ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ಪಿಡುಗು: ಆರೋಗ್ಯ ವೃದ್ಧಿಗೆ ಆಯುರ್ವೇದ ಕಷಾಯ

Last Updated 5 ಮೇ 2021, 6:58 IST
ಅಕ್ಷರ ಗಾತ್ರ

ಕೊರೊನಾ ವೈರಸ್ ಸೋಂಕು ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಹರಡಿದ್ದು, ಇದನ್ನು ಗುಣಪಡಿಸುವಂತಹ ಯಾವುದೇ ಪರಿಣಾಮಕಾರಿ ಔಷಧಿ ಸದ್ಯಕ್ಕಂತೂ ಲಭ್ಯವಿಲ್ಲ. ಈ ಕುರಿತು ವಿಜ್ಞಾನಿಗಳು ಅವಿರತವಾಗಿ ಯತ್ನಿಸುತ್ತಿದ್ದು, ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಆಯುರ್ವೇದಶಾಸ್ತ್ರದಲ್ಲಿ ಉಲ್ಲೇಖಿಸಲಾಗಿರುವ ಕೊರೊನಾದಂತಹ ಸಾಂಕ್ರಾಮಿಕ ರೋಗಗಳ ನಿರ್ವಹಣೆಯ ಮಾರ್ಗೋಪಾಯಗಳ ಬಗ್ಗೆ ಬೆಳಕು ಚೆಲ್ಲುವ ಯತ್ನವಿದು.

ಈ ಕೊರೊನಾ ವೈರಸ್ ಮೂಲ ಚೀನಾದ ವುಹಾನ್‌ ನಗರ. ಇಲ್ಲಿರುವಂತಹ ಮಾಂಸದ ಮಾರುಕಟ್ಟೆಯಿಂದಲೇ ಈ ಸೂಕ್ಷಾಣು ಜೀವಿ ಹರಡಿದೆ ಎಂದು ಮೂಲಗಳು ಹೇಳುತ್ತವೆ. ಸಾವಿರಾರು ವರ್ಷಗಳ ಹಿಂದೆ ರಚಿಸಿರುವ ಸುಶ್ರುತ ಸಂಹಿತೆಯಲ್ಲಿ, ಈ ಶುಷ್ಕ ಮಾಂಸ, ಕೊಳೆತ ಮಾಂಸದ ಭಕ್ಷಣೆಯಿಂದ ಅರುಚಿ, ಶ್ವಾಸರೋಗ, ಕೆಮ್ಮು ಮುಂತಾದ ಪ್ರಾಣಘಾತಕ ರೋಗಗಳು ಬರುತ್ತವೆ ಎಂದು ಉಲ್ಲೇಖಿಸಲಾಗಿದೆ. ಆಯುರ್ವೇದದಲ್ಲಿ ಕೊರೊನಾದಂತಹ ಸೂಕ್ಷಾಣು ಜೀವಿಗಳನ್ನು ಕ್ರಿಮಿ, ಅದೃಶ್ಯ ಕ್ರಿಮಿ, ರಾಕ್ಷಸ ಎಂಬಿತ್ಯಾದಿ ಹೆಸರುಗಳಿಂದ ವಿವರಿಸಲಾಗಿದೆ. ಕ್ರಿಮಿ ರೋಗ ಚಿಕಿತ್ಸೆಯನ್ನು ಕೂಡ ಆಯುರ್ವೇದದಲ್ಲಿ ಹೇಳಲಾಗಿದೆ. ಉದಾಹರಣೆಗೆ ಅಪಕರ್ಷಣ. ಅಂದರೆ ತೆಗೆದು ಹಾಕುವುದು (ತೊಳೆದುಕೊಳ್ಳುವುದು). ಪ್ರಸ್ತುತ ಸನ್ನಿವೇಶದಲ್ಲಿ ಕೈಗಳನ್ನು ತೊಳೆದುಕೊಳ್ಳುವುದು ಕೂಡ ಈ ರೋಗವನ್ನು ಬರದಂತೆ, ಹರಡದಂತೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ವೈರಸ್‌ ನಾಶಪಡಿಸುವ ಏಜೆಂಟ್‌

ಆಯುರ್ವೇದದಲ್ಲಿ ವರ್ಣಿಸಿರುವ ಹಲವಾರು ವನಸ್ಪತಿಗಳು, ರಸೌಷಧಿಗಳು ಆ್ಯಂಟಿ ವೈರಲ್, ವೈರುಸೈಡಲ್ (ವೈರಸ್‌ ನಾಶಪಡಿಸುವ ಏಜೆಂಟ್‌) ಆಗಿ ಕಾರ್ಯ ನಿರ್ವಹಿಸುತ್ತವೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಉದಾಹರಣೆಗೆ ನೆಲನೆಲ್ಲಿ, ಅಮೃತ ಬಳ್ಳಿ, ತ್ರಿಫಲಾ, ಸ್ವರ್ಣ ರಜತಾದಿ ಭಸ್ಮಗಳು.

ಇಂತಹ ಸೋಂಕಿನ ವಿರುದ್ಧ ಹೋರಾಡಲು ವ್ಯಾಧಿ ಕ್ಷಮತೆ ಅಂದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅಗತ್ಯ. ಕೆಲವು ವಿಧಿ ವಿಧಾನಗಳನ್ನು ಅನುಸರಿಸಿ, ಈ ವ್ಯಾಧಿ ಕ್ಷಮತೆ ಹೆಚ್ಚಿಸಿಕೊಳ್ಳುವ ಮೂಲಕ ಆರೋಗ್ಯಕರ ಜೀವನ ನಡೆಸಬಹುದು.

* ನಿತ್ಯ ರಾತ್ರಿ 6–8 ಗಂಟೆ ನಿದ್ರೆ, ಮಧ್ಯಾಹ್ನದ ನಿದ್ರೆ ವರ್ಜ್ಯ.

* ಸೂರ್ಯೋದಯಕ್ಕೆ ಸುಮಾರು ಒಂದು ತಾಸು ಮೊದಲೇ ನಿದ್ರೆಯಿಂದ ಎದ್ದು ಶೌಚಾದಿ ಕ್ರಿಯೆಗಳನ್ನು ಮುಗಿಸಬೇಕು.

* ದಿನಕ್ಕೆ 30–45 ನಿಮಿಷ ವ್ಯಾಯಾಮ, ಯೋಗ, ಧ್ಯಾನ ಮಾಡಬೇಕು.

* ಸಸ್ಯಕರ್ಮ - ದಿನಕ್ಕೆರಡು ಬಾರಿ ಮೂಗಿನ ಹೊಳ್ಳೆಗಳಿಗೆ ಅಣುತೈಲ (ಸಿದ್ಧೌಷಧ) / ಎಳ್ಳೆಣ್ಣೆ / ತೆಂಗಿನ ಎಣ್ಣೆ/ ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ಎರಡೆರಡು ಹನಿಗಳನ್ನು ಬಿಟ್ಟುಕೊಳ್ಳಬೇಕು (7 ವರ್ಷ ಮೇಲ್ಪಟ್ಟವರು ಮಾತ್ರ)

* 1–2 ಚಮಚ ಎಳ್ಳೆಣ್ಣೆ/ ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿ ಸುಮಾರು 3–5 ನಿಮಿಷ ಇಟ್ಟುಕೊಂಡು ಉಗಿಯಬೇಕು. ನಂತರ ಬಿಸಿ ನೀರಿನಿಂದ ಬಾಯಿಯನ್ನು ಮುಕ್ಕಳಿಸಬೇಕು.

* ಹಿತವಾದ ಆಹಾರವನ್ನು ನಿಯಮಿತ ಪ್ರಮಾಣದಲ್ಲಿ ಹಸಿವಾದಾಗ ಸೇವಿಸಬೇಕು.

* ಯಾವುದೇ ಕಾರಣಕ್ಕೂ ಅಜೀರ್ಣವಾಗದಂತೆ ಎಚ್ಚರ ವಹಿಸಬೇಕು.

* ಆಹಾರವು ಷಡ್ರಸಯುಕ್ತವಾಗಿದ್ದರೆ ಒಳ್ಳೆಯದು.

* ಆಹಾರವನ್ನು ಬಿಸಿ ಬಿಸಿ ಇರುವಾಗಲೇ ಸೇವಿಸಬೇಕು. ತಂಗಳು ಆಹಾರ ಸೇವನೆ ಯೋಗ್ಯವಲ್ಲ.

* ಆಹಾರದಲ್ಲಿ ಮಸಾಲೆ ಪದಾರ್ಥಗಳಾದ ಕಾಳುಮೆಣಸು, ಅರಿಸಿನ, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ದಾಲ್ಚಿನ್ನಿ, ಲವಂಗ, ಕೊತ್ತಂಬರಿ ಕಾಳು ಇವುಗಳನ್ನೆಲ್ಲಾ ನಿಯಮಿತವಾಗಿ ಬಳಸಬೇಕು.

* ಕಾಯಿಸಿ ಆರಿಸಿದ ನೀರು, ಬೆಚ್ಚನೆಯ ನೀರನ್ನು ಸೇವಿಸಬೇಕು

* ನಾವು ವಾಸಿಸುವ ಪ್ರದೇಶಗಳಲ್ಲಿ ಋತುಮಾನಕ್ಕೆ ಅನುಸಾರವಾಗಿ ಬೆಳೆಯುವಂತಹ ಹಣ್ಣು, ತರಕಾರಿಗಳನ್ನು ಸೇವಿಸಬೇಕು.

* ಫ್ರಿಜ್‌ನಲ್ಲಿಟ್ಟಿರುವ ಆಹಾರ ಸೇವನೆ ಒಳ್ಳೆಯದಲ್ಲ.

ಕಷಾಯ, ರಸಾಯನ

* ಶುಂಠಿ, ಕೊತ್ತಂಬರಿ ಕಾಳು, ಜೀರಿಗೆ, ದಾಲ್ಚಿನ್ನಿ, ಕಾಳುಮೆಣಸು, ಸೋಂಪು ಇವುಗಳ ಮಿಶ್ರಣವನ್ನು ನೀರು ಹಾಕಿ ಕುದಿಸಿ ಸ್ವಲ್ಪ ಬೆಲ್ಲವನ್ನು ಸೇರಿಸಿ ಸೇವಿಸಿ.

* ಅಮೃತ ಬಳ್ಳಿ, ತುಳಸಿ, ಕೊತ್ತಂಬರಿ ಕಾಳು, ಸ್ವಲ್ಪ ಬೆಲ್ಲಕ್ಕೆ ನೀರು ಹಾಕಿ ಕುದಿಸಿ ಸೇವಿಸಿ.

* ಮಜ್ಜಿಗೆಹುಲ್ಲು, ಶುಂಠಿ, ದಾಲ್ಚಿನ್ನಿ, ಕೊತ್ತಂಬರಿ ಕಾಳು, ಸ್ವಲ್ಪ ಬೆಲ್ಲವನ್ನು ನೀರಿನೊಂದಿಗೆ ಕುದಿಸಿ ಕುಡಿಯಿರಿ.

* ಒಂದು ಚಮಚ ತುಳಸಿ ಎಲೆಯ ರಸದ ಜೊತೆಗೆ ಅರ್ಧ ಚಮಚ ಜೇನು ಸೇವಿಸಿ.

* ಒಂದು ಬೆಟ್ಟದ ನೆಲ್ಲಿಕಾಯಿಯನ್ನು ಜೇನುತುಪ್ಪ ಮಿಶ್ರಣ ಮಾಡಿ ತಿನ್ನಿ.

* ಕಾಲು ಚಮಚ ಹಿಪ್ಪಲಿ ಪುಡಿ ಜೇನುತುಪ್ಪದ ಜೊತೆಗೆ ಮಿಶ್ರಣ ಮಾಡಿ ಸೇವಿಸಿ.

ಈ ಕಷಾಯಗಳನ್ನು ಬೆಳಿಗ್ಗೆ ಮತ್ತು ಸಾಯಂಕಾಲ ಆಹಾರದ ಮೊದಲು 20– 30 ಮಿ.ಲೀ.ವರೆಗೆ ಸೇವಿಸಬಹುದು. ಅತಿಯಾದ ಸೇವನೆಯಿಂದ ದೇಹದಲ್ಲಿ ಉಷ್ಣತೆ ಹೆಚ್ಚಿ ಉರಿ ಮೂತ್ರ, ಮಲಬದ್ಧತೆ ಉಂಟಾಗಬಹುದು. ಅವಶ್ಯಕತೆ ಇದ್ದಲ್ಲಿ ಆಯುರ್ವೇದ ತಜ್ಞವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಬಹುದು.

(ಲೇಖಕರು ಸಹ ಪ್ರಾಧ್ಯಾಪಕರು ಮತ್ತು ಆಯುರ್ವೇದ ತಜ್ಞರು, ಸಿಬಿ ಗುತ್ತಲ್‌ ಆಯುರ್ವೇದ ವೈದ್ಯಕೀಯ ಕಾಲೇಜು, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT