ಭಾನುವಾರ, ಜೂನ್ 26, 2022
26 °C

ಹಣ್ಣುಗಳನ್ನು ಬಳಸುವ ಬಗೆ

ಡಾ. ಸ್ಮಿತಾ ಜೆ. ಡಿ. Updated:

ಅಕ್ಷರ ಗಾತ್ರ : | |

ಎಲ್ಲರಿಗೂ ತಿಳಿದಂತೆ ಹಣ್ಣು ತರಕಾರಿಗಳು ಆರೋಗ್ಯಕ್ಕೆ ಪೂರಕ. ಅದು ಸಮತೋಲನ ಆಹಾರದ ಒಂದು ಭಾಗ. ಹಣ್ಣುಗಳನ್ನು ಆಹಾರ ಪದ್ಧತಿಯ ಪ್ರಕಾರ ಸೂಪರ್ ಫುಡ್ಸ್ ಎಂದು ಕರೆಯುತ್ತಾರೆ. ಆದರೆ ಹಣ್ಣುಗಳನ್ನು ಸರಿಯಾದ ಸಮಯದಲ್ಲಿ, ಸರಿಯಾದ ಕ್ರಮದಲ್ಲಿ ಬಳಸದಿದ್ದಲ್ಲಿ ಅದರಲ್ಲಿನ ಪೌಷ್ಟಕತೆಯನ್ನು ಶರೀರವು ಪೂರ್ಣವಾಗಿ ಬಳಸಿಕೊಳ್ಳಲು ವಿಫಲವಾಗುತ್ತದೆ. 

***

ದಿನದ ಯಾವ ಸಮಯದಲ್ಲಿ ಹಣ್ಣುಗಳನ್ನು ಸೇವಿಸಬೇಕು?

ಹಣ್ಣುಗಳನ್ನು ಊಟವಾದ ತಕ್ಷಣ ಬಳಸುವುದು ಒಳಿತಲ್ಲ. ಇದಕ್ಕೆ ಮುಖ್ಯ ಕಾರಣ ಹಣ್ಣಿನಲ್ಲಿರುವ ಸಕ್ಕರೆ ಅಂಶ. ಆಹಾರದಲ್ಲಿನ ಕಾರ್ಬೋಹೈಡ್ರೇಟ್ ಹಾಗೂ ಹೊಟ್ಟೆಯಲ್ಲಿನ ಬ್ಯಾಕ್ಟೀರಿಯಾ ಒಂದಾಗಿ ಹುದುಗುವಿಕೆಯಾಗಿ ಆಹಾರ ಪೂರ್ಣವಾಗಿ ಪಚನವಾಗಲು ಕಷ್ಟಕರವಾಗುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸುತ್ತವೆ.

ಹಣ್ಣುಗಳೇ ಒಂದು ವಿಧದ ಆಹಾರ. ಆದುದರಿಂದ ಅವುಗಳನ್ನು ಊಟದ ಜೊತೆಯಲ್ಲಿ ಸೇವಿಸುವ ಅವಶ್ಯಕತೆ ಇರುವುದಿಲ್ಲ. ಆದುದರಿಂದ ಬೆಳಗ್ಗೆ ಎದ್ದೂಡನೆ ಒಂದು ಲೋಟ ನೀರು ಸೇವಿಸಿ ತದನಂತರ ಹಣ್ಣುಗಳನ್ನು ಸೇವಿಸುವ ಅಭ್ಯಾಸವನ್ನು ಮಾಡಿಕೊಂಡಲ್ಲಿ ಅದು ಇಡೀ ಶರೀರವನ್ನು ನಿರ್ವಿಷಗೊಳಿಸುತ್ತದೆ.

ಹಣ್ಣುಗಳನ್ನು ಊಟದ ಅರ್ಧಗಂಟೆ ಮುನ್ನ ಸೇವಿಸಿದಲ್ಲಿ ಹೆಚ್ಚುವರಿ ಆಹಾರ ಸೇವನೆಯನ್ನು ಕಡಿಮೆ ಮಾಡಿ ದೇಹದ ತೂಕವನ್ನು ಕಾಪಾಡಲು ಸಹಕಾರಿಯಾಗುತ್ತದೆ.

ರಾತ್ರಿಯ ಸಮಯದಲ್ಲಿ ನಿದ್ರಿಸುವ ಮುನ್ನ ಹಣ್ಣುಗಳ ಸೇವನೆ ಮಾಡುವುದು ಒಳಿತಲ್ಲ, ರಕ್ತದಲ್ಲಿನ ಸಕ್ಕರೆ ಅಂಶವು ಏರಿ ಶಕ್ತಿಗೊಳಿಸುವುದರಿಂದ ಬಹುಕಾಲ ನಿದ್ರೆ ಬರದೆ ಇರಬಹುದಾಗಿದೆ.

ಹಣ್ಣುಗಳನ್ನು ಸೇವಿಸುವ ಬಗೆ

*ಹಣ್ಣುಗಳನ್ನು ಚೆನ್ನಾಗಿ ನೀರಿನಿಂದ ತೊಳೆದು ಉಪಯೋಗಿಸುವುದು ಉತ್ತಮ.

*ವಿಷಕಾರಿಯಾದ ರಾಸಾಯನಿಕ ಸಿಂಪಡನೆಯಾದ ಹಣ್ಣುಗಳನ್ನು ಉಪ್ಪಿನಿಂದ ಇಲ್ಲವಾದಲ್ಲಿ ಅಡುಗೆ ಸೋಡಾ ಅಥವಾ ವಿನೇಗರ್‌ನಿಂದ ಸ್ವಚ್ಛಗೊಳಿಸುವುದು ಉತ್ತಮ.

*ಹಣ್ಣುಗಳನ್ನು ಕುಯ್ದ ತಕ್ಷಣವೇ ಸೇವಿಸುವುದು ಉತ್ತಮ. ಕುಯ್ದ ಹಣ್ಣುಗಳನ್ನು ಹೆಚ್ಚು ಹೊತ್ತು ವಾತಾವರಣದಲ್ಲಿ ಬಿಟ್ಟರೆ ಅದರಲ್ಲಿನ ಉತ್ಕರ್ಷಣ ನಿರೋಧಕಗಳ (antioxidants) ಕಡಿಮೆಯಾಗಿ ಆರೋಗ್ಯ ಪ್ರಯೋಜನಗಳು ಕಡಿಮೆಯಾಗುತ್ತವೆ. 

*ಹಣ್ಣುಗಳ ಕೆಲ ಭಾಗ ಕೊಳೆತಿದ್ದಲ್ಲಿ ಅಂತಹ ಹಣ್ಣುಗಳನ್ನು ಸೇವಿಸದೇ ಇರುವುದೇ ಉತ್ತಮ. ಕೆಲವರು ಕೊಳೆತ ಭಾಗವನ್ನು ತೆಗೆದು ಉಳಿದ ಹಣ್ಣನ್ನು ಸೇವಿಸುವ ಅಭ್ಯಾಸ ಹೊಂದಿರುತ್ತಾರೆ. ಕೊಳೆತ ಭಾಗದಲ್ಲಿನ ಸೂಕ್ಷ್ಮಜೀವಿಗಳು ಸ್ರವಿಸುವ ಹಾನಿಕಾರಕ ವಸ್ತುವು ಆರೋಗ್ಯಕ್ಕೆ ಹಾನಿಕಾರಕ.

*ಹಣ್ಣುಗಳನ್ನು ಹಣ್ಣಿನ ರೂಪದಲ್ಲಿ ಸೇವಿಸುವುದು ಅತಿ ಉತ್ತಮ. ಅದನ್ನು ಜ್ಯೂಸ್ ಅಥವಾ ಸ್ಮೂದಿ ರೂಪದಲ್ಲಿ ಬಳಸುವುದರಿಂದ ಅನಾವಶ್ಯಕವಾಗಿ ಅದರಲ್ಲಿ ಸಕ್ಕರೆ ಅಂಶವು ಹೆಚ್ಚುತ್ತದೆ. 

*ಫ್ರೋಜನ್ಡ್ ರೂಪದಲ್ಲಿ, ಟಿನ್ ರೂಪದಲ್ಲಿ ಸೇವಿಸುವುದಕ್ಕಿಂತ ಹಣ್ಣುಗಳನ್ನು ತಾಜಾ ರೂಪದಲ್ಲಿ ಸೇವಿಸುವುದು ಉತ್ತಮ. 
ದೈನಂದಿನ ಆಹಾರ ಸೇವನೆಯಲ್ಲಿ ಅರ್ಧಭಾಗದಷ್ಟು ಹಣ್ಣಿನಿಂದ ಕೂಡಿದ್ದರೆ ತೂಕ ಕಾಪಾಡುವುದಲ್ಲದೆ ದೇಹಕ್ಕೆ ಬೇಕಿರುವ ಅವಶ್ಯಕ ಪೌಷ್ಠಕಾಂಶವನ್ನು ಪಡೆಯುವಲ್ಲಿ ಸಫಲರಾಗುತ್ತೇವೆ.
  
ಹಣ್ಣುಗಳು ಆರೋಗ್ಯಕ್ಕೆ ಅತ್ಯವಶ್ಯಕ. ಆದರೆ ಅನೇಕ ಅಧ್ಯಯನಗಳ ಪ್ರಕಾರ ಅದನ್ನು ಸೂಪರ್ ಫುಡ್ ಎಂದು ಬಿಂಬಿಸುತ್ತಾರೆ ಹಾಗೂ ಅದನ್ನು ಸರಿಯಾದ ರೀತಿಯಲ್ಲಿ, ಸರಿಯಾದ ಪ್ರಮಾಣದಲ್ಲಿ , ಸರಿಯಾದ ರೂಪದಲ್ಲಿ ಸೇವಿಸುವುದರಿಂದ ದೇಹಕ್ಕೆ ಬೇಕಾಗಿರುವ ಪೌಷ್ಠಕಾಂಶವನ್ನು ಸಮರ್ಪಕವಾಗಿ ಪಡೆಯಬಹುದಾಗಿದೆ. 
 

(ಲೇಖಕರು: ಡಾ|| ಸ್ಮಿತಾ ಜೆ ಡಿ, ಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು, ಹಿರಿಯ ದಂತ ವೈದ್ಯರು, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಗುಂಡ್ಲುಪೇಟೆ.)

    ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

    ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.