ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಬೇಗೆಗೆ ಬಾಡದಿರಲಿ ಮಕ್ಕಳ ಮೊಗ್ಗಿನ ಮನಸು

Last Updated 23 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಕಳೆದ ಒಂದು ವರ್ಷದಿಂದ ಇರುವ ಪರಿಸ್ಥಿತಿ ಬಹಳಷ್ಟು ಒಳ್ಳೆಯ ವಿಷಯಗಳನ್ನು ಕಲಿಸಿಕೊಟ್ಟಿದೆ. ಬದುಕಿನಲ್ಲಿ ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ ಲಕ್ಷ್ಯ ವಹಿಸುವುದು, ಆರೋಗ್ಯ ಮತ್ತು ಸ್ವಚ್ಛತೆ ಕಡೆ ಗಮನ ಹರಿಸುವುದು, ಶಿಸ್ತಿನಿಂದ ಜೀವನ ನಡೆಸುವುದು... ಹೀಗೆ ಕಲಿತಿರುವುದನ್ನು ಪಟ್ಟಿ ಮಾಡುತ್ತ ಹೋಗಬಹುದು. ಇದರ ಹೊರತಾಗಿ ಕೆಲವು ಪೋಷಕರು ಕಚೇರಿ ಕೆಲಸ ಮತ್ತು ಮನೆಯ ಕೆಲಸದಲ್ಲಿ ಸಮತೋಲನ ಸಾಧಿಸುತ್ತಲೇ ಮಕ್ಕಳಿಗಾಗಿ ಸಮಯ ಮೀಸಲಿಟ್ಟು ಅವರ ಮನದಲ್ಲಿನ ಭಯವನ್ನು ಹೋಗಲಾಡಿಸಲು ಯತ್ನಿಸಿರಬಹುದು.

ಒಂದು ಅಧ್ಯಯನದ ಪ್ರಕಾರ, ಕಳೆದ ವರ್ಷ ಲಾಕ್‌ಡೌನ್‌ ಸಮಯದಲ್ಲಿ ಪೋಷಕರು ತಮ್ಮ ಕೆಲಸದ ನಡುವೆ ಮಕ್ಕಳಿಗೆ ಸಮಯ ಮೀಸಲಿಟ್ಟಿದ್ದು ಕಡಿಮೆ. ಲಾಕ್‌ಡೌನ್‌ಗಿಂತ ಮುಂಚೆ ಶೇ 70ರಷ್ಟು ಪೋಷಕರು ಸಂಜೆ 7ರ ನಂತರ ತಮ್ಮ ಮಕ್ಕಳ ಜೊತೆ ಬಿಡುವಾಗಿ ಮಾತನಾಡುತ್ತ, ಆಟವಾಡುತ್ತ, ಹೊರಗಡೆ ತಿನ್ನಲು, ಶಾಪಿಂಗ್‌ ಮಾಡಲು ಕರೆದುಕೊಂಡು ಹೋಗುತ್ತಿದ್ದರು. ಆದರೆ ಲಾಕ್‌ಡೌನ್‌ ನಂತರ ಇಂತಹ ಪೋಷಕರ ಸಂಖ್ಯೆ ಶೇ 30ಕ್ಕಿಂತಲೂ ಕಡಿಮೆ ಎನ್ನುತ್ತದೆ ಸಮೀಕ್ಷೆ.

ಮನೆಯಲ್ಲಿ ಇದ್ದರೂ ಕೂಡ ಮಕ್ಕಳ ಜೊತೆ ಸಮಯ ಕಳೆಯುವುದು ದುಸ್ತರವಾಗಿದೆ. 2020 ಕಳೆದು ಈಗ 21ಕ್ಕೆ ಕಾಲಿಟ್ಟು ನಾಲ್ಕು ತಿಂಗಳುಗಳು ಮುಗಿಯುತ್ತ ಬಂತು. ಈಗ ಶುರುವಾಗಿರುವ ಕೋವಿಡ್‌ನ ಎರಡನೆಯ ಅಲೆ ಮತ್ತೆ ಅಂಥದೇ ಪರಿಸ್ಥಿತಿ ತಂದೊಡ್ಡಿದೆ. ಹಾಗಂತ ಕೊರಗುತ್ತ ಕುಳಿತುಕೊಳ್ಳುವ ಬದಲು ಮಕ್ಕಳ ಜೊತೆ ಸಂವಹನ ನಡೆಸುವುದು, ಸಮಯ ಕಳೆಯುವುದರತ್ತ ಗಮನ ಹರಿಸಿದರೆ ನಮ್ಮ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ.

ಕುಟುಂಬದವರ ಜೊತೆಗೆ ಇದ್ದ ಮಾತ್ರಕ್ಕೆ ಅವರ ಜೊತೆ ಒಳ್ಳೆಯ ರೀತಿಯಲ್ಲಿ ಸಮಯ ಕಳೆಯುವುದು ಸಾಧ್ಯವೆ ಎಂಬ ಪ್ರಶ್ನೆಯೂ ಏಳಬಹುದು. ಆದರೆ ಕೆಲವೊಂದು ಹೊಂದಾಣಿಕೆ ಮಾಡಿಕೊಂಡರೆ ಖಂಡಿತ ಸಾಧ್ಯ. ಹಾಗೆಯೇ ಬಹುತೇಕರಿಗೆ ಕುಟುಂಬದ ಜೊತೆ ಸೇರುವುದು ಎಂದರೆ ತಮಾಷೆ, ಮನರಂಜನೆಯ ವಿಷಯ. ಆದರೆ ಕುಟುಂಬ ಒಟ್ಟಾಗಿ ಸೇರುವುದು ಎಂದರೆ ಇದಕ್ಕಿಂತ ಹೆಚ್ಚಿನ ಲಾಭಗಳಿವೆ.

ಸಂವಹನ ಕೌಶಲವನ್ನು ಹೆಚ್ಚಿಸುತ್ತದೆ: ಮಕ್ಕಳ ಜೊತೆ ಹೆಚ್ಚು ಸಂವಹನ ಮಾಡುತ್ತ ಹೋದಂತೆ ಅವರೂ ಕೂಡ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಹೊಸ ಶಬ್ದಗಳನ್ನು ಕಲಿಯುವತ್ತ ಆಸಕ್ತಿ ತೋರುತ್ತಾರೆ.

ಬಾಂಧವ್ಯ ಗಟ್ಟಿಯಾಗುತ್ತದೆ: ಚಿಕ್ಕ ಮಕ್ಕಳು ತಂದೆ– ತಾಯಿ ಅಥವಾ ಅಜ್ಜ– ಅಜ್ಜಿಯ ಜೊತೆ ಹೆಚ್ಚು ಸಮಯ ಕಳೆದರೆ ಅವರ ಮಧ್ಯೆ ಬಾಂಧವ್ಯ ಗಟ್ಟಿಯಾಗುವುದಲ್ಲದೇ ಪರಸ್ಪರ ನಂಬಿಕೆ ಹೆಚ್ಚುತ್ತದೆ. ಮಕ್ಕಳು ಇದರಿಂದ ನಿಮ್ಮ ಮಾತು ಕೇಳುವುದು, ಉತ್ತಮ ನಡವಳಿಕೆ ತೋರುವುದು ಹೆಚ್ಚಾಗುತ್ತದೆ.

ಓದಿನಲ್ಲೂ ಮುಂದೆ: ಕುಟುಂಬದವರ ಜೊತೆ ಹೆಚ್ಚು ಬೆರೆಯುವ ಮಕ್ಕಳು ಓದಿನಲ್ಲೂ ಚೆನ್ನಾಗಿ ಬೆಳವಣಿಗೆ ಸಾಧಿಸುತ್ತಾರೆ ಎನ್ನುತ್ತದೆ ಅಧ್ಯಯನ. ತನ್ನ ಬಗ್ಗೆ ಅಪ್ಪ– ಅಮ್ಮ ಲಕ್ಷ್ಯ ಕೊಡುತ್ತಾರೆ ಎಂದು ಅರಿತ ಮಗು ಯಾವುದೇ ಸಮಯದಲ್ಲೂ ನಿಮ್ಮ ಜೊತೆ ಚೆನ್ನಾಗೇ ನಡೆದುಕೊಳ್ಳುತ್ತದೆ ಮತ್ತು ಅದರಿಂದ ಸುರಕ್ಷತಾ ಭಾವವನ್ನೂ ಅನುಭವಿಸುತ್ತದೆ. ಇದರಿಂದ ಮಕ್ಕಳಿಗೆ ಈ ಕೋವಿಡ್‌ ಸಮಯದ ಒತ್ತಡವೂ ಕಡಿಮೆಯಾಗಿ ಇತರ ಚಟುವಟಿಕೆಗಳತ್ತ ಗಮನ ಹರಿಸುವುದು ಸುಲಭ.

ಸಮಸ್ಯೆ ಕಡಿಮೆ: ಹೆಚ್ಚು ಹೆಚ್ಚು ಬೆರೆಯುತ್ತ ಹೋದಂತೆ, ಮಗು ತನ್ನ ಆತಂಕ ಅಥವಾ ಸವಾಲುಗಳ ಬಗ್ಗೆ ಹೇಳಿಕೊಳ್ಳಲು ಶುರು ಮಾಡುತ್ತದೆ. ತಂದೆ– ತಾಯಿ ತನ್ನ ಭಾವನೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಮಗುವಿಗೆ ಅನಿಸಲು ಶುರುವಾದರೆ ಅದು ಹೆಚ್ಚು ನಂಬಿಕೆ ಬೆಳೆಸಿಕೊಳ್ಳುತ್ತದೆ. ಇದರಿಂದ ಕೆಟ್ಟ ವರ್ತನೆ ಅಥವಾ ಕೋಪ ಮಾಡಿಕೊಳ್ಳುವುದು ಕಡಿಮೆಯಾಗುತ್ತದೆ. ಹೆಚ್ಚು ಖುಷಿಯಾಗಿರುವ ಮಗು ಮುಂದೆ ಕೆಟ್ಟ ಚಟ ಅಥವಾ ಹಿಂಸೆಗೆ ಇಳಿಯುವ ಸಾಧ್ಯತೆ ಕಡಿಮೆ.

ಹೆಚ್ಚುವ ಆತ್ಮವಿಶ್ವಾಸ: ತಂದೆ– ತಾಯಿಯ ಜೊತೆ ಹೆಚ್ಚು ಸಮಯ ಕಳೆಯುವ ಮಗು ಏನೇ ಆದರೂ ಪೋಷಕರು ತನ್ನ ನೆರವಿಗೆ ಬರುತ್ತಾರೆ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತದೆ. ಇದರಿಂದ ಯಾವುದೇ ಕೆಲಸವನ್ನು ಯತ್ನಿಸುವುದಕ್ಕೆ ಧೈರ್ಯವೂ ಬರುತ್ತದೆ. ವಿಫಲವಾದರೂ ಎದೆಗುಂದದೆ ಯಶಸ್ಸು ಸಾಧಿಸುವ ಸಾಧ್ಯತೆ ಹೆಚ್ಚು.

ನಿತ್ಯ ಕೆಲ ಕಾಲ ಫೋನ್‌ ಬಂದ್‌ ಇಡಿ: ಈ ದಿನಗಳಲ್ಲಿ ಸಮಯ ಕೊಲ್ಲಲು ಇರುವ ಸಾಧನವೆಂದರೆ ಮೊಬೈಲ್‌ ಎಂಬಂತಾಗಿದೆ. ಆದರೆ ನಮಗೆ ಅರಿವಾಗುವ ಮೊದಲೇ ಇದರ ದಾಸರಾಗಿ ಬಿಡುತ್ತೇವೆ. ಇದರ ಬದಲು ನಿತ್ಯ ಅರ್ಧ ತಾಸಿನ ಕಾಲವಾದರೂ ಈ ಡಿಜಿಟಲ್‌ ಸಾಧನಗಳಿಂದ ಬಿಡುವು ಮಾಡಿಕೊಂಡು ಮಕ್ಕಳ ಜೊತೆ ಕಾಲ ಕಳೆಯಿರಿ. ಕಥೆ ಹೇಳುವುದು ಅಥವಾ ಯಾವುದಾದರೂ ತಮಾಷೆಯ ಆಟ ಆಡುವುದು ಮಾಡಿ. ಕೇವಲ ಪೋಷಕಾಂಶ ಮತ್ತು ವ್ಯಾಯಾಮ ಮಾತ್ರವಲ್ಲ, ಮಕ್ಕಳಿಗೆ ಪ್ರೀತಿ ಮತ್ತು ಗಮನ ಕೂಡ ಮುಖ್ಯ. ನಿತ್ಯ ಮಕ್ಕಳ ಜೊತೆ ಈ ರೀತಿ ಸಾಮೀಪ್ಯ ಸಾಧಿಸುತ್ತ ಹೋದರೆ ಅವರಲ್ಲಿ ಮೂಡುವ ಸುರಕ್ಷತೆಯ ಭಾವನೆ ಮಾನಸಿಕ ಆರೋಗ್ಯಕ್ಕೆ ನಾಂದಿ ಹಾಡುತ್ತದೆ.

ಮಕ್ಕಳೊಂದಿಗೆ ಸಮಯಕಳೆಯುವುದು ಹೇಗೆ?
ಒಟ್ಟಿಗೆ ಊಟ– ತಿಂಡಿ ಸೇವಿಸಿ: ಊಟ– ತಿಂಡಿಯ ಸಮಯದಲ್ಲಿ ಕುಟುಂಬದ ಸದಸ್ಯರು ಒಟ್ಟಿಗೇ ಕುಳಿತು ಮಾತನಾಡಬಹುದು. ನಿಮ್ಮ ಫೊನ್‌ ಬದಿಗಿಡಿ, ಟಿವಿ ಬಂದ್‌ ಮಾಡಿ. ಬದಲಾಗಿ ಇದನ್ನು ಮಾತುಕತೆಗೆ ಮೀಸಲಿಡಿ. ಸಣ್ಣಪುಟ್ಟ ಮನೆಗೆಲಸದಲ್ಲಿ ಮಕ್ಕಳನ್ನು ಸೇರಿಸಿಕೊಳ್ಳಿ.

ಒಟ್ಟಾಗಿ ಆಚರಣೆ: ತಿಂಗಳಿನಲ್ಲಿ ಒಂದು ದಿನವಾದರೂ ಕುಟುಂಬದ ಕೆಲವು ಸಂಪ್ರದಾಯಗಳನ್ನು ಪಾಲಿಸಿ. ಅಂದರೆ ವಿಶೇಷ ಅಡುಗೆ ಮಾಡಿ, ಸಾಧ್ಯವಾದರೆ ಪಾರ್ಕ್‌ಗೆ ಅಥವಾ ಕಡಲ ತೀರಕ್ಕೆ ಹೋಗಿ. ಪಿಕ್ನಿಕ್‌, ಹೋಟೆಲ್‌ನಲ್ಲಿ ಊಟ... ಹೀಗೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳಬಹುದು.

ಚಟುವಟಿಕೆಗಳಲ್ಲಿ ಭಾಗಿಯಾಗಿ: ಯೋಗ ಅಥವಾ ಧ್ಯಾನ ಅಥವಾ ಬೇರೆ ಯಾವುದಾದರೂ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಮಕ್ಕಳ ಜೊತೆ ಇದರಿಂದ ಹೆಚ್ಚು ಬಾಂಧವ್ಯ ಬೆಳೆಯುತ್ತದೆ.

ನಿಸರ್ಗದ ಪಾಠ: ಚಾರಣ, ಕಾಡಿನಲ್ಲಿ ಸುತ್ತಾಟಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಬಹುದು. ಇದರಿಂದ ಮಕ್ಕಳಿಗೆ ಪ್ರಕೃತಿಯ ಬಗ್ಗೆ ಪಾಠ ಕಲಿಸಿದಂತಾಗುತ್ತದೆ.

ಬೋರ್ಡ್‌ ಗೇಮ್‌ ಆಡಿ: ಕೇರಂ, ಚೆಸ್‌ ಮೊದಲಾದ ಆಟಗಳನ್ನು ಮಕ್ಕಳಿಗೆ ಕಲಿಸಿ. ಇದರಿಂದ ಮಕ್ಕಳೂ ಅಂತಹ ಆಟಗಳಲ್ಲಿ ಖುಷಿಯಿಂದ ಪಾಲ್ಗೊಳ್ಳುತ್ತಾರೆ.

ಕಥೆ ಹೇಳಿ: ರಾತ್ರಿ 15 ನಿಮಿಷ ಕಥೆ ಹೇಳಲು ಬಳಸಿಕೊಳ್ಳಿ. ಇದರಿಂದ ಮಕ್ಕಳಿಗಷ್ಟೇ ಅಲ್ಲ, ನಿಮಗೂ ಒತ್ತಡದಿಂದ ಮುಕ್ತಿ ಸಾಧ್ಯ.

ನಿತ್ಯ ಕೆಲ ಕಾಲ ಫೋನ್‌ ಬಂದ್‌ ಇಡಿ: ಈ ದಿನಗಳಲ್ಲಿ ಸಮಯ ಕೊಲ್ಲಲು ಇರುವ ಸಾಧನವೆಂದರೆ ಮೊಬೈಲ್‌ ಎಂಬಂತಾಗಿದೆ. ಆದರೆ ನಮಗೆ ಅರಿವಾಗುವ ಮೊದಲೇ ಇದರ ದಾಸರಾಗಿ ಬಿಡುತ್ತೇವೆ. ಇದರ ಬದಲು ನಿತ್ಯ ಅರ್ಧ ತಾಸಿನ ಕಾಲವಾದರೂ ಈ ಡಿಜಿಟಲ್‌ ಸಾಧನಗಳಿಂದ ಬಿಡುವು ಮಾಡಿಕೊಂಡು ಮಕ್ಕಳ ಜೊತೆ ಕಾಲ ಕಳೆಯಿರಿ. ಕಥೆ ಹೇಳುವುದು ಅಥವಾ ಯಾವುದಾದರೂ ತಮಾಷೆಯ ಆಟ ಆಡುವುದು ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT