ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಸ್ವಾಸ್ಥ್ಯಕ್ಕೆ ಹತ್ತು ಸೂತ್ರಗಳು

Last Updated 25 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಮಾನಸಿಕ ಸ್ವಾಸ್ಥ್ಯದ ಅರಿವು ಹೆಚ್ಚುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಮುಖ್ಯ. ದೇಹದ ಆರೋಗ್ಯದಷ್ಟೇ ಮನಸ್ಸಿನ ಆರೋಗ್ಯವೂ ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ತಿಳಿದಿರಬೇಕು. ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದು ಒಂದು ಭಾಗವಾದರೆ, ಉತ್ತಮ ಮಾನಸಿಕ ಆರೋಗ್ಯವನ್ನು ಪ್ರಚೋದಿಸಿ, ಕಾಯಿಲೆಗಳನ್ನು ತಡೆಗಟ್ಟುವುದು ಮತ್ತೊಂದು ಆಯಾಮ. ಶರೀರಕ್ಕೆ ಅನಾರೋಗ್ಯ ಕಾಡಿದಾಗ ರೋಗಿಯ ರಕ್ತದಲ್ಲಿ, ಅಂಗಾಂಗಗಳಲ್ಲಿ ಕೆಲವು ನಿಶ್ಚಿತ ಬದಲಾವಣೆಗಳು ಉಂಟಾಗುತ್ತವೆ. ಈ ಬದಲಾವಣೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಮೂಲಕ ಭೌತಿಕ ಅನಾರೋಗ್ಯವನ್ನು ಪತ್ತೆ ಮಾಡಬಹುದು. ಇದಕ್ಕೆ ಜಾಗತಿಕವಾಗಿ ಅನುಸರಿಸಬಹುದಾದ ನಿರ್ದೇಶನಗಳಿವೆ. ಆದರೆ, ಮಾನಸಿಕ ಅಸ್ವಸ್ಥತೆ ವಿಭಿನ್ನ; ಅದರಲ್ಲಿ ಪ್ರಯೋಗಾಲಯದ ಪರೀಕ್ಷೆಗಳಿಗೆ ಹೆಚ್ಚು ಆಸ್ಪದವಿಲ್ಲ. ಜೊತೆಗೆ, ಆಯಾ ಭೌಗೋಳಿಕ ಕ್ಷೇತ್ರಗಳಿಗೆ ಅನುಸಾರವಾಗಿ ಬದಲಾಗುವ ಸಾಂಸ್ಕೃತಿಕ ಆಚರಣೆಗಳು, ರೀತಿ-ರಿವಾಜುಗಳು, ವೈಯಕ್ತಿಕ ನಂಬಿಕೆಗಳು ಮುಂತಾದವುಗಳ ಬಲವಾದ ಪ್ರಭಾವವುಳ್ಳ ಕಾರಣದಿಂದ ಮಾನಸಿಕ ಅನಾರೋಗ್ಯದ ಪತ್ತೆಗೆ ವಿಶಿಷ್ಟ ವಿಧಾನಗಳನ್ನು ಅನುಸರಿಸಬೇಕು. ಮಾನಸಿಕ ಆರೋಗ್ಯವನ್ನು ಸಫಲವಾಗಿ ಉತ್ತೇಜಿಸುವ ನಿಟ್ಟಿನಲ್ಲಿ ಕೆಲವು ವಿಷಯಗಳನ್ನು ಪರಿಗಣಿಸಬಹುದು.

ದೇಹದ ಆರೋಗ್ಯದ ಬಗ್ಗೆ ಆಸ್ಥೆ ವಹಿಸುವಷ್ಟು ಮಾನಸಿಕ ಆರೋಗ್ಯದ ಬಗ್ಗೆ ಜನರ ಅರಿವಿಲ್ಲ. ಯಾವುದೇ ರೋಗದ ಬಗ್ಗೆ ತಿಳಿವಳಿಕೆ ಮೂಡಲು ಮೊದಲು ಅದರ ಕಾಯಿಲೆಯ ಲಕ್ಷಣಗಳು ತಿಳಿಯಬೇಕು. ಇಲ್ಲವಾದರೆ, ಚಿಕಿತ್ಸೆ ಪಡೆಯಬೇಕೆಂದಾಗಲೀ, ಪಡೆಯುವ ದಾರಿಯಾಗಲೀ ತಿಳಿಯುವುದಿಲ್ಲ. ಹೀಗಾಗಿ ಮಾನಸಿಕ ಸ್ವಾಸ್ಥ್ಯದ ಕುರಿತಾಗಿ ಜನಜಾಗೃತಿ ಮೂಡಬೇಕು.

ಮಾನಸಿಕ ಅಸ್ವಸ್ಥತೆ ಎನ್ನುವುದು ವಾಸ್ತವ. ಇದರ ಬಗ್ಗೆ ಯಾವುದೇ ನಿರಾಕರಣೆ ಅಥವಾ ಸಂಕೋಚ ಬೇಕಿಲ್ಲ; ಚಿಕಿತ್ಸೆ ಪಡೆಯಲು ಮುಜುಗರ ಪಡಬೇಕಿಲ್ಲ. ದೈಹಿಕ ಕಾಯಿಲೆಗೆ ಯಾವ ರೀತಿ ವೈದ್ಯರನ್ನು ಸಂಪರ್ಕಿಸುತ್ತೇವೆಯೋ, ಮಾನಸಿಕ ಚಿಕಿತ್ಸೆಗೂ ಅಂತೆಯೇ ನಿಸ್ಸಂಕೋಚವಾಗಿ ವೈದ್ಯರನ್ನು ಕಾಣುವಂತಹ ಸಾಮಾಜಿಕ ಪರಿಸ್ಥಿತಿ ನಿರ್ಮಾಣವಾಗಬೇಕು.

ಸರಿ-ತಪ್ಪುಗಳ ಜಿಜ್ಞಾಸೆ, ಆತ್ಮವಿಶ್ವಾಸ, ವಿವೇಚನೆ, ಸ್ವಸಾಮರ್ಥ್ಯದ ಮೇಲಿನ ನಂಬಿಕೆ – ಇವುಗಳು ಮಾನಸಿಕ ಸ್ವಾಸ್ಥ್ಯಕ್ಕೆ ಪೂರಕ. ಇವುಗಳನ್ನು ಬೆಳೆಸುವ ಕೌಟುಂಬಿಕ ಮತ್ತು ಸಾಮಾಜಿಕ ವಾತಾವರಣ ನಿರ್ಮಾಣವಾಗಬೇಕು.

ಒಳ್ಳೆಯ ಶೈಕ್ಷಣಿಕ ಮತ್ತು ಮಾಡಬೇಕಾದ ಉದ್ಯೋಗದ ಬಗೆಗಿನ ತರಬೇತಿಗಳು ಮುಖ್ಯ. ಮಾಡುವ ಉದ್ಯೋಗದ ಬಗ್ಗೆ ನಿಖರ ಜ್ಞಾನ, ಕೆಲಸದ ಬಗ್ಗೆ ಶ್ರದ್ಧೆ, ಸಹೋದ್ಯೋಗಿಗಳ ಜೊತೆಯಲ್ಲಿ ಒಳ್ಳೆಯ ವರ್ತನೆ, ವೃತ್ತಿಪರ ಮಾಹಿತಿಗಳು ಮಾನಸಿಕ ಸ್ವಾಸ್ಥ್ಯದ ರಕ್ಷಣೆಗೆ ಇಂಬು ನೀಡುತ್ತವೆ. ಶಾಲೆಯ ದಿನಗಳಿಂದಲೇ ಈ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಮಾನಸಿಕ ಆರೋಗ್ಯ ಪಠ್ಯದ ವಿಷಯವಾಗಬೇಕು.

ಭಾವನೆಗಳ ಮೇಲೆ ಹತೋಟಿ ಇರಬೇಕು. ಮಾನವ ಸಂಘಜೀವಿ. ವೈಯಕ್ತಿಕ ಭಾವನೆಗಳು ಸಾಂಘಿಕ ಸ್ವಾಸ್ಥ್ಯಕ್ಕೆ ಪೂರಕವಾಗಿರಬೇಕು. ಜೊತೆಗೆ, ಮತ್ತೊಬ್ಬರ ವರ್ತನೆಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಯಬೇಕು. ಒಳ್ಳೆಯ ವಿಷಯಗಳನ್ನು ಹಂಚುವುದು, ಅಪಾಯಗಳನ್ನು ಗ್ರಹಿಸಿ ಇತರರಿಗೆ ಎಚ್ಚರಿಕೆ ನೀಡುವುದು – ಇವು ಉತ್ತಮ ಮಾನಸಿಕ ಆರೋಗ್ಯದ ಸೂಚಕಗಳು. ಪ್ರತಿದಿನವೂ ಹಲವಾರು ಸಣ್ಣಪುಟ್ಟ ಸಮಸ್ಯೆಗಳನ್ನು ಪ್ರತಿಯೊಬ್ಬರೂ ಎದುರಿಸುತ್ತಿರುತ್ತೇವೆ. ಇದನ್ನು ಯಾವ ರೀತಿ ನಿರ್ವಹಿಸುತ್ತೇವೆಂಬುದು ನಮ್ಮ ಮಾನಸಿಕ ಪಕ್ವತೆಗೆ ಕಿರುಗಿಂಡಿ. ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಅವಕ್ಕೆ ಪ್ರಾಯೋಗಿಕ ಪರಿಹಾರಗಳನ್ನು ಹುಡುಕಿಕೊಳ್ಳುವುದು; ಇಂತಹ ಪರಿಹಾರಗಳನ್ನು ಸಮರ್ಥವಾಗಿ ನೀಡಬಲ್ಲ ಆತ್ಮೀಯರೊಡನೆ ಚರ್ಚಿಸುವುದು; ದೊಡ್ಡ ಸಮಸ್ಯೆಗಳನ್ನು ಒಂದು ತಂಡವಾಗಿ ಪರಿಹರಿಸುವುದು – ಇವೆಲ್ಲವೂ ಮಾನಸಿಕ ಆರೋಗ್ಯಕ್ಕೆ ಪೂರಕ. ಸಂತಸದ ಸಮಯದಲ್ಲಿ ಮಾನಸಿಕ ಗಟ್ಟಿತನ ಹೆಚ್ಚಾಗಿ ಅಗತ್ಯವಿಲ್ಲ. ಆದರೆ, ಗಡುಸಿನ ಅಗತ್ಯ ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ಇರುತ್ತದೆ. ಸಮಸ್ಯೆಗಳಿಂದ ದೂರ ಓಡುವವರು ಮಾನಸಿಕ ಕಾಯಿಲೆಗಳಿಗೆ ಹೆಚ್ಚಾಗಿ ಗುರಿಯಾಗುತ್ತಾರೆ.

ಸಾಮಾಜಿಕ ಮತ್ತು ಸಾಂಘಿಕ ಕೌಶಲಗಳು ಮಾನಸಿಕ ಸ್ವಾಸ್ಥ್ಯಕ್ಕೆ ಸಹಕಾರಿ. ಪರಿಚಿತ ಮತ್ತು ಅಪರಿಚಿತ ಜನರೊಡನೆ ವ್ಯವಹರಿಸುವ ಚಾತುರ್ಯ, ವಿವಿಧ ವಯೋಮಾನದವರೊಡನೆ ಬೆರೆಯುವಾಗ ಇರಬೇಕಾದ ಎಚ್ಚರ, ಸಂಬಂಧಗಳನ್ನು ನಿರ್ವಹಿಸುವ ವಿಧಾನಗಳು, ತಂಡದ ಭಾಗವಾಗಿ ಮಾಡಬೇಕಾದ ಕರ್ತವ್ಯಗಳು, ನಾಯಕತ್ವದ ಗುಣ, ಸಹಕಾರದ ಮನೋಧರ್ಮ ಮೊದಲಾದುವು ನಮ್ಮ ಮಾನಸಿಕ ಭಾವನೆಗಳನ್ನು ಸರಿಯಾದ ರೀತಿಯಲ್ಲಿ ಬೆಳೆಸಲು ನೆರವಾಗುತ್ತವೆ.

ದೈಹಿಕ ಸ್ವಾಸ್ಥ್ಯಕ್ಕೂ ಮಾನಸಿಕ ಆರೋಗ್ಯಕ್ಕೂ ಬಲವಾದ ನಂಟಿದೆ; ಒಂದನ್ನೊಂದು ಪರಸ್ಪರ ಉತ್ತೇಜಿಸುತ್ತವೆ. ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುವವರಲ್ಲಿ ಮಾನಸಿಕ ಸಂತುಲನ ಬಿಗಡಾಯಿಸುತ್ತದೆ. ಅಂತೆಯೇ, ಮಾನಸಿಕ ರೋಗಿಗಳಲ್ಲಿ ಹಲವಾರು ದೈಹಿಕ ಸಮಸ್ಯೆಗಳು ಕಾಣುತ್ತವೆ. ಹೀಗಾಗಿ, ಸರಿಯಾದ ಆಹಾರ, ವ್ಯಾಯಾಮ, ಶಿಸ್ತುಗಳ ಮೂಲಕ ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡವರಲ್ಲಿ ಮಾನಸಿಕ ಅನಾರೋಗ್ಯಗಳ ಸಾಧ್ಯತೆ ಕಡಿಮೆಯಾಗುತ್ತದೆ.

ಆಧ್ಯಾತ್ಮ ಮತ್ತು ಪಾರಲೌಕಿಕ ಚಿಂತನೆಗಳು ಮನಸ್ಸಿನ ಉದ್ವೇಗಗಳನ್ನು ಹದ್ದುಬಸ್ತಿನಲ್ಲಿ ಇಡಲು ಸಹಕಾರಿ ಎಂದು ಅಧ್ಯಯನಗಳು ತಿಳಿಸಿವೆ. ನಮ್ಮ ಜೀವನದ ಅರ್ಥ, ಉದ್ದೇಶಗಳನ್ನು ಅರಿಯುವ ಪ್ರಯತ್ನಗಳು ಒಂದು ದೊಡ್ಡ ವ್ಯವಸ್ಥೆಯಲ್ಲಿ ನಮ್ಮ ಪಾತ್ರವನ್ನು ನಿರ್ದೇಶಿಸಲು ನೆರವಾಗುತ್ತವೆ. ಈ ರೀತಿಯ ಚಿಂತನೆ ಕೇವಲ ಆಸ್ತಿಕರಿಗೆ ಮಾತ್ರವಲ್ಲದೇ, ಇತರರಿಗೂ ನೆರವಾಗುತ್ತವೆ.

ಜೀವನದ ಗುಣಮಟ್ಟವೆನ್ನುವುದು ಕೇವಲ ಹಣಕ್ಕೆ ಸಂಬಂಧಿಸಿದ ವಿಷಯವಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯ, ಸಂತಸ, ವೈಯಕ್ತಿಕ ಸಾಧನೆ, ಸಮಾಧಾನ, ಜೀವನಪ್ರೀತಿಗಳು ಬದುಕಿನ ಗುಣಮಟ್ಟವನ್ನು ವೃದ್ಧಿಸುತ್ತವೆ. ಯಾವ ರೀತಿ ದೈಹಿಕ ಆರೋಗ್ಯ ಎನ್ನುವುದು ಕೇವಲ ಕಾಯಿಲೆಯ ಅನುಪಸ್ಥಿತಿಯಲ್ಲ ಎನ್ನುವ ಮಾತಿದೆಯೋ, ಅಂತೆಯೇ ಮಾನಸಿಕ ಆರೋಗ್ಯ ಎನ್ನುವುದು ಮಾನಸಿಕ ಕಾಯಿಲೆ ಇಲ್ಲದ ಸ್ಥಿತಿಯಲ್ಲ. ಬದಲಿಗೆ, ಅದು ಸ್ವಸಾಮರ್ಥ್ಯ ಮೂಲದ ಸಾಧನೆ, ಜೀವನದ ಹಲವಾರು ಪ್ರಾಕಾರಗಳ ಸಂತಸಗಳನ್ನು ಅನುಭವಿಸುವ ಮನೋವೃತ್ತಿ, ಸಫಲ ಸಾಮಾಜಿಕ ಸಂಬಂಧಗಳು, ಕಾಲಕ್ಷೇಪಗಳು, ನೆಮ್ಮದಿ ನೀಡುವ ಆರೋಗ್ಯಕರ ಹವ್ಯಾಸಗಳು, ಬಿಡುವಿನ ವೇಳೆಯನ್ನು ಫಲಪ್ರದವಾಗಿ ಕಳೆಯುವ ವಿಧಾನಗಳು ಮಾನಸಿಕ ಸ್ವಾಸ್ಥ್ಯದ ಸೂಚ್ಯಂಕಗಳು.

ಮಾನಸಿಕ ಆರೋಗ್ಯದ ಪ್ರಮುಖ ಲಕ್ಷಣಗಳೆಂದರೆ, ವ್ಯಕ್ತಿ ತನ್ನ ಸಾಮರ್ಥ್ಯವನ್ನು ಗುರುತಿಸಿ, ಅದಕ್ಕೆ ಪೂರಕವಾಗಿ ನಡೆದುಕೊಳ್ಳುವುದು; ದಿನನಿತ್ಯದ ಜಂಜಾಟಗಳನ್ನು ಸಮರ್ಥವಾಗಿ ನಿರ್ವಹಿಸುವುದು; ತನಗೆ ಮತ್ತು ಸಮಾಜಕ್ಕೆ ಲಾಭದಾಯಕವಾಗುವ ವೃತ್ತಿಯಲ್ಲಿ, ಕೆಲಸಗಳಲ್ಲಿ ತೊಡಗಿಕೊಳ್ಳುವುದು; ಸಮಾಜದ ಏಳಿಗೆಗೆ ತನ್ನ ಕೈಲಾದ ಸಹಕಾರ ನೀಡುವುದು. ಈ ನಿಟ್ಟಿನಲ್ಲಿ ಲೋಪಗಳು ಕಂಡರೆ ಮಾನಸಿಕ ಸ್ವಾಸ್ಥ್ಯ ಏರುಪೇರಾಗಿದೆಯೆಂದು ಭಾವಿಸಬಹುದು. ಸಮಾಜದ ಪ್ರತಿಯೊಬ್ಬರ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವುದು ಒಳ್ಳೆಯ ಸಮಾಜ ನಿರ್ಮಾಣದ ಹಾದಿಯಲ್ಲಿ ಮಹತ್ವದ ಹೆಜ್ಜೆ. ಇದನ್ನು ಶಾಲೆಯ ವಯಸ್ಸಿನಿಂದಲೇ ಆರಂಭಿಸಬೇಕು. ಮಾನಸಿಕ ಸ್ವಾಸ್ಥ್ಯದ ಬಗೆಗಿನ ಅಜ್ಞಾನ ಅದನ್ನು ಸಾಧಿಸುವ ಹಾದಿಯಲ್ಲಿ ತೊಡಕಾಗಬಾರದು.

(ಲೇಖಕ ವೈದ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT