ಸೈಕಲ್‌ ಸವಾರಿ ಟು ಕಚೇರಿ

7

ಸೈಕಲ್‌ ಸವಾರಿ ಟು ಕಚೇರಿ

Published:
Updated:
Deccan Herald

ಪ್ರ ತಿದಿನ ಕಚೇರಿಗೆ ಸೈಕಲ್‌ನಲ್ಲೇ ಹೋಗಿಬರುವ ಸವಾರರ ಪ್ರಕಾರ, ಬೆಂಗಳೂರಿನ ಸಂಚಾರ ದಟ್ಟಣೆಗೆ ಸೈಕಲ್‌ನಷ್ಟು ಸುಲಭ ಮತ್ತು ಸರಳ ವಾಹನ ಇನ್ನೊಂದಿಲ್ಲ! ಬೈಕ್‌ನ ಅರ್ಧ ಮೊತ್ತಕ್ಕೆ ಉತ್ತಮ ಗುಣಮಟ್ಟದ ಸೈಕಲ್‌ ಸಿಗುತ್ತದೆ. ಪೆಟ್ರೋಲ್‌/ಡೀಸೆಲ್‌/ಬ್ಯಾಟರಿ ಎಂದು ತಿಂಗಳ ಬಜೆಟ್‌ ಚಿಂತೆಯೂ ಇಲ್ಲ! ಆದರೆ ದುಬಾರಿ ಬೈಕ್‌ ಮತ್ತು ಕಾರುಗಳ ಶೋಕಿಯಿಂದಾಗಿ ಸೈಕಲ್‌ಗಳ ಬಗ್ಗೆ ಜನರಲ್ಲಿ ಇನ್ನೂ ಅಸಡ್ಡೆ ಇದೆ ಎಂಬುದು ಸೈಕಲ್‌ಪ್ರೇಮಿಗಳ ಆರೋಪ. ಬನ್ನಿ, ಅವರ ಅನುಭವಗಳೇನು ಓದಿ ನೋಡಿ.

ಸೈಕಲ್‌ ಸರ್ವಶ್ರೇಷ್ಠ– ಅನಿಲ್‌ ಕಡ್ಸೂರ್‌
ಫಿಟ್‌ನೆಸ್‌ ತರಬೇತಿ, ಸೈಕಲ್‌ ಸವಾರ, ಬರಿಗಾಲಿನ ಓಟಗಾರ, ಸ್ವಯಂಪ್ರೇರಿತ ರಕ್ತದಾನಿ.. ಹೀಗೆ ವಿಭಿನ್ನ ಆಯಾಮಗಳಲ್ಲಿ ಗುರುತಿಸಿಕೊಳ್ಳುವ ಅನಿಲ್‌ ಕಡ್ಸೂರ್‌ ಅವರ ಪ್ರಕಾರ, ಕಾಯಕ್ಕೂ, ಪರಿಸರಕ್ಕೂ, ಸಂಚಾರಕ್ಕೂ ಸೈಕಲ್‌ ಸವಾರಿ ಸರ್ವಶ್ರೇಷ್ಠ. ಗಿರಿನಗರದ ತಮ್ಮ ಮನೆಯಿಂದ ಜೆ.ಪಿ.ನಗರದಲ್ಲಿರುವ ಕಚೇರಿಗೆ ಅನಿಲ್‌ ಪ್ರಯಾಣಿಸುವುದು ಸೈಕಲ್‌ನಲ್ಲೇ. 

‘ಸೈಕಲ್‌ ಜೊತೆಗಿನ ನನ್ನ ನಂಟು ಅಂದಾಜು 10 ವರ್ಷಗಳದ್ದು. ಮನೆ, ಕಚೇರಿ ನಡುವಿನ ಸಂಚಾರವೂ ಸೇರಿ ಪ್ರತಿದಿನ ಕನಿಷ್ಠ 60ರಿಂದ 70 ಕಿ.ಮೀ. ಆದರೂ ಸೈಕಲ್‌ ಸವಾರಿ ಮಾಡುತ್ತೇನೆ. ಈಗ ಸೈಕಲ್‌ವೊಂದೇ ನನ್ನ ಸಂಚಾರ ಸಂಗಾತಿ’ ಎನ್ನುತ್ತಾರೆ ಅವರು.

‘ಬೆಂಗಳೂರಿನಲ್ಲಿ ಸೈಕಲ್‌ ಸವಾರಿ ಕಷ್ಟ ಅಲ್ವಾ ಎಂದು ಸಾಮಾನ್ಯವಾಗಿ ಎಲ್ಲರೂ ಕೇಳುತ್ತಾರೆ. ಈ ನಗರದ ಸಂಚಾರ ದಟ್ಟಣೆಯಲ್ಲಿ ಸೈಕಲ್‌ನಲ್ಲಿ ಹೋಗುವಷ್ಟು ಸರಳ ಮತ್ತು ಸುಲಭ ಆಯ್ಕೆ ಇನ್ನೊಂದಿಲ್ಲ. ಬೈಕ್‌ನ ಅರ್ಧದಷ್ಟು ಮೊತ್ತಕ್ಕೆ ಸಿಗುವ ಖರೀದಿಸಿ ಓಡಿಸಿದರೆ ದುಡ್ಡು ಉಳಿತಾಯ ಮತ್ತು ವ್ಯಾಯಾಮದ ಮೂಲಕ ದೈಹಿಕ ಸದೃಢತೆಯನ್ನು ಏಕಕಾಲಕ್ಕೆ ಸಾಧಿಸಬಹುದು. ಈ ಅಂಶವನ್ನು ಜನರೂ ಅರ್ಥ ಮಾಡಿಕೊಂಡರೆ ಬೆಂಗಳೂರಿನ ರಸ್ತೆಗಳಲ್ಲಿ ಬೈಕ್‌ಗಳ ಪ್ರಮಾಣದ ಅರ್ಧದಷ್ಟಾದರೂ ಸೈಕಲ್‌ಗಳನ್ನು ಕಾಣಬಹುದು’ ಎಂಬುದು ಅನಿಲ್‌ ಆಶಯ.

ಜುಂಬಾ ಪಟುವಿನ ಸೈಕಲ್‌ ಪ್ರೀತಿ
ಕೊಡಗು ಮೂಲದ ನಿಶ್ಚಿತಾ ಉತ್ತಯ್ಯ ದೂರದ ಸೈಕಲ್‌ ರ‍್ಯಾಲಿ ಪ್ರಿಯೆ, ಜುಂಬಾ ನೃತ್ಯದಲ್ಲಿ ಪಳಗಿದವರು. ಕೋರಮಂಗಲದಲ್ಲಿ ಜುಂಬಾ ತರಗತಿಗಳನ್ನು ನಡೆಸುತ್ತಾರೆ. ಮನೆ ಗಾಂಧಿಬಜಾರ್‌. ಕಚೇರಿ ರಿಚ್ಮಂಡ್‌ ಟೌನ್‌. ಈ ಮೂರೂ ಕಡೆ ಸಂಚರಿಸಲು ಅವರು ಆಯ್ದುಕೊಂಡಿರುವುದು ಸೈಕಲ್‌. 

‘ನನಗೆ ಜುಂಬಾ ನೃತ್ಯದಲ್ಲೇ ದಿನಕ್ಕೆ ಬೇಕಾದಷ್ಟು ವ್ಯಾಯಾಮ ಸಿಗುತ್ತದೆ. ಆದರೆ ಸೈಕಲ್‌ ಬಗ್ಗೆ ನನಗೆ ವಿಶೇಷ ವ್ಯಾಮೋಹ. ಆದರೆ ಬೇಜಾರಿನ ಸಂಗತಿ ಎಂದರೆ, ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿ, ಹಳ್ಳಗಳೇ ಜಾಸ್ತಿ. ಅದಕ್ಕಿಂತ ಹೆಚ್ಚಾಗಿ ಹುಡುಗೀರು ಸೈಕಲ್‌ನಲ್ಲಿ ಹೋಗ್ತಿದ್ದಾರೆ ಅಂದ್ರೆ ಬೈಕ್‌ ಮತ್ತು ಕಾರಿನವರು ಒಂಥರಾ ನೋಡ್ತಾರೆ. ಕೀಟಲೆ ಮಾಡ್ತಾರೆ. ಸ್ವಲ್ಪ ಜಾಸ್ತಿನೇ ಧೈರ್ಯ ಬೇಕು. ನಾನು ಅದಕ್ಕೆಲ್ಲ ಕೇರ್‌ ಮಾಡಲ್ಲ ಬಿಡಿ’ ಎಂದು ನಗುತ್ತಾರೆ ನಿಶ್ಚಿತಾ. 

ಶಾರ್ಟ್‌ ಕಟ್‌ ರಸ್ತೆಗಳೇ ನನ್ನ ಆಯ್ಕೆ– ಮೋಹನ್‌
ತುಮಕೂರು ರಸ್ತೆಯ ಎಂಟನೇ ಮೈಲಿ ಬಳಿಯ ತಮ್ಮ ಮನೆಯಿಂದ ಮಾನ್ಯತಾ ಟೆಕ್‌ ಪಾರ್ಕ್‌ಗೆ ಪ್ರತಿದಿನ ಸೈಕಲ್‌ನಲ್ಲಿ ಸಂಚರಿಸುವ ಮೋಹನ್‌ ಸುಬ್ರಮಣ್ಯಂ, ‘ಬೆಂಗಳೂರು ರ‍್ಯಾಂಡನ್ಯರ್ಸ್‌’ ಕ್ಲಬ್‌ನ ಮುಖ್ಯಸ್ಥರೂ ಹೌದು. ಎಂಟನೇ ಮೈಲಿ ಬಳಿಯ ತಮ್ಮ ಮನೆಯಿಂದ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿರುವ ತಮ್ಮ ಕಚೇರಿಗೆ ಅವರು ಹೋಗುವುದು ಸೈಕಲ್‌ನಲ್ಲಿ.

‘ನಾನು ಪ್ರಯಾಣಿಸುವ ಮಾರ್ಗದಲ್ಲಿ ಸಂಚಾರ ದಟ್ಟಣೆ ಜಾಸ್ತಿಯೇ ಇದೆ. ಹಾಗಾಗಿ ನಾನು ರೆಸಿಡೆನ್ಷಿಯಲ್‌ ಪ್ರದೇಶಗಳಲ್ಲಿ ಒಳಮಾರ್ಗಗಳನ್ನು ಬಳಸುತ್ತೇನೆ. ಸೈಕಲ್‌ ಸವಾರಿಯಿಂದಾಗುವ ದೈಹಿಕ ಆರೋಗ್ಯದ ಲಾಭಗಳು ಹಲವು. ಬೆಂಗಳೂರಿನ ರಸ್ತೆಗಳಲ್ಲಿ ಬೈಕ್‌, ಕಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೈಕಲ್‌ಗಳನ್ನೇ ಕಾಣುವ ದಿನಕ್ಕಾಗಿ ಕಾಯುತ್ತಿದ್ದೇವೆ’ ಎಂಬುದು ಮೋಹನ್‌ ಅಭಿಪ್ರಾಯ.

ಸೈಕಲ್‌ ಸವಾರಿಯ ಖಾಸಗಿ ಕ್ಷಣ– ಅಶೋಕ್‌
ಸಾಫ್ಟ್‌ವೇರ್‌ ಟೆಸ್ಟಿಂಗ್‌ ಕಂಪೆನಿಯೊಂದರ ಮಾಲೀಕರಾಗಿರುವ ಅಶೋಕ್‌ ಟಿ. ನ್ಯೂ ತಿಪ್ಪಸಂದ್ರ ನಿವಾಸಿ. ಮಾರತ್ತಹಳ್ಳಿ ಬಳಿಯ ಕುಂದಲಹಳ್ಳಿಯಲ್ಲಿನ ತಮ್ಮ ಕಂಪೆನಿಗೆ (9 ಕಿ.ಮೀ. ದೂರ) ಸೈಕಲ್‌ ತುಳಿಯುತ್ತಾರೆ.

‘ಕಾರು, ಬೈಕ್‌ಗಿಂತ ನಾನು ಸೈಕಲ್‌ ಸವಾರಿಯನ್ನೇ ಇಷ್ಟಪಡುತ್ತೇನೆ. ಪರಿಸರ ಮತ್ತು ವಾಯುಮಾಲಿನ್ಯ ತಡೆಗೆ ಸೈಕಲ್‌ ಬಳಕೆ ಅತ್ಯುತ್ತಮ ಕೊಡುಗೆ. ನಾನಂತೂ ಸೈಕಲ್‌ ಸವಾರಿ ಮಾಡುತ್ತಾ ಬೆಂಗಳೂರಿನ ರಸ್ತೆಗಳ ವಿಶಿಷ್ಟ ಚಿತ್ರಣಗಳನ್ನು ಆಸ್ವಾದಿಸುತ್ತಾ ಪ್ರಯಾಣಿಸುತ್ತೇನೆ. ಸೈಕಲ್‌ ಮೇಲಿರುವಷ್ಟು ಹೊತ್ತು ನನ್ನ ಖಾಸಗಿ ಸಮಯ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ಅಲ್ಲಿ ನಾನು ಮತ್ತು ಸೈಕಲ್‌ ಮಾತ್ರ ಇರೋದು’ ಎಂದು ಹಾಸ್ಯಚಟಾಕಿ ಹಾರಿಸುತ್ತಾರೆ ಅಶೋಕ್‌.


ನಿಶ್ಚಿತಾ ಉತ್ತಯ್ಯ

ವಾರಕ್ಕೆ ಮೂರು ದಿನ ಸೈಕಲ್‌– ಅರ್ಚನಾ
‘ಹಿಂದೆ ಬನಶಂಕರಿಯಿಂದ ಬನ್ನೇರುಘಟ್ಟ ರಸ್ತೆಗೆ ಸೈಕಲ್‌ನಲ್ಲಿ ದಿನಾ ಹೋಗಿಬರ್ತಿದ್ದೆ. ಈಗ ಕೆಂಗೇರಿಯಲ್ಲಿದ್ದೇನೆ. ಬನ್ನೇರುಘಟ್ಟ ರಸ್ತೆಗೆ 40 ಕಿ.ಮೀ.ದೂರ ಆಗುತ್ತದೆ. ಸೋಮವಾರ ಮತ್ತು ಶುಕ್ರವಾರ ಟ್ರಾಫಿಕ್‌ ಜಾಸ್ತಿ ಇರುವ ಕಾರಣ ಕಡ್ಡಾಯವಾಗಿ ಸೈಕಲ್‌ ಬಳಸುತ್ತೇನೆ. ಉಳಿದಂತೆ ಯಾವುದಾದರೊಂದು ದಿನ ಸೈಕಲ್‌ನಲ್ಲಿ ಹೋಗುತ್ತೇನೆ’ ಎನ್ನುತ್ತಾರೆ, ಬನ್ನೇರುಘಟ್ಟ ರಸ್ತೆಯಲ್ಲಿರುವ ‘ಹ್ಯಾಪಿ ಅರ್ತ್‌’ ಕಂಪೆನಿಯ ಉದ್ಯೋಗಿ ಅರ್ಚನಾ ಶೇಷಗಿರಿ.

‘‌ಹೋಂಡಾ ಆ್ಯಕ್ಟಿವಾಗಿಂತ ಸೈಕಲ್‌ನಲ್ಲಿ ಹೋಗಿ ಬರುವುದು ಸುಲಭ. ದ್ವಿಚಕ್ರ ವಾಹನದಲ್ಲಿ ಸುಮ್ಮನೆ ಕೂತಿರಬೇಕಾಗುತ್ತದೆ. ಸೈಕಲ್‌ ಸವಾರಿ ಎಂದರೆ ಒಳ್ಳೆಯ ವ್ಯಾಯಾಮ. ಪೆಟ್ರೋಲ್‌, ಡೀಸೆಲ್‌, ಬ್ಯಾಟರಿ ತಾಪತ್ರಯ ಇಲ್ಲ. ನಾನು ತಿಂದಿದ್ದೇ ಅದಕ್ಕೂ ಇಂಧನವಾಗುತ್ತದೆ’ ಎಂಬುದು ಅರ್ಚನಾ ಲೆಕ್ಕಾಚಾರ.

ಬೆಂಗಳೂರಿನ ಸ್ವಾಸ್ಥ್ಯದೊಂದಿಗೆ ನಮ್ಮ ಸ್ವಾಸ್ಥ್ಯವನ್ನೂ ಕಾಪಾಡಲು ಸೈಕಲ್‌ ಬಳಕೆ ಎಷ್ಟು ಸೂಕ್ತ ಅಲ್ವೇ? ಓದುವ ಮಕ್ಕಳಿಗೆ ದುಬಾರಿ ಮೊತ್ತದ ಬೈಕ್‌ ಕೊಡಿಸುವ ಬದಲು 25ರಿಂದ 30 ಸಾವಿರ ಬೆಲೆಯ ಸೈಕಲ್‌ ಕೊಡಿಸಿದರೆ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆಯೂ ದೂರವಾದೀತು. ದುಡ್ಡೂ ಉಳಿತಾಯ! ನೀವೇನಂತೀರಿ?

**
ಫಿಟ್‌ನೆಸ್‌ಗೆ ಸರಳ ಮಾರ್ಗ

* 650 ಕ್ಯಾಲೊರಿ: ಒಂದು ಗಂಟೆ ಸೈಕಲ್‌ ಸವಾರಿಯಿಂದ ಕರಗುತ್ತದೆ

* 509 ಕ್ಯಾಲೊರಿ: 72 ಕೆ.ಜಿ ತೂಕದ ವ್ಯಕ್ತಿ ಒಂದು ಗಂಟೆಯ ಸವಾರಿಯಿಂದ ಕಳೆದುಕೊಳ್ಳುತ್ತಾನೆ

* 826 ಕ್ಯಾಲೊರಿ: ವೇಗವಾಗಿ 1 ಗಂಟೆ ಸೈಕಲ್‌ ತುಳಿದರೆ ಕರಗುವ ಕ್ಯಾಲೊರಿ

* ದೇಹಕ್ಕೆ ಆಮ್ಲಜನಕ ಪೂರೈಸಿ ಹೃದಯಕ್ಕೆ ಚೈತನ್ಯ ತುಂಬುವ ಏರೊಬಿಕ್ಸ್‌ನಷ್ಟೇ ಸೈಕಲ್‌ ಸವಾರಿಯೂ ಪರಿಣಾಮಕಾರಿ

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !