ಮಂಗಳವಾರ, ಜನವರಿ 18, 2022
22 °C

ಫಿಟ್‌ನೆಸ್‌ನ ಹೊಸ ನೋಟಗಳು: ಅಂಗ ಸಾಧನೆಗೆ ಈಜು ಸುರಕ್ಷಿತ

ನಿರೂಪ್‌ ಜಿ.ಆರ್‌. Updated:

ಅಕ್ಷರ ಗಾತ್ರ : | |

ಈಜು ಇತ್ತೀಚಿನ ದಿನಗಳಲ್ಲಿ ಒಂದು ವ್ಯಾಯಾಮವಾಗಿ ಗುರುತಿಸಿಕೊಳ್ಳುತ್ತಿದೆ. ನಗರಗಳಲ್ಲಿ ಮಕ್ಕಳಿಗೆ ಈಜನ್ನು ದೈನಂದಿನ ಚಟುವಟಿಕೆಯ ಭಾಗವಾಗಿ ಕಲಿಸಲಾಗುತ್ತಿದೆ. ಈಜು ದೇಹದ ಸಾಮರ್ಥ್ಯವನ್ನು ಹೆಚ್ಚಿಸುವ ವ್ಯಾಯಾಮವಾಗಿ ಅಷ್ಟೇ ಅಲ್ಲದೆ ಮಾನಸಿಕ ಒತ್ತಡವನ್ನೂ ಕಡಿಮೆ ಮಾಡುವ ಸಾಧನವಾಗಿದೆ.   

ಜಿಮ್‌ ಅಥವಾ ಇನ್ನಿತರ ವ್ಯಾಯಾಮಗಳು ಎಲ್ಲ ವಯಸ್ಸಿನವರಿಗೂ ಮಾಡಲು ಕಷ್ಟಸಾಧ್ಯ. ಕಠಿಣ ವ್ಯಾಯಾಮಗಳನ್ನು ಮಾಡುವುದರಿಂದ ದೈಹಿಕ ಒತ್ತಡದಿಂದಾಗಿ ಬೆನ್ನುನೋವು, ಮಂಡಿನೋವು ಕಾಣಿಸಿಕೊಳ್ಳುತ್ತವೆ. ಆದರೆ ಈಜಿನಲ್ಲಿ ಈ ಸಮಸ್ಯೆಗಳು ಇಲ್ಲ. ನೀರಿನಲ್ಲಿ ಮನುಷ್ಯನ ದೇಹದ ತೂಕ ಕಡಿಮೆಯಾಗುತ್ತದೆ. ಹೀಗಾಗಿ ಯಾವುದೇ ಗಾಯ ಅಥವಾ ಅಡ್ಡ ಪರಿಣಾಮ ದೇಹಕ್ಕೆ ಆಗುವುದಿಲ್ಲ.

ಈಜು ಎನ್ನುವುದು ಇಡೀ ಶರೀರಕ್ಕೆ ಸಿಗುವ ವ್ಯಾಯಾಮ. ತಲೆಯಿಂದ ಕಾಲ್ಬೆರಳಿನವರೆಗೂ ವ್ಯಾಯಾಮ ಸಿಗುತ್ತದೆ. ಇದರಿಂದ ಇಡೀ ದೇಹದ ಸಾಮರ್ಥ್ಯ ಹೆಚ್ಚಾಗುತ್ತದೆ. ಈಜಿನಲ್ಲಿ ಹೃದಯದ ಬಡಿತ ಹೆಚ್ಚಾಗುತ್ತದೆ. ಆದರೆ, ದೇಹಕ್ಕಾಗುವ ಒತ್ತಡ ಕಮ್ಮಿ. ಇತರೆ ಕ್ರೀಡೆಗಳಲ್ಲಿ ದೇಹಕ್ಕೆ ಒತ್ತಡ ಹೆಚ್ಚು. ಹೀಗಾದರಷ್ಟೇ ಹೃದಯದ ತೊಂದರೆಗಳು ಕಾಣಿಸಿಕೊಳ್ಳುವ ಸಂಭವಗಳು ಜಾಸ್ತಿ. 

ಉಸಿರಾಟ ಏರುಪೇರಾದರೆ ವ್ಯಕ್ತಿಯೊಬ್ಬನ ದೈಹಿಕ ಹಾಗೂ ಮಾನಸಿಕ ಒತ್ತಡ ಹೆಚ್ಚುತ್ತದೆ. ಹೃದಯ, ರಕ್ತನಾಳ ಮತ್ತು ಶ್ವಾಸಕೋಶವನ್ನು ಈಜು ಆರೋಗ್ಯವಾಗಿರಿಸುತ್ತದೆ. ಇತರೆ ಕ್ರೀಡೆಗಳಲ್ಲಿ ಉಸಿರಾಟಕ್ಕೆ ಅಷ್ಟೊಂದು ಆದ್ಯತೆ ಇಲ್ಲ. ಈಜಿನಲ್ಲಿ ಉಸಿರಾಟವೇ ಮುಖ್ಯ. ಇದರಿಂದ ಎಲ್ಲ ಅಂಗಗಳಿಗೂ ಪೂರಕ ಆಮ್ಲಜನಕ ಸರಬರಾಜಾಗುತ್ತದೆ. ದೇಹದ ಎಲ್ಲ ಭಾಗಕ್ಕೂ ರಕ್ತಸಂಚಾರ ಹೆಚ್ಚುತ್ತದೆ. ದೇಹದ ರೋಗನಿರೋಧಕ ಸಾಮರ್ಥ್ಯ ಹೆಚ್ಚುತ್ತದೆ. ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗುವ ಅಪಾಯವು ಈ ವ್ಯಾಯಾಮದಿಂದ ಕಡಿಮೆ ಆಗುತ್ತದೆ. ರಕ್ತದೊತ್ತಡ, ಸಂಧಿವಾತ ಇದ್ದವರಿಗೆ, ಶಸ್ತ್ರಚಿಕಿತ್ಸೆ ಆದವರಿಗೆ ವೈದ್ಯರೇ ಈಜಿನ ಸಲಹೆ ನೀಡುತ್ತಾರೆ. ಏಕೆಂದರೆ ದೇಹದ ತೂಕ ನೀರಿನಲ್ಲಿ ಇಳಿಕೆಯಾಗುವುದರಿಂದ ಈಗಾಗಲೇ ಆಗಿರುವ ಗಾಯದ ಮೇಲೆ ಹೆಚ್ಚಿನ ಪರಿಣಾಮ ಇರುವುದಿಲ್ಲ ಎಂದು.

ದೇಹಕ್ಕಾಗುವ ಉಪಯೋಗದ ಜೊತೆಗೆ ಈಜು ಎನ್ನುವುದು ಮಕ್ಕಳ ಚಟುವಟಿಕೆಯನ್ನೂ ಉತ್ತೇಜಿಸುತ್ತದೆ. ಮೂಡ್‌ ಬೂಸ್ಟರ್‌ ರೀತಿ ಈಜಿನ ಮೋಜು ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಕಲಿಕೆಯಲ್ಲೂ ಹೆಚ್ಚಿನ ಆಸಕ್ತಿಯನ್ನು ಮಕ್ಕಳು ಬೆಳೆಸಿಕೊಂಡಿದ್ದನ್ನು ಗಮನಿಸಿದ್ದೇನೆ. 30 ನಿಮಿಷಗಳ ಈಜು ಒತ್ತಡವನ್ನೂ ದೂರಗೊಳಿಸುತ್ತದೆ. ಈಜು ಎನ್ನುವುದು ನಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಬೇಕು. 

ಲೇಖಕ: ಬೆಂಗಳೂರಿನ ನೆಟ್ಟಕಲ್ಲಪ್ಪ ಅಕ್ವಾಟಿಕ್‌ ಸೆಂಟರ್‌ನ
ಪ್ರೊಗ್ರಾಮ್‌ ಮ್ಯಾನೇಜರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು