ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮ್ಮನಾಗುವಾಗ ಅಧಿಕ ರಕ್ತದ ಒತ್ತಡವೇ?

Published 31 ಮೇ 2024, 19:53 IST
Last Updated 31 ಮೇ 2024, 19:53 IST
ಅಕ್ಷರ ಗಾತ್ರ

ಇಂದಿನ ದಿನಗಳಲ್ಲಿ ರಕ್ತದೊತ್ತಡದ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಹೀಗೆ ರಕ್ತದೊತ್ತಡ ಸಮಸ್ಯೆ ಕಾಡುವುದಕ್ಕೆ ಕಾರಣಗಳು ಹಲವು. ಅದರಲ್ಲಿಯೂ ಮುಖ್ಯವಾಗಿ ನಮ್ಮ ಜೀವನ ಶೈಲಿ, ಆಹಾರ ಕ್ರಮ, ದೈಹಿಕ ಚಟುವಟಿಕೆಗಳು ಹೀಗೆ ಮುಂತಾದ ಕಾರಣಗಳಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗರ್ಭಿಣಿಯರಲ್ಲಿ ರಕ್ತದೊತ್ತಡ ಸಮಸ್ಯೆ ಕಂಡುಬಂದರೆ ಹೆಚ್ಚಿನ ಅಪಾಯಗಳು ಉಂಟಾಗುತ್ತವೆ. ಇದರಿಂದ ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಗರ್ಭಾವಸ್ಥೆಯಲ್ಲಿ 4 ವಿಧವಾದ ಅಧಿಕ ರಕ್ತದೊತ್ತಡಗಳಿರುತ್ತವೆ. ದೀರ್ಘಕಾಲದ ಅಧಿಕ ರದ್ತದೊತ್ತಡ, ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡ, ಪ್ರಿಕ್ಲಾಂಪ್ಸಿಯಾ ಮತ್ತು ಎಕ್ಲಾಂಪ್ಸಿಯಾ. ದೀರ್ಘಕಾಲದ ಅಧಿಕ ರಕ್ತದೊತ್ತಡವು ಗರ್ಭಾವಸ್ಥೆಯ ಮೊದಲು ಅಂದರೆ ಗರ್ಭಧಾರಣೆಯ 20 ವಾರಗಳ ಒಳಗೆ ಕಂಡು ಬರುತ್ತದೆ. ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡವು 20 ವಾರಗಳ ನಂತರ ಕಂಡು ಬರುತ್ತದೆ. ಇದರಿಂದ ಯಾವುದೇ ಅಂಗಾಂಗಕ್ಕೆ ಹಾನಿಯಾಗುವುದಿಲ್ಲ ಜೊತೆಗೆ ಮೂತ್ರದಲ್ಲಿಯೂ ಪ್ರೊಟೀನ್‌ ನಷ್ಟವಾಗುವುದಿಲ್ಲ. ಪ್ರಿಕ್ಲಾಂಪ್ಸಿಯಾವು 20 ವಾರಗಳ ಗರ್ಭಾವಸ್ಥೆಯ ನಂತರ ಕಂಡು ಬರುವ ಅಧಿಕ ರಕ್ತದೊತ್ತಡವಾಗಿದ್ದು, ಇದರಿಂದ ಅಂಗಾಂಗಗಳಿಗೆ ಹಾನಿಯಾಗುವುದರ ಜೊತೆಗೆ ಮೂತ್ರದ ಮೂಲಕ ಪ್ರೊಟೀನ್‌ ಅಂಶ ಹೊರಹೋಗುತ್ತದೆ. ಎಕ್ಲಾಂಪ್ಸಿಯಾ ಅಂದರೆ ಅಧಿಕ ರಕ್ತದೊತ್ತಡದಿಂದ ಗಂಭೀರ ಸ್ಥಿತಿಗೆ ತಲುಪುವ ಸಂಭವವಿರುತ್ತದೆ.

ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡದಿಂದ ತಾಯಿ ಮತ್ತು ಮಗುವಿಗೆ ಹಲವು ತೊಂದರೆಗಳಾಗುತ್ತವೆ. ಗರ್ಭಾಪಾತ, ಅಕಾಲಿಕ ಹೆರಿಗೆ, ಮೂತ್ರಪಿಂಡದ ಸಮಸ್ಯೆ ಜೊತೆಗೆ ಪಾರ್ಶ್ವವಾಯು ಕೂಡಾ ಕಾಡಬಹುದು. ಅವಧಿಗೆ ಮುನ್ನ ಜನಿಸಿದ ಹಾಗೂ ಕಡಿಮೆ ಜನನ ತೂಕ ಮತ್ತು ಪ್ರಸವಪೂರ್ವ ಹೈಪೋಕ್ಸಿಯಾದಿಂದ ಮಗುವಿಗೆ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ಪಡೆದುಕೊಳ್ಳಲು ಕಷ್ಟವಾಗುತ್ತದೆ.

ಯಾರಿಗೆ ಹೆಚ್ಚು ಸಮಸ್ಯೆ?

ಮೊದಲ ಬಾರಿ ಗರ್ಭಧರಿಸಿರುವವರಿಗೆ, ಈ ಮೊದಲು ಗರ್ಭಿಣಿಯಾದಾಗ ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿದ್ದರೆ, ದೀರ್ಘಕಾಲದ ಅಧಿಕ ರಕ್ತದೊತ್ತಡ ಅಥವಾ ಮೂತ್ರಪಿಂಡ ಸಮಸ್ಯೆ, ಗರ್ಭದಲ್ಲಿ ಅವಳಿ ಮಕ್ಕಳನ್ನು ಹೊಂದಿದ್ದಲ್ಲಿ, ಆನುವಂಶೀಯವಾಗಿ ಅಧಿಕ ರಕ್ತದೊತ್ತಡ ಸಮಸ್ಯೆಯಿದ್ದಲ್ಲಿ, ಸ್ಥೂಲಕಾಯ, ಮಧುಮೇಹಿಗಳಿಗೆ ಮತ್ತು 40 ವರ್ಷ ವಯೋಮಿತಿಯ ಮಹಿಳೆಯರಿಗೆ ಹೆಚ್ಚಿನ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ.

ಗರ್ಭಾವಸ್ಥೆಯಲ್ಲಿ ಕಂಡುಬರುವ ಅಧಿಕ ರಕ್ತದೊತ್ತಡದ ಲಕ್ಷಣಗಳೇನು?

ತಲೆನೋವು, ದೃಷ್ಟಿ ಮಂದವಾಗುವುದು, ವಾಕರಿಕೆ ಮತ್ತು ವಾಂತಿ, ಮುಖ ಮತ್ತು ಕೈಗಳ ಊತ, ಹಠಾತ್ ತೂಕ ಹೆಚ್ಚಾಗುವುದು ಮತ್ತು ಉಸಿರಾಟದ ತೊಂದರೆಗಳು ಕಂಡುಬರುತ್ತವೆ. ಗರ್ಭಾವಸ್ಥೆಗೂ ಮುನ್ನ ರಕ್ತದೊತ್ತಡ ಸಮಸ್ಯೆಯನ್ನು ಹೇಗೆ ನಿಯಂತ್ರಿಸಬೇಕು, ಆರೋಗ್ಯಕರ ತೂಕ ಹೊಂದುವುದು, ಆಹಾರ ಪದ್ಧತಿ ಸರಿಯಿರಬೇಕು. ಉದ್ಯೋಗಸ್ಥ ಮಹಿಳೆಯರು ಉತ್ತಮ ಜೀವನಶೈಲಿ ಅಳವಡಿಸಿಕೊಂಡರೆ ಗರ್ಭಾವಸ್ಥೆಯಲ್ಲಿ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಿಸಬಹುದು.

ಅತಿಯಾದ ಬೊಜ್ಜು ಹೊಂದಿರುವ ಹಾಗೂ ಸಕ್ರಿಯ ಜೀವನಶೈಲಿ ಹೊಂದಿರದ ಮಹಿಳೆಯರು ಗರ್ಭಾವಸ್ಥೆಯಲ್ಲಿ ತಮ್ಮ ಅಧಿಕ ರಕ್ತದೊತ್ತಡ ನಿರ್ವಹಿಸಲು ಕಷ್ಟಪಡುತ್ತಾರೆ. ಹೀಗಾಗಿ ಚಟುವಟಿಕೆಯಿಂದಿರಿ. ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳನ್ನು ತ್ಯಜಿಸಬೇಕು. ಇವುಗಳಿಂದ ರಕ್ತದೊತ್ತಡ ಗಣನೀಯವಾಗಿ ಹೆಚ್ಚುತ್ತದೆ.

ಉದ್ಯೋಗಸ್ಥ ಮಹಿಳೆಯರು ಮನೆಯಲ್ಲದೇ ಉದ್ಯೋಗವನ್ನು ನಿರ್ವಹಿಸಬೇಕಾಗಿರುವುದರಿಂದ ಹೆಚ್ಚಿನ ಒತ್ತಡವನ್ನು ಅನುಭವಿಸುತ್ತಾರೆ. ಇಂಥ ಮಹಿಳೆಯರು ಗರ್ಭ ಧರಿಸಿದರೆ, ರಕ್ತದೊತ್ತಡ ನಿಯಂತ್ರಣ ಮಾಡಲು ಹೆಚ್ಚು ಕಾಳಜಿ ವಹಿಸಬೇಕು. ಹಾಗಾದಾಗ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ.

ಡಾ. ಚೇತನ್ ಟಿ ಎಲ್. ಬೆಂಗಳೂರಿನ ಕಿಂಡರ್‌ ಆಸ್ಪತ್ರೆಯ ಇಂಟರ್‌ನಲ್‌ ಮೆಡಿಸಿನ್‌ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT