ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ | ಸಂಧಿಕಾಲದ ವ್ಯಾಧಿಯನ್ನು ದೂರವಿಡಿ

Published 8 ಜನವರಿ 2024, 23:30 IST
Last Updated 8 ಜನವರಿ 2024, 23:30 IST
ಅಕ್ಷರ ಗಾತ್ರ

ಚಳಿಗಾಲದ ಅಂತ್ಯದ ಏಳು ದಿನ, ಬೇಸಿಗೆ ಆರಂಭದ ಏಳು ದಿನಗಳ ಈ ಅವಧಿ ಋತು ಸಂಧಿ ಕಾಲವೆನಿಸಿಕೊಳ್ಳಲಿದೆ. ಶೀತ ವಾತಾವರಣದಿಂದ ಬಿಡುಗಡೆ ಹೊಂದುತ್ತ, ಉಷ್ಣ ವಾತಾವರಣಕ್ಕೆ ನಿಧಾನವಾಗಿ ಹೊಂದಿಕೊಳ್ಳುವುದು ಎಂದರ್ಥ. ಚಳಿಗಾಲ–ಬೇಸಿಗೆ ಕಾಲದ ನಡುವಿನ ಈ ಎರಡು ವಾರ ವಿಶೇಷ ಕಾಳಜಿ ವಹಿಸಿದರೆ ಸಂಧಿಕಾಲದ ವ್ಯಾಧಿಯನ್ನು ದೂರವಿಡಲು ಸಾಧ್ಯ.

*****

ಋತುಮಾನ ಬದಲಾವಣೆಗೆ ನಮ್ಮ ದೇಹ ಕೂಡ ಕೆಲವು ಬದಲಾವಣೆಗೆ ಒಗ್ಗಿಕೊಳ್ಳಲೇಬೇಕು. ಇದು ಪ್ರಕೃತಿ ನಿಯಮ. ಚಳಿಗಾಲದಿಂದ ಬೇಸಿಗೆಗೆ ಪ್ರವೇಶ ಪಡೆಯುವ ಸಂಧಿಕಾಲದಲ್ಲಿ ನಮ್ಮ ಆರೋಗ್ಯದಲ್ಲಿ ಏರುಪೇರಾಗುವುದು ಕೂಡ ಸಹಜ. ಶೀತ, ಕೆಮ್ಮು, ಕಫ, ಪಿತ್ತ, ವಾತ, ಜ್ವರ, ಸಂದು ನೋವಿನಂಥ ವ್ಯಾಧಿಗಳು ನಮ್ಮನ್ನ ದೈಹಿಕವಾಗಿ ಬಾಧಿಸುತ್ತವೆ, ಮಾನಸಿಕವಾಗಿ ಕಿರಿಕಿರಿಗೆ ದಾರಿಯಾಗಲಿದೆ. ಒಂದಷ್ಟು ಮುಂಜಾಗ್ರತೆ ವಹಿಸಿದರೆ ಆ ವ್ಯಾಧಿಗಳ ತೀವ್ರತೆಯನ್ನು ಕುಗ್ಗಿಸಬಹುದು. ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸೌರಭ ಎಸ್‌.ಕೆ. ಅವರು ಈ ಕಾಲ ನಿರ್ವಹಿಸುವ ಬಗ್ಗೆ ತಿಳಿಸಿದ್ದಾರೆ.

ಸಂಧಿಕಾಲದ ವ್ಯಾಧಿಗಳೆಂದರೇನು?

ನಾವೀಗ ಚಳಿಗಾಲದ ಅಂತ್ಯದಲ್ಲಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಬೇಸಿಗೆ ಕಾಲಕ್ಕೆ ಕಾಲಿಡಲಿದ್ದೇವೆ. ಅಂದರೆ ಶೀತ ಪ್ರಕೃತಿಯಿಂದ ಉಷ್ಣ ಪ್ರಕೃತಿಗೆ ನಾವು ಒಗ್ಗಿಕೊಳ್ಳಬೇಕಾದ ಕಾಲ. ಇದನ್ನು ಆಯುರ್ವೇದದಲ್ಲಿ ‘ಋತು ಸಂಧಿ’ ಎಂದೂ ಕರೆಯುತ್ತಾರೆ. ಚಳಿಗಾಲದ ಅಂತ್ಯದ ಏಳು ದಿನಗಳ ಜತೆಗೆ ಬೇಸಿಗೆ ಆರಂಭದ ಏಳು ದಿನಗಳೂ ಸೇರಿ ಎರಡು ವಾರಗಳ ಈ ಅವಧಿಯೇ ಸಂಧಿ ಕಾಲವೆನಿಸಿಕೊಳ್ಳಲಿದೆ. ಶೀತ ವಾತಾವರಣದಿಂದ ನಿಧಾನವಾಗಿ ಬಿಡುಗಡೆ ಹೊಂದುತ್ತ, ಉಷ್ಣ ವಾತಾವರಣಕ್ಕೆ ಹೊಂದಿಕೊಳ್ಳುವುದು ಎಂದರ್ಥ.

ಋತುಮಾನ ಬದಲಾವಣೆಯ ಸಮಯದಲ್ಲಿ ನೆಗಡಿ, ಮೂಗು ಕಟ್ಟುವುದು, ಕೆಮ್ಮು ಜ್ವರ ಉಲ್ಬಣಗೊಳ್ಳಲಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಶೀತ, ಕೆಮ್ಮು, ಕಫ, ಜ್ವರ ಬಾಧಿಸುತ್ತಲಿದ್ದರೂ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವ ಕಾರಣ ವ್ಯಾಧಿಯ ತೀವ್ರತೆ ಕುಗ್ಗಿರಲಿದೆ. ಅದೇ ಬೇಸಿಗೆಯಲ್ಲಿ ರೋಗನಿರೋಧಕ ಶಕ್ತಿ ಕುಗ್ಗುವ ಕಾರಣ ಈ ವ್ಯಾಧಿಗಳು ಉಲ್ಬಣಗೊಳ್ಳಲಿದೆ. ಕೆಲವರಿಗೆ ಉಸಿರಾಟದ ತೊಂದರೆ, ಮೂತ್ರವಿಕಾರ, ಮೈಗ್ರೇನ್‌, ಖಿನ್ನತೆ, ಪಿತ್ತ, ವಾಂತಿ, ನಿಶ್ಶಕ್ತಿಯ ರೂಪದಲ್ಲೂ ವ್ಯಾಧಿಗಳು ಬಾಧಿಸಬಹುದು. ಈ ಸಂಧಿ ಕಾಲದ ವ್ಯಾಧಿಗಳು ಎಲ್ಲ ವಯಸ್ಸಿನವರನ್ನೂ ಕಾಡಬಹುದು. ವೃದ್ಧರು, ಮಕ್ಕಳಲ್ಲಿ ತುಸು ಹೆಚ್ಚಿರಲಿದೆ. ನಾವು ಅನುಸರಿಸುವ ಆಹಾರ ಪದ್ಧತಿ, ಜೀವನಕ್ರಮ, ವ್ಯಾಯಾಮ, ಯೋಗದಿಂದ ಈ ವ್ಯಾಧಿಗಳನ್ನು ಹತೋಟಿಯಲ್ಲಿಡಬಹುದು.

ವಸಂತ ಋತುವಿನಲ್ಲಿ ಉಷ್ಣತೆ ಹೆಚ್ಚಿದಾಗ ‘ವಮನ ಚಿಕಿತ್ಸೆ’ ಅಂದರೆ ಔಷಧ ನೀಡಿ ಒತ್ತಾಯಪೂರ್ವಕವಾಗಿ ವಾಂತಿ ಮಾಡಿಸಿ ಆರೋಗ್ಯವನ್ನು ಕಾಪಿಡುವ ಚಿಕಿತ್ಸಾಕ್ರಮ ಆಯುರ್ವೇದದಲ್ಲಿದೆ. ಇನ್ನು ಸಂಧಿಕಾಲದ ವ್ಯಾಧಿಗಳಿಂದ ದೂರವಿರಲು ಮನೆಯಲ್ಲೇ ನಾವು ಕೆಲವು ಮನೆಮದ್ದನ್ನು ಅನುಸರಿಸಬಹುದು. ಮಜ್ಜಿಗೆ ಸೇವನೆ, ನೀರಿನಲ್ಲಿ ಚಂದನ, ಕರ್ಪೂರ, ಲಾವಂಚದ ಬೇರುಗಳನ್ನು ರಾತ್ರಿಪೂರ್ತಿ ನೆನೆಯಿಟ್ಟು ಆ ನೀರನ್ನು ಕುಡಿಯುವುದರಿಂದ ಪಿತ್ತ–ಕಫವನ್ನು ನಿಗ್ರಹಿಸಬಹುದು. ಉಷ್ಣ ಪದಾರ್ಥ ಸೇವನೆ ಕಡಿಮೆಗೊಳಿಸುವುದು. ಪಾನಕ, ಕೋಸಂಬರಿ ಸೇವನೆ ಮಾಡುವುದು. ಜತೆಗೆ ಲಘುಆಹಾರ ಅಂದರೆ ತಿನ್ನಲು ಹಾಗೂ ಜೀರ್ಣಿಸಿಕೊಳ್ಳಲು ಸುಲಭವಾಗಬಲ್ಲ ಆಹಾರಗಳ ಸೇವನೆ ಪಾಲಿಸಬೇಕು. ಉದಾಹರಣೆಗೆ ದಾಲ್‌–ಕಿಚಡಿ ಸೇವನೆ ಮಾಡಬೇಕು.

ಯಾವ ಹಣ್ಣುಗಳನ್ನು ಸೇವಿಸಬಹುದು ಎಂಬ ಪ್ರಶ್ನೆಗೆ ಋತುಮಾನದಲ್ಲಿ ಲಭ್ಯವಾಗುವ ಎಲ್ಲ ಹಣ್ಣುಗಳನ್ನೂ ಸೇವಿಸಬಹುದು. ಯಾವ ಋತುವಿನಲ್ಲಿ ಯಾವ ಹಣ್ಣುಗಳನ್ನು ಸೇವಿಸಬೇಕೆಂಬುದನ್ನು ಪ್ರಕೃತಿಯೇ ನಮಗೆ ನೀಡುತ್ತಿದೆ. ದ್ರಾಕ್ಷಿ, ದಾಳಿಂಬೆ, ಖರ್ಜುರವನ್ನು ಸೇವಿಸಬಹುದು. ದಾಳಿಂಬೆ ಜ್ಯೂಸ್‌ ರೂಪದಲ್ಲಿ ಸೇವಿಸುವುದಕ್ಕಿಂತ ದಾಳಿಂಬೆ ಹಣ್ಣನ್ನು ನಾವೇ ಬಿಚ್ಚಿ, ಅದರಲ್ಲಿನ ಬೀಜಗಳನ್ನು ಜಗಿದು ತಿನ್ನುವುದರಿಂದ ಹೆಚ್ಚಿನ ಪ್ರಯೋಜನವಿದೆ. ದಾಳಿಂಬೆ ಬೀಜ ತಿನ್ನುವಾಗ ವಿವಿಧ ಹಂತಗಳಲ್ಲಿ ಬಾಯಿ, ಕರಳು, ಜಠರ ಅವುಗಳಲ್ಲಿನ ಸಾರವನ್ನು ನಮ್ಮ  ಹೀರಿಕೊಳ್ಳುವುದರಿಂದ ಅದರಿಂದ ಸಿಗುವ ಲಾಭಕ್ಕೆ ಸಾಟಿಯಿಲ್ಲ. ಬೀಜವುಳ್ಳ ಖರ್ಜುರವನ್ನು ತುಪ್ಪದ ಜೊತೆ ಸೇವಿಸುವುದು ಕೂಡ ಉತ್ತಮ. ಎಷ್ಟು ತುಪ್ಪದೊಂದಿಗೆ ಸೇವಿಸಬೇಕು ಎಂಬ ಪ್ರಶ್ನೆಗೆ ಆ ಖರ್ಜುರದಲ್ಲಿರುವ ಬೀಜದ ಪ್ರಮಾಣದಷ್ಟು ತುಪ್ಪ ಸೇವನೆ ಒಂದು ಅಳತೆಗೋಲು. ಸಂಧಿಕಾಲದ ವ್ಯಾಧಿಯನ್ನು ಹತೋಟಿಯಿಡುವಲ್ಲಿ ನಿತ್ಯ ಅಭ್ಯಂಗ ಕೂಡ ಸಹಾಯಕ್ಕೆ ಬರಲಿದೆ. ಎಣ್ಣೆ ಹಚ್ಚಿಕೊಂಡು ಬಿಸಿನೀರಿನ ಸ್ನಾನ ಮೈ–ಮನವನ್ನು ಸ್ವಸ್ಥವಾಗಿಡಲಿವೆ. ದೇಹವನ್ನು ಕಾಡುವ ನೋವುಗಳನ್ನು ಕಡಿಮೆಗೊಳಿಸಿಕೊಳ್ಳಬಹುದು. ಸಂಧಿವಾತದ ಬಾಧೆಯುಳ್ಳವರಲ್ಲೂ ಈ ಸಂಧಿಕಾಲ ನೋವಿನಲ್ಲಿ ಕೊಂಚ ಏರುಪೇರನ್ನುಂಟು ಮಾಡಲಿದೆ. ಚಳಿಗಾಲ–ಬೇಸಿಗೆ ಕಾಲದ ನಡುವಿನ ಈ ಎರಡು ವಾರ ವಿಶೇಷ ಕಾಳಜಿ ವಹಿಸಿದರೆ ಸಂಧಿಕಾಲದ ವ್ಯಾಧಿ ದೂರವಿಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT