ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನಪಾಠ | ಶಾಂತಿಯ ಮಾರ್ಗಗಳು

Last Updated 9 ಜನವರಿ 2023, 19:30 IST
ಅಕ್ಷರ ಗಾತ್ರ

ಜೀವನದ ಪ್ರತಿಯೊಂದು ಸನ್ನಿವೇಶವೂ ನಮಗೆ ಪಾಠವೇ. ಪ್ರೇಮ, ಸಹಾನುಭೂತಿ, ಭಯ, ದುಃಖ, ದಯಾಪರತೆ, ಅಸೂಯೆ, ಅಳು, ನಗು, ಕೋಪ, ಒಂಟಿಭಾವ – ಇವೆಲ್ಲವುಗಳಿಂದಲೂ ನಾವು ಜೀವನಪಾಠವನ್ನು ಕಲಿಯಬಹುದು.

***

ಇಂದು ನನ್ನ ಸ್ನೇಹಿತರೊಬ್ಬರು ಶುಭಾಶಯ ಕೋರುತ್ತ ಕೇಳಿದರು, ‘ಶುಭೋದಯ ದಾಜಿ, ಹೇಗಿದ್ದೀರಿ?’ ಅಂತಹ ಸಮಯದಲ್ಲಿ ನಾವು ಅಪ್ರಯತ್ನವಾಗಿ ಉತ್ತರಿಸುತ್ತೇವೆ: ‘ಚೆನ್ನಾಗಿದ್ದೇನೆ’. ಅನಂತರ ನಮಗಿರುವ ಅನಾರೋಗ್ಯಗಳೋ ಕೆಲಸಕ್ಕೋ ಕುಟುಂಬಕ್ಕೋ ಸಂಬಂಧಿಸಿದ ಚಿಂತೆಗಳು ನೆನಪಾಗುತ್ತವೆ. ಪರಿಸ್ಥಿತಿ ಯಾವಾಗಲೂ ಸಂಪೂರ್ಣವಾಗಿ ಸರಿಯಾಗಿರುವುದಿಲ್ಲ.

ಆತಂಕ, ತಳಮಳ ಮತ್ತು ದುಗುಡಗಳಿಗೆ ನಾವೇ ಅವಕಾಶ ಮಾಡಿಕೊಡುತ್ತೇವೆ. ಶಾಂತಿಯನ್ನು ಅನ್ವೇಷಿಸುವ ನಾವು, ಅರಿವಿಲ್ಲದೆಯೆ ಶಾಂತಿಯಿಲ್ಲದಿರುವಾಗ ಸ್ಪಂದಿಸದೆ, ಪ್ರತಿಕ್ರಿಯಿಸುತ್ತೇವೆ. ಶಾಂತಿ ನಮಗೆ ಶಕ್ತಿ ನೀಡುತ್ತದೆ. ಶಾಂತಿ ಇಲ್ಲದಿದ್ದರೆ ನಮಗೆ ಜೀವನದ ಮೇಲೆ ಹಿಡಿತ ಕಳೆದುಕೊಂಡಂತೆ ಭಾಸವಾಗುತ್ತದೆ.

ಸಾಮಾನ್ಯವಾಗಿ ನಾವು ನಮ್ಮ ಜೀವನವನ್ನು ಒಂದು ನಿರ್ದಿಷ್ಟ ಕೋನದಿಂದ ಪರಿಶೀಲಿಸುತ್ತೇವೆ. ನಮಗೆ ನಮ್ಮದೇ ವ್ಯಕ್ತಿತ್ವ ಮತ್ತು ಪ್ರವೃತ್ತಿಗಳಿವೆ. ಭೂಮಿಯಲ್ಲಿ ನಾವು ಕೆಲವೇ ದಿನಗಳ ಅತಿಥಿಗಳು. ಹಾಗಾಗಿ, ಭೂಮಿಯನ್ನು ನಮಗೆ ಪಾಠ ಕಲಿಸುವ ಶಾಲೆಯಂತೆ ಪರಿಗಣಿಸಿದರೆ, ನಮ್ಮ ಕಣ್ಣು, ಹೃದಯ ಮತ್ತು ಮನಸ್ಸುಗಳನ್ನು ತೆರೆದು, ನಮ್ಮ ಜೀವನಪಾಠಗಳನ್ನು ಸೋಲು-ಗೆಲುವುಗಳ ತಕ್ಕಡಿಯಲ್ಲಿಟ್ಟು ತೂಗದೆ, ಸಿದ್ಧಮನಸ್ಸಿನಿಂದ ಪ್ರೇಮದಿಂದ ಸ್ವೀಕರಿಸಬೇಕು. ಆಗ ನಾವು ನಮ್ಮ ಮಾನಸಿಕ ಹಾಗೂ ಭಾವನಾತ್ಮಕ ಗ್ರಹಿಕೆಗಳನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಜೀವನದ ಪ್ರತಿಯೊಂದು ಸನ್ನಿವೇಶವೂ ನಮಗೆ ಪಾಠವೇ. ಪ್ರೇಮ, ಸಹಾನುಭೂತಿ, ಭಯ, ದುಃಖ, ದಯಾಪರತೆ, ಅಸೂಯೆ, ಅಳು, ನಗು, ಕೋಪ, ಒಂಟಿಭಾವ – ಇವೆಲ್ಲವುಗಳಿಂದಲೂ ನಾವು ಜೀವನಪಾಠವನ್ನು ಕಲಿಯಬಹುದು. ನಾವು ಇದಕ್ಕಾಗಿ ವಿಶೇಷವಾಗಿ ಸಿದ್ಧರಾಗಬೇಕಿಲ್ಲ. ಆದರೆ ನಾವು ಮುಕ್ತಭಾವದಿಂದ ಈ ಸಂದರ್ಭಗಳನ್ನು ಸ್ವೀಕರಿಸಬೇಕು. ಈ ಪ್ರಯತ್ನವೇ ಶಾಂತಿಯನ್ನು ನೀಡುತ್ತದೆ.

ಮಗುವೊಂದು ತನ್ನ ತಾಯಿಯ ಮಡಿಲಲ್ಲಿ ಇರಬಯಸುವಂತೆ ಪ್ರಕೃತಿಯ ಮಡಿಲಲ್ಲೂ ಇರಬಯಸುವುದು ಮಾನವ ಸಹಜಗುಣ. ನಾವು ಪ್ರಕೃತಿಯ ಮಡಿಲಲ್ಲೂ ಶಾಂತಿಯನ್ನು ಅನುಭವಿಸುತ್ತೇವೆ. ಪ್ರಕೃತಿ ನಮ್ಮನ್ನು ಆವರಿಸಿದೆ. ನಗರದ ಗದ್ದಲದ ನಡುವೆಯೂ ಪ್ರಕೃತಿಯನ್ನು ನಮ್ಮ ಜೀವನದಲ್ಲಿ ಕಂಡುಕೊಳ್ಳುವ ಅರ್ಥಪೂರ್ಣ ಮಾರ್ಗಗಳಿವೆ. ನಿಮ್ಮ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ಕುಂಡಗಳಲ್ಲಿ ಬೆಳೆಸಿದ ಪುಟ್ಟ ಕೈತೋಟವು ಅಳಿಲುಗಳನ್ನು, ಕೀಟಗಳನ್ನು, ಚಿಟ್ಟೆಗಳನ್ನು ಆಕರ್ಷಿಸುತ್ತದೆ. ಮುಂಜಾನೆಯ ಧ್ಯಾನದ ನಂತರ ಬೆಳಗು ಹರಿಯುತ್ತಲೇ, ಮನೆಯ ಮಾಳಿಗೆಯ ಮೇಲಿನಿಂದ ಉದಯಿಸುತ್ತಿರುವ ಸೂರ್ಯನನ್ನು ನೋಡುವುದು, ಅಡುಗೆಮನೆಯ ಕಿಟಕಿಯ ಮೇಲೆ ಔಷಧೀಯ ಸಸ್ಯಗಳನ್ನು ಇಟ್ಟು, ಅವುಗಳನ್ನು ಪ್ರೇಮದಿಂದ ಬೆಳೆಸುವುದು, ಹತ್ತಿರದ ಉದ್ಯಾನದಲ್ಲಿ ನಿಯತವಾಗಿ ಜಾಗಿಂಗ್‌ ಮಾಡುವುದು, ನಿಮ್ಮ ಮಲಗುವ ಕೋಣೆಯ ಬಾಲ್ಕನಿಯಲ್ಲಿ ನೀರಿನ ಬಟ್ಟಲನ್ನಿಟ್ಟು ಹಕ್ಕಿಗಳ ಬಾಯಾರಿಕೆಯನ್ನು ತಣಿಸುವುದು – ಇವು ಕೆಲವು ಅಂಥ ಉದಾಹರಣೆಗಳು. ಪ್ರಕೃತಿಯನ್ನು ನಮ್ಮ ಜೀವನಗಳಲ್ಲಿ ಸಾಕ್ಷಾತ್ಕರಿಸಿಕೊಳ್ಳಲು ಪ್ರತಿಯೊಬ್ಬರೂ ಅವರವರ ಅಗತ್ಯ ಮತ್ತು ಅವಕಾಶಗಳಿಗೆ ತಕ್ಕಂತೆ ತೊಡಗಬೇಕು. ಪ್ರಕೃತಿಯ ಭೌತಿಕ ಅಂಶಗಳಾದ ಹಕ್ಕಿಗಳು, ದುಂಬಿಗಳು, ಗಿಡಮರಗಳು ಮತ್ತು ಪ್ರಾಣಿಗಳೊಂದಿಗೆ ನಮ್ಮನ್ನು ಬೆಸೆಯುವಂಥ ಚಟುವಟಿಕೆಗಳಲ್ಲಿ ಸಂತೋಷದಿಂದ ತೊಡಗಬೇಕು. ಅತ್ಯಂತ ಗಡಿಬಡಿಯ ಮತ್ತು ಅಸ್ತವ್ಯಸ್ತ ಎನಿಸಿರುವ ನಗರಜೀವನದಲ್ಲೂ ಪ್ರಕೃತಿಯ ವಿವರಗಳೊಂದಿಗೆ ಬೆಸೆಯುವ ಭಾವನೆಯೇ ನಮಗೆ ಶಾಂತಿಯನ್ನು ಕೊಡುತ್ತದೆ.

ನಿಮ್ಮ ಹೃದಯದಲ್ಲಿ ಬೆಳಕಿನ ಮೂಲವೊಂದು ನೆಲೆಯಾಗಿದೆ. ನಿಮಗೆ ಖಂಡಿತವಾಗಲೂ ಅದರ ಅನುಭವವಾಗಿರಬೇಕು. ಈ ಅನುಭವ ಒಬ್ಬೊಬ್ಬರಿಗೂ ವಿಭಿನ್ನವಾಗಿರ ಬಹುದು. ತಮ್ಮ ತಮ್ಮ ಅಧ್ಯಯನ, ತಿಳಿವಳಿಕೆ, ಸಾಂಸ್ಕೃತಿಕ ಹಿನ್ನೆಲೆ ಮತ್ತು ಅಧ್ಯಾತ್ಮಸಾಧನೆಗೆ ತಕ್ಕಂತೆ ವ್ಯಾಖ್ಯಾನಿಸಬಹುದು. ಒಬ್ಬರಿಗೆ ಅದು ಪ್ರೇರಣೆಯ ಕಿಡಿಯಾಗಿರಬಹುದು ಅಥವಾ ಇನ್ನೊಬ್ಬರಿಗೆ ಕರುಣೆಯ ಆಕರವಾಗಿರಬಹುದು ಅಥವಾ ಮಗದೊಬ್ಬರಿಗೆ ಶಾಂತಿಯುತ ಧ್ಯಾನಾಭ್ಯಾಸವಾಗಿರಬಹುದು. ಯಾರಾದರೂ ಪ್ರಯತ್ನಪಟ್ಟು, ನಿರಂತರ ಸಾಧನೆಯನ್ನು ಮಾಡಿದರೆ ಆಗ ಖಂಡಿತವಾಗಿ ಆ ಸುಂದರ ಶಕ್ತಿಯನ್ನು ನಿಮ್ಮ ಹೃದಯದಲ್ಲಿ ಕಾಣಬಲ್ಲಿರಿ. ಈ ಆತ್ಮಜ್ಯೋತಿಯಲ್ಲಿ ಅಥವಾ ಶಕ್ತಿಯಲ್ಲಿ ಮುಳುಗಿದಾಗ, ನಿಮ್ಮ ಬಲ ಮತ್ತು ಶಾಂತಿ – ಇವು ವಿಸ್ತಾರವಾದುದರ ಅನುಭವ ಒದಗುತ್ತದೆ. ಈ ಆಧ್ಯಾತ್ಮಿಕ ಪ್ರಕ್ರಿಯೆ ನಮ್ಮ ಮಾನಸಿಕ ಹಾಗೂ ಭಾವನಾತ್ಮಕ ಸ್ವಾಸ್ಥ್ಯಕ್ಕೆ ಕಾರಣವಾಗುತ್ತದೆ. ಆದರೆ ಸುಖ-ದುಃಖಗಳ ಹೊರತಾಗಿಯೂ ನಾವು ಇದರೊಳಗೆ ಮನಃಪೂರ್ವಕವಾಗಿ ಮುಳುಗಲು ಹೇಗೆ ಸಾಧ್ಯ? ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಸಾಧ್ಯವಾಗುತ್ತದೆ.

ಬೆಳಕಿನ ಮೂಲ ಯಾವುದೋ ಅದನ್ನು ಕುರಿತು ನಾವು ಧ್ಯಾನಶೀಲರಾಗಬೇಕು; ಅಥವಾ ನಮ್ಮ ಹೃದಯದಲ್ಲಿರುವ ಪ್ರೇಮದ ಸಾರತತ್ತ್ವ ನಮ್ಮ ಧ್ಯಾನದ ಕೇಂದ್ರವಾಗಬೇಕು. ಇಂಥ ಧ್ಯಾನಕ್ರಿಯೆ ಆರಂಭದಲ್ಲಿ ಒಂದು ಸಾಧನೆಯ ಮಾರ್ಗವಾಗಿ, ಮುಂದೆ ಹಂತ ಹಂತವಾಗಿ, ಕೊನೆಗೆ ಇಡೀ ದಿನ ಅದೊಂದು ಅಪ್ರಯತ್ನಪೂರ್ವಕ ಸಹಜಕ್ರಿಯೆಯಾಗಿ ಸ್ಥಿರವಾಗುತ್ತದೆ. ಆರಂಭದಲ್ಲಿ ಧ್ಯಾನದ ನಿಯತಾಭ್ಯಾಸವು ನಮ್ಮನ್ನು ಹೆಚ್ಚು ಹಗುರಗೊಳಿಸುತ್ತದೆ; ಶಾಂತಿ-ಸಮಾಧಾನಗಳನ್ನು ಉಂಟುಮಾಡುತ್ತದೆ. ನಮಗೆ ಮಾನಸಿಕ ಸ್ಥೈರ್ಯವನ್ನೂ ಕೊಡುತ್ತದೆ. ಅಭ್ಯಾಸವು ತೀವ್ರವಾಗುತ್ತಿದ್ದಂತೆ, ಅದು ಅದು ನಮ್ಮ ಜೀವನಶೈಲಿಯೇ ಆಗುತ್ತದೆ; ಆಗ ನಮ್ಮ ಮನಸ್ಸು ಎಲ್ಲ ಬಂಧನಗಳಿಂದಲೂ ಮುಕ್ತವಾಗುತ್ತದೆ. ನಮ್ಮ ದೃಷ್ಟಿಕೋನವೂ ವಿಶಾಲವಾಗುತ್ತದೆ. ಜೊತೆಗೆ ನಮ್ಮ ತಿಳಿವಳಿಕೆಯೂ ವಿಸ್ತಾರವಾಗಿ, ಅರಿವು ಕ್ರಿಯಾಶೀಲವಾಗುತ್ತದೆ. ಆಗ ಶಾಂತಿ ಎಂಬುದು ಸಹಜವಾಗಿಯೇ ನೆಲೆಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT