ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊದಲು ಸಮಸ್ಯೆಗೆ ಪರಿಹಾರ ಇದೆಯೇ?

Last Updated 13 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ನಾನು ಮಾತನಾಡಲು ಪ್ರಾರಂಭಿಸಿದಾಗ ಸ್ಪಷ್ಟವಾಗಿ ಮಾತುಗಳು ಹೊರಡದೆ ತೊದಲುತ್ತೇನೆ. ಇದರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೇನೆ. ಮಾತನಾಡುವ ಆಸೆಯಿದ್ದರೂ ಸಾಧ್ಯವಾಗುವುದಿಲ್ಲ. ಏನು ಮಾಡಬೇಕು ತಿಳಿಸಿ.

ಕುಮಾರ್, ಊರಿನ ಹೆಸರಿಲ್ಲ

ತೊದಲುವಿಕೆ ಯಾವಾಗ ಶುರುವಾಗಿದೆ, ಯಾವ ಸಂದರ್ಭಗಳಲ್ಲಿ ಹೆಚ್ಚಾಗುತ್ತದೆ ಮುಂತಾದ ಪೂರ್ಣ ವಿವರಗಳಿಲ್ಲ. ಎಲ್ಲರೆದುರು ಅಸಂಬದ್ಧವಾಗಿ ಮಾತನಾಡಿ ಅವಮಾನಿತನಾಗುತ್ತೇನೆ ಎನ್ನುವ ನಿಮ್ಮ ಆಳದ ಅನಿಸಿಕೆ ಶಬ್ದಗಳಿಗೆ ತಡೆಹಾಕುವ ರಕ್ಷಣಾತಂತ್ರ ರೂಪಿಸಿರಬಹುದು. ಇದರಿಂದ ಹೊರಬರಲಾಗದೆ ಆತಂಕಗೊಂಡು ಕುಗ್ಗುತ್ತಿದ್ದೀರಿ. ನಿಮಗೆ ಆತ್ಮಗೌರವವನ್ನು ಪಡೆದುಕೊಳ್ಳುವ ಮನೋಚಿಕಿತ್ಸೆಯ ಅಗತ್ಯವಿದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತಿನ ತಜ್ಞರಿದ್ದರೆ (ಸ್ಪೀಚ್ ಥೆರಪಿಸ್ಟ್) ಸಂಪರ್ಕಿಸಿ. ಅಥವಾ ಮೈಸೂರಿನ ವಾಕ್‍ಶ್ರವಣ ಸಂಸ್ಥೆಯವರು ನಿಮಗೆ ಸಹಾಯಮಾಡುತ್ತಾರೆ. ನಗರಪ್ರದೇಶಗಳಲ್ಲಿ ಖಾಸಗಿ ಮಾತಿನತಜ್ಞರ ಚಿಕಿತ್ಸಾಲಯಗಳಿವೆ.

ನನ್ನ ಸಮಸ್ಯೆಯನ್ನು ಹೇಳಿಕೊಂಡರೆ ಎಲ್ಲಿ ಕೀಳಾಗಿ ನೋಡುತ್ತಾರೋ ಅಂತ ಭಯ. ನಾನು ಸಲಿಂಗಕಾಮಿಯಿರಬಹುದೇ ಎನ್ನುವ ಅನುಭವವಾಗುತ್ತಿದೆ. ವೈವಾಹಿಕ ಜೀವನದ ಬಗ್ಗೆ ತುಂಬಾ ಆಸೆಗಳಿವೆ. ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದೀನಿ. ಮದುವೆಯಾದರೆ ತೊಂದರೆಯಾಗುತ್ತದೆಯೇ? ಒಬ್ಬ ಸಹಜ ಪುರುಷನಾಗಲು ಇಷ್ಟಪಡುತ್ತೇನೆ. ಹೇಗೆ ಎಂದು ತಿಳಿಸಿ.

ಹೆಸರು, ಊರು ಇಲ್ಲ

ಸಲಿಂಗಕಾಮ ಪ್ರಕೃತಿಸಹಜವಾದರೂ ಸಾಮಾಜಿಕವಾಗಿ ಕಳಂಕವಾಗಿದೆ. ಅದರ ಬಗ್ಗೆ ನಿಮ್ಮೊಳಗೇ ಇರುವ ಕೀಳರಿಮೆ ಮಾತ್ರ ಸ್ಪಷ್ಟವಾಗಿದೆ. ನಾನು ಸಹಜ ಗಂಡಸಾಗಬೇಕು ಎಂದು ಹೇಳುವಾಗ ಸಲಿಂಗಕಾಮ ಅಸಹಜ, ಅನೈಸರ್ಗಿಕ ಎಂದು ಹೇಳುತ್ತಿದ್ದೀರಲ್ಲವೇ? ಇದೇ ಹಿಂಜರಿಕೆ ನಿಮ್ಮ ಲೈಂಗಿಕ ಆದ್ಯತೆಗಳನ್ನು ಗುಟ್ಟಾಗಿ ಇಡುವುದಕ್ಕೆ ಕಾರಣವಾಗಿದೆ.
ಪ್ರೀತಿಸುವ ಹುಡುಗಿಯ ಕುರಿತು ಲೈಂಗಿಕ ಕಲ್ಪನೆಗಳು ಬರುತ್ತಿದೆಯೇ? ನಿಮ್ಮ ಲೈಂಗಿಕ ಹಗಲುಗನಸು ಕಲ್ಪನೆಯ ವ್ಯಕ್ತಿಗಳು ಪುರುಷರೇ ಅಥವಾ ಸ್ತ್ರೀಯರೇ? ಪುರುಷರು ಮಾತ್ರ ನಿಮಗೆ ಲೈಂಗಿಕವಾಗಿ ಆಕರ್ಷಕ ಎನ್ನಿಸಿದರೆ ನೀವು ಸಲಿಂಗಿಗಳು. ಇಬ್ಬರೂ ಕಲ್ಪನೆಯಲ್ಲಿ ವಿಹರಿಸಿ ನಿಮ್ಮನ್ನು ಉದ್ರೇಕಿಸಬಲ್ಲರಾದರೆ ನೀವು ದ್ವಿಲಿಂಗಿಗಳಾಗಿರುವ ಸಾಧ್ಯತೆಗಳಿವೆ. ಸಲಿಂಗಿಯಾಗಿದ್ದರೆ ಹುಡುಗಿಯನ್ನು ಮದುವೆಯಾಗಿ ತೃಪ್ತಿಯ ಬದುಕು ಕಷ್ಟವಾಗಬಹುದು. ದ್ವಿಲಿಂಗಿಯಾಗಿದ್ದರೆ ಮದುವೆಗೆ ಮುನ್ನ ನೀವು ಪ್ರೀತಿಸುವ ಹುಡುಗಿಯೊಡನೆ ಮುಕ್ತವಾಗಿ ಚರ್ಚೆಮಾಡಿ ಪೂರ್ಣಮನಸ್ಸಿನ ಒಪ್ಪಿಗೆ ಪಡೆಯಿರಿ.

ಎಲ್ಲಾ ಗೊಂದಲಗಳ ಪರಿಹಾರಕ್ಕೆ ತಜ್ಞ ಲೈಂಗಿಕ ಮನೋಚಿಕಿತ್ಸಕರ ಸಹಾಯ ಪಡೆಯಿರಿ.

ಓದು ಮುಗಿಸಿ 2 ವರ್ಷವಾಯಿತು. ಸರಿಯಾದ ಕೆಲಸ ಸಿಗುತ್ತಿಲ್ಲ. ಏನು ಮಾಡುವುದು ಗೊತ್ತಿಲ್ಲ, ಯಾರ ಜೊತೆ ಮಾತನಾಡಲೂ ಆಗುತ್ತಿಲ್ಲ. ಉತ್ತಮ ಸ್ನೇಹಿತರು ಸಿಗುತ್ತಿಲ್ಲ. ಮನೆಯಲ್ಲಿ ಕಷ್ಟಗಳಿವೆ. ಯಾಕೋ ತುಂಬಾ ಭಯ ಮತ್ತು ಬೇಸರವಾಗಿದೆ. ಜೀವನದಲ್ಲಿ ಮುಂದೆ ಬರಬೇಕು ಎನ್ನುವ ಆಸೆಯಿದೆ. ಮಾರ್ಗದರ್ಶನ ಮಾಡಿ.

ಕಿರಣ್‍ಕುಮಾರ್, ಊರು ಇಲ್ಲ

ಪತ್ರದ ತುಂಬಾ ಹತಾಶೆಯ ಧ್ವನಿಯಿದೆ. ಜೊತೆಗೆ ತುಂಬಾ ಗೊಂದಲವಿದೆ. ಪ್ರಶ್ನೆಯಲ್ಲಿನ ಶಬ್ದಗಳನ್ನು ಗಮನಿಸಿದ್ದೀರಾ? ಸರಿಯಾದ ಕೆಲಸ, ಉತ್ತಮ ಸ್ನೇಹಿತರು, ಮುಂದೆ ಬರಬೇಕು-ಇವೆಲ್ಲಾ ನಿಮ್ಮೊಳಗಿರುವ ಅಸ್ಪಷ್ಟತೆಯನ್ನು ಸೂಚಿಸುತ್ತಿದೆ. ಎಲ್ಲಿಗೆ ಹೋಗಬೇಕು ಎನ್ನುವುದು ನಿಮಗೇ ಗೊತ್ತಿಲ್ಲದಿದ್ದರೆ ಹೇಗೆ ಮಾರ್ಗದರ್ಶನ ಮಾಡುವುದು ಕಿರಣ್? ಮೊದಲು ನಿಮ್ಮ ಆಸಕ್ತಿಗಳೇನು ಎನ್ನುವುದನ್ನು ಪಟ್ಟಿ ಮಾಡಿಕೊಳ್ಳಿ. ತಕ್ಷಣ ಅವುಗಳನ್ನು ಬೆನ್ನು ಹತ್ತುವುದು ಸಾಧ್ಯವಿಲ್ಲದಿದ್ದರೂ ನಿಮಗಿರುವ ಮಿತಿಗಳಲ್ಲಿ ಅವುಗಳ ಕಡೆ ಸಣ್ಣಸಣ್ಣ ಹೆಜ್ಜೆ ಇಡುವುದು ಹೇಗೆ ಎಂದು ಯೋಚಿಸಿ. ಜೀವನ ನಿರ್ವಹಣೆಗೆ ತಾತ್ಕಾಲಿಕವಾದ ದಾರಿಯೊಂದನ್ನು ಹುಡುಕಿಕೊಂಡು ನಿಧಾನವಾಗಿ ನಿಮ್ಮ ಆಸಕ್ತಿಗಳನ್ನು ಹಿಂಬಾಲಿಸಿ. ಸ್ನೇಹಿತರು ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳಲ್ಲ. ನೀವು ಸುತ್ತಲಿನ ಜನರ ಬಗೆಗೆ ಆಸಕ್ತಿ ತೋರಿಸುತ್ತಾ ಹೋದರೆ ಅವರಲ್ಲಿಯೇ ಕೆಲವು ಸ್ನೇಹಿತರು ಸಿಗಲೇಬೇಕು.

ಈ ವಯಸ್ಸಿನಲ್ಲಿ ಗೊಂದಲಗಳು ಸಹಜ. ನಿಮ್ಮೊಳಗಿನ ಹತಾಶೆ ಜಗತ್ತನ್ನು ನೋಡುವ ನಿಮ್ಮ ಕಣ್ಣಿನ ಮುಂದೆ ತಡೆಯಾಗಿದೆ. ಪರದೆಯನ್ನು ಸರಿಸಿ ಹೊರಗೆ ನೋಡಿ. ಚಿಕ್ಕದಾದರೂ ದೂರದಲ್ಲೊಂದು ಆಶಾದೀಪ ಹೊಳೆಯುತ್ತಿರುತ್ತದೆ.

ನಾನು ಹೆಸ್ಕಾಂನಲ್ಲಿ ಕಿರಿಯ ಸಹಾಯಕ. ಆತಂಕದ ಸಮಸ್ಯೆಯಿಂದಾಗಿ ನನಗೆ ಕೆಲಸ ಮಾಡುವುದು ಕಷ್ಟವಾಗುತ್ತಿದೆ. ಸಹಾಯಮಾಡಿ.

ವೀರೇಶ್, ಊರಿನ ಹೆಸರಿಲ್ಲ

ಆತಂಕ ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ ಆಗುವ ಸಹಜ ಅನುಭವ. ಅದು ಕಾಯಿಲೆಯೂ ಅಲ್ಲ, ಸಮಸ್ಯೆಯೂ ಅಲ್ಲ. ನಿಮ್ಮೊಳಗಿನ ಆತಂಕ ನಿಮ್ಮ ವ್ಯಕ್ತಿತ್ವದ ಬಗೆಗೆ ನಿಮ್ಮದೇ ಮನಸ್ಸಿನಲ್ಲಿರುವ ಕೆಲವು ಅಂಶಗಳನ್ನು ಸೂಚಿಸುತ್ತಾ ನಿಮಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದೆ. ನೀವು ಅದನ್ನು ಗಮನಿಸುತ್ತಿಲ್ಲ. ನಿನಗೆ ಇಲ್ಲಿ ಕೆಲಸ ಮಾಡುವ ಯೋಗ್ಯತೆಯಿಲ್ಲ, ತಪ್ಪುಗಳನ್ನು ಮಾಡಿ ಕೆಲಸ ಕಳೆದುಕೊಳ್ಳುತ್ತೀಯಾ, ಅವಮಾನ ಅನುಭವಿಸುತ್ತೀಯಾ, ಇದರಿಂದ ಭವಿಷ್ಯದಲ್ಲಿ ಅಪಾಯವಿದೆ- ಇಂತಹ ಹಲವಾರು ಅಂಶಗಳನ್ನು ಆತಂಕ ಹೇಳುತ್ತಿರಬಹುದೇ? ಇವೆಲ್ಲವನ್ನೂ ಗಮನಿಸಿ ಪಟ್ಟಿ ಮಾಡಿಕೊಳ್ಳಿ. ನಿಧಾನವಾಗಿ ಎಲ್ಲವನ್ನೂ ಪರೀಕ್ಷಿಸಿ. ಕೌಶಲ, ಕ್ಷಮತೆ, ವೇಗ, ಜ್ಞಾನದ ಕೊರತೆಯಿದೆ ಎನ್ನಿಸಿದರೆ ಅವುಗಳನ್ನು ಸರಿಪಡಿಸಿಕೊಳ್ಳಲು ಕಚೇರಿಯ ಹಿರಿಯರ ಸಹಾಯ ಪಡೆಯಿರಿ. ಆತಂಕವನ್ನು ಹತ್ತಿಕ್ಕಲು, ಧೂಮಪಾನ, ನಶೆಯ ವಸ್ತುಗಳು ಮೊಬೈಲ್ ಟಿ.ವಿ ಮುಂತಾದವುಗಳ ಮೊರೆಹೋಗದಂತೆ ಎಚ್ಚರವಹಿಸಿ.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT