ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ | ಅಂಗಾಂಗ ಜಾರುವಿಕೆ ವಹಿಸಿ ಎಚ್ಚರಿಕೆ

Published 23 ಜೂನ್ 2023, 21:00 IST
Last Updated 23 ಜೂನ್ 2023, 21:00 IST
ಅಕ್ಷರ ಗಾತ್ರ
ಐವತ್ತು ವರ್ಷದ ಆಸುಪಾಸಿನ ಕೆಲವು ಮಹಿಳೆಯರಲ್ಲಿ ಕಿಬ್ಬೊಟ್ಟೆಯ ಅಂಗಗಳು (ಗರ್ಭಕೋಶ, ಮೂತ್ರಕೋಶ ಹಾಗೂ ಕರುಳು) ಜಾರುವ ಪ್ರಕ್ರಿಯೆ ಸಾಮಾನ್ಯ. ಇದು ಜೀವಕ್ಕೆ ಅಪಾಯ ತರದಿದ್ದರೂ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಸೂಕ್ತ ತಪಾಸಣೆ ಮಾಡಿಸಿಕೊಂಡು, ಚಿಕಿತ್ಸೆ ಪಡೆಯುವುದೊಂದೇ ಪರಿಹಾರ.

‘ಡಾಕ್ಟ್ರೆ ಜನನಾಂಗದ ಹೊರಭಾಗದಲ್ಲಿ ನಿಂಬೆಹಣ್ಣಿನ ಗಾತ್ರದ ಮಾಂಸಖಂಡ ಇದ್ದಂತೆ ಅನ್ನಿಸುತ್ತದೆ. ಮೂತ್ರ ಅಥವಾ ಮಲ ವಿಸರ್ಜನೆಗೆ ಹೋದಾಗ, ಕೈಗೆ ಸಿಗುತ್ತದೆ. ಇದರಿಂದ ನನಗೆ ತುಂಬಾ ಭಯವಾಗಿದೆ. ಇದು ಗಡ್ಡೆಯೇ? ಇದಕ್ಕೆ ಚಿಕಿತ್ಸೆ ಇದೆಯೇ’?

‘ನನ್ನ ಅಮ್ಮನಿಗೆ 60 ವರ್ಷ. ಅವರಿಗೆ ದೀರ್ಘ ಕಾಲದಿಂದ ಮಲಬದ್ಧತೆ ಸಮಸ್ಯೆಯಿದೆ. ಈಗ ಅವರಿಗೆ ಮಲವಿಸರ್ಜನೆ ಮಾಡುವಾಗ, ಒತ್ತಡ ಹಾಕುವುದರಿಂದ ವಸ್ತುವೊಂದು ಹೊರಗಡೆ ಬಂದಂತೆ ಅನ್ನಿಸುತ್ತದೆ. ಅದನ್ನು ಬೆರಳಿನಿಂದ ತಳ್ಳಿದಾಗ, ಒಳಗಡೆ ಹೋಗುತ್ತದೆ. ಇದಕ್ಕೆ ಕಾರಣವೇನು? ಅಮ್ಮನಿಗೆ ಏನಾಗಿರಬಹುದು? ನಮಗೆಲ್ಲಾ ತುಂಬಾ ಯೋಚನೆ ಆಗಿದೆ. ಆತಂಕವಾಗಿದೆ..’

ಇವು ಇತ್ತೀಚೆಗೆ  ಕೆಲವುಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳು. ಈ ರೀತಿ ಗುದದ್ವಾರ– ಯೋನಿಯಲ್ಲಿ ಹೆಚ್ಚುವರಿಯಾಗಿ ಗಡ್ಡೆ ಅಥವಾ ವಸ್ತುಗಳು ಕಾಣಿಸಿಕೊಳ್ಳುವುದನ್ನು ‘ಪೆಲ್ವಿಕ್‌ ಆರ್ಗನ್‌ ಪ್ರೊಲ್ಯಾಪ್ಸ್‌‘ ಎನ್ನುತ್ತಾರೆ. ಅಂದರೆ, ಮಹಿಳೆಯರ ಕಿಬ್ಬೊಟ್ಟೆಯಲ್ಲಿರುವ ಅಂಗಗಳು(ಗರ್ಭಕೋಶ, ಮೂತ್ರಕೋಶ ಹಾಗೂ ಕರುಳು) ಜಾರುವ ಪ್ರಕ್ರಿಯೆ. ಇದರಲ್ಲಿ ಗರ್ಭಕೋಶ ಜಾರುವಿಕೆಯನ್ನು ‘ಯೂಟಿರೈನ್ ಪ್ರೋಲ್ಯಾಪ್ಸ್’ ಎಂದೂ ಕರೆಯುತ್ತಾರೆ.

ಗರ್ಭಕೋಶ ಜಾರುವಿಕೆ, ಋತುಚಕ್ರಬಂಧಕ್ಕೆ(ಮೆನೊಪಾಸ್) ಹತ್ತಿರುವಿರುವಂಥ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಅನಾರೋಗ್ಯ ಸ್ಥಿತಿ. ಜಾಗತಿಕ ಅಂಕಿ ಅಂಶಗಳ ಪ್ರಕಾರ ಹೆರಿಗೆಯ ನಂತರ, 50 ವರ್ಷಕ್ಕಿಂತ ಹಿರಿಯ ಮಹಿಳೆಯರಲ್ಲಿ ಅರ್ಧದಷ್ಟು ಮಂದಿ ಪೆಲ್ವಿಕ್ ಆರ್ಗನ್ ಪ್ರೊಲ್ಯಾಪ್ಸ್‌ನ ಕೆಲವು ಲಕ್ಷಣಗಳನ್ನು ಹೊಂದಿರುತ್ತಾರೆ ಹಾಗೂ 80 ವರ್ಷ ವಯಸ್ಸಿನ ಹೊತ್ತಿಗೆ ಪ್ರತಿ ಹತ್ತರಲ್ಲಿ ಒಬ್ಬರು ಮಹಿಳೆಗೆ ಗರ್ಭಕೋಶ ಜಾರುವಿಕೆಯ ಸಮಸ್ಯೆಗೆ ಶಸ್ತ್ರಚಿಕಿತ್ಸೆಯ ಅಗತ್ಯ ಬೀಳುತ್ತದೆ.

ಆರಂಭಿಕ ಹಂತಗಳಲ್ಲಿ ಇದನ್ನು ಪತ್ತೆ ಮಾಡಿದರೆ ತುಂಬಾ ಸರಳವಾಗಿ ಚಿಕಿತ್ಸೆ ನೀಡಬಹುದು.

ಹೀಗಾಗಲು ಕಾರಣವೇನು?

ಗರ್ಭಾವಸ್ಥೆ ಹಾಗೂ ಹೆರಿಗೆಯಿಂದ ಕಿಬ್ಬೊಟ್ಟೆ ಭಾಗದಲ್ಲಿ ಸ್ನಾಯುಗಳು ಹಾಗೂ ಲಿಗಮೆಂಟ್ಸ್ ದುರ್ಬಲವಾಗುವುದು ಸಹಜ. ಮಗುವಿನ ಗಾತ್ರ ದೊಡ್ಡದಿದ್ದರೆ, ಹೆರಿಗೆ ಸಂದರ್ಭದಲ್ಲಿ ಇಕ್ಕಳದಂತಹ ಉಪಕರಣಗಳನ್ನು (ಫಾರ್ಸೆಪ್ಸ್) ಬಳಸಿದ್ದರೆ ಹೀಗಾಗುವ ಸಾಧ್ಯತೆ ಇರುತ್ತದೆ.

ಮಾತ್ರವಲ್ಲ, ಹೆರಿಗೆಗೆ ದೀರ್ಘ ಸಮಯ ತೆಗೆದುಕೊಂಡಿದ್ದಲ್ಲಿ, ಮಹಿಳೆಯೊಬ್ಬಳಿಗೆ ಹೆಚ್ಚು ಹೆರಿಗೆಗಳಾಗಿದ್ದರೂ, ಹೆರಿಗೆಗಳ ಅಂತರ ಎರಡು ವರ್ಷಗಳಿಗಿಂತ ಕಡಿಮೆ ಇದ್ದಲ್ಲಿ ಮತ್ತು ಪದೇ ಪದೇ ಗರ್ಭಪಾತಗಳಾಗುತ್ತಿದ್ದರೆ, ಅತಿಯಾದ ತೂಕ ಇರುವವರಿಗೂ ಹೀಗಾಗಬಹುದು.

ಮಲಬದ್ಧತೆ, ಬಹಳ ದಿನಗಳಿಂದ ಕಫದ ಜೊತೆಗೆ ಕೆಮ್ಮು ಇದ್ದರೆ, ಹೆಚ್ಚು ತೂಕವಿರುವ ವಸ್ತುವನ್ನು ಎತ್ತಿದಾಗ ಹೊಟ್ಟೆ ಮೇಲೆ ಭಾರ ಬಿದ್ದು ಒಳ ಅಂಗಗಳು ಜಾರಬಹುದು. ಗರ್ಭಕೋಶದ ನಿವಾರಣೆಯ ಬಳಿಕ ಇತರ ಅಂಗಗಳಿಗೆ ಇದ್ದ ಆಸರೆ ತಪ್ಪಿ ಬೇರೆ ಅಂಗಗಳು ಕೆಳಕ್ಕೆ ಜಾರಬಹುದು. ಹೀಗೆ ಗರ್ಭಕೋಶ, ಮೂತ್ರಕೋಶ, ಮೂತ್ರನಾಳ, ದೊಡ್ಡ ಕರುಳಿನ ಕೆಳಭಾಗ ಗುದದ್ವಾರ ಇತ್ಯಾದಿ ಬಹು ಅಂಗಗಳು ಒಟ್ಟಾಗಿ ಜಾರುವ ಅನಾರೋಗ್ಯ ಸ್ಥಿತಿಯನ್ನು ಮಲ್ಟಿ ಆರ್ಗನ್ ಪ್ರೊಲ್ಯಾಪ್ಸ್ ಅಥವಾ ಬಹು ಅಂಗ ಜಾರುವಿಕೆ ಎನ್ನುತ್ತಾರೆ. ಕೆಲವರಿಗೆ ಈ ತೊಂದರೆ ಇದ್ದರೂ, ಅದರ ಲಕ್ಷಣಗಳು ಅವರ ಗಮನಕ್ಕೆ ಬಂದಿರುವುದಿಲ್ಲ.

ಗರ್ಭಕೋಶ ಜಾರುವಿಕೆ

ಯೋನಿಯ ಮೇಲುಭಾಗದಲ್ಲಿ ಗರ್ಭಕೋಶವನ್ನು ಕಟ್ಟಿ ಹಿಡಿಯುವ ಬಂಧಕ ಅಂಗಾಶಗಳ ಗುಂಪೊಂದು ದುರ್ಬಲ ಗೊಂಡಾಗ ಗರ್ಭಕೋಶ ಕೆಳಜಾರುತ್ತದೆ. ಇದರ ಫಲವಾಗಿ ಯೋನಿಯ ಎದುರು ಮತ್ತು ಹಿಂಭಾಗದ ಗೋಡೆಗಳೆರಡೂ ದುರ್ಬಲಗೊಳ್ಳುತ್ತವೆ. ಗರ್ಭಕೋಶದ ಮುಂಭಾಗವನ್ನು ಗರ್ಭಕೋಶದ ಕಂಠ (ಸರ್ವಿಕ್ಸ್) ಎಂದು ಕರೆಯಲಾಗುತ್ತದೆ. ಈ ಸರ್ವಿಕ್ಸ್‌ನ ಸ್ಥಾನವನ್ನಾಧರಿಸಿ, ಜಾರುವಿಕೆ ಎಷ್ಟು ತೀವ್ರವಾಗಿದೆ ಎಂದು ವಿಶ್ಲೇಷಿಸಲಾಗುತ್ತದೆ.

ಮುಂದುವರಿದ ಹಂತಗಳಲ್ಲಿ ಜಾರುವಿಕೆ ಪತ್ತೆಯಾದಾಗ ಸಂಕೀರ್ಣ ಸಮಸ್ಯೆಗಳನ್ನು ತಡೆಯಲು ಮತ್ತು ಅಂಗಗಳ ಕಾರ್ಯಚಟುವಟಿಕೆಗಳನ್ನು ಮೊದಲಿನಂತೆ ಮಾಡಲು ರೋಗಿಗಳನ್ನು ತಜ್ಞ ಆರೋಗ್ಯ ಸೌಲಭ್ಯಗಳುಳ್ಳ ಆಸ್ಪತ್ರೆಗಳಿಗೆ ಕಳುಹಿಸಬೇಕು. 

ಯಾವುದೇ ಲಕ್ಷಣಗಳು ಇರದಿದ್ದರೂ ಯೋನಿ ಪರೀಕ್ಷೆಯ ಮೂಲಕ ಒಳ ಅಂಗಗಳ ಜಾರುವಿಕೆಯನ್ನು ಕಂಡುಕೊಳ್ಳಬಹುದು. ಕೆಳಗೆ ಏನೋ ಬಂದಂತೆ ಅನಿಸಬಹುದು. ಕೈಗೆ ತಗುಲಬಹುದು. ಅತಿಯಾಗಿ ಬೆನ್ನುನೋವು ಬರಬಹುದು. ಕೆಳಗೆ ಎಳೆದಂತೆ, ಭಾರವಾದಂತೆ ಅನಿಸಬಹುದು. ಒಮ್ಮೊಮ್ಮೆ ಅದು ಪೂರ್ತಿ ಹೊರಬಂದು ಕಾಣಿಸಬಹುದು. ಹಾಗೇನಾದರೂ ಕಂಡುಬಂದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ತುಂಬಾ ದಿನ ಹಾಗೆಯೇ ಬಿಟ್ಟರೆ ಅಲ್ಸರ್ ಉಂಟಾಗಿ ಅಲ್ಲಿ ಸೋಂಕು ತಗುಲಬಹುದು.

ಪರಿಹಾರವೇನು?

ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವುದು, ದೇಹತೂಕ ಹೆಚ್ಚಿಗೆ ಇದ್ದರೆ ಇಳಿಸಿಕೊಳ್ಳಬೇಕು. ವ್ಯಾಯಾಮಗಳ ಮೂಲಕ ಕಿಬ್ಬೊಟ್ಟೆ ಭಾಗಗಳ ಲಿಗಮೆಂಟ್ಸ್ ಮತ್ತು ಸ್ನಾಯುಗಳ ಬಲವರ್ಧನೆಗೊಳಿಸುವುದು. ವೈದ್ಯರು, ವೆಜೈನಲ್ ಹಾರ್ಮೋನು ಕ್ರೀಮು, ಮಾತ್ರೆ ಬಳಸಲು ಸೂಚಿಸುತ್ತಾರೆ. ಇದರಿಂದ ಲಿಗಮೆಂಟ್, ಸ್ನಾಯುಗಳ ಬಲವರ್ಧನೆಗೆ ನೆರವಾಗುತ್ತದೆ. ಕೆಮ್ಮು ಮತ್ತು ಕಫ ಇದ್ದರೆ ಅದಕ್ಕೆ ಚಿಕಿತ್ಸೆ ಬೇಕಾಗುತ್ತದೆ. ರಿಂಗ್ ಮಾದರಿಯ ಪೇಸರಿ ಎಂಬ ಸಾಧನವನ್ನು ಅಳವಡಿಸಿ ತಾತ್ಕಾಲಿಕ ಪರಿಹಾರ ಒದಗಿಸುತ್ತಾರೆ. ಜೊತೆಗೆ ಯಾವ ಅಂಗ ಅಥವಾ ಅಂಗಗಳು ಎಷ್ಟರಮಟ್ಟಿಗೆ ಜಾರಿವೆ ಎನ್ನುವುದನ್ನು ಖಚಿತಪಡಿಸಿ ಕೊಂಡು ಕೆಲವು ಚಿಕಿತ್ಸಾ ಉಪಾಯಗಳನ್ನು ಅನುಸರಿಸಲಾಗುತ್ತದೆ. ಏನೂ ಪರಿಹಾರ ಮಾಡಿಕೊಳ್ಳದೇ ಇದ್ದರೆ ಸಮಸ್ಯೆ ಹಾಗೆಯೇ ಮುಂದುವರಿಯಬಹುದು ಅಥವಾ ಪರಿಸ್ಥಿತಿ ಇನ್ನೂ ಹದಗೆಡಬಹುದು.

ಕಿಬ್ಬೊಟ್ಟೆಯ ಒಳ ಅಂಗಗಳ ಜಾರುವಿಕೆ ಜೀವಕ್ಕೆ ಅಪಾಯ ತರದೇ ಇದ್ದರೂ ಜೀವನದ ಗುಣಮಟ್ಟದ ಮೇಲೆ ಮಾತ್ರ ಖಂಡಿತ ಪರಿಣಾಮ ಬೀರಬಹುದು.

ಆನುವಂಶೀಯವಲ್ಲ..
ಗರ್ಭಕೋಶ ಜಾರುವಿಕೆ ಆನುವಂಶೀಯವಲ್ಲ. ಆನುವಂಶೀಯ ಎಂಬುದು ತಪ್ಪು ತಿಳಿವಳಿಕೆ. ಪದೇ ಪದೇ ಗರ್ಭಪಾತಗಳು ಆಗುವುದು, ಮೇಲಿಂದ ಮೇಲೆ ಹೆರಿಗೆ ಆಗುವುದು, ಉದರದ ಭಾಗಕ್ಕೆ ಪೆಟ್ಟು ಬೀಳುವುದು, ಬೊಜ್ಜು ಇರುವಿಕೆ ಮುಂತಾದ ಕಾರಣಗಳಿಂದ ಗರ್ಭಕೋಶ ತನ್ನ ಸ್ಥಾನದಿಂದ ಕೆಳಗಡೆ ಜಾರಬಹುದು.
ಶಸ್ತ್ರಚಿಕಿತ್ಸೆ ಅವಶ್ಯವೇ?
‌ಗರ್ಭಕೋಶ ಜಾರಿದಾಗ ಮಾತ್ರ ಶಸ್ತ್ರಚಿಕಿತ್ಸೆ ಅವಶ್ಯಕ ಇರುತ್ತದೆ. ಆದರೆ, ಯಾವುದೇ ಸಮಸ್ಯೆ ಇಲ್ಲದಿದ್ದರೆ, ಗರ್ಭಕೋಶ ಆರೋಗ್ಯ ಸ್ಥಿತಿಯಲ್ಲಿ ಇರುವಾಗ, ಗರ್ಭಕೋಶದ ಕೊಯ್ತೆಗೆತ (hystrectomy) ಮಾಡುವುದು ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT