ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯದ ಆರೋಗ್ಯ ಸೂತ್ರ

Last Updated 13 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಚೇತನಾಸ್ಥಾನ, ಚಿಂತನಾಕೇಂದ್ರ, ಶಬ್ದ-ಸ್ಪರ್ಶ-ರೂಪ-ರಸ-ಗಂಧದಂತಹ ಇಂದ್ರಿಯವಿಷಯಗಳ ಗ್ರಾಹಕ, ರಸವಹಸ್ರೋತಸ್ಸು, ಪ್ರಾಣವಹಸ್ರೋತಸ್ಸುಗಳ ಮೂಲ; ದಶಮಹಾಧಮನಿಗಳ ಆಶ್ರಯ; ಅಷ್ಟಬಿಂದುರೂಪದ ‘ಓಜಸ್ಸಿ’ನ ನೆಲೆ; ತ್ರಿಮರ್ಮಗಳಲ್ಲಿ ಒಂದು. ಕಟ್ಟಡವನ್ನು ಸ್ಥಿರವಾಗಿಡುವ ಕಂಬ-ಜಂತಿಗಳಂತೆ, ಚಕ್ರದ ನಾಭಿಯಂತೆ ಹೃದಯವೇ ‘ಷಡಂಗ’ಗಳನ್ನು ಜೋಡಿಸಿಡುವ-ಆಧರಿಸುವ ‘ಮರ್ಮ’.

ಆಹಾರ

ಘನ-ದ್ರವಾಹಾರ ಸಾರವೆಲ್ಲಾ ಹೃದಯದ ಮೂಲಕ ಇತರ ಸ್ರೋತಸ್ಸು-ಧಾತುಗಳ ಪುಷ್ಟಿಗಾಗಿ ಅಭಿವಹನಗೊಳ್ಳುತ್ತದೆ. ಆಹಾರಸೇವನೆಯ ಕಾಲ-ವಿಧಾನವನ್ನಾಧರಿಸಿ ಹೃದಯದ ಪೋಷಣೆಯಾಗುತ್ತದೆ.

ಹಸಿವೆ/ಬಾಯಾರಿಕೆಯಾದಾಗ ಏನನ್ನೂ ಸೇವಿಸದೆ ವ್ಯಾಯಾಮ, ಆಯಾಸವಾಗುವಷ್ಟು ಕೆಲಸಮಾಡುವುದು ಹೃದಯವನ್ನು ಶೋಷಿಸುತ್ತದೆ. ದೇಹಬಯಸಿದ್ದು ಆಹಾರವಾದ್ದರಿಂದ ಜೈವಿಕಕರೆಯನ್ನು ಗೌರವಿಸುವುದೇ ಆರೋಗ್ಯಕ್ಕೆ ರಹದಾರಿ.

ಹಸಿವೆ/ಬಾಯಾರಿಕೆಯಿರದಿದ್ದರೂ ದ್ರವ-ಘನಾಹಾರ ಸೇವಿಸುವುದು ಹೃದಯಮಿಡಿತವನ್ನು ಏರುಪೇರುಗೊಳಿಸುತ್ತದೆ. ಇದು ಕಫಜಹೃದ್ರೋಗಕ್ಕೆ ಕಾರಣ. ಪದೇಪದೇ ತಿಂದರೆ ಹೃದಯಗತಿ ಕೆಡುತ್ತದೆ. ನಿಗದಿತ ಎರಡು/ಮೂರು ಆಹಾರಕಾಲದಲ್ಲಿ ಮಾತ್ರ ಸೇವಿಸುವುದು ಕ್ಷೇಮ.

ಗಡಿಬಿಡಿಯಿಂದ ದ್ರವ-ಘನಾಹಾರದ ಪ್ರಮಾಣ ತಪ್ಪುತ್ತದೆ. ಇದು ಅವರೋಧಾತ್ಮಕ ಹೃದ್ರೋಗಕ್ಕೆ ಕಾರಣವಾಗಬಹುದು. ಸಾವಧಾನವಾಗಿ ಸಾವಕಾಶವಾಗಿ ಸೇವಿಸುವುದು ಹಿತಕರ.

ಇಷ್ಟವಿಲ್ಲದ, ಪರಂಪರೆಯಲ್ಲಿ ಅಭ್ಯಾಸವಿರದ ಆಹಾರಸೇವನೆಯಿಂದ ಧಮನಿಗಳು ಒಣಗಬಹುದು. ಶೋಷಣಾತ್ಮಕ ಹೃದ್ರೋಗಕ್ಕೆ ಕಾರಣವಿದು. ತಾಜಾ, ರುಚಿಕರ ಆಹಾರವನ್ನು ಆಪ್ತೇಷ್ಟರ ಜೊತೆಗೆ ಕುಟುಂಬದ ಅಭ್ಯಾಸದಂತೆ ಸೇವಿಸುವುದು ಹಿತಕರ.

ದ್ರವ-ಘನಾಹಾರ ಸೇವಿಸಿದ ತತ್-ಕ್ಷಣ ಸ್ನಾನ, ಕೂಡಲೆ ಪ್ರಯಾಣ, ವ್ಯಾಯಾಮ, ವಾಕಿಂಗ್, ಕೆಲಸ ಮಾಡುವುದು ಹೃದಯದಲ್ಲಿ ಅವರೋಧ ಮತ್ತು ಕ್ಷಯಜ ತೊಂದರೆಗಳಿಗೆ ಕಾರಣ. ಆಹಾರವು ಜೀರ್ಣಕ್ರಿಯೆಯ ಒಂದು ಹಂತವನ್ನು ತಲುಪುವ-ಮುಗಿಸುವವರೆಗೂ ಕಾಯುವುದು. ಎರಡು-ಮೂರು ತಾಸಿನ ನಂತರ ವ್ಯಾಯಾಮ-ಸ್ನಾನ, ಹತ್ತು-ಹದಿನೈದು ನಿಮಿಷಗಳ ನಂತರ ಪ್ರಯಾಣ, ಕೆಲಸವನ್ನು ಆರಂಭಿಸುವುದು ಉತ್ತಮ.

ಒಣಗಿಸುವ ಒಣಕಲು ಆಹಾರ ಹೃದಯಕ್ಕೆ ಆಪತ್ತು. ಡಯಾಬಿಟಿಸ್‌ ಇದೆಯೆಂದು ಮೆಂತ್ಯೆ-ಕಹಿಬೇವು-ಕರಿಬೇವು-ಮಧುನಾಶಿನಿ-ನೇರಳೆಬೀಜ-ಹಾಗಲಕಾಯಿ ಮೊದಲಾದ ಕಹಿ-ಒಗರುರುಚಿಯ ಔಷಧ-ಆಹಾರವನ್ನೇ ಸೇವಿಸುವುದು ಹೃದಯವನ್ನು ಪೀಡಿಸುತ್ತದೆ. ಕ್ರಮೇಣ ವಾತಜಹೃದ್ರೋಗವಾಗುತ್ತದೆ. ಕಡ್ಲೆಪುರಿ, ಪಾಪ್‌ಕಾರ್ನ್, ಜಿಡ್ಡುರಹಿತ ಆಹಾರ, ರಿಫೈನ್ಡ್-ಎಣ್ಣೆಗಳ ಅಡುಗೆ, ಪಾಮ್ಆಯಿಲ್, ಅಕ್ಕಿತೌಡಿನ ಎಣ್ಣೆ (ರೈಸ್-ಬ್ರಾನ್ಆಯಿಲ್), ವೆಜಿಟೇಬಲ್ ಆಯಿಲ್‌ಗಳಂತಹ ಸರಿಯಾಗಿ ಪೋಷಿಸದ, ‌ದೇಹವನ್ನು-ಧಮನಿಗಳನ್ನು ಒಣಗಿಸುವ ಎಣ್ಣೆಗಳ ಬಳಕೆ, ಕ್ಷಾರೀಯ(ಕಾರ್ಬೋನೇಟೆಡ್ ಡ್ರಿಂಕ್ಸ್, ಸೋಡಾ)ಪಾನೀಯ ಸೇವನೆಯ ಅಭ್ಯಾಸ, ತೀಕ್ಷ್ಣ-ಔಷಧಗಳ ಅತ್ಯುಪಯೋಗ ಇವೆಲ್ಲವೂ ಹೃದಯವನ್ನೂ ಆಶ್ರಿತಧಮನಿಗಳನ್ನೂ ಒಣಗಿಸುತ್ತವೆ. ತಮ್ಮ ಸಹಜ ಮೃದುತ್ವವನ್ನು ಕಳೆದುಕೊಂಡು ಒರಟಾಗುತ್ತವೆ. ಇವೆಲ್ಲವೂ ವಾತಜಹೃದ್ರೋಗಕ್ಕೆ ಕಾರಣ. ತಾಜಾ ಬಿಸಿ ಆಹಾರದಲ್ಲಿ ತುಪ್ಪ, ಅಭ್ಯಾಸವಿರುವ ಸೋಸಿದ ಕೊಬ್ಬರಿಎಣ್ಣೆ/ಕಡಲೆಕಾಯಿಎಣ್ಣೆ/ಸಾಸಿವೆಎಣ್ಣೆ/ಎಳ್ಳೆಣ್ಣೆ, ಅಭ್ಯಾಸದಂತೆ ಮಾಂಸರಸ, ಮಜ್ಜೆ ಮೊದಲಾದ ಜಿಡ್ಡುಳ್ಳ ಆಹಾರಸೇವನೆ ಉತ್ತಮ. ಡಯಾಬಿಟಿಸ್ ಅಥವಾ ಯಾವುದೇ ರೋಗವಿರಲಿ, ಔಷಧಕ್ಕಿಂತ ಆಹಾರ-ನಿದ್ರೆ-ಚಟುವಟಿಕೆಯಲ್ಲಾಗುವ ಕಾರಣಗಳನ್ನು ಗುರುತಿಸಿ-ಸರಿಪಡಿಸಿಕೊಳ್ಳುವುದು ರೋಗಪರಿಹಾರಕ್ಕೆ ಉತ್ತಮಮಾರ್ಗ. ಕಾರಣಸರಿಪಡಿಸಿದರೆ ಅತ್ಯಂತ ಕಡಿಮೆ-ಮೃದು ಔಷಧಗಳಿಂದ ಗುಣಮುಖವಾಗಬಹುದು.

ಆಹಾರದಲ್ಲಿ ತುಪ್ಪ-ಹಾಲಿನ ಸಿಹಿಯ ಬಳಕೆ ಹೃದಯಪೋಷಕ. ನಿತ್ಯವೂ ದಾಳಿಂಬೆ-ನೆಲ್ಲಿಕಾಯಿ-ಒಣದ್ರಾಕ್ಷಿಯ ಹುಳಿಯು ಹೃದಯಚೋದಕ. ಸದಾ ಅಡುಗೆಯಲ್ಲಿ ಸೈಂಧವ-ಉಪ್ಪು(ರಾಕ್ ಸಾಲ್ಟ್, ಸೇಂಧಾನಮಕ್) ಹೃದಯಕ್ಕೆ ಕ್ಷೇಮ. ಬೇಸಿಗೆಯಲ್ಲಿ ಚಿಟಿಕೆಚಂದನಹಾಕಿ-ಕಾಯಿಸಿ-ಆರಿಸಿದ ನೀರು, ಅಮೃತಬಳ್ಳಿಯ ಚಿಗುರಿನ ಅಡುಗೆ - ಕಹಿಯನ್ನು ಇಷ್ಟಪಡುವವರ ಹೃದಯಕ್ಕೆ ಆಪತ್ತು ನೀಡದು. ಶುಂಠಿಯ ಉಪಯೋಗದಿಂದ ಖಾರ ತಿನ್ನುವವರ ಬಾಯಿ ಕಟುವಾದರೂ ಹೃದಯಕ್ಕೆ ಸಿಹಿಯಾಗುತ್ತದೆ. ಭರ್ಜರಿ ಭೋಜನವನ್ನು ಸೇವಿಸಿದ್ದರೆ ತಾಂಬೂಲದ ಅಡಿಕೆಯ ಒಗರು, ಆಹಾರಸೇವನೆಯಿಂದಾದ ಹೃದಯದ ಮೇಲಿನ ಒತ್ತಡವನ್ನು ನಿವಾರಿಸುವ ಹೃದಯಬಂಧು.

ಸಕಾಲನಿದ್ರೆಯೇ ಹೃದಯರಕ್ಷಕ

‘ಹಗಲು ದುಡಿಮೆ-ರಾತ್ರಿ ನಿದ್ರೆ’ ಇದು ಬದುಕಿನ ಮೂಲಭೂತನಿಯಮ. ಹಗಲು ಮೈಚಾಚಿ ಮಲಗಿದರೆ ಹೃದಯದಲ್ಲಿ ಅವರೋಧ ಖಚಿತ. ಕೆಲಸದಿಂದ ಆಯಾಸವೆನಿಸಿದರೆ ಕಾಲುಚಾಚಿ, ಆರಾಮವಾಗಿ ಕುಳಿತುಕೊಂಡು ವಿರಮಿಸುವುದು ಉಪಯುಕ್ತ. ಮುಂಜಾನೆ ಸೂರ್ಯೋದಯದ ನಂತರ ನಿದ್ರೆಮಾಡುವುದು ಕೂಡಾ ಹಗಲುನಿದ್ರೆ. ಬಾಹ್ಯಚೋದನೆ, ಅಲಾರಾಂನ ಬಡಿತದಿಂದ ಏಳುವುದು ಹೃದಯಕ್ಕೆ ಹಾನಿ. ಹೃದಯವು ಸಹಜವಾಗಿಯೇ ಎಚ್ಚರವಾಗಬೇಕು. ತಡರಾತ್ರಿನಿದ್ರೆ, ರಾತ್ರಿಕೆಲಸ-ಜಾಗರಣೆ ಹೃದಯವನ್ನು, ಧಮನಿಗಳನ್ನು ಚಿರುಟಿಸುತ್ತದೆ. ವಾತಜಹೃದ್ರೋಗಕ್ಕೆ ಕಾರಣ. ಜೀವನದ ಆದ್ಯತೆಗಳನ್ನು ಮನದಟ್ಟುಮಾಡಿಕೊಂಡು ಬೇಗ ಮಲಗಿ-ಮುಂಜಾನೆಯೇ ಎದ್ದು ಕರ್ತವ್ಯಗಳನ್ನು ಮಾಡುವುದು ಯಾವತ್ತಿಗೂ ಹಿತಕರ. ನೆನಪಿರಲಿ, ನಿರಂತರವಾಗಿ ಮಿಡಿಯುವ ಹೃದಯಕ್ಕೆ ಸಕಾಲರಾತ್ರಿನಿದ್ರೆಯೊಂದೇ ಕಿಂಚಿತ್ ವಿರಾಮಕಾಲ.

ಸ್ವಸ್ಥಹೃದಯಕ್ಕಾಗಿ ನಮ್ಮ ನಡವಳಿಕೆ

ಹೃದಯದ ಸ್ಪಂದನೆ-ಮಿಡಿತಗಳನ್ನು ಹದಗೆಡಿಸುವುದು ಮೋಹ, ದುರಾಸೆ, ಅಸೂಯೆ, ದ್ವೇಷ, ಸಿಟ್ಟು ಮೊದಲಾದ ವಿಪರೀತಭಾವಗಳು. ಇವುಗಳು ನೀಡುವ ಚಡಪಡಿಕೆಯಿಂದ ಚಿಂತೆಯಾಗುತ್ತದೆ. ಅತಿಚಿಂತೆಯಿಂದ ಹೃದಯವೇ ಸೊರಗುವುದು. ಈ ಮನಃಸ್ಥಿತಿಗಳೇ ನಮ್ಮ ದೈನಂದಿನ ಆಹಾರ-ನಿದ್ರೆ-ವ್ಯವಹಾರಗಳಲ್ಲಿನ ಏರುಪೇರುಗಳಿಗೆ ಕಾರಣ. ಅವ್ಯವಸ್ಥಿತಜೀವನ ಮೊದಲು ವ್ಯಕ್ತಿಯನ್ನೇ ಹಿಂಸಿಸುತ್ತದೆ. ಬೇರೆಯವರಿಗೆ ನಂತರದಲ್ಲಿ ಹಿಂಸೆಯಾಗುತ್ತದೆ. ಅಹಿಂಸೆಯಿಂದ ಪ್ರಾಣವನ್ನು ಕಾದಿಡುವ ಹೃದಯವರ್ಧನೆ. ಅನಿಶ್ಚಿತಬದುಕು ಭಯಕ್ಕೆ ಕಾರಣ. ಹೃದಯದ ಬಲವನ್ನು ಭಯವು ಕಸಿದುಕೊಂಡಾಗಲೇ ಡವಡವಬಡಿತ. ಜಂಘಾಬಲವೂ ಕುಸಿಯುವುದು. ವ್ಯವಸ್ಥಿತ-ಸನ್ಮಾರ್ಗದ ಬದುಕು ಸ್ಥೈರ್ಯಕ್ಕೆ ಮೂಲ. ಸರಿ-ತಪ್ಪುಗಳ, ಕಾರ್ಯಕಾರಣಗಳ ವಿವೇಚಿತ ಪರಿಚಯವಿಲ್ಲದಿದ್ದಾಗ ಎಲ್ಲವೂ ಸಂಶಯಾಸ್ಪದ. ಬದುಕಿನಲ್ಲಿ ವಿವೇಚನೆಯಿಂದಾಗಿ ಏಳಿಗೆ ಸಾಧ್ಯ. ಇದು ಹೃದಯಕ್ಕೆ ನಿರಾಳತೆ. ಇಂದ್ರಿಯಗಳ ತುಡಿತಗಳನ್ನೇ ಕಡಿತಗೊಳಿಸಿದರೆ ದುಃಖಕ್ಕೆಲ್ಲಿ ಅವಕಾಶವಿರುತ್ತದೆ? ಆಸೆ ಮೊಟಕಾದಷ್ಟೂ ಕಮ್ಮಿನಿರಾಸೆ. ನಲಿವು ಹೃದಯದಲ್ಲಿ ನೆಲೆಸುತ್ತದೆ. ಸಮಚಿತ್ತದಲ್ಲಿದ್ದಾಗ ಹೃದಯಕ್ಕೆ ಚೇತರಿಕೆ ನೀಡುವ ಚಿಂತನೆ ಸಾಧ್ಯ. ಇದರಿಂದ ಬದುಕಿಗೊಂದು ಧೈರ್ಯ-ಧ್ಯೇಯ ದೊರಕುತ್ತದೆ. ಸದಾ ನಮ್ಮೊಳಗಿನ ಈ ಸ್ಥಿತಿಯಿಂದ ಖುಷಿಯಾಗಿರಲು ಸಾಧ್ಯ. ಇಂತಹ ಹೃದಯವೈಶಾಲ್ಯತೆ ಸದಾ ಜಾರಿಯಲ್ಲಿದ್ದರೆ ಬದುಕೆಲ್ಲಿದೆಯೋ ಅಲ್ಲೇ ಸ್ವರ್ಗ. ನಮಗಾಗಿ ಸ್ಪಂದಿಸುವ ಹೃದಯಕ್ಕೆ ಸ್ಪಂದಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT