ಸೋಮವಾರ, ಏಪ್ರಿಲ್ 19, 2021
32 °C

ಎಚ್‌ಐವಿ: ರೋಗನಿರೋಧಕ ಶಕ್ತಿಗೆ ಸಮತೋಲಿತ ಆಹಾರ

ಡಾ. ಸುಬ್ರತಾ ದಾಸ್ Updated:

ಅಕ್ಷರ ಗಾತ್ರ : | |

Prajavani

ಎಚ್‌ಐವಿ ಪೀಡಿತರು ರಕ್ತಹೀನತೆಯಿಂದ ಬಳಲುವ ಸಾಧ್ಯತೆ ಅಧಿಕ. ಜೊತೆಗೆ ಅತಿಸಾರ, ಜ್ವರದ ಬಾಧೆಗಳು ಸಾಮಾನ್ಯ. ಚಯಾಪಚಯ ಕ್ರಿಯೆಯೂ ನಿಧಾನವಾಗುತ್ತದೆ. ಇಂಥವರು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುವುದು ಅತ್ಯಂತ ಮುಖ್ಯವಾದದ್ದು.

ಎಚ್‌ಐವಿ (ಹ್ಯೂಮನ್ ಇಮ್ಯುನೊ ಡೆಫಿಷಿಯನ್ಸಿ ವೈರಸ್) ದೇಹದಲ್ಲಿನ ಟಿ-ಕೋಶಗಳನ್ನು (ನಮ್ಮ ರೋಗ ನಿರೋಧಕ ಶಕ್ತಿಯನ್ನು ಆರೋಗ್ಯಕರವಾಗಿರಿಸುವ ಕೋಶ) ನಾಶಪಡಿಸುತ್ತದೆ ಎಂಬುದು ಗೊತ್ತಿರುವಂತಹ ಸಂಗತಿ. ಇದರಿಂದ ಸೋಂಕುಗಳು ಮತ್ತು ರೋಗಗಳ ಜತೆ ಹೋರಾಡುವ ನಮ್ಮ ದೇಹದ ಸಾಮರ್ಥ್ಯಕ್ಕೆ ಅಡ್ಡಿಯಾಗುತ್ತದೆ. ಎಚ್‌ಐವಿ ಗಂಭೀರವಾದ, ಜೀವಕ್ಕೆ ಅಪಾಯ ತಂದೊಡ್ಡುವ ಸ್ಥಿತಿಯನ್ನು ತಲುಪಿದಾಗ ಅಕ್ವೈರ್ಡ್ ಇಮ್ಯುನೊ ಡೆಫಿಷಿಯನ್ಸಿ ಸಿಂಡ್ರೋಮ್ (ಏಡ್ಸ್) ಎಂದು ಕರೆಯಲಾಗುತ್ತದೆ. ಎಚ್‌ಐವಿ ಸೋಂಕಿನಿಂದ ಬಳಲುತ್ತಿರುವ ರೋಗಿಗಳು ಇತರ ಸೋಂಕಿಗೆ ಗುರಿಯಾಗುವುದು ಮತ್ತು ತೂಕ ನಷ್ಟ, ಜ್ವರ, ಅತಿಸಾರದಿಂದ ಬಳಲುವುದು ಜಾಸ್ತಿ. ಈ ಅಪಾಯಗಳು ಆಹಾರವನ್ನು ಜೀರ್ಣಿಸಿಕೊಳ್ಳುವ ದೇಹದ ಸಾಮರ್ಥ್ಯಕ್ಕೆ ಅಡ್ಡಿಪಡಿಸುವುದರಿಂದ ಹಸಿವನ್ನು ಕಳೆದುಕೊಳ್ಳಬಹುದು. ಇದರಿಂದಾಗಿ ದೇಹದ ಚಯಾಪಚಯ ಶಕ್ತಿ ಕ್ಷೀಣವಾಗುತ್ತದೆ ಮತ್ತು ಕೊಲೆಸ್ಟ್ರಾಲ್‌ ಮಟ್ಟ ದೇಹದಲ್ಲಿ ಹೆಚ್ಚಾಗುತ್ತದೆ.

ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವಲ್ಲಿ ಉತ್ತಮ ಮತ್ತು ಸಮತೋಲಿತ ಪೌಷ್ಟಿಕಾಂಶವು ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸದೃಢವಾಗಿಟ್ಟುಕೊಳ್ಳುವ ಮೂಲಕ ಎಚ್‌ಐವಿ ಪೀಡಿತ ವ್ಯಕ್ತಿಯು ಸೋಂಕುಗಳ ವಿರುದ್ಧ ಹೋರಾಡಬೇಕಾಗುತ್ತದೆ. ಅಲ್ಲದೆ, ಇದು ದೇಹದ ತೂಕವನ್ನು ನಿಯಂತ್ರಿಸಲು ಮತ್ತು ಎಚ್‌ಐವಿ ಔಷಧಿಗಳನ್ನು ಅರಗಿಸಿಕೊಳ್ಳಲು ಮತ್ತು ಅಡ್ಡಪರಿಣಾಮಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಎಚ್‌ಐವಿ ಔಷಧಿಗಳನ್ನು ಆ್ಯಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ) ಎಂದೂ ಕರೆಯಲಾಗುತ್ತದೆ. ಆರೋಗ್ಯಕರ ವೈರಸ್ ನಾಶವಾಗದಂತೆ ತಡೆಯುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುವ ಆರೋಗ್ಯಕರ ಆಹಾರ ಯೋಜನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯ.

ತರಕಾರಿ– ಹಣ್ಣುಗಳು, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು, ಸರಳ ಮತ್ತು ಕಡಿಮೆ ಕೊಬ್ಬಿರುವ ಪ್ರೊಟೀನ್‌ಗಳನ್ನು ಆಯ್ಕೆ ಮಾಡುವುದು ಉತ್ತಮ. ಸಕ್ಕರೆ ಹೆಚ್ಚಾಗಿ ಬೆರೆಸಿದ ಸಿಹಿತಿಂಡಿಗಳು, ತಂಪು ಪಾನೀಯಗಳು ಮತ್ತು ಆಹಾರಗಳ ಸೇವನೆಯನ್ನು ಮಿತಿಗೊಳಿಸಿ. ಎಲ್ಲಾ ವಿಧದ ಊಟ ಮತ್ತು ತಿಂಡಿಗಳಲ್ಲಿ ಪ್ರೊಟೀನ್‌ಗಳು, ಕಾರ್ಬೊಹೈಡ್ರೇಟ್‌ಗಳು ಮತ್ತು ಒಳ್ಳೆಯ ಕೊಬ್ಬನ್ನು ಸೇರಿಸುವುದು ಒಳ್ಳೆಯದು.

ಈ ಕೆಳಗಿನವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಆ್ಯಂಟಿಆಕ್ಸಿಡೆಂಟ್‌ಗಳು

ಆ್ಯಂಟಿಆಕ್ಸಿಡೆಂಟ್‌ಗಳು ರೋಗ ನಿರೋಧಕ ಶಕ್ತಿಯನ್ನು ರಕ್ಷಿಸುತ್ತವೆ. ಹಣ್ಣುಗಳು ಮತ್ತು ತರಕಾರಿಗಳಾದ ಬೆರಿಹಣ್ಣು, ಸ್ಟ್ರಾಬೆರಿ, ಬೀನ್ಸ್, ಪಾಲಕ್‌, ಬೀಟ್ರೂಟ್‌, ಕ್ಯಾರೆಟ್, ಸಿಹಿಗೆಣಸು, ಹಸಿರು ಸೊಪ್ಪು ಮತ್ತು ತರಕಾರಿಗಳು, ಬೆಳ್ಳುಳ್ಳಿ ಇತ್ಯಾದಿಗಳಲ್ಲಿ ಆ್ಯಂಟಿಆಕ್ಸಿಡೆಂಟ್‌ ಅಧಿಕವಾಗಿದೆ. ಇವುಗಳನ್ನು ನಿತ್ಯದ ಆಹಾರದಲ್ಲಿ ಸೇರಿಸುವುದು ಮುಖ್ಯ.

ವಿಟಮಿನ್ ಮತ್ತು ಖನಿಜಯುಕ್ತ ಆಹಾರ

ಜೀವಸತ್ವಗಳು ಮತ್ತು ಖನಿಜಗಳು ದೇಹವನ್ನು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತವೆ. ಅದನ್ನು ಆರೋಗ್ಯವಾಗಿಡಲು ಮತ್ತು ವಿವಿಧ ಕಾಯಿಲೆಗಳಿಂದ ರಕ್ಷಿಸಲು ನೆರವಾಗುತ್ತವೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಡಿಮೆ ಕೊಬ್ಬಿನ ಕ್ಷೀರೋತ್ಪನ್ನಗಳು ಸರಳ ಪ್ರೊಟೀನ್, ವಿಟಮಿನ್ ಮತ್ತು ಖನಿಜಗಳ ಮೂಲಗಳು. ನಿಮ್ಮ ಆಹಾರದಲ್ಲಿ ಸೋಯಾ ಹಾಲು, ಹಸುವಿನ ಹಾಲು, ಮೊಸರು, ಚೀಸ್, ಕಲ್ಲಂಗಡಿ, ಸಂಪೂರ್ಣ ಮತ್ತು ಪೌಷ್ಟಿಕಾಂಶವಿರುವ ಧಾನ್ಯಗಳು ಮತ್ತು ಸಿರಿಧಾನ್ಯಗಳು, ಮಾಂಸ, ಕೋಳಿ, ಮೀನು, ಬ್ರೊಕೋಲಿ, ಅವಕಾಡೊ, ಅಣಬೆಗಳು ಮುಂತಾದ ಆಹಾರ ಪದಾರ್ಥಗಳನ್ನು ಸೇವಿಸಿ.

ಆರೋಗ್ಯಕರ / ಟ್ರಾನ್ಸ್ ಕೊಬ್ಬುಗಳು

ಇವು ಹೃದಯಕ್ಕೆ ಒಳ್ಳೆಯದು. ಕೊಲೆಸ್ಟ್ರಾಲ್ ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತವೆ. ಆರೋಗ್ಯಕರ ಕೊಬ್ಬುಗಳು ಆರೋಗ್ಯಕರ ಆಹಾರದ ಪ್ರಮುಖ ಭಾಗ ಎನ್ನಬಹುದು. ನಿಮ್ಮ ನಿಯಮಿತ ಆಹಾರ ಸೇವನೆಯಲ್ಲಿ ಬೀಜಗಳು, ಸಸ್ಯಜನ್ಯ ಎಣ್ಣೆಗಳು ಮತ್ತು ಅವಕಾಡೊವನ್ನು ಸೇರಿಸಿ. ಕಾರ್ಬೊಹೈಡ್ರೇಟ್‌ಗಳು ಮತ್ತು ಪ್ರೊಟೀನ್‌ಗಳಿಗೆ ಹೋಲಿಸಿದರೆ, ಕೊಬ್ಬು ಪ್ರತಿ ಗ್ರಾಂಗೆ ಎರಡು ಪಟ್ಟು ಕ್ಯಾಲೊರಿಗಳನ್ನು ಹೊಂದಿರುತ್ತದೆ ಎಂಬುದನ್ನು ಗಮನಿಸಬೇಕು, ಆದ್ದರಿಂದ ಎಚ್‌ಐವಿ ಸೋಂಕಿನಿಂದ ಬಳಲುತ್ತಿರುವವರು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸರಿಯಾದ ಪ್ರಮಾಣದ ಕೊಬ್ಬನ್ನು ತಿನ್ನುವುದು ಮುಖ್ಯ.

ಆರೋಗ್ಯಕರ ಆಹಾರವು ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು, ಎಚ್‌ಐವಿ ರೋಗಲಕ್ಷಣಗಳನ್ನು ಕಡಿಮೆ ಮಾಡಲು, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುವ ಮೂಲಕ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿ ಆರೋಗ್ಯಕರ ಆಹಾರವನ್ನು ಸೇವಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಆದಾಗ್ಯೂ, ಎಚ್‌ಐವಿ ಪೀಡಿತರು ಕಡಿಮೆ ತೂಕ ಅಥವಾ ಅಧಿಕ ತೂಕ ಹೊಂದಿದ್ದರೆ, ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವಾಗ ಅಲರ್ಜಿ ಅಥವಾ ಔಷಧದ ಅಡ್ಡಪರಿಣಾಮಗಳ ಅನುಭವಗಳನ್ನು ಹೊಂದಿದ್ದರೆ ಸರಿಯಾದ ಆಹಾರದ ಬಗ್ಗೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಒಳಿತು.

ಸರಳ ಪ್ರೊಟೀನ್‌

ಪ್ರೊಟೀನ್‌ಗಳು ಮೂಳೆಗಳು, ಸ್ನಾಯುಗಳು, ಕಾರ್ಟಿಲೆಜ್, ಚರ್ಮ ಮತ್ತು ರಕ್ತದ ಬಿಲ್ಡಿಂಗ್ ಬ್ಲಾಕ್ಸ್ ಇದ್ದಂತೆ. ದೇಹದಲ್ಲಿನ ಕೋಶಗಳನ್ನು ತಯಾರಿಸಲು, ಸರಿಪಡಿಸಲು ಮತ್ತು ನಿರ್ವಹಿಸಲು ಇದು ಅಗತ್ಯ. ಸರಳ ಪ್ರೊಟೀನ್‌ನ ಮೂಲಗಳಾದ ಗೋಮಾಂಸ, ಕೋಳಿ, ಮೀನು, ಮೊಟ್ಟೆ, ಬೀನ್ಸ್, ಬೀಜಗಳು ಮತ್ತು ಬೇಳೆಕಾಳುಗಳು ದೇಹವು ಸ್ನಾಯುಗಳನ್ನು ಬಲಪಡಿಸಲು ಮತ್ತು ಬಲವಾದ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಎಚ್‌ಐವಿ ಪೀಡಿತರು ಕಡಿಮೆ ತೂಕ ಹೊಂದಿದ್ದರೆ ಅಥವಾ ರೋಗದ ಕೊನೆಯ ಹಂತದಲ್ಲಿದ್ದರೆ ಹೆಚ್ಚಿನ ಪ್ರೊಟೀನ್ ಸೇವಿಸಬೇಕಾಗುತ್ತದೆ.

(ಲೇಖಕರು ಹಿರಿಯ ಸಲಹೆಗಾರರು, ಆಂತರಿಕ ಔಷಧ ಹಾಗೂ ಮಧುಮೇಹಶಾಸ್ತ್ರ, ಸಕ್ರ ವರ್ಲ್ಡ್ ಆಸ್ಪತ್ರೆ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು