ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಭ್ಯವಾದೀತೇ ಉಚಿತ ಔಷಧಿ? ಡಾ. ಗೋಪಾಲ ದಾಬಡೆ ಅವರ ವಿಶ್ಲೇಷಣೆ

ಉಚಿತ ಔಷಧಿ ಜೀವ ಉಳಿಸುತ್ತದೆ, ಜೀವನದ ಗುಣಮಟ್ಟ ಸುಧಾರಿಸುತ್ತದೆ
Published 22 ಸೆಪ್ಟೆಂಬರ್ 2023, 0:26 IST
Last Updated 22 ಸೆಪ್ಟೆಂಬರ್ 2023, 0:26 IST
ಅಕ್ಷರ ಗಾತ್ರ

‘ನೀವು ಚಿಕಿತ್ಸೆ ಪಡೆಯಲು ಯಾವುದೇ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದರೆ, ಹೊರಗಿನಿಂದ ಔಷಧಿಗಳನ್ನು ಖರೀದಿಸಬೇಕಾದ ಅಗತ್ಯವಿಲ್ಲ. ನಮ್ಮ ಆಸ್ಪತ್ರೆಯ ಆವರಣದಲ್ಲಿ ಔಷಧಿಗಳನ್ನು ಮಾರಾಟ ಮಾಡುವ ಫಾರ್ಮಸಿಗಳೂ ಇರಬಾರದು. ಸರ್ಕಾರಿ ಆಸ್ಪತ್ರೆಗೆ ಬರುವ ಯಾವುದೇ ರೋಗಿಗೆ ಎಲ್ಲಾ ಬಗೆಯ ಔಷಧಿಗಳೂ ಉಚಿತವಾಗಿ ಲಭ್ಯವಿರಬೇಕು. ಆ ರೀತಿಯ ಸೇವೆಯನ್ನು ಜನರಿಗೆ ನಾವು ಒದಗಿಸಬೇಕು’ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇತ್ತೀಚೆಗೆ ಹೇಳಿದ್ದಾರೆ.

ಆರೋಗ್ಯ ಸಚಿವರ ಈ ಹೇಳಿಕೆಯು ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ. ಚಿಕಿತ್ಸೆಯ ಖರ್ಚು ಭರಿಸಲು ಸಾಧ್ಯವಾಗದವರು ಇದನ್ನು ಸ್ವಾಗತಿಸುತ್ತಾರೆ. ಔಷಧಿಗಳು ಉಚಿತವಾಗಿ ಲಭ್ಯವಾಗುವಂತೆ ಮಾಡುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಬಡವರು ಚಿಕಿತ್ಸೆಗಾಗಿ ಸ್ವತಃ ಮಾಡಬೇಕಾದ ಖರ್ಚನ್ನು ಅದು ತಡೆಯುತ್ತದೆ. ಚಿಕಿತ್ಸೆಗೆ ವೆಚ್ಚವಾಗುವ ಒಟ್ಟು ಹಣದಲ್ಲಿ ಶೇಕಡ 60– 70ರಷ್ಟು ಮೊತ್ತ ಬರೀ ಔಷಧಿಗಳಿಗಾಗಿಯೇ ಖರ್ಚಾಗುತ್ತಿದೆ. ಅದರೊಟ್ಟಿಗೆ ಇತರ ಖರ್ಚುಗಳೂ ಸೇರಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಡಬೇಕಾದ ವೆಚ್ಚವು ಪ್ರತಿವರ್ಷ 5.5 ಕೋಟಿ ಜನರನ್ನು ಬಡತನದ ತೆಕ್ಕೆಗೆ ದೂಡುತ್ತಿದೆ. ಕುಟುಂಬಗಳಿಗೆ ಎದುರಾಗುವ ಈ ಆರ್ಥಿಕ ಸಂಕಷ್ಟವನ್ನು ತಡೆಗಟ್ಟಲು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿಗಳು ಲಭ್ಯವಾಗುವಂತೆ ಮಾಡುವುದು ನಿಜಕ್ಕೂ ವಿವೇಚನೆಯಿಂದ ಕೂಡಿದ ನಿರ್ಧಾರವಾಗಿದೆ.

ಆರೋಗ್ಯ ಹಕ್ಕುಗಳಿಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ‘ಸಾರ್ವತ್ರಿಕ ಆರೋಗ್ಯ ಆಂದೋಲನ– ಕರ್ನಾಟಕ’ವು 600 ಹೊರರೋಗಿಗಳನ್ನು ಒಳಗೊಂಡ ಸಮೀಕ್ಷೆಯೊಂದನ್ನು ನಡೆಸಿದೆ. ಒಬ್ಬ ರೋಗಿಯು ಆಸ್ಪತ್ರೆಯ ಪ್ರತಿ ಭೇಟಿಗೆ ಸರಾಸರಿ ₹ 700 ಖರ್ಚು ಮಾಡುತ್ತಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.

ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಸೇವೆಯನ್ನು ಒದಗಿಸಿರುವುದು ನಿಜಕ್ಕೂ ಸ್ವಾಗತಾರ್ಹ ನಿರ್ಧಾರ. ಆದರೆ ಅದಕ್ಕಿಂತ ಹೆಚ್ಚು ಮುಖ್ಯವಾದುದು ಔಷಧಿಗಳು ಉಚಿತವಾಗಿ ಲಭ್ಯವಾಗುವಂತೆ ಮಾಡುವುದು. ಏಕೆಂದರೆ ಔಷಧಿಗಳು ಜೀವ ಉಳಿಸುತ್ತವೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುತ್ತವೆ.

ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಈ ಎಲ್ಲಾ ವಾಸ್ತವಗಳನ್ನು ಗಮನದಲ್ಲಿ ಇಟ್ಟುಕೊಂಡು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿಗಳು ಲಭ್ಯವಾಗುವಂತೆ ಮಾಡಲು ರಾಜ್ಯ ಸರ್ಕಾರ ರೂಪಿಸಬೇಕಾದ ನೀತಿ ಯಾವುದು? ಎಲ್ಲಕ್ಕಿಂತ ಮುಖ್ಯವಾಗಿ, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವನ್ನು (ಕೆಎಸ್ಎಂಎಸ್‌ಸಿಎಲ್) ಪುನಶ್ಚೇತನಗೊಳಿಸಿ ಅದನ್ನು ಸುವ್ಯವಸ್ಥಿತಗೊಳಿಸಬೇಕಾದ ತುರ್ತು ಅವಶ್ಯಕತೆಯಿದೆ. ಇದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ನೋಂದಾಯಿತ ಸಂಸ್ಥೆಯಾಗಿದ್ದು, ಇದರ ಕಚೇರಿಯು ಬೆಂಗಳೂರಿನಲ್ಲಿದೆ. ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇರುವ ಗೋದಾಮುಗಳಿಗೆ ರವಾನಿಸುವುದು ಇದರ ಆದ್ಯ ಕೆಲಸ. ಇದು 2002ರಲ್ಲಿ ಆರಂಭವಾಯಿತು. ಆಗ ಇದನ್ನು ‘ಕರ್ನಾಟಕ ಸ್ಟೇಟ್‌ ಡ್ರಗ್ಸ್ ಲಾಜಿಸ್ಟಿಕ್ಸ್ ಆ್ಯಂಡ್‌ ವೇರ್‌ಹೌಸಿಂಗ್ ಸೊಸೈಟಿ (ಕೆಎಸ್‌ಡಿಎಲ್‌&ಡಬ್ಲ್ಯುಎಸ್) ಎಂದು ಕರೆಯಲಾಗುತ್ತಿತ್ತು. ಈಗ ಅದರ ಹೆಸರು ಕೆಎಸ್‌ಎಂಎಸ್‌ಸಿಎಲ್‌ ಎಂದು ಬದಲಾಗಿದೆ. ಅಂದರೆ, ತನ್ನ ಆಸ್ಪತ್ರೆಗಳಲ್ಲಿ ಔಷಧಿಗಳನ್ನು ‘ಉಚಿತ’ವಾಗಿ ನೀಡುವ ರಾಜ್ಯದ ನೀತಿಯು ಸುಮಾರು ಎರಡು ದಶಕಗಳಷ್ಟು ಹಳೆಯದೇ ಸರಿ.

ಈ ಸೊಸೈಟಿಯ ಮೂಲಕ ಔಷಧಿಗಳನ್ನು ಉಚಿತವಾಗಿ ನೀಡುವಲ್ಲಿ ರಾಜ್ಯ ವಿಫಲವಾಗಿದೆ. ಸರ್ಕಾರಿ ಆಸ್ಪತ್ರೆಗಳ ಬಳಿ ಅಣಬೆಯಂತೆ ಹುಟ್ಟಿಕೊಂಡಿರುವ ಖಾಸಗಿ ಔಷಧಾಲಯಗಳ ಸಂಖ್ಯೆಯೇ ಇದಕ್ಕೆ ನಿದರ್ಶನ. ಅಷ್ಟುಸಾಲದು ಎಂಬಂತೆ, ಆಸ್ಪತ್ರೆಯ ಆವರಣದಲ್ಲಿರುವ ಜೆನರಿಕ್ ಮಳಿಗೆಗಳ ಮೂಲಕ ಔಷಧಿಗಳನ್ನು ಮಾರಾಟ ಮಾಡಲಾಗುತ್ತದೆ! ಇದು ತನ್ನದೇ ನೀತಿಗೆ ತಾನೇ ವಿರುದ್ಧವಾಗಿ ನಡೆದುಕೊಳ್ಳುವುದು! ಘೋಷಣೆಯಲ್ಲಿ ‘ಉಚಿತವಾಗಿ ಔಷಧಿಗಳನ್ನು ಪೂರೈಸುತ್ತೇವೆ’ ಎಂದು ಭರವಸೆ ನೀಡುತ್ತ ಜೊತೆಜೊತೆಗೆ ಅವುಗಳನ್ನು ಮಾರಾಟ ಮಾಡುವುದು!

ಉಚಿತವಾಗಿ ಔಷಧಿ ನೀಡುವುದಕ್ಕೆ ಅಧಿಕಾರಿಗಳ ಭ್ರಷ್ಟಾಚಾರವೇ ಅಡ್ಡಿಯಾಗಿ ನಿಂತಿದೆ. ಉದಾಹರಣೆಗೆ, ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ಸಂತೋಷ ಹೆಗ್ಡೆ ಅವರು ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಕೆ ವಹಿವಾಟಿನಲ್ಲಿ ₹ 100 ಕೋಟಿ ಮೊತ್ತದ ಹಗರಣವನ್ನು 2011ರ ಮಾರ್ಚ್‌ನಲ್ಲಿ ಬಯಲಿಗೆಳೆದಿದ್ದರು. ಮತ್ತೆ 2021ರಲ್ಲಿ, ಕೆಎಸ್‌ಎಂಎಸ್‌ಸಿಎಲ್‌ ₹ 3,000 ಕೋಟಿ ಮೊತ್ತದ ಉಪಕರಣಗಳ ಭಾರಿ ಅಕ್ರಮ ಖರೀದಿಯಲ್ಲಿ ತೊಡಗಿದೆ ಮತ್ತು ಸರ್ಕಾರವು ಮಾರುಕಟ್ಟೆ ಬೆಲೆಗಿಂತ 2–3 ಪಟ್ಟು ಹೆಚ್ಚು ಹಣ ಪಾವತಿಸಿದೆ ಎಂಬ ಆರೋಪ ಕೇಳಿಬಂದಿದೆ.

ಭ್ರಷ್ಟಾಚಾರ, ಆರ್ಥಿಕವಾಗಿ ದುರ್ಬಲರಾದವರ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ಕಾಳಜಿ ಇಲ್ಲದಿರುವುದು ಮತ್ತು ನಾಯಕತ್ವದ ಕೊರತೆಯು ಕೆಎಸ್‌ಎಂಎಸ್‌ಸಿಎಲ್‌ ಅದಕ್ಷವಾಗಿರುವುದಕ್ಕೆ ಕಾರಣವಾಗಿದೆ.

ಔಷಧಿಗಳನ್ನು ಉಚಿತವಾಗಿ ನೀಡುವ ಪರಿಕಲ್ಪನೆಯು ನೆರೆಯ ರಾಜ್ಯವಾದ ತಮಿಳುನಾಡಿನಲ್ಲಿ ಮೂರ್ತರೂಪಕ್ಕೆ ಬಂದಿತು. ಅಲ್ಲಿನ ಸರ್ಕಾರವು ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ 1993ರಲ್ಲಿ ತಮಿಳುನಾಡು ವೈದ್ಯಕೀಯ ಸೇವಾ ಕೇಂದ್ರವನ್ನು ಸ್ಥಾಪಿಸಿತು. ಅಂದಿನಿಂದ ಇಂದಿನವರೆಗಿನ ಈ ಮೂವತ್ತು ವರ್ಷಗಳ ಅವಧಿಯಲ್ಲಿ ತಮಿಳುನಾಡು ಸರ್ಕಾರ ತನ್ನ ಜನರಿಗೆ ಯಶಸ್ವಿಯಾಗಿ ಉಚಿತ ಔಷಧಿಗಳನ್ನು ಕೊಡುತ್ತಿದೆ. ಈ ಕಾರಣದಿಂದ, ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗೆ ಬರುವವರ ರಾಷ್ಟ್ರೀಯ ಸರಾಸರಿ ಪ್ರಮಾಣ ಶೇ 18ಕ್ಕೆ ಹೋಲಿಸಿದರೆ, ತಮಿಳುನಾಡಿನಲ್ಲಿ ಈ ಪ್ರಮಾಣ ಸುಮಾರು ಶೇ 40ರಷ್ಟಿದೆ. ಕರ್ನಾಟಕದಲ್ಲಿ ಇರುವಂತೆ ತಮಿಳುನಾಡಿನ ಸರ್ಕಾರಿ ಆಸ್ಪತ್ರೆಗಳ ಹೊರಭಾಗದಲ್ಲಿ ಯಾವುದೇ ಖಾಸಗಿ ಔಷಧಾಲಯಗಳಿಲ್ಲ ಎಂಬುದು ಗಮನಾರ್ಹ.

ತಮಿಳುನಾಡಿನಲ್ಲಿ ಭ್ರಷ್ಟಾಚಾರ ಇಲ್ಲವೆಂದೇನಿಲ್ಲ. ಆದರೂ ಅದರ ನಡುವೆಯೂ ಅವರು ಇದನ್ನು ಹೇಗೆ ಸಾಧಿಸಿರಬಹುದು ಎಂದು ಆಶ್ಚರ್ಯವಾಗುತ್ತದೆ. ರಾಜಕಾರಣಿಗಳು ಅಥವಾ ರಾಜಕೀಯ ಪಕ್ಷಗಳ ಹಸ್ತಕ್ಷೇಪವಿಲ್ಲದೆ ಸ್ವಾಯತ್ತ ತಮಿಳುನಾಡು ವೈದ್ಯಕೀಯ ಸೇವಾ ನಿಗಮವನ್ನು (ಟಿಎನ್‌ಎಂಎಸ್‌ಸಿ) ಸ್ಥಾಪಿಸುವ ಮೂಲಕ ಆ ರಾಜ್ಯವು ಯಶಸ್ಸಿಗೆ ಮುಂದಡಿ ಇಟ್ಟಿತು. ನಿಗಮದ ಆಡಳಿತದ ಹೊಣೆಯನ್ನು ಅನುಭವಿ ಐಎಎಸ್ ಅಧಿಕಾರಿಗೆ ವಹಿಸಲಾಯಿತು. ಇದು, ಔಷಧಿಗಳ ಸಂಗ್ರಹದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಭಾರಿ ಬದಲಾವಣೆಗಳನ್ನು ತರುವುದಕ್ಕೆ ನೆರವಾಯಿತು. ಔಷಧ ಪೂರೈಕೆ ಸರಪಳಿಯನ್ನು ಸಮರ್ಥವಾಗಿ ನಿರ್ವಹಿಸಲಾಯಿತು. ಇದರ ಪರಿಣಾಮವಾಗಿ, ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಉಂಟಾಗಲಿಲ್ಲ. ಗುಣಮಟ್ಟದ ಔಷಧಿಗಳನ್ನು ಪೂರೈಸಲು ವಿಫಲವಾದ ಔಷಧ ಕಂಪನಿಗಳಿಗೆ ನೋಟಿಸ್ ನೀಡಲಾಯಿತು ಮತ್ತು ಅವುಗಳ ಹೆಸರುಗಳನ್ನು ನಿಗಮದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಯಿತು.

ನಿಗಮವು ಇಡೀ ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಔಷಧಿಗಳನ್ನು ಖರೀದಿಸುತ್ತದೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯು ‘ಪೂಲ್ಡ್ ಪ್ರೊಕ್ಯೂರ್ಮೆಂಟ್’ ಎಂದು ಕರೆಯುತ್ತದೆ. ಇಲ್ಲಿ ಔಷಧಿಗಾಗಿ ಮಾಡುವ ವೆಚ್ಚ ತುಂಬಾ ಕಡಿಮೆ. ಉದಾಹರಣೆಗೆ, ಪ್ಯಾರಸಿಟಮಾಲ್ ಮಾತ್ರೆಯ ಬೆಲೆ ಬರೀ 36 ಪೈಸೆ. ಆದರೆ ಹೊರಗೆ ಖರೀದಿಸಿದಾಗ ಅದರ ಬೆಲೆ ಸುಮಾರು ₹ 2. ಅಂತೆಯೇ, ಗ್ರಿಸಿಯೋಫುಲ್ವಿನ್ 125 ಮಿಲಿ ಗ್ರಾಂ ಮಾತ್ರೆಯ ಬೆಲೆ ನಿಗಮದ ಮೂಲಕ ಖರೀದಿಸಿದಾಗ ₹ 1.48 ಆದರೆ, ಹೊರಗೆ ಖರೀದಿಸಿದರೆ ಅದರ ಬೆಲೆ ಸುಮಾರು ₹ 5. ಇದರಿಂದ ಬೆಲೆಯಲ್ಲಿ ಭಾರಿ ವ್ಯತ್ಯಾಸ ಇರುವುದನ್ನು ಕಾಣಬಹುದು. ಔಷಧಿಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿದಾಗ ಅದರ ಬೆಲೆ ಇಳಿಯುತ್ತದೆ. ಅದರಿಂದ ಜನರಿಗೆ ಉಚಿತವಾಗಿ ಕೊಡಲು ಸಾಧ್ಯವಾಗುತ್ತದೆ.

ಕೇರಳ ಮತ್ತು ರಾಜಸ್ಥಾನದಂತಹ ಕೆಲವು ರಾಜ್ಯಗಳು ತಮಿಳುನಾಡು ಮಾದರಿಯನ್ನು ಅನುಸರಿಸಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ನೀಡುವ ಮೂಲಕ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ಸು ಸಾಧಿಸಿವೆ. ಇದರಿಂದ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಉಚಿತವಾಗಿ ಲಭ್ಯವಾಗುವಂತೆ ಮಾಡಲು ಸಾಧ್ಯ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಇದನ್ನು ಸಾಧಿಸಲು ಕರ್ನಾಟಕಕ್ಕೆ ನಿರ್ದಿಷ್ಟ ದೃಷ್ಟಿಕೋನದೊಂದಿಗೆ ಬದ್ಧ ನಾಯಕತ್ವದ ಅಗತ್ಯವೂ ಇದೆ.

ಆರೋಗ್ಯ ಸಚಿವರು ಜನರಿಗೆ ಉಚಿತವಾಗಿ ಔಷಧಿಗಳನ್ನು ಕೊಡಬಯಸಿದರೆ, ಪಟ್ಟಭದ್ರ ಹಿತಾಸಕ್ತಿಗಳನ್ನು ಅವರು ಮೊದಲು ನಿವಾರಿಸಬೇಕು. ಆಳವಾಗಿ ಬೇರೂರಿ ದೊಡ್ಡ ಮಟ್ಟದಲ್ಲಿ ಅಡೆತಡೆಗಳನ್ನು ಸೃಷ್ಟಿಸುವ ಭ್ರಷ್ಟಾಚಾರಿಗಳನ್ನು ಮಟ್ಟ ಹಾಕಬೇಕು. ಅವರು ಈ ಕಾರ್ಯದಲ್ಲಿ ಯಶಸ್ವಿಯಾಗುವರೇ?

ಲೇಖಕ: ಅಧ್ಯಕ್ಷ, ಡ್ರಗ್ ಆ್ಯಕ್ಷನ್ ಫೋರಂ, ಕರ್ನಾಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT