ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಎಂಬ ಅಪಾಯ

Last Updated 11 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

‘ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕ’ ಎಂಬುದನ್ನು ಕೇಳುತ್ತಲೇ ಬಂದಿದ್ದೇವೆ. ಆದರೆ ಅದೇ ಪ್ಲಾಸ್ಟಿಕ್ ಸದ್ದಿಲ್ಲದೆ ನಮ್ಮ ಶರೀರವನ್ನು ಹೊಕ್ಕು ನಮ್ಮ ಆರೋಗ್ಯದ ಮೇಲೆ ಬೀರಬಹುದಾದ ಅಪಾಯಗಳ ಬಗ್ಗೆ ಕೇಳಿದ್ದೀರೇನು?

ಆಹಾರ ಪದಾರ್ಥಗಳನ್ನು ಮತ್ತು ಪಾನೀಯಗಳನ್ನು ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ತುಂಬಿ ಉಪಯೋಗಿಸುವುದು ಈ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಉಪ್ಪಿನಕಾಯಿ, ಮಸಾಲಪುಡಿಗಳು, ದೋಸೆ ಹಾಗೂ ಇಡ್ಲಿಹಿಟ್ಟು ಮೊದಲಾದ ಪದಾರ್ಥಗಳನ್ನು ಅಂಗಡಿಗಳಲ್ಲಿ ಮಾರಾಟ ಮಾಡುವುದು ದಪ್ಪನೆಯ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿಯೇ. ಹೊಟೇಲುಗಳಿಂದ ಖಾದ್ಯ ಪದಾರ್ಥಗಳನ್ನು ಪಾರ್ಸೆಲ್ ಮಾಡಿ ಕೊಡುವುದು ಕೂಡ ಪ್ಲಾಸ್ಟಿಕ್ ಡಬ್ಬಿಗಳಲ್ಲಿಯೇ. ಒಟ್ಟಾರೆ ಹೇಳುವುದಾದರೆ, ಆಹಾರ ಪದಾರ್ಥ ತಯಾರಿಕಾ ವಿಭಾಗದಲ್ಲಿ ಪ್ಲಾಸ್ಟಿಕ್‌ನ ಬಳಕೆ ಕಣ್ಣರಳಿಸಿ ನೋಡುವಂತಿದೆ. ಒಂದು ಅಂಕಿ–ಅಂಶದ ಪ್ರಕಾರ ವಿಶ್ವದಾದ್ಯಂತ ತಯಾರಾಗುವ ಶೇ. ಅರವತ್ತರಷ್ಟು ಪ್ಲಾಸ್ಟಿಕ್, ಆಹಾರ ಮತ್ತು ಪಾನೀಯಗಳ ಪೊಟ್ಟಣಗಳಾಗಿಯೇ ಬಳಸಲ್ಪಡುತ್ತದಂತೆ.

ನಮಗೆ ತಿಳಿದಂತೆ ಪ್ಲಾಸ್ಟಿಕ್ ಅನೇಕ ಬಗೆಯ ರಾಸಾಯನಿಕಗಳಿಂದ ಮಾಡಲ್ಪಟ್ಟಿದೆ. ಈ ರಾಸಾಯನಿಕಗಳು ಕಾಲ ಕ್ರಮೇಣ ಒಂದಿಷ್ಟು ಕ್ರಿಯೆಗಳಿಗೆ ಒಳಗಾಗಿ ಅಲ್ಲಿ ಉಪ ಉತ್ಪನ್ನಗಳು ಉತ್ಪತ್ತಿಯಾಗುತ್ತವೆ. ಅಂದರೆ, ಮುಖ್ಯ ರಾಸಾಯನಿಕಗಳು ವಿಭಜನೆಗೊಂಡು ಸೂಕ್ಷ್ಮಾತಿಸೂಕ್ಷ್ಮ ಕಣಗಳಾಗಿ ಮಾರ್ಪಾಡಾಗುತ್ತವೆ. ಅದರಲ್ಲಿಯೂ ಈ ಪ್ಲಾಸ್ಟಿಕ್ ಪೊಟ್ಟಣಗಳು ಬಿಸಿಲು ಅಥವಾ ಶಾಖಕ್ಕೆ ತೆರೆದುಕೊಂಡಾಗ ಅಲ್ಲಿ ರಾಸಾಯನಿಕ ಕ್ರಿಯೆಗಳಾಗಿ ಸೂಕ್ಷ್ಮಕಣಗಳು ಉತ್ತತ್ತಿಯಾಗುವ ಸಂಭವ ಹೆಚ್ಚು. ಈ ಸೂಕ್ಷ್ಮಕಣಗಳು ಆಹಾರದೊಡನೆ ಬೆರೆತು ನಮ್ಮ ಶರೀರವನ್ನು ಯಾವುದೇ ಮುನ್ಸೂಚನೆಯಿಲ್ಲದೆ ಸೇರಿ ನಮ್ಮ ಅಂಗಾಂಗ ವ್ಯವಸ್ಥೆಗಳ ಮೇಲೆ ಅಪಾಯಕರ ಪರಿಣಾಮವನ್ನು ಬೀರುತ್ತವೆ. ಅಷ್ಟೇ ಅಲ್ಲದೆ, ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಸಲಕರಣೆಗಳಲ್ಲಿ ಬಿಸಿ ಮಾಡಿದಾಗ (ಉದಾಹರಣೆಗೆ ಓವನ್‍ನಲ್ಲಿ) ಅಥವಾ ಪದಾರ್ಥಗಳನ್ನು ಬಿಸಿಯಾಗಿದ್ದಾಗಲೇ ಪ್ಲಾಸ್ಟಿಕ್ ಭರಣಿಗಳಿಗೆ ತುಂಬಿದಾಗ ಅಥವಾ ದೀರ್ಘಾವಧಿಯವರೆಗೆ ಆ ಸಲಕರಣೆಗಳಲ್ಲಿ ಪದಾರ್ಥಗಳನ್ನು ತುಂಬಿಟ್ಟಾಗ ಅಲ್ಲಿಯೂ ರಾಸಾಯನಿಕ ಕ್ರಿಯೆಗಳಾಗಬಹುದು.

ಪ್ಲಾಸ್ಟಿಕ್ ಸಲಕರಣೆಗಳ ಪಾರದರ್ಶಕತೆ, ನಮ್ಯತೆ ಮತ್ತು ಬಾಳಿಕೆಯನ್ನು ಹೆಚ್ಚಿಸುವ ಸಲುವಾಗಿ ವಿಶೇಷ ರಾಸಾಯನಿಕಗಳನ್ನು ತಯಾರಿಯ ವೇಳೆಯಲ್ಲಿ ಸೇರಿಸಲಾಗುತ್ತದೆ. ಇವು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ ಮತ್ತು ವಿಷಕಾರಕ. ಬಿಸ್‍ಫಿನಾಲ್-ಎ, ಡಿಯೋಕ್ಸಿನ್, ಫ್ಥ್ಯಾಲೇಟ್ಸ್, ಪಾಲಿ–ಈಥಲಿನ್ ಮತ್ತು ಪಾಲಿಪ್ರೋಪೈಲಿನ್ ಮೊದಲಾದುವು ಕೆಲವು ಮುಖ್ಯ ವಿಶೇಷ ರಾಸಾಯನಿಕಗಳು.

ಹೇಗೆ ಅಪಾಯ?

ವಿಜ್ಞಾನಿಗಳು ಕಂಡಂತೆ, ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸುವ ಕನಿಷ್ಠ ಹದಿನೈದು ಬಗೆಯ ರಾಸಾಯನಿಕಗಳು ಮಾನವ ಶರೀರದ ಅಂತಃಸ್ರವಗ್ರಂಥಿಗಳ ಕಾರ್ಯಕ್ಷಮತೆಯಲ್ಲಿ ಅಡೆತಡೆಯನ್ನುಂಟುಮಾಡುತ್ತವೆ. ಹೆಚ್ಚಿನ ರಾಸಯನಿಕ ಕಣಗಳು ಶರೀರದಲ್ಲಿ ಸಾಮಾನ್ಯವಾಗಿ ಸ್ರವಿಸುವ ರಸದೂತಗಳ (ಹಾರ್ಮೋನ್) ಪರಮಾಣು ರಚನೆಯನ್ನು ಹೋಲುವುದೇ ಎಲ್ಲ ಸಮಸ್ಯೆಗಳಿಗೆ ಮುಖ್ಯ ಕಾರಣ.

ಈಸ್ಟ್ರೋಜನ್, ಟೆಸ್ಟೋಸ್ಟಿರಾನ್, ಇನ್‍ಸುಲಿನ್ ಮೊದಲಾದ ರಸದೂತಗಳನ್ನು ಹೋಲುವ ಕಣಗಳು ನಮ್ಮ ಶರೀರವನ್ನು ಆಹಾರದೊಂದಿಗೆ ಸೇರಿದಾಗ ಸಮಸ್ಯೆ ಶುರುವಾಗುತ್ತದೆ. ಈ ಕಣಗಳು ಜೀವಕೋಶಗಳ ಗ್ರಾಹಕಗಳ ಮೇಲೆ ಕುಳಿತು ರಸದೂತಗಳಂತೆಯೇ ಕ್ರಿಯಾಶೀಲವಾಗಬಹುದು ಅಥವಾ ಅವುಗಳೊಡನೆ ಸ್ಪರ್ಧೆಗಿಳಿದು ಅವುಗಳ ಕಾರ್ಯಕ್ಷಮತೆಗೆ ತಡೆಯೊಡ್ಡಬಹುದು. ಇವೆರಡೂ ನಮ್ಮ ಶರೀರಕ್ಕೆ ಅಪಾಯ.

ಜಠರ ಮತ್ತು ಕರುಳುಗಳಲ್ಲಿ ಸೇರುವ ಈ ಕಣಗಳು ಜೀರ್ಣಾಂಗವ್ಯೂಹದಲ್ಲಿರುವ ಸ್ನೇಹಪರ ಸೂಕ್ಷ್ಮಾಣುಗಳಿಗೆ ಮಾರಕವಾಗುತ್ತವೆ. ಇದರಿಂದ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆ ದುರ್ಬಲಗೊಳ್ಳುತ್ತದೆ.

ಜೀರ್ಣಾಂಗವ್ಯೂಹದ ಸ್ನೇಹಪರ ಸೂಕ್ಷ್ಮಾಣುಗಳ ಸಂಖ್ಯೆ ಕ್ಷೀಣಿಸುವುದು ಮುಂದಿನ ದಿನಗಳಲ್ಲಿ ಪಾರ್ಕಿನ್ಸನ್ ಕಾಯಿಲೆಯಂತಹ ಮೆದುಳಿಗೆ ಸಂಬಂಧಿಸಿದ ದೀರ್ಘಕಾಲಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಈ ಕಣಗಳು ತಮ್ಮ ಮೇಲ್ಮೈಯಲ್ಲಿ ಹಾನಿಕಾರಕ ಸೂಕ್ಷ್ಮಾಣುಗಳನ್ನು ಹೊತ್ತು ತರುವುದರಿಂದ ವ್ಯಕ್ತಿ ಇತರ ಬಗೆಯ ಉರಿಯೂತಕ್ಕೆ ಒಳಗಾಗಬಹುದು.

ಯಾವ ಆರೋಗ್ಯ ಸಮಸ್ಯೆ?

ಈ ರಾಸಾಯನಿಕಗಳು ನಿರಂತರವಾಗಿ ವ್ಯಕ್ತಿಯ ಶರೀರವನ್ನು ಸೇರುವುದರಿಂದ ಪುರುಷ ಮತ್ತು ಮಹಿಳೆಯರಲ್ಲಿ ಬಂಜೆತನ ಮತ್ತು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಕು, ಅಂಡಾಶಯಗಳಲ್ಲಿ ನೀರುಗುಳ್ಳೆಗಳು (ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್), ಮಧುಮೇಹ, ಬೊಜ್ಜು ಮತ್ತು ಸ್ಥೂಲಕಾಯ ಹಾಗೂ ಹೃದ್ರೋಗಗಳ ಸಂಭವ ಹೆಚ್ಚಾಗುತ್ತದೆ.

ನಿಯಂತ್ರಣ ಹೇಗೆ?

*ಸಂಸ್ಕರಿಸಿದ ಆಹಾರ ಪದಾರ್ಥಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು.

*ಪ್ಲಾಸ್ಟಿಕ್ ಸೀಸೆಗಳಲ್ಲಿನ ನೀರು, ಐಸ್ ಕ್ರೀಮ್, ಇಂಗಾಲಯುಕ್ತ ಪಾನೀಯಗಳನ್ನು ಆದಷ್ಟು ಕಡಿಮೆ ಬಳಸುವುದು. ಇದರ ಹೆಚ್ಚಾದ ಬಳಕೆ ಪರೋಕ್ಷವಾಗಿ ಪೋಷಕಾಂಶಗಳ ಕೊರತೆಗೂ ಕಾರಣವಾಗಬಹುದು.

*ಪ್ಲಾಸ್ಟಿಕ್ ಪರಿಕರಗಳಲ್ಲಿ ಆಹಾರವನ್ನು ಬಿಸಿ ಮಾಡಬಾರದು.

*ಆಹಾರ ಅಥವಾ ನೀರು ಬಿಸಿಯಾಗಿದ್ದಾಗಲೇ ಪ್ಲಾಸ್ಟಿಕ್ ಭರಣಿಗೆ ಹಾಕಬಾರದು.

*ಪರಿಸರ ಸ್ನೇಹಿ ವಸ್ತುಗಳಿಂದ ತಯಾರಾದ ಆಹಾರ ಪೊಟ್ಟಣಗಳನ್ನು ಬಳಸುವುದು.

*ಗಾಜಿನ ಅಥವಾ ಉಕ್ಕಿನ (ಸ್ಟೀಲ್) ಪರಿಕರಗಳಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವುದು ಮತ್ತು ಶೇಖರಿಸಿಡುವುದು.
ಆದಷ್ಟು ತಾಜಾ ಆಹಾರ ಪದಾರ್ಥಗಳ ಸೇವನೆಗೆ ಒತ್ತು ಕೊಡುವುದು.

ಪ್ಲಾಸ್ಟಿಕ್ ಸೂಕ್ಷ್ಮ ಕಣಗಳು ಈಗಾಗಲೇ ಮನುಷ್ಯರ ಮಲ ತಪಾಸಣೆಯಲ್ಲಿ ಕಂಡು ಬಂದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT