ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ | ‘ನನ್ನ ಸ್ವಭಾವ ಅರ್ಥ ಮಾಡಿಕೊಳ್ಳಿ ಪ್ಲೀಸ್!’

Published 10 ಜೂನ್ 2024, 23:30 IST
Last Updated 10 ಜೂನ್ 2024, 23:30 IST
ಅಕ್ಷರ ಗಾತ್ರ

ಆ ಪುಟ್ಟ ಮಕ್ಕಳನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು. ಸುಂದರವಾದ ಬ್ಯಾಕ್‍ಡ್ರಾಪ್ ಮುಂದೆ ಬಣ್ಣ ಬಣ್ಣದ ಬಟ್ಟೆಗಳನ್ನು ತೊಟ್ಟು, ಕೈಗಳಲ್ಲಿ ಫಳ ಫಳ ಹೊಳೆಯುವಂತ ಬಂಗಾರದ ಬಣ್ಣದ ಗೊಂಚಲು ಹಿಡಿದು, ಸುಮಾರು 5-6 ವರ್ಷದ ಹುಡುಗ-ಹುಡುಗಿಯರು, ಸಿನಿಮಾದ ಅಬ್ಬರದ ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಎಂಥವರಿಗೂ ಖುಷಿಯೇ. ಇನ್ನು ಅಪ್ಪ-ಅಮ್ಮನಿಗೆ ಕೇಳಬೇಕೇ? ಎಲ್ಲರೂ ಒಂದೇ ರೀತಿಯಲ್ಲಿ ತಯಾರಾಗಿ, ಒಂದೇ ರೀತಿಯ ಹೆಜ್ಜೆಗಳನ್ನು ಹಾಕುತ್ತಿದ್ದರೂ ಮಕ್ಕಳಲ್ಲಿ ವ್ಯತ್ಯಾಸ ಕಂಡೇ ಕಾಣುತ್ತದೆ. ಕೂಲಂಕುಷವಾಗಿ ಗಮನಿಸಿದರೆ, ಕೆಲವು ಮಕ್ಕಳು ದಿಟ್ಟವಾಗಿ, ವೃತ್ತಿಪರವಾಗಿ ನೃತ್ಯ ಮಾಡುತ್ತಿದ್ದರೆ, ಇನ್ನೂ ಕೆಲವರು, ನಾಚಿಕೆಯಿಂದ ಹೆಜ್ಜೆ ಇಡಲೋ ಬೇಡವೋ, ಜನರನ್ನು ನೋಡಲೋ ಬೇಡವೋ ಎಂಬಂತೆ ಇರುತ್ತಾರೆ. ಅಲ್ಲೊಂದು, ಇಲ್ಲೊಂದು ಮಗು ಕಣ್ಣಲ್ಲಿ ನೀರಿಳಿಸುತ್ತಾ ವೇದಿಕೆಯಿಂದ ಕೆಳಗೆ ಎಷ್ಟು ಹೊತ್ತಿಗೆ ಇಳಿಸುತ್ತಾರೋ ಎಂದು ಹಾತೊರೆಯುತ್ತಿರುತ್ತದೆ. ಈ ಎಲ್ಲಾ ಮಕ್ಕಳಿಗೂ ಒಂದೇ ಟೀಚರ್, ಒಂದೇ ರೀತಿಯಲ್ಲಿ ನೃತ್ಯಾಭ್ಯಾಸ ಮಾಡಿಸಿರುತ್ತಾರೆ. ಆದರೂ ಏಕೆ ಈ ವ್ಯತ್ಯಾಸಗಳು? ಈ ಪ್ರಶ್ನೆಗೆ ಉತ್ತರ ತಿಳಿಯಬೇಕೆಂದರೆ ಮಕ್ಕಳ ಗುಣ–ಸ್ವಭಾವದ ಬಗ್ಗೆ ಅರಿಯಬೇಕು. ಪುಟ್ಟ ಮಕ್ಕಳ ಗುಣಸ್ವಭಾವಗಳಲ್ಲಿ ಒಂದು ಮಗುವಿಗೂ ಇನ್ನೊಂದು ಮಗುವಿಗೂ ವ್ಯತ್ಯಾಸಗಳಿರುತ್ತವೆ. ಇದನ್ನು ತಂದೆ-ತಾಯಿಯರು ತಿಳಿದರೆ, ಮಕ್ಕಳನ್ನು ಬೆಳೆಸುವಲ್ಲಿ ಅದು ಸಹಾಯಕವಾಗುತ್ತದೆ.

ಶಿಶುಗಳ ಅಧ್ಯಯನ

1950ರಲ್ಲಿ ಮನಃಶಾಸ್ತ್ರಜ್ಞ ಅಲೆಕ್ಸಾಂಡರ್ ಥಾವಸ್ ಮತ್ತು ಸ್ಟೆಲ್ಲಾ ಚೆಸ್ ಇಬ್ಬರೂ ಕೂಡಿ, ಮಕ್ಕಳ ಸ್ವಭಾವದ ಬಗ್ಗೆ ಮೂವತ್ತು ವರ್ಷಗಳ ಸುದೀರ್ಘ ಅಧ್ಯಯನ ನಡೆಸಿದರು. ಮಗುವಿನ ಪರೀಕ್ಷೆ, ವರ್ತನೆಗಳ ಗಮನಿಸುವಿಕೆ ಮತ್ತು ಅವರ ತಂದೆ-ತಾಯಿಯರ ಸಂದರ್ಶನ ನಿಯಮಿತವಾಗಿ ನಡೆಸಲಾಯಿತು. ಮಗುವಿನ ನಿದ್ರೆ-ಆಹಾರ ಪದ್ಧತಿ, ಚಟುವಟಿಕೆ, ಏಕಾಗ್ರತೆ, ಹಠ, ವರ್ತನೆಗಳು, ಆತಂಕದ ಲಕ್ಷಣಗಳು, ಪೋಷಕರೊಂದಿಗಿನ ಬಾಂಧವ್ಯ – ಹೀಗೆ ವಿಧವಿಧವಾದ ಮಾಹಿತಿಗಳನ್ನು ಕಲೆ ಹಾಕಿದರು.

ಸ್ಟೆಲ್ಲಾ ಮತ್ತು ಥಾಮಸ್ ಈ ಫಲಿತಾಂಶಗಳನ್ನು ವಿಮರ್ಶಿಸಿದಾಗ, ಸುಮಾರು ಶೇ. 40ರಷ್ಟು ಮಕ್ಕಳು ‘ಸುಲಭ ಮಗು’ (Easy child) ಎಂಬ ವಿಭಾಗದಲ್ಲಿ ಬಂದರು. ಈ ಮಕ್ಕಳ ನಿದ್ರಾ-ಆಹಾರ ಪದ್ಧತಿಗಳು ನಿಯಮಿತವಾಗಿದ್ದು, ಯಾವಾಗಲೂ ಖುಷಿ ಖುಷಿಯಾಗಿದ್ದರು. ಹೊಸ ವಾತಾವರಣಕ್ಕೆ ಬೇಗ ಹೊಂದಾಣಿಕೆ ಮಾಡಿಕೊಂಡು, ಒಳ್ಳೆಯ ಏಕಾಗ್ರತೆ ಉಳ್ಳವರಾಗಿದ್ದರು. ಎರಡನೆಯ ವಿಭಾಗದಲ್ಲಿ ಅಂದರೆ ‘ಕಠಿಣವಾದ ಮಗು’ ಅಥವಾ ‘Difficult child’ ವಿಭಾಗದಲ್ಲಿ ಸುಮಾರು ಶೇ.10ರಷ್ಟು ಮಕ್ಕಳು ಬಂದರು. ಈ ಮಕ್ಕಳ ಆರೈಕೆ ಮಾಡಲು ತಂದೆ-ತಾಯಿಗೆ ಕಠಿಣವಾಗುತ್ತಿತ್ತು. ನಿದ್ರೆ ಮಾಡುವುದಕ್ಕೆ ಕಿರಿಕಿರಿ, ಊಟ ಮಾಡಿಸಲು ತೊಂದರೆ, ಸಿಕ್ಕಾಪಟ್ಟೆ ಹಠ, ಹೊಸ ವಾತಾವರಣಕ್ಕೆ /ಸಂದರ್ಭಗಳಿಗೆ ಹೊಂದಿಕೊಳ್ಳಲು ನಿರಾಕರಣೆ. ಮೂರನೆಯ ವಿಭಾಗ ‘Slow to warm up child’ ಎಂದರೆ, ಸಂಕೋಚ ಸ್ವಭಾವದ ಮಗು ವಿಭಾಗದಲ್ಲಿ ಸುಮಾರು ಶೇ.15ರಷ್ಟು ಮಕ್ಕಳು ಬಂದರು. ಈ ಮಕ್ಕಳು ಸ್ವಲ್ಪ ಹಿಂಜರಿಕೆ ಉಳ್ಳವರಾಗಿದ್ದು, ಹೊಸ /ಹೊರಗಿನ ಪರಿಸರಕ್ಕೆ ಸ್ವಲ್ಪ ಸಮಯ/ಒತ್ತಾಯದ ನಂತರ ಹೊಂದಿಕೊಳ್ಳುತ್ತಿದ್ದರು.

ಈ ಎಲ್ಲ ಅಂಕಿ-ಅಂಶಗಳನ್ನು ಕೂಡಿದಾಗ, ಕೇವಲ ಶೇ.65 ರಷ್ಟು ಮಕ್ಕಳನ್ನು ಮಾತ್ರ ಈ ಮೂರು ವಿಭಾಗಗಳಲ್ಲಿ ಕಂಡಂತಾಯಿತು. ಹಾಗಾದರೆ ಇನ್ನು ಶೇ.35ರಷ್ಟು ಮಕ್ಕಳು? ಇವರಲ್ಲಿ ಎಲ್ಲಾ ವಿಭಾಗಗಳ ಗುಣಲಕ್ಷಣಗಳೂ ಮಿಶ್ರಿತವಾಗಿತ್ತು. ಉದಾಹರಣೆಗೆ, ಒಂದು ಮಗುವಿಗೆ ನಿದ್ರೆಗೆ ತುಂಬಾ ಕಿರಿಕಿರಿ ಇದ್ದರೂ, ಊಟದ ವಿಷಯದಲ್ಲಿ ಸಮಸ್ಯೆಯೇ ಇರಲಿಲ್ಲ. ಇನ್ನೊಂದು ಮಗು, ನಿದ್ರೆ. ಊಟದ ವಿಷಯದಲ್ಲಿ ಸುಲಭವಾಗಿದ್ದರೂ, ಅತಿ ಚಟುವಟಿಕೆ, ಏಕಾಗ್ರತೆಯ ಕೊರತೆ ಇತ್ತು.

ಪಾಠಗಳು

ಎಲ್ಲಾ ಮಕ್ಕಳ ಗುಣ ಸ್ವಭಾವಗಳೂ ಒಂದೇ ರೀತಿ ಇರುವುದಿಲ್ಲ. ಅವರಿಂದ ತಂದೆ ತಾಯಿಯಾಗಿ, ಶಿಕ್ಷಕರಾಗಿ ನಾವು ಯಾವುದೇ ಕಾರ್ಯವನ್ನು ಅಪೇಕ್ಷಿಸಿದಾಗ, ಈ ಗುಣ–ಸ್ವಭಾವದ ಪರಿಚಯ ಅತ್ಯಗತ್ಯ. ಸೂಕ್ಷ್ಮಸ್ವಭಾವದ, ಹಿಂಜರಿಕೆ ಇರುವ ಮಗುವಿಗೆ, ನೀವು ಗಟ್ಟಿಯಾಗಿ ಹೆದರಿಸಿ, ಏಕ್‍ದಂ ವೇದಿಕೆಗೆ ತಳ್ಳಿದಿರೆಂದರೆ, ಮಗುವಿಗೆ ಬಾವಿಗೆ ಬಿದ್ದ ಅನುಭವವೇ. ತುಂಬಾ ಹಠಮಾರಿಯಾದ ಮಗುವಿಗೆ ಅಜ್ಜ-ಅಜ್ಜಿಯರೊಂದಿಗೆ ಬಿಟ್ಟು ನೋಡಿಕೊಳ್ಳುವುದಕ್ಕೆ ಹೇಳಿದರೆ, ಅಜ್ಜ-ಅಜ್ಜಿಯರೇ ಕಾಯಿಲೆ ಬೀಳಬಹುದು ಅಥವಾ ಮಗು ಮತ್ತಷ್ಟು ಹಠಮಾರಿಯಾಗಬಹುದು. ಸುಲಭ ಸ್ವಭಾವ ಲಕ್ಷಣದ ಮಗುವಾದರೆ, ನೀವು ಯಾವುದೇ ಒತ್ತಡಗಳನ್ನು ಹಾಕಿದರೂ ತಡೆಯಬಹುದು. ಹಾಗೆಯೇ ಪಕ್ಕದ ಮನೆಯ ಮಗು ಎಷ್ಟು ಚೆನ್ನಾಗಿ ಎಲ್ಲರೊಂದಿಗೆ ಮದುವೆಮನೆಯಲ್ಲೂ ಮಾತನಾಡುವುದು, ನಮ್ಮ ಮಗು ಸುಮ್ಮನೆ ಇರುತ್ತಲ್ಲಾ ಎಂದು ಹೋಲಿಕೆ ಮಾಡಿಕೊಂಡು ಕೊರಗುವ ಪೋಷಕರಿಗೂ ತಿಳಿವಳಿಕೆ ಅಗತ್ಯ.

ನಾವೇನು ಮಾಡಬಹುದು?

ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಲ್ಲಿ ಕೂಡ ಸ್ವಭಾವದ ಗುಣ–ಲಕ್ಷಣಗಳಲ್ಲಿ ವ್ಯತ್ಯಾಸ ಇರಬಹುದು. ಮಕ್ಕಳ ಸ್ವಭಾವದ ಅಂದಾಜಿದ್ದರೆ, ನಾವು ಮಕ್ಕಳನ್ನು ನಿಭಾಯಿಸುವ ರೀತಿಯಲ್ಲಿ, ಅದರಿಂದ ಅಪೇಕ್ಷೆ ಪಡುವ ವಿಷಯದಲ್ಲಿ, ಅವರಲ್ಲಿ ಶಿಸ್ತನ್ನು ರೂಢಿಸುವ ವಿಧಾನದಲ್ಲಿ ಮಾರ್ಪಾಡು ಮಾಡಬಹುದು. ಹಾಗಾದಾಗ, ಪೋಷಕರು ಮತ್ತು ಮಕ್ಕಳು ಇಬ್ಬರಿಗೂ ಬಾಲ್ಯ ಸಹನೀಯ ಮತ್ತು ಸುಂದರವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT