ಸೋಮವಾರ, ನವೆಂಬರ್ 23, 2020
22 °C
ಕೈ ಹಿಡಿದಳು ಗಾಯತ್ರಿ –1 (ಕ್ಯಾನ್ಸರ್‌ ಜೊತೆಯಲ್ಲೊಂದು ಪಾಸಿಟಿವ್‌ ಪಯಣ)

PV Web Exclusive: ಮಡುಗಟ್ಟಿದ ದುಗುಡಭಾವ

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

ಕ್ಯಾನ್ಸರ್‌ ಯಾವಾಗ ಬೇಕಾದ್ರೂ ಯಾರಿಗೇ ಆದ್ರೂ ಬರಬಹುದು. ಕ್ಯಾನ್ಸರ್‌ ಎಂಬ ಮೂರಕ್ಷರವೇ ಭಯಾನಕವಾಗಿರುವಾಗ ಅದೇ ಭಯಾನಕ ಅತಿಥಿ ನಮ್ಮ ದೇಹವೆಂಬ ಮನೆಗೆ ಎಂಟ್ರಿ ಕೊಟ್ಟರೆ ಮನಸ್ಥಿತಿ ಹೇಗಾಗಬೇಡ. ಅದನ್ನು ನಾನು ಸ್ವತಃ ಅನುಭವಿಸಿದೆ. ಸ್ತನ ಕ್ಯಾನ್ಸರ್‌ ಎಂಬ ಬೇಡದ ಅತಿಥಿಯನ್ನು ನಾನು ಹೇಗೆ ಸ್ವೀಕರಿಸಿದೆ? ಹೇಗೆ ತಿರಸ್ಕರಿಸಿದೆ? ಆ ಅತಿಥಿಯನ್ನು ಆದಷ್ಟು ಬೇಗ ನನ್ನಿಂದ ಹೇಗೆ ಸಾಗ ಹಾಕಿದೆ...? ಬೇಡದ ಅತಿಥಿ ಜೊತೆಗಿನ ಪಯಣದಲ್ಲಿ ಹೇಗೆಲ್ಲ ಹೆಜ್ಜೆಗಳನ್ನು ಇಟ್ಟೆ? ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲಿ ಕೊನೆಗೆ ಹೇಗೆ ಗೆಲುವು ಸಾಧಿಸಿದೆ ಎಂಬೆಲ್ಲ ವಿವರಗಳು ವಾರಕ್ಕೊಮ್ಮೆ ನಿಮ್ಮೆದುರಿಗೆ ಅಕ್ಷರಗಳ ರೂಪದಲ್ಲಿ ಇಡುವೆ..

2016ರ ಜನವರಿ ಮಾಹೆ. ಯಾವುದೋ ಕೆಲಸ ನಿಮಿತ್ತ ಹೊರ ಹೋಗುವ ಗಡಿಬಿಡಿಯಲ್ಲೇ ಸ್ನಾನ ಮುಗಿಸಿ ಬಿಡೋಣ ಅಂಥೇಳಿ ಬಾತ್‌ರೂಂ ಸೇರ್ಕೊಂಡೆ. ಎಂದಿಗಿಂತ ಜಾಸ್ತಿ ಗಡಿಬಿಡಿಯಲ್ಲೇ ಸೋಪ್‌ ಹಚ್ಕೊಂಡು ಲಗುಬಗೆಯಲ್ಲಿ ಮೈ ತಿಕ್ಕಿಕೊಳ್ತಿದ್ದೆ. ಸೋಪಿನ ನೊರೆ ಮೆತ್ತಿಕೊಂಡ ಅಂಗೈ ಬಲ ಎದೆ ಭಾಗದಲ್ಲಿ ಹೋದಾಗ, ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ವಾಹನಕ್ಕೆ ದಿಢೀರ್‌ ಹಂಪೊಂದು ಅಡ್ಡಬಂದು ಧಡಕ್‌ ಎಂದಂತೆ ನನ್ನ ಕೈಗೂ ಏನೋ ಎಡತಾಕಿತು. ನಾನು ಹೋಗಬೇಕಿದ್ದ ಕೆಲಸದ ಜೊತೆಗೆ ಓಡುತ್ತಿದ್ದ ತಲೆ ಗಕ್ಕೆಂದು ನಿಂತಿತು. ಏನಿದು? ಎದೆಭಾಗದಲ್ಲಿ ಗಟ್ಟಿಯಾಗಿದೆಯಲ್ಲ.... ಒಂದು ಕ್ಷಣ ಮನಸ್ಸು ಸ್ತಬ್ಧವಾಯಿತು. ಅಷ್ಟೇ ವೇಗದಲ್ಲಿ ವಿಚಲಿತವಾಯಿತು ಕೂಡ.

ಅಂಗೈ ಮತ್ತೆ ರಿವರ್ಸ್‌ ಗೇರ್‌ನಲ್ಲಿ ಬಂತು. ಅದೇ ಹಂಪ್‌ ಇರೋ ಜಾಗದ ಮೇಲೆಯೇ ಹಿಂದೆ ಮುಂದೆ ಓಡಾಡಿತು. ಹೌದು ಗಟ್ಟಿಯಾದ ಗಂಟೊಂದು ಮತ್ತೆ ಮತ್ತೆ ಎಡತಾಕೀತು. ಇದ್ದಕ್ಕಿದ್ದಂತೆ ಉಸಿರು ಭಾರವೆನಿಸಿತು. ಬಿಸಿಯುಸಿರು ಎದೆಯಲ್ಲಿ ಹಿಡಿದುಕೊಂಡ ಅನುಭವ. ಅಡಿಯಿಂದ ಮುಡಿವರೆಗೂ ನೀರು ಅಂಟಿಕೊಂಡಿದ್ದರೂ ಗಂಟಲು ಒಣಗಿದಂತೆನಿಸಿತು. ಎರಡು ವರ್ಷಕ್ಕೊಮ್ಮೆ ಬರುವ ಶಿರಸಿ ಜಾತ್ರೆಯಲ್ಲಿ ಹೆಚ್ಚು ಜನರನ್ನು ವೀಕ್ಷಕರನ್ನಾಗಿಸಿಕೊಂಡ ಮರಣ ಬಾವಿ ಪಕ್ಕನೆ ನೆನಪಿಗೆ ಬಂದಿತು. ಅದರೊಳಗೆ ಮೂರು ಕಾರು, ಐದು ಬೈಕ್‌ಗಳು ಏಕ ಕಾಲಕ್ಕೆ ರೊಯ್ಯ, ರೊಯ್ಯ ಅಂತ ಸುತ್ತು ಹೊಡೆದಂಗಿತ್ತು ನನ್ನ ಆ ಹೊತ್ತಿನ ಮನಸ್ಸಿನ ಸ್ಥಿತಿ. ಏನೆನೋ ನೆಗೆಟಿವ್‌ ಯೋಚನೆಗಳು ಒಂದೇ ಬಾರಿಗೆ ನನ್ನ ಮನಸ್ಸಿನ ಮೇಲೆ ಅನಾಮತ್ತಾಗಿ ಮುಗಿಬಿದ್ದಿದ್ದವು.

ಕೈಗೆ ತಾಕಿದ್ದು ಕ್ಯಾನ್ಸರ್‌ ಗಂಟಾ? ಊಹುಂ; ಇರ್ಲಿಕ್ಕಿಲ್ಲ. ನಂಗ್ಯಾಕೆ ಬರುತ್ತೆ ಕ್ಯಾನ್ಸರ್‌. ನಮ್ಮ ಮನೆತನದಲ್ಲಿ ಅದರ ಹಿಸ್ಟರಿನೇ ಇಲ್ವಲ್ಲ. ಮುತ್ತಜ್ಜಿಗಿರ್ಲಿಲ್ಲ. ಅಜ್ಜಿಗಿಲ್ಲ. ಅಮ್ಮಂಗಿಲ್ಲ. ಮತ್ತೆ ನಂಗೆ ಹೇಗೆ ಬರುತ್ತೆ? ಸಾಧ್ಯನೇ ಇಲ್ಲ. ಇದು ಕ್ಯಾನ್ಸರ್‌ ಗಡ್ಡೆ ಅಲ್ಲ... ಮನಸ್ಸೊಳಗೆ ಸಂವಾದವೇ ನಡೆಯಿತು. ಎಲ್ಲ ಗಂಟುಗಳೂ ಕ್ಯಾನ್ಸರ್‌ ಗಂಟುಗಳಲ್ಲ ಅನ್ನೋದನ್ನ ಲೇಖನಗಳಲ್ಲಿ ಓದಿದ್ದೆ. ಅದೇ ಒಂದು ಭರವಸೆ ಮೇಲೆ ಇದು ಕ್ಯಾನ್ಸರ್‌ ಅಲ್ಲವೇ ಅಲ್ಲ. ಏನೋ ಹಾಲಿನ ಗ್ರಂಥಿಯಿಂದಾಗಿ ಗಟ್ಟಿಯಾಗಿರಬಹುದು ಎಂದು ನಾನಂದುಕೊಂಡೆ. ಕುಟುಂಬದಲ್ಲಿ ಯಾರಿಗಾದರೂ ಇದ್ದರೆ ವಂಶವಾಹಿನಿ ಮೂಲಕ ಬರಬಹುದು. ಬಹುಬೇಗ ಋತುಮತಿಯಾದರೆ ಸ್ತನ ಕ್ಯಾನ್ಸರ್‌ ಬರಬಹುದು. ಮತ್ತೆ ಮಕ್ಕಳಿಗೆ ಹಾಲು ಕುಡಿಸದಿದ್ದರೆ ಅಂಥ ಮಹಿಳೆಯರಿಗೆ ಬರುವ ಸಾಧ್ಯತೆ ಹೆಚ್ಚು ಎಂಬ ಅಂಶವೂ ನನ್ನ ತಲೆಯಲ್ಲಿ ಸೇವ್‌ ಆಗಿತ್ತು. ಅದರೊಂದಿಗೂ ನನ್ನ ಪ್ರಶ್ನೆಯನ್ನು ಟ್ಯಾಲಿ ಮಾಡಿಕೊಂಡೆ. ನನ್ನ ಕುಟುಂಬದಲ್ಲಿ ಅಜ್ಜಿಗಾಗಲಿ, ಅಮ್ಮನಿಗಾಗಲಿ ಸ್ತನ ಕ್ಯಾನ್ಸರ್‌ ಬಂದಿಲ್ಲ. ಅದಕ್ಕೆ ಇದು ಕಾನ್ಸರ್‌ ಆಗಿರಲಿಕ್ಕಿಲ್ಲ. ನಾನು ಋತುಮತಿಯಾಗಿದ್ದು 14ನೇ ವಯಸ್ಸಿಗೆ. ಆದ್ದರಿಂದ ಅದು ಕಾರಣವಾಗಲಾರದು. ಇನ್ನು  ನನ್ನ ಮಗ ಮೂರು ವರ್ಷ ಒಂದೂವರೆ ತಿಂಗಳು ಹಾಲು ಕುಡಿದಿದ್ದಾನೆ. ಅದೂ ಅವನು ಹಾಲು ಕುಡಿಯೋದು ಬಿಟ್ಟು ಬರೇ ಎರಡು ವರ್ಷವಷ್ಟೇ ಆಗಿತ್ತು. ಉಹುಂ.. ಸಾಧ್ಯವೇ ಇಲ್ಲ. ಇದು ಕ್ಯಾನ್ಸರ್‌ ಅಂತೂ ಅಲ್ಲವೇ ಅಲ್ಲ.... ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಮನಸ್ಸನ್ನು ಸಂತೈಸಿಕೊಂಡೆ. ಏನೋ ಹಾಗೋ ಹೀಗೋ ತಾತ್ಕಾಲಿಕವಾಗಿ ಮನಸ್ಸು ಕೊಂಚ ಸಮಾಧಾನಕ್ಕೆ ಬಂದಿತ್ತು.

ಆದರೂ ಮನಸ್ಸು ಕೇಳಲಿಲ್ಲ. ಕೈಯನ್ನು ಮತ್ತೆ ಬಲ ಎದೆಯತ್ತ ಒಯ್ದಿತ್ತು. ಗಂಟಿದ್ದ ಜಾಗವನ್ನು ಒತ್ತಿ ಒತ್ತಿ ನೋಡಿತು. ನೋವಿಲ್ಲ. ಆದರೂ ಸುಮಾರು ದೊಡ್ಡ ಗಂಟೇ ಆಗಿದ್ಯಲ್ಲ. ಕ್ಯಾನ್ಸರ್‌ ಗಂಟಾದರೆ ನೋವಿರಲ್ಲ ಅನ್ನೋದು ಓದಿ ತಿಳಿದಿದ್ದೆ. ಮನಸ್ಸು ಮತ್ತೆ ಕ್ಯಾನ್ಸರ್‌ನತ್ತಲೇ ಯೂಟರ್ನ್‌ ತೆಗೆದುಕೊಂಡಿತು. ಅಷ್ಟೊತ್ತು ಕಟ್ಟಿಕೊಂಡಂತಿದ್ದ ದೀರ್ಘ ಉಸಿರೊಂದು ಮೂಗಿನ ಹೊಳ್ಳೆಯಿಂದ ಹೊರಬಿದ್ದಂತಾಗಿ ಕೊಂಚ ಸಮಾಧಾನ ತಂದಿತು.


ಪ್ರಾತಿನಿಧಿಕ ಚಿತ್ರ

ಇರ್ಲಿ, ಮುಂದೆ ನೋಡೋಣ. ಈಗ ನನಗೆ ಅದ್ರಿಂದ ತೊಂದರೆಯೇನು ಆಗ್ತಿಲ್ಲವಲ್ಲ. ಗಂಟು ದೊಡ್ಡದಾದರೆ ಮುಂದೆ ನೋಡಿದರಾಯಿತು ಎಂದು ಮತ್ತೊಂದಿಷ್ಟು ನೀರನ್ನ ಮೈಮೇಲೆ ಸುರಿದುಕೊಂಡು, ಸ್ನಾನ ಮುಗಿಸಿ ಹೊರಬಂದೆ. ಆದರೂ ಮನಸ್ಸು ಮಾತ್ರ ಅದರಿಂದ ಹೊರಬಂದಿರಲಿಲ್ಲ. ಏನೇ ಕೆಲಸ ಮಾಡಲು ಹೋದರೂ ಗಮನ ಮಾತ್ರ ಅಲ್ಲಿಗೇ ಹೋಗುತ್ತಿತ್ತು. ಹೋಗಬೇಕಿದ್ದ ಕೆಲಸಕ್ಕೆ ರೆಡಿಯಾದೆ. ತಲೆ ಬಾಚಿಕೊಳ್ಳುವಾಗಲೂ ಅದೇ ಯೋಚನೆ. ರೆಡಿಯಾಗಿ ಹೆಗಲಿಗೆ ಬ್ಯಾಗ್‌ ಏರಿಸಿಕೊಂಡು ಸ್ಕೂಟರ್‌ ಚಾವಿ ಹಿಡಿದು ಬಾಗಿಲೆಳೆದು ಹೊರಬಂದೆ. ನಾನಿರೋ ಅಪಾರ್ಟ್‌ಮೆಂಟ್‌ನಲ್ಲಿ ಲಿಫ್ಟ್‌ ಇಲ್ಲ. ಮೂರನೇ ಅಂತಸ್ತು ಬೇರೆ. ಕಾಲುಗಳು ಒಂದೊಂದೇ ಮೆಟ್ಟಿಲ ಇಳಿಯುತ್ತಿದ್ದರೆ ತಲೆ ಎಲ್ಲೋ ಯೋಚನೆಯಲ್ಲಿ ಮುಳುಗಿತ್ತು. ಸ್ಕೂಟರ್‌  ತೆಗೆದು ಸ್ಟಾರ್ಟ್‌ ಮಾಡಿದೆ. ಒಲ್ಲದ ಮನಸ್ಸಿನಿಂದ ಸ್ಕೂಟರ್‌ ಓಡಿಸುತ್ತ ಹೋಗಬೇಕಿದ್ದ ಜಾಗ ತಲುಪಿಗೆ. ಟ್ರಾಫಿಕ್‌ ಗದ್ದಲ, ವಾಹನಗಳ ಹಾರ್ನ್‌ ಸದ್ದು ಇದ್ಯಾವುದು ನನ್ನ ಕಿವಿಗೆ ಕೇಳುತ್ತಲೇ ಇರಲಿಲ್ಲ. ಅಂತೂ ಹೋಗಬೇಕಿದ್ದ ಕೆಲಸ ಮುಗಿಸಿ ಅದೇ ಮನಸ್ಥಿತಿಯಲ್ಲಿ ಮನೆಗೆ ಬಂದೆ. ಊಟ ಮಾಡಿ ಸ್ಪಲ್ಪ ಹೊತ್ತು ಹಾಸಿಗೆ ಮೇಲೆ ಮಗ್ಗುಲಾದೆ. ನಿದ್ದೆಯೇನು ಸುಳಿಯಲಿಲ್ಲ. 3 ಗಂಟೆ ಆಯಿತು. ಎದ್ದು ಫ್ರೆಶ್‌ ಆಗಿ ಆಫೀಸ್‌ಗೆ ಹೊರಟು ನಿಂತೆ. ತಲೆಯಲ್ಲಿ ಎಷ್ಟೇ ಯೋಚನೆ ತುಂಬಿಕೊಂಡಿದ್ದರೂ ಅದನ್ನು ತೋರಗೊಡದೇ ಎಂದಿನಂದೆ ಮಾಡಬೇಕಿದ್ದ ಕೆಲಸ ಮುಗಿಸಿದೆ. ಮನೆಗೆ ಬರುವಾಗ ರಾತ್ರಿ 12 ಆಗಿತ್ತು. ರಾತ್ರಿ 2ಆದರೂ ನಿದ್ದೆ ಬರಲೇ ಇಲ್ಲ. ತಲೆಯಲ್ಲಿ ಬರೀ ಆ ಗಂಟಿನದ್ದೇ ಯೋಚನೆ.

ಯಾರಲ್ಲಿ ಹೇಳಿಕೊಳ್ಳಲಿ? ಹೇಳಿಕೊಂಡರೆ ಮನೆಯಲ್ಲಿ ಎಲ್ಲರೂ ಹೆದರಿಕೊಳ್ಳಬಹುದು. ಅದರಲ್ಲೂ ಅಮ್ಮ ಹೇಗೆ ಈ ಸಂಗತಿಯನ್ನು ಸ್ವೀಕರಿಸಬಹುದು. ಅಜ್ಜಿ, ನನ್ನ ಮಗನಿಗಿಂತ ಎಲ್ಲ ಹೇಗೆ ಸ್ವೀಕರಿಸಬಹುದು ಎಂಬ ಭಯ ಮನಸ್ಸನ್ನು ವಿಹ್ವಲಗೊಳಿಸಿತು. ಮುಂದೆ ಸ್ಕ್ಯಾನಿಂಗ್‌ ಮಾಡಿಸಿದ ಮೇಲೆ ಆ ಗಂಟು ಸಹಜ ಗಂಟು. ಅದರಿಂದ ಏನೂ ತೊಂದರೆಯಾಗದು ಎಂಬ ಸಂಗತಿ ಗೊತ್ತಾದರೆ ಅಲ್ಲಿವರೆಗೆ ಇವರೆಲ್ಲ ಹೇಗೆ ಯೋಚಿಸಬಹುದು? ಎಂಬ ಯೋಚನೆಯನ್ನೇ ಮನಸ್ಸು ಮುಳುಗಿತು. ಇನ್ನೂ ಎಷ್ಟು ಹೊತ್ತು ಇದೇ ಯೋಚನೆಯಲ್ಲಿ ಕಳಿತಿಯಾ ಎಂದು ನಿದ್ರಾದೇವಿ ಕೇಳಿದಂತಾಯಿತು. ನಿಧಾನವಾಗಿ ಆಕೆ ನನ್ನನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ತಲೆ ಸವರಿದಂತಾಯಿತು. ನಿದ್ದೆಗೆ ಜಾರಿದ್ದೆ. ಬೆಳಿಗ್ಗೆ ಎಚ್ಚರವಾಗುತ್ತಲೇ ಮನಸ್ಸು ಹೊತ್ತು ಬಂದಿದ್ದು ಅದೇ ನಿನ್ನೆಯ ದುಗುಡಭಾವಗಳ ಮೂಟೆಯನ್ನೇ.

ಮನದಲ್ಲಿ ಇಂಥ ಒಂದು ನೆಗೆಟಿವ್‌ ಯೋಚನೆ ಮನಸ್ಸನ್ನು ಎಷ್ಟು ಅಲ್ಲೋಲಕಲ್ಲೋಲ ಮಾಡಲಿದೆ. ಬೇರೆಯವರಲ್ಲಿ ಹೇಳಿಕೊಳ್ಳದಾಗ ಅದರಿಂದ ಎಷ್ಟು ವೇದನೆಯನ್ನು ಮನಸ್ಸು ಅನುಭವಿಸಲಿದೆ ಅನ್ನೋದು ಲೆಕ್ಕಕ್ಕೆ ನಿಲುಕಲಿಲ್ಲ. ಇಷ್ಟಾದರೂ ಈ ವಿಚಾರವನ್ನು ನಾನು ಯಾರೋಂದಿಗೂ ಅಂದರೆ ನನ್ನ ಕುಟುಂಬದ ಸದಸ್ಯರಲ್ಲಾಗಲಿ, ಸ್ನೇಹಿತರ ಬಳಗದಲ್ಲಾಗಲಿ ಹೇಳಿಕೊಳ್ಳಲು ಮನಸ್ಸಾಗಲಿಲ್ಲ. ಮನದಲ್ಲೇ ಬೂದಿ ಮುಚ್ಚಿದ ಕೆಂಡದಂತೆ ಮುಗುಮ್ಮಾಗಿ ಮಲಗಿತ್ತು ಆ ಆಗಂತುಕ ಗಂಟು. ಮನೆಯಲ್ಲಿ ಎಲ್ಲರೊಂದಿಗೆ ಸಹಜವಾಗಿಯೇ ಇದ್ದೆ. ಎಂದಿನಂತೆ ದಿನಚರಿ ಮುಂದುವರೆದಿತ್ತು. ಮನೆಯಲ್ಲಿ ಮನೆಗೆಲಸ, ಕಚೇರಿಯಲ್ಲಿ ಕಚೇರಿ ಕೆಲಸ, ಲೇಖನಗಳ ಬರವಣಿಗೆ ಅದರ ಪಾಡಿಗೆ ನಡೆದೇ ಇತ್ತು. ಬರಬರುತ್ತ ಅದರತ್ತಲ ಯೋಚನೆ ಕ್ಷೀಣಿಸಿತು. ಯೋಚನೆ ಕ್ಷೀಣಿಸಿತು ಅಂದಾಗಲೇ ಗಂಟಿನ ಗಾತ್ರ ಹೆಚ್ಚುತ್ತಿರುವುದು ಕೂಡ ಗಮನಕ್ಕೆ ಬಂದಿತು. ಮತ್ತೆ ಮನಸ್ಸು ವಿಲ್ವಲಗೊಂಡಿತು. ಏನೇ ಕೆಲಸ ಮಾಡುತ್ತಿದ್ದರೂ ಮನಸ್ಸು ಮಾತ್ರ ಅದರ ಸುತ್ತಲೇ ಗಿರಕಿ ಹೊಡೆಯುತ್ತಲೇ ಉಳಿಯಿತು. ಎಷ್ಟು ದಿನ ಗೊತ್ತಾ? ಜನವರಿ, ಫೆಬ್ರುವರಿ, ಮಾರ್ಚ್‌, ಏಪ್ರಿಲ್‌, ಮೇ, ಜೂನ್‌, ಜುಲೈ, ಆಗಸ್ಟ್‌, ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳುಗಳೇ ಕಳೆದವು. ಶಿರಸಿ ಜಾತ್ರೆ, ನಮ್ಮ ಚಿಕ್ಕಮ್ಮನ ಮನೆ ಗೃಹಪ್ರವೇಶ ಎಲ್ಲ ಕಾರ್ಯಗಳೂ ಇದೇ ವಿಚಲಿತದ ನಡುವೆಯೇ ಸಾಂಗವಾಗಿ ನೆರವೇರಿದ್ದವು.

ಆದರೆ ಎದೆಯೊಳಗಿನ ಗಂಟು ಮಾತ್ರ ಮತ್ತಷ್ಟು ದೊಡ್ಡದಾಗಿ, ನನ್ನನ್ನು ಕೆಣಕುತ್ತಲೇ ಸಾಗಿತ್ತು. ಗೂಗಲ್‌ನಲ್ಲಿ ಕ್ಯಾನ್ಸರ್‌ ಬಗ್ಗೆ ಹುಡುಕಾಡಿದೆ. ಹೆಚ್ಚು ಹೆಚ್ಚು ಮಾಹಿತಿಗಾಗಿ ತಡಕಾಡಿದೆ. ಅದಾಗಲೇ ಸ್ತನದ ತೊಟ್ಟು ಒಳಕ್ಕೆ ಎಳೆಯಲು ಶುರುವಿಟ್ಟಿದ್ದು ಗಮನಕ್ಕೆ ಬಂತು. ಅಲ್ಲಿಗೆ ಎರಡು ಲಕ್ಷಣಗಳು ಸ್ತನ ಕ್ಯಾನ್ಸರ್‌ಗೆ ತಾಳೆಯಾಯಿತು. ನನ್ನ ಮನಸ್ಸು ಆಗ ಹೇಳಿತು. ಇದು ಕ್ಯಾನ್ಸರೇ... ಎಂದು.

ಪುಟ್ಟ ಮಗ ಕಣ್ಮುಂದೆ ಬಂದ. ಅಮ್ಮ ಕಣ್ಮುಂದೆ ಬಂದಳು. ಎಲ್ಲಿಯಾದರೂ ನಾನು ಸತ್ತೇ ಹೋದರೆ ಅವರಿಬ್ಬರ ಗತಿಯೇನು? ಯೋಚನೆ ಗಂಭೀರವಾಗತೊಡಗಿತು. ಇನ್ನು ಮುಚ್ಚಿಟ್ಟು ಉಪಯೋಗವಿಲ್ಲ. ಹೀಗೆ ಬಿಟ್ಟರೆ ಖಂಡಿತ ಕ್ಯಾನ್ಸರ್‌ಗೆ ನನ್ನ ಬಲಿ ಬೀಳುತ್ತೆ ಅಂಥ ಮನಸ್ಸನ್ನು ಗಟ್ಟಿ ಮಾಡಿಕೊಂಡೆ.

ನವೆಂಬರ್‌ 5ನೇ ತಾರೀಕಿರಬಹುದು. ಅಮ್ಮನೆದುರು ಹೀಗೊಂದು ಗಂಟಾಗಿದೆ ಎಂದು ಧೈರ್ಯ ತಂದುಕೊಂಡು ಹೇಳಿದೆ. ಅಮ್ಮ ನಾನಂದುಕೊಂಡಂತೆ ಒಂದೇ ಕ್ಷಣಕ್ಕೆ ದಿಗಿಲಿಗೊಳಗಾದರು. ಅಲ್ಲೇ ಇದ್ದ ಮಗ ದಿಗಂತ, ಮಮ್ಮಿ ನಂಗೆ ಆಗಿತ್ತಲ್ಲ. ಹಾಗೇ ನಿಂಗೂ ಆಗಿದ್ಯಾ ಅಂತ ಕೇಳಿತು.  ಏನು ಅರಿಯದ ನನ್ನ ಕಂದನ ಬಾಯಲ್ಲಿ ಈ ಮಾತು ಕೇಳುತ್ತಲೇ... ಅಯ್ಯೋ ನನ್ನ ಮಗನ ತಲೆ ಎಲ್ಲಿಗೆ ಓಡಿತಪ್ಪಾ ಎಂದು ಯೋಚಿಸಿತು.

‘ಏನಾಗಲ್ಲ ಮಮ್ಮಿ, ನಂಗೆ ಆಪರೇಷನ್‌ ಮಾಡಿ ಕಟ್‌ ಮಾಡಿ ಬೀಸಾಕಿದ್ದಾರಲ್ಲ, ಹಾಗೇ ನಿಂಗೂ ಮಾಡಿದ್ರಾಯ್ತು ಬಿಡು’ ಎಂದ. ಐದ್ವರ್ಷದ ಮಗನ ಬಾಯಲ್ಲಿ ಇಂಥ ಒಂದು ದೊಡ್ಡ ಮಾತು ಬರಲಿಕ್ಕೂ  ಒಂದು ಕಾರಣವಿದೆ. ಅವನು ನನ್ನ ಹೊಟ್ಟೆಯೊಳಗೆ ಇದ್ದಾಗಲೇ ಅವನ ಎಡ ಎದೆಭಾಗದಲ್ಲಿ ಒಂದು ನೀರ್‌ಗುಳ್ಳೆ (ಲಿಂಫಾಂಜಿಯಾಮಾ) ಇತ್ತು. ಅದೇ ಕಾರಣಕ್ಕೆ ನನಗೆ ಡಾಕ್ಟರ್‌ ಸಿಸೇರಿಯನ್‌ ಹೆರಿಗೆಗೆ ಶಿಫಾರಸ್ಸು ಮಾಡಿದ್ದರು. ದಿಗಂತ ಹುಟ್ಟಿ ಒಂದು ವರ್ಷದ ನಂತರ ಆ ನೀರ್‌ಗುಳ್ಳೆಯನ್ನು ಸರ್ಜರಿ ಮಾಡಿ ತೆಗೆಯಲಾಗಿತ್ತು. ಅದೇ ಒಂದು ದೊಡ್ಡ ಅನುಭವದ ಮೇಲೆ ನನ್ನ ಮಗ ಆ ಮಾತು ಹೇಳಿದ್ದ.

ಹುಂ, ಹಾಗೇ ಮಾಡೋಣ. ಮೊದಲು ಡಾಕ್ಟರ್‌ ಹತ್ರ ತೋರಿಸಿಕೊಳ್ಳೋಣ ಅಂತ ಅವನಿಗೆ ಹೇಳಿದೆ. ಅಮ್ಮಾ ಮಾತ್ರ ದಂಗಾಗಿ ಕೂತಿದ್ದರು. ಅವರಿಗೂ ನಾನೇ ಸಮಾಧಾನ ಹೇಳಿದೆ. ‘ಅಮ್ಮಾ, ಎಲ್ಲ ಗಂಟೂ ಕ್ಯಾನ್ಸರ್‌ ಅನ್ನೋಕಾಗಲ್ಲ. ಯಾವುದಕ್ಕೂ ಸ್ಕ್ಯಾನಿಂಗ್‌ ಮಾಡಿಸಿ ನೋಡೋಣ’ ಅಂದೆ. ದಿಢೀರ್‌ ಸ್ಕ್ಯಾನಿಂಗ್‌ಗೆ ಹೋಗೋಣವೆಂದರೆ ನನಗೆ ಅರ್ಜಂಟ್‌ ರಜೆ ಬೇಕಲ್ಲ; ವಾರದ ರಜೆವರೆಗೂ ಕಾಯಬೇಕಾಯಿತು. ಮೊದಲು ನನ್ನ ಥೈರಾಯ್ಡ್‌ ಚೆಕ್‌ಅಪ್‌ ಮಾಡಿಸುವ ಡಾ.ಹರೀಶ ಜೋಶಿ ಕ್ಲಿನಿಕ್‌ಗೆ ಹೋದೆ. ಅಲ್ಲಿ ನನಗೆ ಹೀಗಾಗಿದೆ ಎಂದಾಗ, ಅವರೂ ಕೂಡ ‘ಎಲ್ಲ ಗಡ್ಡೆಗಳೂ ಕ್ಯಾನ್ಸರ್‌ ಗಡ್ಡೆ ಅನ್ನಲಿಕ್ಕಾಗದು. ಆದರೆ ಯಾವುದಕ್ಕೂ ಮ್ಯಾಮೊಗ್ರಾಮ್‌ ಮಾಡಿಸಿಕೊಳ್ಳಿ’ ಎಂದು ಲೆಟರ್‌ ಕೊಟ್ಟರು.

(ಮುಂದಿನವಾರ ಸ್ಕ್ಯಾನಿಂಗ್ ಪುರಾಣ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು