ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಚಿಗೆ ತಕ್ಕಷ್ಟು ಉಪ್ಪು: ತೂಕಕ್ಕೆ ತಕ್ಕಷ್ಟು ಔಷಧಿ

Last Updated 17 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ದೇಹದೊಳಗೆ ವೈರಸ್, ಬ್ಯಾಕ್ಟೀರಿಯಾ ಅಥವಾ ಯಾವುದೇ ಸೂಕ್ಷ್ಮಾಣು ಜೀವಿಯ ಪ್ರವೇಶವಾದಲ್ಲಿ ದೇಹವು ತನ್ನ ತಾಪಮಾನವನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಪ್ರತಿಕ್ರಿಯೆ ನೀಡುತ್ತದೆ. ಇಂತಹ ಸಂದರ್ಭಗಳಲ್ಲಿ ಹೆತ್ತವರು ಆತಂಕಕ್ಕೆ ಒಳಗಾಗುತ್ತಾರೆ. ಮನೆಯಲ್ಲಿರುವ ಹಳೆಯ ಆ್ಯಂಟಿಬಯೋಟಿಕ್ ಔಷಧಿಯನ್ನು ಮಗುವಿಗೆ ಜ್ವರ ಬಂದ ತಕ್ಷಣ ನೀಡಿಬಿಡುತ್ತಾರೆ. ಮಗುವಿಗೆ ಬಂದಿರುವುದು ವೈರಲ್ ಜ್ವರವಾಗಿದ್ದಲ್ಲಿ, ಈ ಆ್ಯಂಟಿಬಯೋಟಿಕ್ ದೇಹವನ್ನು ಇನ್ನಷ್ಟು ನಿಸ್ತೇಜಗೊಳಿಸುತ್ತದೆ.

ದೇಹದೊಳಗಿನ ಸೋಂಕು ಬ್ಯಾಕ್ಟೀರಿಯಾದ ಕಾರಣದಿಂದ ಉಂಟಾಗಿದ್ದಲ್ಲಿ ಅದು ಯಾವ ಬ್ಯಾಕ್ಟೀರಿಯಾದ ಕಾರಣದಿಂದಾಗಿ ಉಂಟಾಗಿದೆ ಎಂದು ಅಂದಾಜಿಸುವುದು ಅತಿ ಮುಖ್ಯ. ಸಾಮಾನ್ಯವಾಗಿ ಗಂಟಲು, ಕಿವಿ, ಚರ್ಮ, ಶ್ವಾಸಕೋಶ, ಜಠರ, ಕಿಡ್ನಿ ಮತ್ತು ಮೂತ್ರಪಿಂಡಗಳು – ಹೀಗೆ ದೇಹದ ವಿವಿಧ ಅಂಗಾಂಗಗಳಲ್ಲಿ ವಿವಿಧ ಬ್ಯಾಕ್ಟೀರಿಯಾಗಳು ಸೋಂಕನ್ನು ಉಂಟುಮಾಡುತ್ತವೆ. ಹೊಟ್ಟೆಯ ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾದ ವಿರುದ್ಧ ಬಳಸುವ ಆ್ಯಂಟಿಬಯೋಟಿಕ್‌ಗೆ ಗಂಟಲು ಮತ್ತು ಶ್ವಾಸಕೋಶದಲ್ಲಿ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ನಿಗ್ರಹಿಸುವ ಶಕ್ತಿಯಿರುವುದಿಲ್ಲ. ಇನ್ನೂ ಸೋಜಿಗದ ಸಂಗತಿಯೆಂದರೆ, ಆರು ತಿಂಗಳಿನ ಮಗುವಿನಲ್ಲಿ ಗಂಟಲು ಮತ್ತು ಶ್ವಾಸಕೋಶದ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳು ಮತ್ತು ಐದು ವರ್ಷಕ್ಕೆ ಮೇಲ್ಪಟ್ಟ ಮಕ್ಕಳಲ್ಲಿ ಗಂಟಲಿನ ಮತ್ತು ಶ್ವಾಸಕೋಶದ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳು ಬೇರೆ ಬೇರೆ. ಅವುಗಳ ನಿವಾರಣೆಗಾಗಿ ಬಳಸಬೇಕಿರುವ ಆ್ಯಂಟಿಬಯೋಟಿಕ್ ಕೂಡ ವಿಭಿನ್ನ! ಹೀಗಾಗಿ ವಿವಿಧ ವಯಸ್ಸಿನ ಮಕ್ಕಳಲ್ಲಿ ಅವರ ಸೋಂಕಿಗೆ ಅನುಗುಣವಾಗಿ ವಿವಿಧ ಬಗೆಯ ಆ್ಯಂಟಿಬಯೋಟಿಕ್‌ಗಳನ್ನು ಬಳಸಬೇಕಾಗಿ ಬರುತ್ತದೆ. ಎಲ್ಲ ಲಸಿಕೆಗಳನ್ನು ಪಡೆದಿರುವ ಮಕ್ಕಳಲ್ಲಿ ಮತ್ತು ಲಸಿಕೆಗಳನ್ನು ಸಮರ್ಪಕವಾಗಿ ಪಡೆಯದಿರುವ ಮಕ್ಕಳಲ್ಲಿ ಸೋಂಕು ಉಂಟುಮಾಡುವ ರೋಗಾಣುಗಳು ಕೂಡ ಬೇರೆ ಬೇರೆಯಾಗಿರುತ್ತವೆ. ಸೋಂಕು ಉಂಟುಮಾಡಿರುವ ಬ್ಯಾಕ್ಟೀರಿಯಾವನ್ನು ಸರಿಯಾಗಿ ಗ್ರಹಿಸದೆ ಯಾವುದೋ ಆ್ಯಂಟಿಬಯೋಟಿಕನ್ನು ದೇಹಕ್ಕೆ ನೀಡುವುದು ಗಾಳಿಯಲ್ಲಿ ಹಾರಿಸಿದ ಗುಂಡಿನಷ್ಟೇ ನಿಷ್ಪ್ರಯೋಜಕ.

ಯಾವ ವಯಸ್ಸಿನ ಮಗುವಿನ, ಯಾವ ಅಂಗಾಂಗದ ಬ್ಯಾಕ್ಟೀರಿಯಾ ಸೋಂಕಿಗೆ, ಯಾವ ಆ್ಯಂಟಿಬಯೋಟಿಕನ್ನು ಎಷ್ಟು ಸಮಯದ ಕಾಲ ನೀಡಬೇಕು ಎಂಬ ವಿಷಯದಲ್ಲಿ ಸರಿಯಾದ ನಿರ್ಧಾರಗಳನ್ನು ತಜ್ಞವೈದ್ಯರು ಮಾತ್ರವೇ ತೆಗೆದುಕೊಳ್ಳಬಲ್ಲರು. ಮಗುವಿನ ಅರೋಗ್ಯ ಮತ್ತು ಅಂಗಾಂಗಗಳ ಸ್ಥಿತಿಗತಿಯ ಆಧಾರದಲ್ಲಿ ಆ್ಯಂಟಿಬಯೋಟಿಕನ್ನು ಸಿರಪ್ಪಿನ ಮೂಲಕ ನೀಡುವ ಅಥವಾ ಸೋಂಕು ದೇಹದ ಇತರ ಅಂಗಾಂಗಗಳನ್ನು ವ್ಯಾಪಿಸುವ ಲಕ್ಷಣಗಳಿದ್ದಲ್ಲಿ ಚುಚ್ಚುಮದ್ದಿನ ಮೂಲಕ ನೀಡುವ ಬಗ್ಗೆಯೂ ತಜ್ಞವೈದ್ಯರ ಅಭಿಪ್ರಾಯ ಕೇಳುವುದು ಉತ್ತಮ. ಕೆಲವು ಸೋಂಕುಗಳು ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾದರೆ, ಡೆಂಗಿ ಮತ್ತು ಮಲೇರಿಯಾದಂತಹ ಕಾಯಿಲೆಗಳು ವರ್ಷದ ಕೆಲವು ತಿಂಗಳುಗಳಿಗೆ ಮಾತ್ರ ಸೀಮಿತವಾಗುತ್ತವೆ. ದೇಹದೊಳಗೆ ಯಾವುದೇ ಸೂಕ್ಷ್ಮಾಣು ಜೀವಿಗಳ ಸೋಂಕು ಇಲ್ಲದಿರುವ ಕೀಲುಗಳ ಅಥವಾ ಸ್ನಾಯುಗಳ ಉರಿಯೂತದ ಕಾಯಿಲೆಗಳಲ್ಲಿಯೂ ಜ್ವರ ಕಾಣಿಸಿಕೊಳ್ಳುತ್ತದೆ. ಈ ಕಾರಣಗಳಿಂದ ವೈದ್ಯರ ಸಲಹೆಯನ್ನು ಪಡೆಯದೆ ಮೆಡಿಕಲ್ ಸ್ಟೋರ್‌ಗಳಿಂದ ಔಷಧಿಗಳನ್ನು ತಂದು ಮಗುವಿಗೆ ಕುಡಿಸುವುದು ಅಪಾಯಕಾರಿ.

ಗಂಟಲಿನ ತುರಿಕೆಯಿಂದ ಉಂಟಾಗುವ ಕೆಮ್ಮು ಮತ್ತು ಶ್ವಾಸಕೋಶದ ಸೋಂಕಿನಿಂದ ಉಂಟಾಗುವ ಕೆಮ್ಮು ಬೇರೆ ಬೇರೆ. ಆಸ್ತಮಾದಂತಹ ಕಾಯಿಲೆಗಳಲ್ಲಿ ಶ್ವಾಸಕೋಶದ ನಾಳಗಳು ಸಂಕುಚಿತವಾಗುವುದರಿಂದ ಉಂಟಾಗುವ ಕೆಮ್ಮು ಕೂಡ ವಿಭಿನ್ನವಾದದ್ದು‌. ಮಾರ್ಕೆಟ್ಟಿನಲ್ಲಿ ನೂರಾರು ಬಗೆಯ ಕಾಫ್ ಸಿರಪ್‌ಗಳು ಲಭ್ಯವಿದ್ದರೂ ಕೆಮ್ಮು ಉತ್ಪಾದನೆಯಾಗುವ ಹಿಂದಿರುವ ಕಾರಣಗಳ ಆಧಾರದಲ್ಲಿ ಔಷಧಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಟಿ.ವಿ ಜಾಹೀರಾತುಗಳನ್ನು ನೋಡಿ ಕೆಮ್ಮನ್ನು ಶಮನ ಮಾಡುವ ಔಷಧಿಗಳನ್ನು ಕೊಳ್ಳುವುದು ಸಮಂಜಸವಲ್ಲ.

ಸಾಮಾನ್ಯವಾದ ಜ್ವರ ಮತ್ತು ಶೀತಕ್ಕೆ ಬಳಸುವ ಔಷಧಿಗಳನ್ನು ದೊಡ್ಡವರು ‘ಓವರ್ ದ ಕೌಂಟರ್’ ಪಡೆದು ಸೇವಿಸುತ್ತಾರೆ. ಕೊರೊನಾ ಸಮಯದಲ್ಲಿ ಜ್ವರ ಮತ್ತು ತಲೆನೋವಿಗಾಗಿ ಪ್ಯಾರಾಸಿಟಮಾಲ್ ಗುಳಿಗೆಗಳನ್ನು ದೇಶದಾದ್ಯಂತ ಜನರು ನುಂಗಿದ್ದಾರೆ. ಜನರು ಸಾಮಾನ್ಯವಾಗಿ ಬಳಸುವ ಇಂತಹ ಔಷಧಿಗಳ ಜಾಹೀರಾತುಗಳು ಟಿ.ವಿಯಲ್ಲಿಯೂ ಬರುವುದರಿಂದ ಎಲ್ಲರ ಬಾಯಲ್ಲಿಯೂ ಇಂತಹ ಔಷಧಿಗಳ ಬ್ರಾಂಡಿನ ಹೆಸರು ಓಡಾಡುತ್ತಿದೆ. ಆದರೆ ಮಕ್ಕಳ ವಿಚಾರದಲ್ಲಿ ಈ ಮಾದರಿಯ ನಡವಳಿಕೆಗಳು ಅನೇಕ ಹಸುಗೂಸುಗಳ ಲಿವರ್ ಮತ್ತು ಮೂತ್ರಪಿಂಡಕ್ಕೆ ಹಾನಿಯುಂಟುಮಾಡಿದ ನಿದರ್ಶನಗಳಿವೆ. ಮಗುವಿನ ತೂಕದ ಆಧಾರದಲ್ಲಿ ಮಗುವಿನ ದೇಹಕ್ಕೆ ಬೇಕಾದ ಔಷಧಿಯ ಪ್ರಮಾಣವು ನಿಗದಿಯಾಗಿರುವುದರಿಂದ ಕಡಿಮೆ ಪ್ರಮಾಣದ ಔಷಧಿಯನ್ನು ಸೇವಿಸಿದರೆ ರೋಗ ಲಕ್ಷಣಗಳು ಶಮನವಾಗುವುದಿಲ್ಲ. ಆಕಸ್ಮಿಕವಾಗಿ ಹೆಚ್ಚು ಪ್ರಮಾಣದ ಔಷಧಿಗಳು ದೇಹದೊಳಗೆ ಹೋದರೆ ಅಂಗಾಂಗ ವೈಫಲ್ಯವಾಗುವ ಸಾಧ್ಯತೆಯಿರುತ್ತದೆ.

ಔಷಧಿಯನ್ನು ಮಗುವಿನ ತೂಕದ ಆಧಾರದಲ್ಲಿ ನೀಡುವಾಗ ಹೆತ್ತವರು ಎರಡು ಅಲಗಿನ ಕತ್ತಿಯ ಮೇಲೆ ನಡೆಯುವಷ್ಟೇ ಜಾಗರೂಕರಾಗಿರಬೇಕು. ಉದಾಹರಣೆಗೆ, ಇಂದು ಪ್ಯಾರಾಸೆಟಮಾಲ್ ಮಾದರಿಯ ಔಷಧಿಗಳನ್ನು ವಿವಿಧ ಕಂಪನಿಗಳು ವಿವಿಧ ಸಾಂದ್ರತೆಯಲ್ಲಿ ಮಾರುಕಟ್ಟೆಗೆ ಬಿಡುತ್ತಿವೆ. ಮಗುವಿನ ತೂಕದ ಆಧಾರದಲ್ಲಿ ವೈದ್ಯರು ನಿಗದಿಪಡಿಸಿರುವ ಸಾಂದ್ರತೆಯ ಸಿರಫ್ ತಮ್ಮಲ್ಲಿ ಇದೆಯೆ ಎಂಬುದನ್ನು ಮೊದಲು ಪೋಷಕರು ಖಚಿತ ಪಡಿಸಿಕೊಳ್ಳಬೇಕು‌. ಬಾಟಲಿಯಲ್ಲಿರುವ ಔಷಧಿಯ ಸಾಂದ್ರತೆಯನ್ನು ಗಮನಕ್ಕೆ ತೆಗೆದುಕೊಳ್ಳದೆ ಯಾವುದೋ ಬ್ರಾಂಡಿನ ಪ್ಯಾರಾಸಿಟಮಾಲ್ ಸಿರಪ್ಪನ್ನು ಇಷ್ಟ ಬಂದಷ್ಟು ಮಿಲಿಲೀಟರನ್ನು ಮಗುವಿಗೆ ಕುಡಿಸಿದರೆ ಅಪಾಯಗಳು ಕಟ್ಟಿಟ್ಟ ಬುತ್ತಿ.

ಚಿಕ್ಕ ಮಕ್ಕಳಿಗೆ ಊಟ ಮಾಡಿಸುವಾಗ ಶ್ರಮ–ತಾಳ್ಮೆಗಳು ಅಗತ್ಯ. ಇಷ್ಟೇ ತಾಳ್ಮೆ–ಶ್ರಮಗಳು ಮಕ್ಕಳಿಗೆ ಸರಿಯಾದ ಪ್ರಮಾಣದ ಔಷಧಿಯನ್ನು ನೀಡುವಾಗಲೂ ಬೇಕಾಗುತ್ತದೆ. ಅಹಾರದಲ್ಲಿ ಒಂದೆರಡು ತುತ್ತು ಹೆಚ್ಚು ಕಡಿಮೆಯಾದರೂ ದೇಹಕ್ಕೆ ಸಮಸ್ಯೆಗಳಾಗದು. ಆದರೆ ಔಷಧಿಯ ವಿಚಾರದಲ್ಲಿ ಸ್ಪಷ್ಟತೆ ಮತ್ತು ನಿಖರತೆ ಅತ್ಯಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT