ಮಂಗಳವಾರ, ಜನವರಿ 18, 2022
15 °C

ಕ್ಷೇಮ ಕುಶಲ | ಹಿರಿಯರ ಆರೈಕೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳು ಮತ್ತು ಪರಿಹಾರಗಳು

ಡಾ. ವಿನಯ ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ಮಾನವನ ದೈಹಿಕ ಕ್ಷಮತೆ ವಯಸ್ಸಾದಂತೆ ಕ್ಷೀಣಿಸುತ್ತಾ ಹೋಗುವುದು ಸಹಜ. ನಲವತ್ತರಲ್ಲಿದ್ದ ಶಕ್ತಿಯು ವರ್ಷಗಳು ಉರುಳಿದಂತೆ ಕ್ಷೀಣವಾಗಬಹುದು. ಅದಕ್ಕೆ ಕಾರಣ ವಿವಿಧ ಅಂಗಾಂಗ ವ್ಯೂಹಗಳಲ್ಲಾಗುವ ವಯೋಸಹಜ ಬದಲಾವಣೆಗಳು. ಮೊದಲಿನ ದಿನಗಳಂತೆ ಚುರುಕಾಗಿ ನಡೆದಾಡಲು ಕಷ್ಟವೆನಿಸಬಹುದು, ದೃಷ್ಟಿ ಮಂಜಾಗಬಹುದು, ಶ್ರವಣಸಾಮರ್ಥ್ಯ ಕ್ಷೀಣಿಸಬಹುದು, ಮಲ–ಮೂತ್ರವಿಸರ್ಜನೆಯ ವೇಳೆಯಲ್ಲಿ ಮೊದಲಿನ ನಿಯಂತ್ರಣ ಇಲ್ಲದಂತಾಗಬಹುದು, ರುಚಿಯಾಗಿದೆ ಎಂದು ತುಸು ಹೆಚ್ಚು ತಿಂದರೆ ಅಜೀರ್ಣದ ಸಮಸ್ಯೆ ಕಾಡಬಹುದು, ಅಗತ್ಯ ವಸ್ತುಗಳನ್ನು ಎಲ್ಲಿ ಇಟ್ಟೆವು ಎಂಬುದು ಮರೆತೇ ಹೋದಂತಾಗಬಹುದು. ಈ ಎಲ್ಲ ಅಂಶಗಳನ್ನೂ ಸ್ವತಃ ಹಿರಿಯರೂ ಹಾಗೂ ಅವರನ್ನು ಕಾಳಜಿ ಮಾಡುವವರೂ ಅರಿತಿದ್ದರೆ ಒಳಿತು. ಇದರಿಂದ ಪರಸ್ಪರರಲ್ಲಿ ಮೂಡಬಹುದಾದ ಮನಸ್ತಾಪಗಳನ್ನೂ ಮತ್ತು ಅಪಾಯಕರ ಅನಾಹುತಗಳನ್ನೂ ತಪ್ಪಿಸುವುದಕ್ಕೆ ಸಾಧ್ಯ.

ಹಿರಿಯರ ಆರೈಕೆಯಲ್ಲಿ ಎದುರಾಗಬಹುದಾದ ಸಾಮಾನ್ಯ ಸಮಸ್ಯೆಗಳು ಮತ್ತು ನಮ್ಮ ಮಿತಿಯಲ್ಲಿಯೇ ಅವುಗಳಿಗೆ ಒದಗಿಸಬಹುದಾದ ಸೂಕ್ತ ಪರಿಹಾರಗಳ ಬಗ್ಗೆ ಅರಿವಿದ್ದರೆ ಬದುಕು ಸುಸೂತ್ರವಾಗಬಹುದು.

ದೃಷ್ಟಿ ಮಂಜಾಗುವುದು:
ವಯಸ್ಸಾದಂತೆ ದೂರ/ಹತ್ತಿರದ ದೃಷ್ಟಿಯ ಅಥವಾ ಪೊರೆಯ ಸಮಸ್ಯೆ ಎದುರಾಗುವುದು ಸಹಜ. ಅದಕ್ಕಾಗಿ ಕಣ್ಣುಗಳ ತಪಾಸಣೆ ಮತ್ತು ಸೂಕ್ತ ಕನ್ನಡಕಗಳ ಬಳಕೆ/ಪೊರೆಗಾಗಿ ಶಸ್ತ್ರಚಿಕಿತ್ಸೆ ಅತ್ಯಗತ್ಯ. ಕಣ್ಣುಗಳಲ್ಲಿನ ಶುಷ್ಕತೆ ಮತ್ತು ತುರಿಕೆಯ ಸಮಸ್ಯೆಗೆ ಕಣ್ಣುಗಳಿಗೆ ಹಾಕುವ ಔಷಧವನ್ನು ಬಳಸಬಹುದು.

ಶ್ರವಣಸಮಸ್ಯೆ:
ಹೊರಕಿವಿಯಲ್ಲಿ ಶೇಖರವಾಗಬಹುದಾದ ಮೇಣದಂತಹ ವಸ್ತು, ಸೋಂಕು, ಕಿವಿ ಸೋರುವಿಕೆಯಿಂದಲೂ ಶ್ರವಣಸಮಸ್ಯೆ ತಲೆದೋರಬಹುದು. ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ಮಾಡಿಸಿ. ವಯೋಸಹಜ ಸಮಸ್ಯೆ ಎಂದಾದರೆ ತಜ್ಞರ ಸಲಹೆಯ ಮೇರೆಗೆ ಶ್ರವಣಸಾಧನಗಳನ್ನು ತೆಗೆದುಕೊಡಿ.

ಮೂಳೆ, ಸ್ನಾಯು ಮತ್ತು ಕೀಲುಗಳು ಮೊದಲಿನಂತೆ ಸರಾಗವಾದ ಚಲನೆಗೆ ಸಹಕರಿಸದಿರಬಹುದು. ಹಿರಿಯರ ಆಹಾರದಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವ ಹಾಲು, ಮೊಸರು, ಮತ್ತಿತರ ಹಾಲಿನ ಉತ್ಪನ್ನಗಳು ಕಡ್ಡಾಯವಾಗಿ ಇರಲಿ. ಮನೆಯ ಹೂದೋಟದಲ್ಲಿ ಓಡಾಟ, ಸಣ್ಣಪುಟ್ಟ ಸರಳ ವ್ಯಾಯಾಮಗಳು, ನಿಯಮಿತವಾದ ನಡಿಗೆ ಮೂಳೆಗಳ ಪೆಡಸುತನವನ್ನು ಕಡಿಮೆ ಮಾಡಬಹುದು. ಮೂಳೆಗಳ ಸವೆತದಿಂದ ಎಲುಬುಗಳು ದುರ್ಬಲವಾಗಿರುವ ಸಾಧ್ಯತೆಯಿರುವುದರಿಂದ ಸಣ್ಣಪುಟ್ಟ ಬೀಳುವಿಕೆಯೂ ಮೂಳೆಮುರಿತಕ್ಕೆ ಕಾರಣವಾಗಬಹುದು. ಆದ್ದರಿಂದ ಹಿರಿಯರು ಓಡಾಡುವ ಕೋಣೆಗಳ ನೆಲದಲ್ಲಿ ನೀರಿನ ಅಂಶ ಇಲ್ಲದಿರುವುದನ್ನು ಖಾತ್ರಿ ಮಾಡಿಕೊಳ್ಳಿ. ಬಚ್ಚಲು ಮನೆ ಮತ್ತು ಶೌಚಾಲಯಗಳನ್ನು ಸ್ವಚ್ಛವಾಗಿರಿಸಿ ಜಾರುವಿಕೆಯಿಲ್ಲದಂತೆ ಗಮನ ವಹಿಸಿ.

ಮಲವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆ:
ಮಲಬದ್ಧತೆ ಅಥವಾ ಪದೇ ಪದೇ ಮಲವಿಸರ್ಜನೆಗೆ ಹೋಗಬೇಕೆನ್ನಿಸುವ ಸಮಸ್ಯೆ ಕೆಲವು ಹಿರಿಯರನ್ನು ಕಾಡಬಹುದು. ಹಿತಮಿತವಾದ, ಬಿಸಿಬಿಸಿಯಾದ, ತಾಜಾ, ಸಾತ್ವಿಕ ಹಾಗೂ ಪೌಷ್ಟಿಕ ಆಹಾರಪದಾರ್ಥಗಳು ಹಿರಿಯರ ಊಟವಾಗಿರಲಿ. ದಿನದಲ್ಲಿ ಒಂದು ಅಥವಾ ಎರಡು ಬಾರಿ ನಿಗದಿತ ಸಮಯದಲ್ಲೇ ಮಲವಿಸರ್ಜನೆಗೆ ತೆರಳುವ ಅಭ್ಯಾಸ ಮಾಡಿಕೊಳ್ಳಲು ಉತ್ತೇಜಿಸಿ. ಸಂಧಿವಾತದ ಸಮಸ್ಯೆ ಅಥವಾ ಸ್ನಾಯುಗಳ ದುರ್ಬಲತೆಯಿಂದಾಗಿ ಕುಕ್ಕುರುಗಾಲಿನಲ್ಲಿ ಕುಳಿತು ಭಾರತೀಯ ಶೌಚಾಲಯವನ್ನು ಬಳಸುವುದು ಕೆಲವೊಮ್ಮೆ ಕಷ್ಟವೆನಿಸಬಹುದು. ಅಂತಹ ಸಂದರ್ಭಗಳಲ್ಲಿ ಅವರಿಗಾಗಿ ಪಾಶ್ಚಾತ್ಯಶೈಲಿಯ ಶೌಚಾಲಯಗಳ ವ್ಯವಸ್ಥೆ ಮಾಡಿಕೊಡಿ.

ಎದೆ ಉರಿ ಸಮಸ್ಯೆ:
ಆಹಾರಕ್ರಮದಲ್ಲಿ ಒಂದಿಷ್ಟು ಶಿಸ್ತನ್ನು ಅಳವಡಿಸಿಕೊಂಡರೆ ಈ ಸಮಸ್ಯೆಯಿಂದ ಹಿರಿಯರನ್ನು ಪಾರು ಮಾಡಬಹುದು. ದಿನವೊಂದರಲ್ಲಿ ಮೂರು ಲೀಟರ್‌ನಷ್ಟು ನೀರು ಕುಡಿಯುವುದನ್ನು ಪ್ರೋತ್ಸಾಹಿಸಿ. ಮಸಾಲೆ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಆದಷ್ಟು ಕಡಿಮೆ ಕೊಡಿ.

ಮೂತ್ರವಿಸರ್ಜನೆಯ ಸಮಸ್ಯೆ:
ಮೂತ್ರವಿಸರ್ಜನೆಗೆ ಅವಸರವಾಗುವ ಮೊದಲೇ ಶೌಚಾಲಯಕ್ಕೆ ಹೋಗಿ ಬರುವ ಅಭ್ಯಾಸ ಮಾಡಿಕೊಂಡಾಗ ಅವಸರವಾದಾಗ ನಿಯಂತ್ರಣ ತಪ್ಪುವ ಸಂಭವವನ್ನು ತಪ್ಪಿಸಬಹುದು. ಪುರುಷರಲ್ಲಿ ಅರವತ್ತೈದರ ನಂತರ ಕಾಡುವ ಪ್ರಾಸ್ಟೇಟ್ ಸಮಸ್ಯೆಯೂ ಮೂತ್ರವಿಸರ್ಜನೆಗೆ ತೊಡಕನ್ನುಂಟು ಮಾಡಬಹುದು. ಇದಕ್ಕಾಗಿ ಶಸ್ತ್ರಚಿಕಿತ್ಸಾತಜ್ಞರ ಸಲಹೆಯಂತೆ ಔಷಧೋಪಚಾರ ಅಥವಾ ಶಸ್ತ್ರಚಿಕಿತ್ಸೆ ಮಾಡಿಸಿ.

ಮಧುಮೇಹ ಮತ್ತು ರಕ್ತದೊತ್ತಡ:
ಹಿರಿಯರು ಸಮಯಕ್ಕೆ ಸರಿಯಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆನ್ನುವುದನ್ನು ಖಾತ್ರಿ ಮಾಡಿಕೊಳ್ಳಿ. ಕನಿಷ್ಠ ಆರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿ ಸಮಸ್ಯೆ ನಿಯಂತ್ರಣದಲ್ಲಿದೆಯೇ ಎಂದು ಖಚಿತ ಪಡಿಸಿಕೊಳ್ಳಿ.

ವಯಸ್ಸಾದಂತೆ ರುಚಿಯ ಗ್ರಹಿಕೆಯೂ ವ್ಯತ್ಯಯವಾಗಬಹುದು. ಹಾಗಾಗಿ ಮನೆಯಲ್ಲಿನ ಹಿರಿಯರು ನೀವು ಮಾಡಿದ ಅಡುಗೆಯಲ್ಲಿ ಉಪ್ಪು-ಖಾರ ಹೆಚ್ಚಾಗಿದೆ ಎಂದು ದೂರಿದರೂ ನೀವು ಅರ್ಥ ಮಾಡಿಕೊಂಡು ಸಹಕರಿಸಿ.

ಮರೆವು:
ನೆನಪಿನ ಶಕ್ತಿ ಕುಂದುವಿಕೆಯೂ ಸಾಮಾನ್ಯ. ಇದನ್ನು ಮನೆಯ ಎಲ್ಲ ಸದಸ್ಯರೂ ಅರಿತು ಸಹಕರಿಸಿ. ದಿನಚರಿ ಬರೆದಿಡಲು ಪ್ರೋತ್ಸಾಹಿಸಿ. ಅವರು ನಿತ್ಯ ತೆಗೆದುಕೊಳ್ಳುವ ಮಾತ್ರೆ-ಔಷಧಗಳ ಚೀಟಿಯ ಪೋಟೊ ನಿಮ್ಮ ಅಥವಾ ಅವರ ಮೊಬೈಲ್ ಗ್ಯಾಲರಿಯಲ್ಲಿದ್ದರೆ ಒಳಿತು.

ಖುಷಿಯಾಗಿಡಿ:
ಹಿರಿಯರು ಸದಾ ಲವಲವಿಕೆಯಿಂದಿರಲು ನೆರವಾಗಿ. ಒಳ್ಳೆಯ ಪತ್ರಿಕೆಗಳು ಮತ್ತು ಪುಸ್ತಕಗಳನ್ನು ಒದಗಿಸಿ, ಓದಲು ಉತ್ತೇಜಿಸಿ. ಆಗಾಗ್ಗ ಹಳೆಯ ಸ್ನೇಹಿತರನ್ನು ಬಂಧು-ಬಾಂಧವರನ್ನು ಭೇಟಿ ಮಾಡಲು ವ್ಯವಸ್ಥೆ ಕಲ್ಪಸಿ. ಮೌಲ್ಯಯುತ ಸಿನಿಮಾ, ನಾಟಕ, ನೃತ್ಯ ಕಾರ್ಯಕ್ರಮಗಳ ವೀಕ್ಷಣೆಗೆ ಕರೆದೊಯ್ಯಿರಿ. ವರ್ಷಕ್ಕೊಂದು ಬಾರಿಯಾದರೂ ಪ್ರವಾಸಿತಾಣಗಳಿಗೆ ಭೇಟಿ ಮಾಡಿಸಿ.

ಒಬ್ಬರೇ ಇದ್ದಾಗ:
ಒಬ್ಬೊಂಟಿಗರಾಗಿ ಇರುವ ಹಿರಿಯರಿಗೆ ದಿನಕ್ಕೊಮ್ಮೆಯಾದರೂ ಕರೆ ಮಾಡಿ ಮಾತನಾಡಿಸಿ. ಅವರ ಅಕ್ಕಪಕ್ಕದವರ ಸಂಪರ್ಕ ಸಂಖ್ಯೆಯೂ ನಿಮ್ಮ ಬಳಿ ಇರಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು