ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗರ್ಭದಲ್ಲಿ ಫೈಬ್ರಾಯ್ಡ್‌: ಸಮತೂಕಕ್ಕೆ ಇರಲಿ ಆದ್ಯತೆ

Published 31 ಮೇ 2024, 22:17 IST
Last Updated 31 ಮೇ 2024, 22:17 IST
ಅಕ್ಷರ ಗಾತ್ರ

ಈಗೀಗ ಗರ್ಭಾಶಯದಲ್ಲಿ ಹಲವು ಕಿಲೋ ಗ್ರಾಂ ತೂಗುವ ಗಡ್ಡೆಗಳನ್ನು (ಫೈಬ್ರಾಯ್ಡ್‌) ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವ  ಪ್ರಕರಣಗಳು ಹೆಚ್ಚುತ್ತಿವೆ. ಮೊದಲೆಲ್ಲ ಇಂಥ ಫೈಬ್ರಾಯ್ಡ್‌ಗಳು ಮಹಿಳೆಯರಿಗೆ 50ರ ಅಸುಪಾಸಿನಲ್ಲಿ ಕಾಣಿಸಿಕೊಳ್ಳುತ್ತಿತ್ತು. ಈಗೀಗ ಹದಿಹರೆಯದ ಹೆಣ್ಣುಮಕ್ಕಳ ಗರ್ಭದಲ್ಲಿಯೂ ಇಂಥ ಗಡ್ಡೆಗಳನ್ನು ಕಾಣಲಾಗುತ್ತಿದೆ. ಯಾವುದೇ ಮನ್ಸೂಚನೆಯೂ ಇಲ್ಲದೇ, ಸಣ್ಣ ರೋಗಲಕ್ಷಣಗಳೂ ಕಾಣಿಸಿಕೊಳ್ಳದೇ ಕೆ.ಜಿ ಗಟ್ಟಲೇ ತೂಗುವ ಗಡ್ಡೆಗಳು ಗರ್ಭದಲ್ಲಿ ಇರುವುದು ಹೇಗೆ? ಎಂದು ಚಕಿತಗೊಳ್ಳುವ ಸರದಿ ರೋಗಿಯ ಕುಟುಂಬದ್ದಾಗಿರುತ್ತದೆ.

ಏನಿದು ಫೈಬ್ರಾಯ್ಡ್‌ ?

ಗರ್ಭದಲ್ಲಿ ಯಾಕಾಗಿ ಫೈಬ್ರಾಯ್ಡ್‌ಗಳು ರೂಪುಗೊಳ್ಳುತ್ತವೆ ಎಂಬುದಕ್ಕೆ ಈವರೆಗೆ ನಿಖರ ಕಾರಣ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇದೊಂದು ಕ್ಯಾನ್ಸರೇತರ ಗಡ್ಡೆಯಾಗಿದ್ದು, ಗರ್ಭ ಗೋಡೆಗಳಲ್ಲಿ ಬೆಳೆಯುತ್ತದೆ. ಕೆಲವರಿಗೆ ಮಾತ್ರ ಸಣ್ಣ ಪ್ರಮಾಣದ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಈ ಗಡ್ಡೆಗಳು ಗಾತ್ರದಲ್ಲಿ ಒಬ್ಬರಿಗಿಂತ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆ. ಮೂವತ್ತರ ನಂತರ ಈ ಗಡ್ಡೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ವಂಶಪಾರಂಪರ್ಯವಾಗಿಯೂ ಬರುವ ಸಾಧ್ಯತೆ ಇರುವುದನ್ನು ತಳ್ಳಿ ಹಾಕಲು ಆಗದು. ಸಾಮಾನ್ಯ ಪ್ರಮಾಣದ ತೂಕ ಹೊಂದಿರುವವರಿಗಿಂತ ಅಧಿಕ ತೂಕ, ಬೊಜ್ಜಿನ ಸಮಸ್ಯೆ ಇರುವ ಮಹಿಳೆಯರಲ್ಲಿ ಈ ಗಡ್ಡೆಗಳು ಕಾಣಿಸಿಕೊಳ್ಳುತ್ತವೆ.

ವಿಶ್ವದಲ್ಲಿಯೇ ಆಫ್ರಿಕನ್‌ ಸಮುದಾಯದ ಮಹಿಳೆಯರಲ್ಲಿ ಫೈಬ್ರಾಯ್ಡ್‌ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದು, ಬಿಳಿಯರು ಮತ್ತು ಭಾರತೀಯರಲ್ಲಿ ಶೇ 50 ರಿಂದ 60ರಷ್ಟು ಪ್ರಕರಣಗಳು ಕಾಣಿಸಿಕೊಳ್ಳುತ್ತವೆ.

ಫೈಬ್ರಾಯ್ಡ್‌ಗಳ ವಿಂಗಡಣೆ

ಗರ್ಭದಲ್ಲಿ ರೂಪುಗೊಳ್ಳುವ ಜಾಗದ ಆಧಾರ ಮೇಲೆ ಈ ಫೈಬ್ರಾಯ್ಡ್‌ಗಳನ್ನು ವಿಂಗಡಿಸಲಾಗಿದೆ. ಗರ್ಭಚೀಲದ ಕುಳಿಯಲ್ಲಿದ್ದರೆ ಸಬ್‌ಮ್ಯೂಕೋಸಲ್‌ ಫೈಬ್ರಾಯ್ಡ್‌ ಎನ್ನಲಾಗುತ್ತದೆ. ಗರ್ಭಚೀಲದ ಗೋಡೆಯಲ್ಲಿ ರೂಪುಗೊಳ್ಳುವ ಫೈಬ್ರಾಯ್ಡ್‌ಗಳನ್ನು ಇಂಟ್ರಾಮೂರಲ್‌ ಫೈಬ್ರಾಯ್ಡ್‌, ಗರ್ಭದ ಮೇಲ್ಪದರದಲ್ಲಿ ರೂಪುಗೊಳ್ಳುವ ಫೈಬ್ರಾಯ್ಡ್‌ಗಳನ್ನು ಸಬ್‌ಸೆರೋಸಲ್‌ ಫೈಬ್ರಾಯ್ಡ್‌ ಎಂದೂ ಕರೆಯಲಾಗುತ್ತದೆ.

ಲಕ್ಷಣಗಳೇನು?

ನಿರಂತರ ತಪಾಸಣೆಗಳಿಂದ ಮಾತ್ರ ಗರ್ಭದಲ್ಲಿ ಫೈಬ್ರಾಯ್ಡ್‌ಗಳು ಇರುವುದನ್ನು ಪತ್ತೆ ಹೆಚ್ಚಬಹುದು. ಕೆಲವೊಮ್ಮೆ ಗರ್ಭ ಧರಿಸಿದ ಸಂದರ್ಭದಲ್ಲಿ ನಡೆಸುವ ಪರೀಕ್ಷೆಗಳಿಂದಲೂ ಇದು ಪತ್ತೆಯಾಗುತ್ತದೆ. ಕೆಲವೊಮ್ಮೆ ಮುಟ್ಟಾದ ಸಂದರ್ಭದಲ್ಲಿ ಅಸಹಜ ಎನಿವಷ್ಟು ರಕ್ತಸ್ರಾವ ಹಾಗೂ ಹೊಟ್ಟೆನೋವು ಬರಬಹುದು. ಈ ಕ್ಯಾನ್ಸರೇತರ ಗಡ್ಡೆಗಳು ಬೆಳೆದಂತೆ ಗರ್ಭಿಣಿಯರ ಹೊಟ್ಟೆಯಂತೆ ಕಾಣಬಹುದು. ಕ್ರಮೇಣ ಗರ್ಭದ ಮೇಲೆ ಒತ್ತಡ ಬೀಳುವುದರಿಂದ ಪದೇ ಪದೇ ಮೂತ್ರ ಮಾಡಬೇಕು ಎನಿಸುತ್ತದೆ. ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಕಡಿಮೆಯಾದಂತೆ ಭಾಸವಾಗುತ್ತದೆ. ಗಡ್ಡೆಗಳ ಭಾರವು ಇತರೆ ಅಂಗಗಳ ಮೇಲೆ ಒತ್ತಡ ತರುವುದರಿಂದ ಬಿಟ್ಟು ಬಿಟ್ಟು ಬೆನ್ನು ನೋವು ಬರಬಹುದು. ಮಲಬದ್ಧತೆಯಂಥ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಎಲ್ಲ ರೋಗಲಕ್ಷಣಗಳು ಫೈಬ್ರಾಯ್ಡ್‌ಗಳ ಗಾತ್ರವನ್ನು ಆಧರಿಸಿರುತ್ತದೆ. ಗರ್ಭ ಧರಿಸುವ ಮುನ್ನ ಗರ್ಭಚೀಲದೊಳಗೆ ಈ ಗಡ್ಡೆಗಳು ಬೆಳದರೆ ಗರ್ಭಿಣಿಯಾಗಲು ತೊಂದರೆಯಾಗಬಹುದು. ಈಗಾಗಲೇ ಗರ್ಭ ಧರಿಸಿದವರಲ್ಲಿ ಗಡ್ಡೆಯು ಕಾಣಿಸಿಕೊಂಡರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು. ಮತ್ತು ಮಗುವಿನ ಬೆಳವಣಿಗೆಗೂ ಅಡ್ಡಿಯಾಗಬಹುದು. ನಿಗದಿತ ಸಮಯಕ್ಕೆ ಮುನ್ನವೇ ಹೆರಿಗೆಯಾಗಬಹುದು.

ಜೀವನದ ಮೇಲೂ ಪರಿಣಾಮ

ಫೈಬ್ರಾಯ್ಡ್‌ ಹೊಂದಿರುವ ಮಹಿಳೆಯರಲ್ಲಿ  ದೈಹಿಕ, ಭಾವನಾತ್ಮಕ ಏರಿಳಿತಗಳು ಸಹಜ. ಅತಿಯಾದ ರಕ್ತಸ್ರವಾವ, ಹೊಟ್ಟೆಯ ಭಾಗದಲ್ಲಿ ಪದೇ ನೋವು, ಸುಸ್ತು, ರಕ್ತಹೀನತೆ ಕಾಡಬಹುದು. ಶಸ್ತ್ರಚಿಕಿತ್ಸೆಯ ನಂತರವೂ ವಿಶ್ರಾಂತಿ ಪಡೆಯುವ ಅಗತ್ಯವಿರುತ್ತದೆ.

ಪದೇ ಪದೇ ನೋವು ಕಾಣಿಸಿಕೊಳ್ಳುವುದರಿಂದ, ಫಲವಂತಿಕೆಯ ಮೇಲೆ ಪರಿಣಾಮ ಬೀರುವುದರಿಂದ ಮಾನಸಿಕ ಒತ್ತಡ, ಅತಿಯಾದ ಭಯ ಹಾಗೂ ಖಿನ್ನತೆ ಕಾಡುತ್ತದೆ. ಇದರಿಂದ ದೈನಂದಿನ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದೇ ಹೋಗಬಹುದು.  ಜತೆಗೆ ನೋವಿನಿಂದಲೇ ದಿನ ಕಳೆಯಬೇಕಾದ ಸಂದರ್ಭದಲ್ಲಿ ಇತರೆ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಳ್ಳಲು ಸಾಧ್ಯವಾಗದೇ ಹೋಗಬಹುದು.

–ಡಾ. ಶಾಂತಲಾ ತುಪ್ಪಣ್ಣ, ಸ್ತ್ರೀರೋಗತಜ್ಞೆ, ಸಾಕ್ರಾ ವರ್ಲ್ಡ್‌ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT