ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡುವ ಸೂರ್ಯನೆದುರು ಸುಳಿಯುವ ಮುನ್ನ...

Published 28 ಏಪ್ರಿಲ್ 2023, 18:39 IST
Last Updated 28 ಏಪ್ರಿಲ್ 2023, 18:39 IST
ಅಕ್ಷರ ಗಾತ್ರ

ಹವಾಮಾನ ಬದಲಾದಂತೆ ಅದಕ್ಕೆ ತಕ್ಕ ಹಾಗೆ ನಮ್ಮನ್ನು ಸಿದ್ಧಪಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ಮಳೆಗಾಲ ಬಂದರೆ ಛತ್ರಿ, ರೇನ್‌ ಕೋಟ್‌ ಕೊಂಡರೆ ಚಳಿಗಾಲದಲ್ಲಿ ಬೆಚ್ಚನೆಯ ಉಡುಪುಗಳನ್ನು ಕೊಳ್ಳುತ್ತೇವೆ. ಅದೇ ಬೇಸಿಗೆ ಬಂದರೆ ಉಳಿದ ಕಾಲಕ್ಕಿಂತ ತುಸು ಹೆಚ್ಚಾಗಿಯೇ ಕಾಳಜಿ ಮಾಡಿಕೊಳ್ಳಬೇಕಾಗುತ್ತದೆ. ಸೌಂದರ್ಯದ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬೇಸಿಗೆಯಲ್ಲಿ ಸವಾಲಿನ ಕೆಲಸ. 

ಕೆಲವು ದಿನಗಳಿಂದ ಸೂರ್ಯ ಯಾಕೋ ಮುನಿಸಿಕೊಂಡಿದ್ದಾನೇನೋ ಎನ್ನುವಷ್ಟು ಬಿಸಿಲಿನ ತಾಪ ಏರಿಕೆಯಾಗಿದೆ, ಏರಿಕೆಯಾಗುತ್ತಿದೆ. ಹೀಗಾಗಿ ಹೊರಹೋಗುವಾಗ ಎಚ್ಚರಿಕೆವಹಿಸುವುದು ಬಹಳ ಮುಖ್ಯ. ಬೇಸಿಗೆಯಲ್ಲಿ ನಮ್ಮನ್ನು ರಕ್ಷಿಸಿಕೊಳ್ಳಲು ಒಂದಷ್ಟು ವಸ್ತುಗಳು ಸದಾ ಕಾಲ ನಮ್ಮೊಂದಿಗಿರಬೇಕು, ಅವು ಯಾವೆಲ್ಲ ಎನ್ನುವುದನ್ನು ನೋಡುವುದಾದರೆ,

ನೀರಿನ ಬಾಟಲಿ: ಬಿಸಿಲಿನ ಝಳಕ್ಕೆ ದೇಹ ಬೇಗನೆ ನಿರ್ಜಲೀಕರಣಗೊಳ್ಳುತ್ತದೆ. ಹೀಗಾಗಿ ಹೆಚ್ಚು ನೀರಿನ ಸೇವನೆ ಅಗತ್ಯ. ಅದಕ್ಕಾಗಿ ಮನೆಯಿಂದ ಹೊರಹೋಗುವಾಗ ನೀರಿನ ಬಾಟಲಿಯನ್ನು ಕೊಂಡೊಯ್ಯುವುದನ್ನು ಮರೆಯಬೇಡಿ. ಸ್ಟೀಲ್‌ ಬಾಟಲಿಗಳಲ್ಲಿ ನೀರನ್ನು ಇಟ್ಟುಕೊಂಡರೆ ತಣ್ಣಗೆ ಇರುವಂತೆ ನೋಡಿಕೊಳ್ಳುತ್ತದೆ. ಅದರಲ್ಲೂ ಮಕ್ಕಳನ್ನು ಹೊರ ಕರೆದೊಯ್ಯುವಾಗ ನೀರಿನ ಬಾಟಲಿಯನ್ನು ಮರೆಯುವಂತಿಲ್ಲ.

ಸನ್‌ ಗ್ಲಾಸ್‌:ಬಿಸಿಲಿನ ತಾಪಕ್ಕೆ ಕಣ್ಣುಗಳು ಆರ್ದ್ರತೆ ಕಳೆದುಕೊಂಡು ಉರಿ ಕಾಡಬಹುದು. ಹೀಗಾಗಿ ಮನೆಯಿಂದ ಹೊರಹೋಗುವಾಗ ಸನ್‌ ಗ್ಲಾಸ್‌ ಅಥವಾ ಕೂಲಿಂಗ್‌ ಗ್ಲಾಸ್‌ ಧರಿಸಿ. ಇದು ನಿಮಗೆ ವಿಭಿನ್ನ ಹಾಗೂ ಟ್ರೆಂಡಿ ಲುಕ್‌ ಕೂಡ ನೀಡುತ್ತದೆ. ಕಣ್ಣುಗಳ ಆರೋಗ್ಯವನ್ನೂ ಕಾಪಾಡುತ್ತದೆ. ಆದರೆ ನೆನಪಿಡಿ, ಸನ್‌ ಗ್ಲಾಸ್‌ ಆಯ್ಕೆ ಮಾಡುವಾಗ ವೈದ್ಯರ ಸಲಹೆ ಇದ್ದರೆ ಉತ್ತಮ.

ಟೋಪಿ/ ಸ್ಕಾರ್ಪ್‌:ನೆತ್ತಿಯ ಮೇಲೆ ಬೀಳುವ ಸುಡು ಬಿಸಲು ಬೇಗನೆ ಸುಸ್ತಾಗುವಂತೆ ಮಾಡುತ್ತದೆ. ಅಲ್ಲದೆ ತಲೆನೋವು, ತಲೆಸುತ್ತುವಿಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಕೂದಲಿನ ಆರೋಗ್ಯವನ್ನೂ ಹಾಳು ಮಾಡಿ ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ. ಇದಕ್ಕೆ ಉತ್ತಮ ಪರಿಹಾರ ಎಂದರೆ ಬಿಸಿಲಿಗೆ ಹೋಗುವಾಗ ಸಡಿಲವಾದ ಟೋಪಿಗಳನ್ನು ಧರಿಸಿ. ಇನ್ನೊಂದು ಉತ್ತಮ ಆಯ್ಕೆ ಎಂದರೆ ಬಟ್ಟೆಯ ಸ್ಕಾರ್ಪ್‌ಗಳು. ಇದನ್ನು ನೆತ್ತಿಯ ಮೇಲೆ ಟೋಪಿ ಗಳಂತೆಯೂ ಹಾಕಿಕೊಳ್ಳಬಹುದು ಅಥವಾ ಕೂದಲಿಗೆ ಮಾತ್ರ ಕಟ್ಟಿಕೊಳ್ಳಬಹುದು. ಮುಖ್ಯವಾಗಿ ಸಮುದ್ರ ದಂಡೆಗಳ ಬಳಿ ಹೋಗುವಾಗ, ಶಾಪಿಂಗ್‌ ಹಾಗೂ ಇನ್ನಿತರ ಕೆಲಸಗಳಿಗೆ ಬಿಸಿಲಿನಲ್ಲಿ ಸುತ್ತುವಾಗ ಟೋಪಿ ಇದ್ದರೆ ಆರೋಗ್ಯ, ಸೌಂದರ್ಯ ಎರಡಕ್ಕೂ ಒಳ್ಳೆಯದು.

ಸನ್‌ ಸ್ಕ್ರೀನ್‌ ಕ್ರೀಮ್‌ಗಳು: ಚರ್ಮದ ಅಂದ, ಆರೋಗ್ಯ ಎರಡನ್ನೂ ಬೇಸಿಗೆಯಲ್ಲಿ ಕಾಪಾಡಿಕೊಳ್ಳುವುದು ಬಹು ಮುಖ್ಯ. ಬಿಸಿಲಿಗೆ ಒಡ್ಡಿಕೊಂಡರೆ ಚರ್ಮ ಕಳೆಗುಂದಿದಂತಾಗುವುದು. ಅಲ್ಲದೆ ತುರಿಕೆ, ಅಲರ್ಜಿ ಗುಳ್ಳೆಗಳು ಕಾಡಬಹುದು. ಹೀಗಾಗಿ ಮನೆಯಿಂದ ಹೊರಹೋಗುವ ಮುನ್ನ ವೈದ್ಯರು ಸೂಚಿಸಿದ ಸನ್‌ಸ್ಕ್ರೀನ್‌ಗಳನ್ನು ಹಚ್ಚಿಕೊಂಡು ಹೋಗುವುದು ಒಳ್ಳೆಯದು. ಇವು ಚರ್ಮದ ಮೇಲೆ ನೇರವಾಗಿ ಬೀಳುವ ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳಿಂದ ರಕ್ಷಿಸುತ್ತವೆ.

ಕಾಟನ್‌ ಕರವಸ್ತ್ರ: ಉಣ್ಣೆ ಬಟ್ಟೆಗಳು ನೀರನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತವೆ. ಬೇಸಿಗೆಯಲ್ಲಿ ಹೆಚ್ಚು ಬೆವರುವುದರಿಂದ ಜೊತೆಯಲ್ಲಿ ಯಾವಾಗಲೂ ಕಾಟನ್‌ ಕರವಸ್ತ್ರವನ್ನು ಇಟ್ಟುಕೊಳ್ಳಿ. ಇದರಿಂದ ಮುಖ, ಕೈ ಒರೆಸಿಕೊಂಡಾಗ ಹಿತವೆನಿಸುತ್ತದೆ. ಅದೇ ನೀವು ನೈಲಾನ್‌ ಕರವಸ್ತ್ರಗಳ ಬಳಕೆ ಮಾಡಿದರೆ ಮುಖದಲ್ಲಿ ಉರಿ ಕಾಣಿಸಿಕೊಳ್ಳಬಹುದು.
ಕರವಸ್ತ್ರಗಳಿಗೆ ಬದಲಿ ಆಯ್ಕೆಯಾಗಿ ನೀವು ವೆಟ್‌ ಟಿಶ್ಯೂಗಳನ್ನು ಬಳಸಬಹುದು. ಆದರೆ ನೆನಪಿಡಿ ಹೆಚ್ಚು ಸುಗಂಧವಿರುವ ಟಿಶ್ಯೂಗಳನ್ನು ಬಳಸಬೇಡಿ. ಇದರಿಂದ ಚರ್ಮಕ್ಕೆ ಹಾನಿಯಾಗಬಹುದು, ಕೆಲವರಿಗೆ ಅಲರ್ಜಿಯಾಗಬಹುದು.

ಛತ್ರಿ: ಬಿಸಿಲಿನ ಪ್ರಖರತೆ ಹೆಚ್ಚಿರುವಾಗ ಛತ್ರಿಯನ್ನು ಬಳಸುವುದು ಒಳ್ಳೆಯದು. ಆದರೆ ನೆನಪಿರಲಿ, ಕಪ್ಪು ಅಥವಾ ಗಾಢ ಬಣ್ಣದ ಛತ್ರಿಯನ್ನು ಬಳಸಬೇಡಿ. ಆದಷ್ಟು ತಿಳಿ ಬಣ್ಣದ ಛತ್ರಿಗಳನ್ನು ಬಳಸಿ. ಇದು ಟ್ರೆಂಡಿಯಾಗಿಯೂ ಕಾಣುತ್ತದೆ ಜೊತೆಗೆ ಬಿಸಿಲಿನಿಂದ ರಕ್ಷಣೆಯೂ ಸಿಗುತ್ತದೆ. ಪಾಕೆಟ್‌ ಛತ್ರಿಗಳನ್ನು ಬಳಸಿದರೆ ಸುಲಭವಾಗಿ ಬ್ಯಾಗ್‌ನಲ್ಲಿ ಇರಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT