ಶನಿವಾರ, ನವೆಂಬರ್ 28, 2020
17 °C
ಮನೋಮಯ

PV Web Exclusive | ವಿದಾಯದ ದುಃಖ ತಡೆಯುವುದು ಹೇಗೆ?

ರಶ್ಮಿ ಎಸ್. Updated:

ಅಕ್ಷರ ಗಾತ್ರ : | |

Prajavani

ಇಲ್ಲ, ಇದು ಹಿಂಗಾಗಿರಲಿಕ್ಕಿಲ್ಲ. ಅವರು ವಾಪಸಾಗಬಹುದು. ಏನೋ ಜಗಳವಾಗಿದೆ... ಜಗಳಗಳು ಯಾರ ನಡುವೆ ಆಗುವುದಿಲ್ಲ ಹೇಳಿ.. ಸಮಯ ಸರಿ ಇಲ್ಲ. ಶನಿ ಕಾಟ ಇದೆ ಅಂತಿದ್ರು.. ಮತ್ತೆ ಮರಳುತ್ತಾರೆ...

ಬಾಂಧವ್ಯವೊಂದರಿಂದ ವ್ಯಕ್ತಿಯೊಬ್ಬ ಕಳಚಿಕೊಂಡ ಮೇಲೂ ಸಂಗಾತಿಗಾಗಿ ತಹತಹಿಸುವವರು ತಮ್ಮನ್ನು ಸಮಾಧಾನ ಮಾಡಿಕೊಳ್ಳುವ ಪರಿ ಇದು.

ಇಲ್ಲ, ಏನೋ ತಪ್ಪಾಯಿತು. ಬಹುಶಃ ನಾನೇ ಈ ಬಾಂಧವ್ಯಕ್ಕೆ ಸೂಕ್ತ ವ್ಯಕ್ತಿ ಆಗಿರಲಿಲ್ಲವೇನೋ? ಅವರಿಗೊಂದು ಒಳಿತಿನ ಜೀವನ ಸಿಗಲಿ... ನಾನೇ ಸರಿ ಇಲ್ಲ.. ಇಂಥದ್ದೊಂದು ಅಪರಾಧ ಭಾವವೂ ಒಂದು ಬಾಂಧವ್ಯದಲ್ಲಿ ಬಿರುಕು ಬಂದಾಗ ಕಾಣಿಸಿಕೊಳ್ಳುತ್ತದೆ.

ಛೆ.. ಅವರೇ ಸರಿ ಇಲ್ಲ. ಇನ್ನವರು ನನ್ನ ಬದುಕಿಗೆ ಬರುವುದು ಬೇಡ. ನಾನವರೊಟ್ಟಿಗೆ ಮಾತನಾಡುವುದಿಲ್ಲ. ಅವರೂ ನನ್ನೊಟ್ಟಿಗೆ ಯಾವ ಬಂಧವನ್ನೂ ಇರಿಸಿಕೊಳ್ಳುವುದು ಬೇಡ. ನನಗಿನ್ನು ಅವರ ಗೊಡವೆಯೇ ಬೇಡ. ಇನ್ನೆಂದಿಗೂ ನಾನವರ ಮುಖ ನೋಡುವುದೇ ಇಲ್ಲ.. ಹೀಗೆ ಒಂದು ಬಾಂಧವ್ಯದಿಂದ ವಿಮುಖರೂ ಆಗುತ್ತಾರೆ.

ಅದೇನೋ ಸಮಯ ಸರಿ ಇರಲಿಲ್ಲ. ಋಣಾನುಬಂಧ ತೀರಿತು. ಬೇಡದ ಬಾಂಧವ್ಯದಲ್ಲಿ ನರಳಾಡುವ ಬದಲು ಆಚೆ ಬಂದರಾಯಿತು ಅಂತನಿಸಿ, ಆ ಬಂಧನದಿಂದಾಚೆ ಬಂದೆ.. ಹೀಗೆ ನಿರ್ಧಾರವನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆ. 

ನೋವುಣ್ಣುವ ಇಂಥ ಪರಿಸ್ಥಿತಿಗಳಲ್ಲಿ ಏಳು ಹಂತಗಳಿವೆ ಎಂದು ಮಾನಸಿಕ ಸ್ವಾಸ್ಥ್ಯಕ್ಕಾಗಿ ಇರುವ ‘ಹೆಲ್ತ್‌ಲೈನ್‌’ ಜರ್ನಲ್‌ ಪಟ್ಟಿ ಮಾಡಿದೆ. ನೋವಿನ ತೀವ್ರತೆ ಕಡಿಮೆಯಾಗುವ ಹಂತಗಳನ್ನೂ ಇಲ್ಲಿ ವಿವರಿಸಲಾಗಿದೆ. 

ನಿರಾಕರಣ, ಅಪರಾಧಿ ಭಾವ, ನಿರ್ಲಕ್ಷ್ಯ ಹಾಗೂ ಸ್ವಸಮರ್ಥನೆಯನ್ನೇ ಬಿಂಬಿಸುವ ಇವೆಲ್ಲವೂ ವಿದಾಯದ ದುಃಖವನ್ನು ಭರಿಸುವ ಅಥವಾ ಸ್ವೀಕರಿಸುವ ವಿವಿಧ ಭಾವಗಳಾಗಿವೆ. 

ಆದರೆ ಇವೆಲ್ಲವೂ ಬಾಂಧವ್ಯಗಳಲ್ಲಿ ಬಿರುಕು ಬಂದಾಗಲೇ ಒಂದು ಸ್ಥಿತಿಗೆ ವಾದ ಮನದೊಳಗೆ ಪೊರೆಯುತ್ತಿರುತ್ತೇವೆ. ಈ ಮೇಲಿನ ಯಾವುದೇ ಭಾವಗಳಾದರೂ ನಮ್ಮಲ್ಲಿ ಮೊದಲೇ ಕಾಣಿಸಿಕೊಂಡಿರುತ್ತವೆ. ಉಳಿದಂತೆ ಒಂದು ವಿದಾಯದ ಸುತ್ತ ಈ ಭಾವಗಳಲ್ಲಿ ಯಾವುದು ಮೇಲುಗೈ ಪಡೆಯುತ್ತದೆಯೋ ಅದೇ ಪರಿಣಾಮವಾಗಿ ಕಾಣಿಸಿಕೊಳ್ಳುತ್ತದೆ.

ಬಯಸಿಯೂ, ಬಯಸದೆಯೂ ವಿದಾಯ ಅನಿವಾರ್ಯವಾದಾಗ ಸಾಮಾನ್ಯವಾಗಿ ಇಂಥ ಭಾವಗಳು ನಮ್ಮನ್ನು ಕಾಡತೊಡಗುತ್ತವೆ. ಈ ಸಮರ್ಥನೆಗಳು ಆ ಕ್ಷಣದ ಪ್ರತಿಕ್ರಿಯೆಗಳಾಗಿರುವುದಿಲ್ಲ. ಇವೆಲ್ಲವೂ ನಮ್ಮೊಳಗಿನ ಸಮಾಧಾನವನ್ನು ಕಾಣುವ ಮಾರ್ಗಗಳಾಗಿರುತ್ತವೆ. ಮಾನಸಿಕವಾಗಿ ಸದೃಢವಾಗಿರುವವರು ಈ ಐದು ವಿಧಗಳಲ್ಲಿ ಯಾವುದೋ ಒಂದಕ್ಕೆ ಕಟ್ಟು ಬಿದ್ದು ಪರಿಸ್ಥಿತಿಯನ್ನು ಸ್ವೀಕರಿಸುತ್ತಾರೆ. 

ಇದು ಕೇವಲ ಬಾಂಧವ್ಯದ ತಂತು ಬೇರ್ಪಟ್ಟಾಗ ಇಂಥ ದುಃಖಕ್ಕೆ ಒಳಗಾಗುವುದಿಲ್ಲ. ಕೆಲಸ ಕಳೆದುಕೊಂಡಾಗ, ದೀರ್ಘಕಾಲದ ಕಾಯಿಲೆಗಳಿಗೆ ಒಳಗಾದಾಗ, ಆತ್ಮೀಯರು ಸಾವನ್ನಪ್ಪಿದಾಗಲೆಲ್ಲ ನಾವು ಇಂಥ ದುಃಖಕ್ಕೆ ಒಳಗಾಗುತ್ತೇವೆ. ‍

ಪ್ರತಿಯೊಂದು ದುಃಖದ ಸನ್ನಿವೇಶಗಳೂ ಏಳು ಹಂತಗಳನ್ನು ದಾಟುತ್ತವೆ. ನಾವು ಎಷ್ಟು ಬೇಗ ಈ ಹಂತಗಳನ್ನು ದಾಟುತ್ತೇವೆಯೋ.. ಅಷ್ಟು ಬೇಗ ಬದುಕು ಸರಳವಾಗುತ್ತಲೇ ಹೋಗುತ್ತದೆ.  

ಮೊದಲನೆಯದ್ದು ಅಪನಂಬಿಕೆ ಅಥವಾ ಅಲ್ಲಗಳೆಯುವಿಕೆ: ಸದ್ಯಕ್ಕೆ ನನ್ನೊಟ್ಟಿಗೆ ಆಗಿರುವುದು ನನಗಾಗಿ ಅಲ್ಲ. ಇದು ತಾತ್ಕಾಲಿಕ ಬೆಳವಣಿಗೆ. ನನ್ನೊಟ್ಟಿಗೆ ಹೀಗಾಗಲು ಸಾಧ್ಯವೇ ಇಲ್ಲ ಎಂಬಂಥ ನಂಬಿಕೆಗಳನ್ನು ಪೋಷಿಸಿಕೊಂಡು ಬರುವುದು.

* ನೋವು ಮತ್ತು ಅಪರಾಧಿಭಾವ: ಎಲ್ಲಕ್ಕೂ ನಮ್ಮ ಅಸಾಮರ್ಥ್ಯಗಳೇ ಕಾರಣ, ಎಲ್ಲವೂ ನಮ್ಮಿಂದಾದ ತಪ್ಪುಗಳಿಂದಲೇ ಘಟಿಸಿದೆ ಎಂಬ ಸ್ವಹೀಗಳೆಯುವ ಹಂತ

* ಕೋಪ ಮತ್ತು ಚೌಕಾಶಿ: ಇವೆರಡೂ ವ್ಯತಿರಿಕ್ತ ಭಾವಗಳು. ಅಗಾಧವಾದ ಕೋಪವನ್ನು ತೋರುವುದು, ಕಿರುಚಾಡುವುದು, ದೇಹದಂಡನೆ ಮಾಡಿಕೊಳ್ಳುವುದು, ಇಲ್ಲವೇ ತೀರ ಆರ್ತ್ರನಾಗಿ ಚೌಕಾಶಿಗಿಳಿಯುವುದು.. ಇಷ್ಟಕ್ಕಾದರೂ ಒಪ್ಪಲಿ ಎಂಬ ಸಮಜಾಯಿಷಿಗಳಿಗೆ ಇಳಿಯುವುದು.

* ಖಿನ್ನತೆ: ಈ ಹಂತದಲ್ಲಿ ಎಲ್ಲ ಸುಖ ಸಂಭ್ರಮ, ಸಾಮಾಜಿಕ ಆಗುಹೋಗುಗಳಿಂದ ದೂರವಾಗ್ತೀರಿ. ಯಾರನ್ನೂ ದೂರದೆ, ವಿನಾಕಾರಣ ಅಳುವುದು, ಸಿಡುಕುವುದು, ಸುಮ್ಮನಿರುವುದು, ಒಳಗೊಳಗೇ ಕೊರಗುವುದು ಮುಂತಾದ ಲಕ್ಷಣಗಳಿಂದ ಬಳಲುವಿರಿ. 

* ಮನೋಭೂಮಿಕೆಯ ಮರುನಿರ್ಮಾಣ: ಆದದ್ದು ಆಗಿ ಹೋಯಿತು. ಇನ್ನು ಚಿಂತಿಸಿ ಫಲವಿಲ್ಲ. ಇವೆಲ್ಲವನ್ನೂ ಪಾಠ ಎಂದುಕೊಂಡರಾಯಿತು. ಮುಂದೆ ಇಂಥ ಸಂದರ್ಭಗಳು ಮರುಕಳಿಸದಂತೆ ನೋಡಿಕೊಂಡರಾಯಿತು ಎಂಬ ಸ್ವ ಸಮಾಧಾನ.

* ಬದುಕಿನ ಮರುನಿರ್ಮಾಣ: ಅಶಿಸ್ತಿನಿಂದ, ಸಂಯಮವಿಲ್ಲದೆ, ಏರುಪೇರಾದ ಬದುಕಿನ ಗತಿಯನ್ನು ಒಂದು ವೇಗಕ್ಕೆ ಮರು ಸ್ಥಾಪಿಸುವುದು. ಹಾಗೂ ನೀರ ಹರಿವಿನಂತೆ, ಯಾವುದಕ್ಕೂ ಅಂಟಿಕೊಳ್ಳದೆ ಮುಂದೆ ಸಾಗುತ್ತ ಹೋಗುವುದು.

* ಸ್ವೀಕಾರ: ಆಗಿದ್ದು ಆಗಿ ಹೋಗಿದೆ. ಜೀವನ ಮುಂದೆ ಸಾಗಬೇಕು. ಭಾವನಾತ್ಮಕ ಭಾರಗಳನ್ನು ಹೊತ್ತು ಸಾಗುವುದರಲ್ಲಿ ಅರ್ಥವಿಲ್ಲ. ಒಂದಷ್ಟು ನೆನಪಿನ ಬುತ್ತಿಯಾಗಿ, ಇನ್ನಷ್ಟು ಅನುಭವದ ಪಾಠವಾಗಿ ಆ ಸನ್ನಿವೇಶಗಳನ್ನು ಸ್ವೀಕರಿಸಿದಾಗ ಜೀವನ ಮುಂದೆ ಸಾಗಲಾರಂಭಿಸುತ್ತದೆ.

ಕೆಲವರು ಮಾತ್ರ ಎಲ್ಲವನ್ನೂ ತಾತ್ಕಾಲಿಕವಾಗಿ ಹೊಂದಿಸಿಕೊಳ್ಳುತ್ತ, ಖಿನ್ನತೆಗೆ ಜಾರತೊಡಗುತ್ತಾರೆ. ಇವರಲ್ಲಿ ಮಾನಸಿಕ ಒತ್ತಡ ಹಾಗೂ ಖಿನ್ನತೆ ಎರಡೂ ಒಟ್ಟೊಟ್ಟಿಗೆ ಕಾಣಸಿಗುತ್ತವೆ. ಮುಂದಿನ ಹಂತಗಳಿಗೆ ಸಾಗುವ ಮುನ್ನವೇ ಈ ಗುಹೆಗಳಲ್ಲಿ, ಸುಳಿಗಳಲ್ಲಿ ಸಿಲುಕಿಕೊಳ್ಳುತ್ತಾರೆ.  

ತಮ್ಮ ನೋವು ಯಾರಿಗೂ ಅರ್ಥವಾಗದು ಎಂಬ ಭಾವ ಅವರನ್ನು ಆಳುತ್ತದೆ. ಅಂಥವರು ನೋವಿನ ಸನ್ನಿವೇಶಗಳನ್ನು ನಿಭಾಯಿಸುವುದು ಹೇಗೆ? ಈ ಭಾವತೀವ್ರತೆಗಳನ್ನು ನಿಭಾಯಿಸುವುದು ಹೇಗೆ? 

ವಿದಾಯದ ಸನ್ನಿವೇಶಗಳನ್ನು ಅರ್ಥ ಮಾಡಿಕೊಳ್ಳಬೇಕು. ಪರಿಸ್ಥಿತಿಯನ್ನು ಸ್ವೀಕರಿಸಿ, ಒಳಿತಿಗಾಗಿ ಬಯಸುವುದು ದುಃಖವನ್ನು ಒಪ್ಪಿಕೊಂಡಂತೆ. 

* ಬಾಂಧವ್ಯದಲ್ಲಿ ಬಿರುಕು ಬಂದಲ್ಲಿ: ಇದು ಒಳಿತಿನ ನಿರ್ಧಾರವಾಗಿದೆ. ಲಭ್ಯ ಇರುವ ಸಾಧ್ಯತೆಗಳಲ್ಲಿ, ಅವಕಾಶಗಳಲ್ಲಿ ಇದು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಒಪ್ಪಿಕೊಳ್ಳುವ ಮನಃಸ್ಥಿತಿ ನಿರ್ಮಾಣವಾಗುತ್ತದೆ.

* ಕೆಲಸ ಕಳೆದುಕೊಂಡಾಗ: ನನಗಿದು ಅಂತ್ಯವಲ್ಲ. ಇಲ್ಲಿಂದ ಹೊಸ ದಾರಿಯೊಂದನ್ನು ತುಳಿಯಬೇಕಿದೆ. ಹೊಸ ಆರಂಭಕ್ಕಾಗಿಯೇ ವೃತ್ತಿಜೀವನದಲ್ಲಿ ಈ ತಿರುವು ಬಂದೊದಗಿದೆ.

* ಸಾವಿನಿಂದಾಗಿ ಆತ್ಮೀಯರ ಅಗಲುವಿಕೆ: ಒಂದಷ್ಟು ದಿನಗಳಾದರೂ ಅವರೊಂದಿಗೆ ಕಳೆಯುವ ಅದೃಷ್ಟ ನನಗಿತ್ತಲ್ಲ. ಈ ಸಾಂಗತ್ಯದ ನೆನಪುಗಳು ಸದಾ ಹಸಿರಾಗಿರುತ್ತವೆ. 

* ಸುದೀರ್ಘಕಾಲದ ಕಾಯಿಲೆ: ನನಗಿದು ಈಗಲೇ ಅರಿವಿಗೆ ಬಂದಿದ್ದು ಒಳಿತಾಯ್ತು. ಉಳಿದಿರುವ ದಿನಗಳಲ್ಲಿ ಬಾಕಿ ಕೆಲಸಗಳನ್ನು ಮುಗಿಸಿಕೊಳ್ಳಬೇಕು. ಕೊನೆಯ ದಿನಗಳನ್ನು ಸಮಾಧಾನದಿಂದ ಕಳೆಯುವಂತಾಗಬೇಕು.

ಹೀಗೆ ಸಮಾಧಾನಿಸಿಕೊಳ್ಳುವ ದಿನಗಳು ಬಂದಾಗ ನೀವು, ನಿಮಗಾದ ದುಃಖವನ್ನು ನಿಭಾಯಿಸುವ ಸ್ಥಿತಿಗೆ ನಿಮ್ಮ ಮನಸನ್ನು ಅಣಿಗೊಳಿಸಿದಂತೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು