಸೂಕ್ತ. ಉಸಿರಾಟದ ಸಮಸ್ಯೆ ಇರುವವರು ರಾತ್ರಿ ವೇಳೆಯ ತಾಮಮಾನವನ್ನು ಅಳೆದು, ಅದು ಒಂದು ಹಂತಕ್ಕಿಂತ ಕಡಿಮೆಯಾದಾಗ ‘ರೂಮ್-ಹೀಟರ್’ ಅಥವಾ ಉಷ್ಣತೆಯನ್ನು ಏರಿಸಬಲ್ಲ ಹವಾನಿಯಂತ್ರಕಗಳನ್ನು ಬಳಸಬಹುದು. ನಡುರಾತ್ರಿಯಲ್ಲಿ ಉಲ್ಬಣವಾಗುವ ಅಸ್ಮಾ ಸಮಸ್ಯೆಗೆ ವೈದ್ಯರ ಸಲಹೆ ಪಡೆದು ರಾತ್ರಿ ಮಲಗುವ ಮುನ್ನ ಇನ್‌ಹೇಲರ್ ಬಳಸಬಹುದು. ಧೂಮಪಾನದ ಅಭ್ಯಾಸವನ್ನು ಶಾಶ್ವತವಾಗಿ ನಿಲ್ಲಿಸಲು ಚಳಿಗಾಲ ಬಹಳ ಸೂಕ್ತ. ದೀರ್ಘಕಾಲಿಕ ಉಸಿರಾಟದ ಸಮಸ್ಯೆ ಇರುವವರು ತಮ್ಮ ವೈದ್ಯರ ಅಭಿಪ್ರಾಯವನ್ನು ಪಡೆದು ಫ್ಲೂ-ನಿರೋಧಕ ಲಸಿಕೆಯನ್ನು ಹಾಕಿಸಿಕೊಳ್ಳಬಹುದು.

ವಾತಾವರಣದ ತಾಪಮಾನ ಕಡಿಮೆಯಾದಂತೆ ರಕ್ತನಾಳಗಳು ಸಂಕುಚಿಸುತ್ತವೆ. ಹೃದಯಾಘಾತದ ಸಾಧ್ಯತೆಗಳು ಚಳಿಗಾಲದಲ್ಲಿ ಹೆಚ್ಚು. ಹೃದಯಸಂಬಂಧಿ ಸಮಸ್ಯೆಗಳು ಇರುವವರಿಗೆ ಶರೀರಕ್ಕೆ ಹೆಚ್ಚು ಚಳಿ ತಾಕದಂತಹ ವಸ್ತ್ರಸಂಹಿತೆ ಇರಬೇಕು. ಚಳಿಯಲ್ಲಿ ಓಡಾಡುವ ಅಗತ್ಯ ಇರುವಾಗ ತುಂಬು ತೋಳಿನ ಅಂಗಿ, ಕಿವಿಗಳನ್ನು ಮುಚ್ಚುವಂತಹ ಟೋಪಿ ಅಥವಾ ಮೇಲ್ವಸ್ತ್ರ, ಬೆಚ್ಚಗಿನ ಉಣ್ಣೆಬಟ್ಟೆಗಳ ಬಳಕೆ, ಪಾದಗಳನ್ನು ಮುಚ್ಚುವಂತಹ ಪಾದರಕ್ಷೆಗಳು, ಪ್ರಯಾಣದ ವೇಳೆ ವಾಹನದ ಕಿಟಕಿಗಳನ್ನು ಮುಚ್ಚುವುದು, ಸಾಧ್ಯವಾದರೆ ವಾಹನದ ಹೀಟರ್ ಚಲಾವಣೆ ಮೊದಲಾದುವು ಸಮಸ್ಯೆಯನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ. ಯಾವುದೇ ಆರೋಗ್ಯಸಮಸ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ ಎನಿಸಿದರೆ ಕೂಡಲೇ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ. ಈ ವಿಷಯದಲ್ಲಿ ರಾಜಿಯಾಗಬಾರದು.

ಚಳಿಗಾಳಿ ಹೆಚ್ಚಾದಂತೆ ಚರ್ಮದ ಸಮಸ್ಯೆಗಳೂ ಏರುತ್ತವೆ. ಚರ್ಮ ಒಣದಾಗಿ, ಬಿರುಕುಗಳಾಗುತ್ತವೆ. ಇದರ ಮೂಲಕ ಸೋಂಕು ಸುಲಭವಾಗಿ ಒಳಗೆ ನುಗ್ಗಬಹುದು. ಚರ್ಮದ ಸ್ವಾಸ್ಥ್ಯಕ್ಕೆ ಬೆಚ್ಚಗಿನ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಬೇಕು. ಚರ್ಮದಿಂದ ದೂರವಾಗಿರುವ ನೀರು ಮತ್ತು ತೈಲವನ್ನು ಮರಳಿ ನೀಡಲು ಗಾಢವಾದ ಎಣ್ಣೆ ಅಥವಾ ಜಿಡ್ಡಿನ ಅಂಶವಿರುವ ದಪ್ಪದ ಲೇಪನಗಳನ್ನು ಬಳಸಬಹುದು. ಬಿರುಕುಗಳು ಮೂಡಿದ ತುಟಿಗಳ ಮತ್ತು ಒಡೆದ ಹಿಮ್ಮಡಿಗಳ ರಕ್ಷಣೆ ಬಹಳ ಮುಖ್ಯ. ಅಂಗೈ ಮತ್ತು ಪಾದಗಳನ್ನು ನಿಯಮಿತವಾಗಿ ಮಾಲೀಷು ಮಾಡುವುದು ರಕ್ತಸಂಚಾರವನ್ನು ಹೆಚ್ಚಿಸಿ, ಚರ್ಮದ ರಕ್ಷಣೆಗೆ ನೆರವಾಗುತ್ತದೆ. ಅಂತೆಯೇ ಕೂದಲಿನ ಬುಡಕ್ಕೂ ಎಣ್ಣೆ ಮಾಲೀಷು ಮಾಡುವುದು ಕೂದಲು ಉದುರುವುದನ್ನು ತಡೆಯುತ್ತದೆ. ಮೈಗೆ ಹಿತವೆನಿಸಿದರೂ ಬಹಳ ಬಿಸಿಯಾದ ನೀರಿನಲ್ಲಿ ಸ್ನಾನ ಮಾಡುವುದು ಚರ್ಮಕ್ಕೆ ಘಾಸಿ ಮಾಡಬಹುದು ಎನ್ನುವ ಎಚ್ಚರ ಇರಬೇಕು.

ಚಳಿಗಾಲವನ್ನು ಆನಂದಿಸುವುದರ ಜೊತೆಗೆ ಜಾಗರೂಕತೆಯೂ ಮುಖ್ಯ. ಜೀವನಶೈಲಿಯಲ್ಲಿ ಮಾಡುವ ಸರಳ ಬದಲಾವಣೆಗಳು ಚಳಿಗಾಲವನ್ನು ಸುರಕ್ಷಿತವಾಗಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT