ಗುರುವಾರ , ಮೇ 26, 2022
24 °C

Work From Home: ಮನೆಯಿಂದ ಕೆಲಸವೂ.. ಮನೆಕೆಲಸವೂ..

ಸಮುದ್ಯತಾ ರಾಜೇಶ್ Updated:

ಅಕ್ಷರ ಗಾತ್ರ : | |

Prajavani

(ಜಾಣ್ಮೆ, ಶಿಸ್ತು, ಸಂಯಮ ಜೊತೆಗೆ ಮನೆಯವರ ಸಹಕಾರ ಇದ್ದಲ್ಲಿ ಮನೆಯಿಂದ ಕೆಲಸ ನಿರ್ವಹಿಸುವುದು ಮತ್ತು ಮನೆಕೆಲಸ ನಿರ್ವಹಿಸುವುದು – ಎರಡೂ ಸರಾಗ)

ಲ್ಯಾಪ್‌ಟಾಪ್ ಮುಂದೆ ಕುಳಿತ ವರ್ಷಾಳಿಗೆ ಮಗಳು ‘ಹಸಿವು’ ಎಂದು ಕೂಗಿದಾಗಲೇ ಎಚ್ಚರವಾಗುವುದು. ಕೆಲಸದ ಒತ್ತಡದಲ್ಲಿ ಸಮಯಕ್ಕೆ ಸರಿಯಾಗಿ ಅಡುಗೆ ಮಾಡಲು ಅವಳಿಂದ ಆಗುತ್ತಿಲ್ಲ. ಮಗುವಿನ ಹಸಿದ ಕೂಗು ಕೇಳಿದಾಗ ಸಂಕಟವಾಗುತ್ತದೆ. ಕೆಲಸದ ಮೇಲೆ ಕೋಪವೂ ಅಸಹಾಯಕತೆಯೂ ಕಾಡುತ್ತದೆ.

ಬೆಳಗ್ಗೆಯಿಂದ ಸಂಜೆಯವರೆಗೂ ಕೆಲಸದಲ್ಲಿ ತೊಡಗಿರುವ ಸುಮಾಗೆ ಮನೆಕೆಲಸಕ್ಕೆ ಸಮಯ ಸಾಲುತ್ತಿಲ್ಲ. ಕೆಲಸ ಮುಗಿಸಿ ಕೋಣೆಯಿಂದ ಹೊರಬರುವಾಗ ಮನೆಯ ಅಸ್ತವ್ಯಸ್ತತೆ ಕಂಡು ಕಿರಿಕಿರಿ ಉಂಟಾಗುತ್ತದೆ. ಅದನ್ನೆಲ್ಲ ಸ್ವಚ್ಛಗೊಳಿಸುವ ವೇಳೆಗೆ ಇನ್ನಷ್ಟು ದಣಿವಾಗುತ್ತದೆ.

ಕೆಲಸದ ನೂರಾರು ಒತ್ತಡಗಳ ನಡುವೆ ಮಗು ಮೊಬೈಲ್‌ನಲ್ಲಿ ಮುಳುಗಿಹೋಗಿರುವುದು ಸೌಮ್ಯಳಿಗೆ ಪಾಪಪ್ರಜ್ಞೆ ಕಾಡುವಂತಾಗಿದೆ. ಮಗುವಿನೊಡನೆ ಆಟವಾಡಲು ಸಮಯವಿಲ್ಲ. ಕೆಲಸ ಮುಗಿಯುವ ವೇಳೆಗೆ ಆಯಾಸ. ಒಂದು ಪಶ್ಚಾತ್ತಾಪದೊಂದಿಗೇ ಸೌಮ್ಯ ದಿಂಬಿಗೆ ತಲೆಯಾನಿಸುತ್ತಾಳೆ.

***

ಕಳೆದೆರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕದ ಪರಿಣಾಮವಾಗಿ ಮನೆಯಿಂದಲೇ ಕೆಲಸ ಮಾಡುತ್ತಿರುವ ಹಲವು ತಾಯಂದಿರ ಸಮಸ್ಯೆ ಇದು. ವರ್ಕ್ ಫ್ರಂ ಹೋಮ್ ಎನ್ನುವುದು ಹೇಳಿಕೆಗೆ ಸುಲಭವೆನಿಸಿದರೂ ಜವಾಬ್ದಾರಿಗಳು ಇನ್ನಷ್ಟು ಹೆಚ್ಚು.

ಹೇಗೂ ಮನೆಯಿಂದಲೇ ಕೆಲಸ ಮಾಡ್ತೀಯ, ಜೊತೆಗೆ ಮನೆಕೆಲಸವೂ ಮಾಡಿಬಿಡಬಹುದು – ಎಂಬ ಧೋರಣೆ ಮನೆಯಲ್ಲಿ ಬಂದರೆ, ಮನೆಯಲ್ಲೇ ಇರುತ್ತೀರಲ್ಲ ಒಂದಿಷ್ಟು ಕೆಲಸ ಹೆಚ್ಚು ಮಾಡಿದರೇನಂತೆ ಎಂಬ ಧೋರಣೆ ಕಚೇರಿಯಲ್ಲಿ ಬರುವುದು ಕೂಡ ಸಾಮಾನ್ಯ.

ಮನೆಯಿಂದಲೇ ಕೆಲಸ ಮಾಡುವುದು ಕೆಲವೊಮ್ಮೆ ಅನುಕೂಲವೂ ಹೌದು. ಕಚೇರಿಗೆ ಓಡಾಟದ ಸಮಯ ಉಳಿತಾಯವಾಗುತ್ತದೆ. ಮಕ್ಕಳಿಂದ ದೂರವಿರುವ ನೋವಿಲ್ಲ, ಹಿರಿಯರನ್ನು ಮನೆಯಲ್ಲಿ ಬಿಟ್ಟು ಹೋಗುವ ಆತಂಕವಿಲ್ಲ. ಎದುರಿದ್ದು ನೋಡಿಕೊಳ್ಳಬಹುದು. ಆದರೆ, ಕಚೇರಿಗೆ ಹೋದ ನಂತರ ಮನೆಯ ಕೆಲಸಕಾರ್ಯಗಳು, ಮನೆಯವರು ಇಲ್ಲದೇ ಇರುವುದರಿಂದ ಕೆಲಸಗಳಲ್ಲಿ ಗಮನ ಹರಿಸುವುದು, ಸಮಯ ಕೊಡುವುದು ಸುಲಭ. ಮನೆಯಿಂದಲೇ ಕೆಲಸ ಮಾಡುವಾಗ ಪ್ರತಿಯೊಂದನ್ನೂ ಪರಿಗಣಿಸಿ ಸಮಯ ನೀಡಿ ಕೆಲಸ, ಮನೆ ಎರಡನ್ನೂ ಸಂಭಾಳಿಸುವುದು ಸುಲಭವಲ್ಲ. ಎಲ್ಲವನ್ನೂ ಶಿಸ್ತಿನಿಂದ ನಿಭಾಯಿಸಿಕೊಂಡು ಹೋಗಲು ಸಮಯದ ಜೊತೆ ತುಸು ಜಾಣ್ಮೆಯೂ ಬೇಕು.

ಪತಿ–ಪತ್ನಿ ಇಬ್ಬರೂ ದುಡಿಯುವ ಸಂದರ್ಭಗಳಲ್ಲಿ ಮನೆ ನಿರ್ವಹಣೆಗೆ ಇಬ್ಬರ ಸಹಕಾರವೂ ಅಗತ್ಯ. ಕೆಲಸಗಳನ್ನು ಹಂಚಿಕೊಂಡು ಮಾಡಿದಲ್ಲಿ ಒತ್ತಡ ಕಡಿಮೆಯಾಗುವುದಲ್ಲದೆ ಕೆಲಸದ ನಂತರದ ಸಮಯವನ್ನು ಮನೆಯವರೊಂದಿಗೆ ನೆಮ್ಮದಿಯಿಂದ ಕಳೆಯಲು ಅನುಕೂಲವಾಗುತ್ತದೆ. ಮನೆಯಲ್ಲಿ ಹಿರಿಯರಿದ್ದಲ್ಲಿ ಮಕ್ಕಳೊಂದಿಗೆ ಸಮಯ ಕಳೆಯಬಹುದು.

 ವರ್ಕ್ ಫ್ರಂ ಹೋಂ ಆಯ್ಕೆಯಾಗಿದ್ದಲ್ಲಿ ನಿಮ್ಮ ಮನೆಯವರೊಂದಿಗೆ ಕುಳಿತು ಸ್ಪಷ್ಟವಾಗಿ ನಿಮ್ಮ ಕೆಲಸದ ಕುರಿತು ಮಾಹಿತಿ ನೀಡಿ. ನಿಮಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಿಕೊಳ್ಳಿ.

 ಅನುಕೂಲವಿದ್ದಲ್ಲಿ ಮನೆಕೆಲಸಕ್ಕೆ ಸಹಾಯಕರನ್ನು ಗೊತ್ತುಪಡಿಸಿ. ಇದರಿಂದ ಸಮಯ ಮತ್ತು ಶ್ರಮದ ಉಳಿತಾಯವಾಗುತ್ತದೆ.

 ನಿಮ್ಮ ಆದ್ಯತೆಗಳನ್ನು ಪಟ್ಟಿ ಮಾಡಿ. ನಿಮ್ಮ ಕೆಲಸದ ನಿಗದಿತ ಸಮಯವನ್ನು ನಿಮ್ಮ ಅಧಿಕಾರಿಗಳೊಂದಿಗೆ ಸ್ಪಷ್ಟಪಡಿಸಿಕೊಳ್ಳಿ. ಕೆಲಸದ ನಂತರ ಮೊಬೈಲ್ ಬಳಕೆ ಕಡಿಮೆಗೊಳಿಸಿ, ಮನೆಯವರಿಗಾಗಿ ಸಮಯವನ್ನು ಮೀಸಲಿಡಿ.

ಮಾರನೆಯ ದಿನದ ಅಡುಗೆಯನ್ನು ಇಂದೇ ಯೋಚಿಸಿ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳಿ. ಇದರಿಂದ ನೀವು ಕೆಲಸಕ್ಕೆ ಕುಳಿತುಕೊಳ್ಳುವ ಮೊದಲೇ ಅಡುಗೆ ಸಿದ್ಧಪಡಿಸಲು ಅನುಕೂಲವಾಗುತ್ತದೆ. ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡುವುದು ಆರೋಗ್ಯಕ್ಕೂ ಒಳ್ಳೆಯದು.

ಮಕ್ಕಳಿಗಾಗಿ ಪ್ರತ್ಯೇಕ ಸಮಯವನ್ನು ಮೀಸಲಿಡಿ. ಮೊದಲೇ ನಿಮ್ಮ ಕೆಲಸದ ಕುರಿತು ತಿಳಿಸಿ. ಆ ವೇಳೆಯಲ್ಲಿ ಮಕ್ಕಳಿಗಾಗಿ ಚಟುವಟಿಕೆಗಳನ್ನು ಕೊಡಿ. ನಿಮ್ಮ ಕೆಲಸ ಮುಗಿದ ಮೇಲೆ ಅವರೊಂದಿಗೆ ಸ್ವಲ್ಪ ಹೊತ್ತು ನಿಮ್ಮ ಸಂಪೂರ್ಣ ಗಮನ ನೀಡಿ ಅವರೊಂದಿಗೆ ಕಾಲ ಕಳೆಯಿರಿ. ಮಕ್ಕಳು ಮಾಡಿದ ಚಟುವಟಿಕೆಗಳನ್ನು ನಿಮ್ಮ ಕೆಲಸದ ನಡುವೆ ಬಿಡುವಾದಾಗ ನೋಡಿ ಅಭಿನಂದಿಸಿ. ಅವರು ಇನ್ನಷ್ಟು ಸೃಜನಾತ್ಮಕವಾಗಿ ಬೆಳೆಯಲು ಅನುಕೂಲವಾಗುತ್ತದೆ.

ಮಕ್ಕಳಿಗೆ ಸಣ್ಣ ಪುಟ್ಟ ಕೆಲಸ ನೀಡಿ. ಉದಾ: ಅವರ ಆಟದ ಸಾಮಾನುಗಳನ್ನು ತೆಗೆದಿರಿಸುವುದು, ಅವರ ಪುಸ್ತಕಗಳನ್ನು ಜೋಡಿಸುವುದು ಮುಂತಾದ ಪುಟ್ಟ ಕೆಲಸಗಳನ್ನು ಹೇಳಿ. ಮಕ್ಕಳು ಅದನ್ನು ಮಾಡಿದಾಗ ಪ್ರಶಂಸಿಸಿ. ಇದರಿಂದ ಸ್ವಚ್ಛತೆಗೂ ನೆರವಾಗುತ್ತದೆ, ಮಕ್ಕಳಲ್ಲಿ ಶಿಸ್ತು ಸಹ ಬೆಳೆಯುತ್ತದೆ.

ಮನೆಯವರೊಂದಿಗೆ ಮುಕ್ತವಾಗಿ ಮಾತನಾಡಿ, ನಿಮಗೆ ಬೇಕಾದ ಸಹಾಯಗಳ ಕುರಿತು ತಿಳಿಸಿ. ಮನೆಕೆಲಸವನ್ನು ಹಂಚಿಕೊಳ್ಳುವುದು, ಅಡುಗೆ ಮಾಡುವುದು, ಮಕ್ಕಳ ನಿರ್ವಹಣೆಯನ್ನು ತಂದೆ ತಾಯಿ ಇಬ್ಬರೂ ಮಾಡುವುದು ಉತ್ತಮ.

ತುಸು ಜಾಣ್ಮೆ, ತುಸು ಶಿಸ್ತು, ತುಸು ಸಂಯಮ ಜೊತೆಗೆ ಮನೆಯವರ ಸಹಕಾರ ಇದ್ದಲ್ಲಿ ಮನೆಯಿಂದ ಕೆಲಸ ನಿರ್ವಹಿಸುವುದು ಮತ್ತು ಮನೆಕೆಲಸ ನಿರ್ವಹಿಸುವುದು – ಎರಡೂ ಸರಾಗ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು