ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಯರ್‌ಫೋನ್‌ ಅಧಿಕ ಬಳಕೆ... ಜೋಕೆ

Last Updated 3 ಆಗಸ್ಟ್ 2020, 22:45 IST
ಅಕ್ಷರ ಗಾತ್ರ
ADVERTISEMENT
""

ಕೊರೊನಾ ಕಾರಣದಿಂದ ಮನೆಯಿಂದಲೇ ಕಚೇರಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಮಕ್ಕಳಿಗೂ ಶಾಲೆ ಆರಂಭವಾಗದೇ ಆನ್‌ಲೈನ್ ಮೂಲಕ ತರಗತಿಗಳು ನಡೆಯುತ್ತಿವೆ. ಈ ಕಾರಣಕ್ಕೆ ಮಕ್ಕಳು ಹಾಗೂ ದೊಡ್ಡವರಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ್‌–ಲ್ಯಾಪ್‌ಟಾಪ್‌ಗಳ ಬಳಕೆ ಹೆಚ್ಚಾ ಗಿದೆ. ಗೂಗಲ್‌ ಮೀಟಿಂಗ್‌, ಕಾನ್ಫರೆನ್ಸ್ ಕರೆ, ಆನ್‌ಲೈನ್‌ ತರಗತಿಗಳಿಗೆಂದು ಇಯರ್‌ಫೋನ್ ಬಳಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ ಇದರ ಅತಿಯಾದ ಬಳಕೆಯಿಂದ ಹಲವು ಸಮಸ್ಯೆಗಳು ಕಾಡಬಹುದು.

ಇಯರ್‌ಫೋನ್‌ ಬಳಕೆಯಿಂದಾ ಗುವ ತೊಂದರೆ, ಪರಿಣಾಮ ಹಾಗೂ ಬಳಸುವ ಸರಿಯಾದ ಕ್ರಮ ಇವುಗಳ ಕುರಿತು ಬೆಂಗಳೂರಿನ ವಿಕ್ರಮ್‌ ಆಸ್ಪತ್ರೆಯ ಇಎನ್‌ಟಿ ವಿಭಾಗದ ಮುಖ್ಯಸ್ಥ ಹಾಗೂ ನೆಕ್ ಸರ್ಜನ್‌ ಡಾ. ಶ್ರೀನಿವಾಸ್‌ ಕೆ. ಮಾತನಾಡಿದ್ದಾರೆ.

*ಇಯರ್‌ಫೋನ್ ಬಳಕೆಯಿಂದ ಸಮಸ್ಯೆಗಳು ತಲೆದೋರುತ್ತವೆಯೇ?

ಇಯರ್‌ಫೋನ್ ಕಡಿಮೆ ಬಳಸಿದಷ್ಟೂ ತೊಂದರೆ ಕಡಿಮೆ. ಅಧಿಕ ವಾಲ್ಯೂಮ್‌ನಲ್ಲಿ (ಧ್ವನಿಯಲ್ಲಿ) 20 ನಿಮಿಷಕ್ಕಿಂತ ಕಡಿಮೆ ಸಮಯ ಇಯರ್‌ಫೋನ್‌ ಬಳಸಿದರೆ ಅಷ್ಟೊಂದು ಸಮಸ್ಯೆ ಬರುವುದಿಲ್ಲ. ಆದರೆ ನಿತ್ಯ 3– 4 ಗಂಟೆಗೂ ಅಧಿಕ ಸಮಯ ಹೆಚ್ಚು ವಾಲ್ಯೂಮ್‌ನಲ್ಲಿ ಇರಿಸಿಕೊಂಡು ಕೇಳುವುದರಿಂದ ಕಿವಿಗೆ ಸಂಬಂಧಿಸಿದ ಹಲವು ತೊಂದರೆಗಳು ಕಾಣಿಸಿಕೊಳ್ಳಬಹುದು.

*ಯಾವ ರೀತಿಯ ದುಷ್ಪರಿಣಾಮಗಳು ಉಂಟಾಗಬಹುದು?

ಈಗಾಗಲೆ ಹೇಳಿದಂತೆ ಜಾಸ್ತಿ ವಾಲ್ಯೂಮ್‌ ಇರಿಸಿಕೊಂಡು ದಿನಕ್ಕೆ ಮೂರ್ನಾಲ್ಕು ಗಂಟೆಗಳಿಗೂ ಹೆಚ್ಚು ಹೊತ್ತು ಇಯರ್‌ಫೋನ್‌ ಬಳಸುವುದರಿಂದ ಶ್ರವಣದೋಷ ಕಾಣಿಸಿಕೊಳ್ಳಬಹುದು. ಜೊತೆಗೆ ಚರ್ಮದ ಅಲರ್ಜಿ ಉಂಟಾಗಬಹುದು. ಅಲರ್ಜಿ ಕಾಣಿಸಿಕೊಂಡಾಗ ನೋವು, ಜ್ವರ ಹಾಗೂ ಕಿವಿಯಿಂದ ಸ್ವಲ್ಪ ಸೋರುವ ಲಕ್ಷಣಗಳೂ ಕಾಣಬಹುದು. ಈ ಸಮಸ್ಯೆ ಇತ್ತೀಚೆಗೆ ಬಹಳಷ್ಟು ಜನರಲ್ಲಿ ಹೆಚ್ಚುತ್ತಿದೆ. ಅಂತಹ ಸಮಸ್ಯೆ ಗಳು ಕಾಣಿಸಿ ಕೊಂಡಾಗ ತಜ್ಞ ವೈದ್ಯರನ್ನು ಕಾಣುವುದು ಸೂಕ್ತ.

ಡಾ. ಶ್ರೀನಿವಾಸ್‌ ಕೆ.

ಇನ್ನೊಂದು ಪ್ರಮುಖ ಸಮಸ್ಯೆ ಎಂದರೆ ‘ಸಡನ್‌ ಸೆನ್ಸರಿ ನ್ಯೂರಲ್ ಹಿಯರಿಂಗ್‌’ (ಕಿವಿಕೇಳಿಸದಿರುವ ತೊಂದರೆ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವುದು). ಈ ಸಮಸ್ಯೆ ಕಾಣಿಸಿಕೊಂಡಾಗ ಇದ್ದಕ್ಕಿದ್ದ ಹಾಗೇ ಕಿವಿ ಕೇಳುವುದು ನಿಲ್ಲಬಹುದು. ಇದು ಲಕ್ಷದಲ್ಲಿ ಒಬ್ಬರಿಗೆ ಕಾಣಿಸುತ್ತದೆ. ಇದು ಕಾಣಿಸಿಕೊಂಡ 24 ಗಂಟೆಗಳ ಒಳಗೆ ವೈದ್ಯರನ್ನು ಕಾಣುವುದು ಉತ್ತಮ. ತಡ ಮಾಡಿದಷ್ಟೂ ಈ ಸಮಸ್ಯೆಗೆ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ.

*ಕಿವಿಯ ಸಮಸ್ಯೆ ಹೊರತುಪಡಿಸಿ ಕಾಣಿಸಿಕೊಳ್ಳಬಹುದಾದ ಇತರ ತೊಂದರೆಗಳು ಯಾವುವು?

ಇಯರ್‌ಫೋನ್ ಅನ್ನು ಅತಿಯಾಗಿ ಬಳಸುವುದರಿಂದ ಊಟ ಅಗಿಯು ವುದಕ್ಕೆ ಸಹಾಯ ಮಾಡುವ ಟಿನ್ ಸಂಧಿಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಜೊತೆಗೆ ವಾಲ್ಯೂಮ್‌ ಜಾಸ್ತಿ ಇದ್ದರೆ ಅರೆದಲೆಶೂಲೆ (ಮೈಗ್ರೇನ್‌) ಇರುವವರಿಗೆ ಇನ್ನಷ್ಟು ಸಮಸ್ಯೆ ಆಗಬಹುದು.

*ಹೆಡ್‌‌ಫೋನ್ ಬಳಸಿದರೂ ತೊಂದರೆಯಾಗಬಹುದೇ?

ಇಯರ್‌ಫೋನ್ ಹಾಗೂ ಹೆಡ್‌ಫೋನ್ ಎರಡರಲ್ಲಿ ಹೆಡ್‌ಫೋನ್ ಬಳಕೆ ಉತ್ತಮ. ‘ಇನ್ ದಿ ಕೆನಾಲ್’ ಅಥವಾ ಕಿವಿಯ ಒಳಗೆ ತೂರುವಂತಹ ಇಯರ್‌ಫೋನ್ ಹೆಚ್ಚು ಶಬ್ದವನ್ನು ಸೃಷ್ಟಿಸುತ್ತದೆ. ಇದರಿಂದ ಸಮಸ್ಯೆ ಹೆಚ್ಚು. ಅಲ್ಲದೇ ಇದು ಶ್ರವಣದೋಷಕ್ಕೂ ಕಾರಣವಾಗಬಹುದು. ಅಧ್ಯಯನಗಳ ಪ್ರಕಾರ ಮಧ್ಯಮಪ್ರಮಾಣದ ಧ್ವನಿಯಲ್ಲಿ (ವಾಲ್ಯೂಮ್‌ನಲ್ಲಿ) ದಿನಕ್ಕೆ 8 ಗಂಟೆಗಳ ಕಾಲ ಹೆಡ್‌ಫೋನ್ ಬಳಸಿದರೂ ಯಾವುದೇ ತೊಂದರೆ ಕಾಣಿಸುವುದಿಲ್ಲ. ಆದರೆ ಧ್ವನಿಪ್ರಮಾಣ ಗರಿಷ್ಠಮಟ್ಟದಲ್ಲಿ ಇಟ್ಟುಕೊಳ್ಳಬೇಡಿ.

*ಮಕ್ಕಳು ಇಯರ್‌ಫೋನ್ ಬದಲು ಯಾವುದನ್ನು ಬಳಸಬಹುದು?

ಮಕ್ಕಳಿಗೆ ಮೊದಲ ಆಯ್ಕೆ ಬ್ಲೂಟೂತ್ ಸ್ಪೀಕರ್ ಬಳಕೆ ಅಥವಾ ಸಾಮಾನ್ಯ ಸ್ಪೀಕರ್ ಬಳಕೆ. ಎರಡನೇ ಆಯ್ಕೆ ಹೆಡ್‌ಫೋನ್. ಕೊನೆಯ ಆಯ್ಕೆ ಇಯರ್‌ಫೋನ್‌‌. ಪ್ರತಿದಿನ 4– 5 ಗಂಟೆಗಳ ಕಾಲ ಬಳಸಿದರೆ ಕ್ರೋನಿಕ್ ಬಳಕೆ ಎನ್ನುತ್ತೇವೆ. ಅದು ಮಕ್ಕಳ ಕಿವಿಯ ಮೇಲೆ ದುಷ್ಪರಿಣಾಮ ಬೀರಬಹುದು. ಮಕ್ಕಳೂ ಕೂಡ ಮಧ್ಯಮ ವಾಲ್ಯೂಮ್‌ನಲ್ಲಿ ಇಯರ್‌ಫೋನ್ ಅಥವಾ ಹೆಡ್‌ಫೋನ್ ಬಳಸಿದರೆ ತೊಂದರೆ ಕಾಣಿಸುವುದಿಲ್ಲ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. 80 ಡೆಸಿಬಲ್‌ಗೂ ಅಧಿಕ ವಾಲ್ಯೂಮ್‌ನಲ್ಲಿ ಇಯರ್‌ಫೋನ್ ಬಳಸಿದರೆ ಮಕ್ಕಳು ಹಾಗೂ ವಯಸ್ಕರು ಇಬ್ಬರಿಗೂ ತೊಂದರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT