ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Brain Tumor Day: ಮಿದುಳಿನ ಕಾಯಿಲೆ ಲಕ್ಷಣಗಳು, ಚಿಕಿತ್ಸೆ ಏನು?

Last Updated 8 ಜೂನ್ 2021, 8:15 IST
ಅಕ್ಷರ ಗಾತ್ರ

ಬ್ರೈನ್ ಟ್ಯೂಮರ್ ಎಂದಾಕ್ಷಣ ಪ್ರತಿಯೊಬ್ಬರಲ್ಲೂ ಭಯದ ಛಾಯೆ ಆವರಿಸಿಕೊಳ್ಳುತ್ತದೆ. ಬ್ರೈನ್ ಟ್ಯೂಮರ್ ಬಂತೆದರೆ ಜೀವನವೇ ಮುಗಿದು ಹೋಯಿತು ಎಂಬ ಭಾವನೆ ಕೆಲವರಲ್ಲಿ ಮೂಡುತ್ತದೆ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿ ಹೋಗುತ್ತಾರೆ. ಈ ಬಗ್ಗೆ ಭಯ ಹೊಂದದೇ ಆತ್ಮವಿಶ್ವಾಸವಿಟ್ಟುಕೊಂಡರೆ ಇದನ್ನು ಗೆದ್ದು ಬರಬಹುದು. ಅಲ್ಲದೆ, ಇಂದು ವೈದ್ಯಕೀಯ ವಿಜ್ಞಾನ, ನರಶಾಸ್ತ್ರ ಚಿಕಿತ್ಸೆ ಹಾಗೂ ನ್ಯೂರೋ ಆಂಕೊಲಾಜಿ ಕ್ಷೇತ್ರವು ಸಾಕಷ್ಟು ಬೆಳೆದಿದೆ. ಆದ್ದರಿಂದ ಬ್ರೈನ್ ಟ್ಯೂಮರ್ ರೋಗಕ್ಕೆ ಭಯ ಪಡುವ ಅಗತ್ಯವಿಲ್ಲ.ಇಂದು ವಿಶ್ವ ಬ್ರೈನ್ ಟ್ಯೂಮರ್ ಡೇ. ಬ್ರೈನ್ ಟ್ಯೂಮರ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬ್ರೈನ್ ಟ್ಯೂಮರ್ ಆಗಲು ಕಾರಣವೇನು?

ಮೆದುಳಿನ ಕೋಶಗಳು ಇದ್ದಕ್ಕಿದ್ದಂತೆ ಅಸಹಜ ಬೆಳವಣಿಗೆ ಹೊಂದಿ, ಒಂದೇ ಕಡೆ ಶೇಖರಣೆಯಾಗಿ ಮೆದುಳಿನ ಕಾರ್ಯಕ್ಷಮತೆಯನ್ನು ಮತ್ತು ನರಮಂಡಲ ವ್ಯವಸ್ಥೆಯ ಪ್ರತಿ ದಿನದ ಕಾರ್ಯಾಚರಣೆಯನ್ನು ಕುಂಠಿತಗೊಳಿಸುತ್ತದೆ. ಇದೊಂದು ಗಡ್ಡೆಯ ರೂಪದಲ್ಲಿ ಉಂಟಾಗಿ ಮೆನಿಂಗ್ಸ್, ಕ್ರೇನಿಯಲ್ ನರ ಮಂಡಲ, ಪಿಟ್ಯುಟರಿ ಗ್ರಂಥಿ ಅಥವಾ ಪೀನಿಯಲ್ ಗ್ರಂಥಿಗಳನ್ನು ಒಳಗೊಂಡು ಮನುಷ್ಯನ ಆರೋಗ್ಯದ ಮೇಲೆ ತೀರಾ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಸಂಶೋಧಕರು ಇದನ್ನು ಯಾವ ರೀತಿ ಉಂಟಾಗುತ್ತದೆ ಎಂಬ ಅಧ್ಯಯನ ಕೈಗೊಂಡ ನಂತರ ಅವರು ಬಹಿರಂಗ ಪಡಿಸಿದ ಒಂದು ಅಚ್ಚರಿಯ ವಿಷಯ ಎಂದರೆ ಮೆದುಳಿನ ಸಾಮಾನ್ಯ ಕೋಶಗಳಲ್ಲಿ ಡಿಎನ್ಎ ರೂಪಾಂತರವಾಗಿ ಈ ಪ್ರಕ್ರಿಯೆ ಉಂಟಾಗುತ್ತದೆ.

ಮೆದುಳಿನ ಟ್ಯೂಮರ್ಅನ್ನು ಎರಡು ಬಗೆಗಳಲ್ಲಿ ವಿಂಗಡಿಸಲಾಗಿದೆ. ಮ್ಯಾಲಿಗ್ನನ್ಟ್ ಟ್ಯುಮರ್ ಮತ್ತು ಬೆನಿಗ್ನ್ ಟ್ಯೂಮರ್. ಮ್ಯಾಲಿಗ್ನನ್ಟ್ ಟ್ಯುಮರ್ ಕ್ಯಾನ್ಸರ್ ಕಾರಕವಾಗಿದ್ದು ಜೀವಕ್ಕೆ ಹಾನಿ ಉಂಟು ಮಾಡುತ್ತದೆ. ಬೆನಿಗ್ನ್ ಟ್ಯೂಮರ್ ಕೂಡ ಜೀವಕ್ಕೆ ಮಾರಕ ಎಂದು ಪರಿಗಣಿಸಲಾಗಿದೆ. ಎರಡು ಪ್ರಕರಣಗಳಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ತೆಗೆದುಕೊಳ್ಳದೆ ಹೋದರೆ ರೋಗ ಲಕ್ಷಣಗಳು ವಿಪರೀತಗೊಳ್ಳುತ್ತವೆ.

ವಿಪರೀತ ತಲೆ ನೋವು:

ತಲೆ ನೋವು ಸಾಮಾನ್ಯವಾಗಿ ಎಲ್ಲರಿಗೂ ಒಂದಿಲ್ಲೊಂದು ಸಮಯದಲ್ಲಿ ಸಣ್ಣದಾಗಿ ಬಂದೇ ಬರುತ್ತದೆ. ಆದರೆ ಬ್ರೈನ್ ಟ್ಯೂಮರ್ ಹೊಂದಿದ ವ್ಯಕ್ತಿಗಳಿಗೆ ಇದು ಮೈಗ್ರೇನ್ ಗಿಂತಲೂ ಅತಿ ಹೆಚ್ಚಾಗಿ ಕಾಡುತ್ತದೆ ಎಂದು ಹೇಳುತ್ತಾರೆ. ಕೆಲವೊಮ್ಮೆ ವೈದ್ಯರಿಗೆ ಸಂಶಯ ಉಂಟಾಗುತ್ತದೆ. ವಿಪರೀತವಾಗಿ ಕಾಡುವ ತಲೆ ನೋವು ಹೊಂದಿದ ವ್ಯಕ್ತಿಗಳಿಗೆ ಬ್ರೈನ್ ಟ್ಯೂಮರ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಕೆಲವು ಬಗೆಯ ಲ್ಯಾಬ್ ಟೆಸ್ಟ್ ಗಳಿಗೆ ಒಳಪಡಿಸುತ್ತಾರೆ. ಪ್ರತಿ ದಿನವೂ ತಲೆ ನೋವು ಯಾವ ಸಮಯಕ್ಕೆ ಬರುತ್ತದೆ ಮತ್ತು ಬಂದ ಮೇಲೆ ಎಷ್ಟು ಹೊತ್ತು ಕಾಡುತ್ತದೆ ಎಂಬ ಬಗ್ಗೆ ವೈದ್ಯರು ಮಾಹಿತಿ ಕಲೆ ಹಾಕುತ್ತಾರೆ.

ಬ್ರೈನ್ ಟ್ಯೂಮರ್ ಹೊಂದಿದ ವ್ಯಕ್ತಿಗಳಿಗೆ ತಲೆ ನೋವು ಸಾಮಾನ್ಯವಾಗಿ ಪ್ರತಿ ದಿನವೂ ಬರುತ್ತದೆ ಮತ್ತು ಬಂದ ಮೇಲೆ ತುಂಬಾ ಹೊತ್ತು ಔಷಧಿಗಳನ್ನು ತೆಗೆದುಕೊಂಡರೂ ಕೂಡ ಹೋಗುವುದಿಲ್ಲ ಎಂದು ಹೇಳುತ್ತಾರೆ. ಅದರಲ್ಲೂ ವಿಶೇಷವಾಗಿ ಬೆಳಗಿನ ಸಮಯದಲ್ಲಿ ಹಾಸಿಗೆಯಿಂದ ಮೇಲೇಳುವ ಸಂದರ್ಭಕ್ಕೆ ಸರಿಯಾಗಿ ವಿಪರೀತ ತಲೆ ನೋವು ಕಂಡು ಬಂದರೆ ಅದು ಬ್ರೈನ್ ಟ್ಯೂಮರ್ ಲಕ್ಷಣ ಆಗಿರಬಹುದು ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೆಲವೊಮ್ಮೆ ನಿಮ್ಮ ತಲೆ ಬುರುಡೆಯ ಭಾರ ಕೂಡ ಬೆಳಗಿನ ಸಮಯದಲ್ಲಿ ಹೆಚ್ಚಾಗಿರುತ್ತದೆ. ಏಕೆಂದರೆ ತುಂಬಾ ಹೊತ್ತು ಅಂದರೆ ಇಡೀ ರಾತ್ರಿ ದಿಂಬಿನ ಮೇಲೆ ನೀವು ತಲೆಯಿಟ್ಟು ಮಲಗಿರುವುದರಿಂದ. ಆದರೂ ಈ ರೀತಿ ಬರುವ ತಲೆ ನೋವು ಕೆಲ ಹೊತ್ತಿಗೆ ಮಾಯವಾಗುತ್ತದೆ. ಯಾವುದೇ ಕಾರಣಕ್ಕೂ ನಿಮಗೆ ಪ್ರತಿ ದಿನ ಕಾಡುವ ತಲೆ ನೋವಿನ ಸಮಸ್ಯೆಯ ವಿಚಾರದಲ್ಲಿ ನಿರ್ಲಕ್ಷ ತೋರದೆ ವೈದ್ಯರನ್ನು ಭೇಟಿಯಾಗಿ.

ಮೂರ್ಚೆ ಬೀಳುವ ಸಾಧ್ಯತೆ ಇದೆ:

ಬ್ರೈನ್ ಟ್ಯೂಮರ್ ಹೊಂದಿದ ವ್ಯಕ್ತಿಗಳಲ್ಲಿ ಇದೊಂದು ಸಾಮಾನ್ಯ ಮತ್ತು ಅತಿ ಮುಖ್ಯ ಆರೋಗ್ಯ ಸಮಸ್ಯೆ. ಮೆದುಳಿನಲ್ಲಿ ಉಂಟಾದ ಬ್ರೈನ್ ಟ್ಯೂಮರ್ ಗೆಡ್ಡೆ ಮೆದುಳಿನ ಇತರ ಕೋಶಗಳನ್ನು ಒತ್ತಿ ಹೆಚ್ಚು ಒತ್ತಡ ಉಂಟು ಮಾಡುತ್ತದೆ. ಇದರಿಂದ ಮೆದುಳಿನಿಂದ ದೇಹದ ಇತರ ಭಾಗಗಳಿಗೆ ತಲುಪುವ ಸಂಕೇತಗಳು ನಿಷ್ಕ್ರಿಯಗೊಳ್ಳುತ್ತವೆ. ಇದರಿಂದ ಮನುಷ್ಯನ ದೇಹದ ಯಾವುದೇ ಭಾಗ, ಅಂದರೆ ಕೈ, ಕಾಲು, ಮುಖ, ಬಾಯಿ ಇತ್ಯಾದಿ ಭಾಗಗಳು ತಮ್ಮ ಚಲನೆ ಮತ್ತು ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತವೆ. ಸಾಮಾನ್ಯವಾಗಿ ಬ್ರೈನ್ ಟ್ಯೂಮರ್ ಹೊಂದಿರುವ ಬಹಳಷ್ಟು ಮಂದಿ ಈ ಸಮಸ್ಯೆಯನ್ನು ಕಡ್ಡಾಯವಾಗಿ ಎದುರಿಸುತ್ತಾರೆ ಎಂದು ಹೇಳುತ್ತಾರೆ. ಆದ್ದರಿಂದ ಮೂರ್ಛೆ ಹೋಗುವ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.

ಮಾನಸಿಕ ಒತ್ತಡ:

ಮೆದುಳಿನಲ್ಲಿ ಬೆಳವಣಿಗೆಯಾದ ಟ್ಯೂಮರ್ ಮನುಷ್ಯನ ಮಾನಸಿಕ ಸ್ಥಿಮಿತವನ್ನು ಕಳೆಯುತ್ತದೆ ಎಂಬ ಮಾತಿದೆ. ಚೆನ್ನಾಗಿಯೇ ಇದ್ದವರು ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸಲು ಪ್ರಾರಂಭ ಮಾಡುತ್ತಾರೆ. ವರ್ತಮಾನದ ಅರಿವೇ ಇಲ್ಲದೆ ತಮ್ಮ ಸುತ್ತಮುತ್ತ ಯಾರಿದ್ದಾರೆ, ಇಲ್ಲ ಎಂಬ ಗಮನವಿಲ್ಲದೇ ತಮ್ಮ ಮನಸ್ಸಿಗೆ ತೋಚಿದ ಮಾತುಗಳನ್ನು ಆಡುತ್ತಾರೆ. ಇದು ಸಾಮಾನ್ಯವಾಗಿ ಮೆದುಳಿನ ಮುಂಭಾಗದಲ್ಲಿ ಗಡ್ಡೆ ಉಂಟಾದರೆ ಈ ರೀತಿ ಆಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಈ ಸಮಸ್ಯೆಯ ಆರಂಭಿಕ ಲಕ್ಷಣಗಳು ಕಂಡುಬಂದ ತಕ್ಷಣದಲ್ಲಿ ಕೀಮೊತೆರಪಿ ಅಥವಾ ಇನ್ನಿತರ ಕ್ಯಾನ್ಸರ್ ಗೆ ಸಂಬಂಧ ಪಟ್ಟ ಚಿಕಿತ್ಸೆಗಳನ್ನು ಒದಗಿಸಿದರೆ ಬಹಳ ಬೇಗನೆ ಗುಣ ಕಾಣಬಹುದು. ಇಲ್ಲವೆಂದರೆ ಸಮಸ್ಯ ವಿಪರೀತವಾಗಿ ವ್ಯಕ್ತಿ ಕೈ ತಪ್ಪಿ ಹೋಗುವ ಸಾಧ್ಯತೆ ಇರುತ್ತದೆ. ಕೆಲವರಿಗೆ ಮಾನಸಿಕ ಅರಿವೇ ಇಲ್ಲದೆ ಹುಚ್ಚು ಹಿಡಿಯುವ ಸಾಧ್ಯತೆ ಇರುತ್ತದೆ ಎಂದು ಹೇಳುತ್ತಾರೆ.

ನಮ್ಮ ಮೆದುಳಿನಲ್ಲಿ ಕಂಡುಬರುವ ಟೆಂಪೊರಲ್ ಲೋಬ್ ಎಂಬ ಭಾಗ ನಮ್ಮ ಮಾತು, ಧ್ವನಿ, ನಮ್ಮ ಭಾಷೆ ಎಲ್ಲವನ್ನೂ ನಿಯಂತ್ರಿಸುತ್ತದೆ. ಮೆದುಳಿನ ಟ್ಯೂಮರ್ ಗಡ್ಡೆಯಿಂದ ಒಂದು ವೇಳೆ ಈ ಭಾಗಕ್ಕೆ ಹಾನಿಯಾದರೆ ಚಿಕ್ಕ ವಯಸ್ಸಿಗೆ ಕಿವಿ ಕಿವುಡುತನದ ಸಮಸ್ಯೆ ಎದುರಾಗುತ್ತದೆ. ಜೊತೆಗೆ ಎರಡೂ ಕಿವಿಗಳಲ್ಲಿ ಸದಾ ಗಂಟೆ ಹೊಡೆಯುತ್ತಿರುವ ಹಾಗೆ ಕೇಳಿಸುತ್ತದೆ. ಒಂದು ವೇಳೆ ನಿಮಗೆ ಈ ಅನುಭವ ಉಂಟಾಗಿದ್ದರೆ ಮೊದಲು ನರ ರೋಗ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.

ದೇಹದ ಸಮತೋಲನ ತಪ್ಪುತ್ತದೆ:

ನಮ್ಮ ದೇಹದ ಚಲನೆಯಲ್ಲಿ ನಿಂತುಕೊಳ್ಳುವಾಗ, ಕುಳಿತುಕೊಳ್ಳುವಾಗ, ಓಡುವಾಗ, ಮಲಗಿಕೊಳ್ಳುವಾಗ ನಮ್ಮನ್ನು ನಿಯಂತ್ರಿಸುವುದು ನಮ್ಮ ಮೆದುಳಿನ ಸೆರೆಬೆಲ್ಲಮ್ ಎಂಬ ಪ್ರದೇಶ. ಆದರೆ ಈ ಭಾಗದಲ್ಲಿ ಉಂಟಾದ ಟ್ಯೂಮರ್ ಗೆಡ್ಡೆ ಸೆರೆಬೆಲ್ಲಮ್ ಪ್ರದೇಶದ ಮೇಲೆ ವಿಪರೀತ ಒತ್ತಡವನ್ನು ಉಂಟು ಮಾಡಿ ಕಡಿಮೆ ಬೆಳಕಿರುವ ಜಾಗಗಳಲ್ಲಿ ನಮ್ಮನ್ನು ನಡೆಯದಂತೆ ಮಾಡಿಬಿಡುತ್ತದೆ. ಇದರಿಂದ ಸಾಕಷ್ಟು ಕಡೆ ಯಾವುದೇ ಜಾಗವಾದರೂ ಅಲ್ಲಿಯೇ ನಮ್ಮನ್ನು ಬೀಳಿಸುತ್ತದೆ. ಎದ್ದು ಸ್ವಲ್ಪ ದೂರ ಮುಂದಕ್ಕೆ ಚಲಿಸಿದ ನಂತರ ಮತ್ತೊಮ್ಮೆ ಇದೇ ರೀತಿ ಆಗುತ್ತದೆ.

ಕಣ್ಣಿನ ದೃಷ್ಟಿಯಲ್ಲಿ ಏರುಪೇರು:

ಬ್ರೈನ್ ಟ್ಯೂಮರ್ ಸಮಸ್ಯೆ ನಿಮ್ಮ ಕಣ್ಣಿನ ದೃಷ್ಟಿಯನ್ನು ಹಾನಿ ಮಾಡುತ್ತದೆ. ಅಂದರೆ ಬ್ರೈನ್ ಟ್ಯೂಮರ್ ಗೆ ಒಳಗಾದ ವ್ಯಕ್ತಿಗಳು ಯಾವುದಾದರೂ ವಸ್ತುವನ್ನು ನೋಡಿ ಗುರುತು ಹಿಡಿಯಬೇಕಾದರೆ ಅದನ್ನು ಮತ್ತೆ ಮತ್ತೆ ನೋಡಬೇಕಾಗಿ ಬರುತ್ತದೆ. ಕೆಲವೊಮ್ಮೆ ಹಾಗೆ ನೋಡಿದರೂ ಗುರುತು ಹಿಡಿಯಲು ಕಷ್ಟವಾಗುತ್ತದೆ. ಇದಕ್ಕೆ ಕಾರಣ ಮೆದುಳಿನ ಪಿಟ್ಯುಟರಿ ಗ್ರಂಥಿಯಲ್ಲಿ ಅಸಹಜ ಕೋಶಗಳು ಬೆಳವಣಿಗೆಯಾಗಿ ದೃಷ್ಟಿಯನ್ನು ಕುಂಠಿತಗೊಳಿಸುತ್ತವೆ. ಮೆದುಳಿನ ತಳ ಭಾಗದಲ್ಲಿರುವ ಪಿಟ್ಯುಟರಿ ಗ್ರಂಥಿ ಟ್ಯೂಮರ್ ಪ್ರಭಾವದಿಂದ ಕೆಲವೊಂದು ಕಣ್ಣಿನ ನರಗಳ ಮೇಲೆ ಒತ್ತಡ ಉಂಟು ಮಾಡುತ್ತದೆ. ಇದರಿಂದ ದೃಷ್ಟಿ ದೋಷ ಉಂಟಾಗುತ್ತದೆ.

ಚಿಕಿತ್ಸಾ ವಿಧಾನಗಳು:

ಬ್ರೈನ್‌ ಟ್ಯೂಮರ್ ರೋಗವನ್ನು ಗುಣಪಡಿಸಲು ಸಾಕಷ್ಟು ಚಿಕಿತ್ಸಾ ವಿಧಾನಗಳು ಈಗ ಲಭ್ಯವಿದೆ. ಗೆಡ್ಡೆಯನ್ನು ದೊಡ್ಡದಾಗಿ ತೆರೆಯುವ ಬದಲು ಚಿಕ್ಕ ಛೇದನದ ಮೂಲಕ ಚಿಕಿತ್ಸೆ ಮಾಡಬಹುದು. ಈ ಶಸ್ತ್ರಚಿಕಿತ್ಸೆಯ ಅನುಕೂಲಗಳೆಂದರೇ ಚಿಕ್ಕ ಛೇಧನ, ಕಡಿಮೆ ನೋವು, ಯಾವುದೇ ಕಲೆ ಇರದೇ ಇರುವುದು ಅಥವಾ ಕಡಿಮೆ ಕಲೆ, ಕಡಿಮೆ ರಕ್ತದ ನಷ್ಟ, ಕಡಿಮೆ ಪ್ರಮಾಣದ ತೊಂದರೆಗಳು ಮತ್ತು ಕಡಿಮೆ ದಿನ ಆಸ್ಪತ್ರೆಯಲ್ಲಿ ಉಳಿಯುವುದು ಆಗಿದೆ.

ನ್ಯೂರೋನವಿಗೇಷನ್ ಎನ್ನುವುದು ಜಿಪಿಆರ್‌ಎಸ್ ರೀತಿಯ ಕಂಪ್ಯೂಟರ್ ಅಸಿಸ್ಟೆಡ್ ಟೆಕ್ನಾಲಜಿಯಾಗಿದ್ದು, ಇದು ಗೆಡ್ಡೆಯ ನಿಖರವಾದ ಸ್ಥಳವನ್ನು ಗುರುತಿಸಲು ನೆತ್ತಿಯಿಂದ ಆಳವಾಗಿ ಕುಳಿತಿರುವ ಗೆಡ್ಡೆ ಮತ್ತು ಹತ್ತಿರದ ಪ್ರಮುಖ ರಚನೆಗಳನ್ನು ಪತ್ತೆ ಹಚ್ಚಲು ನರಶಸ್ತ್ರಚಿಕಿತ್ಸಕರಿಗೆ ಸಹಾಯ ಮಾಡುತ್ತದೆ. ಇದರಿಂದ ಶೀಘ್ರವಾಗಿ ಚಿಕಿತ್ಸೆ ನೀಡಬಹುದು.

ಸ್ಟೀರಿಯೊಟಾಕ್ಟಿಕ್ ರೇಡಿಯೊಸರ್ಜರಿ(ಎಸ್‌ಆರ್‌ಎಸ್) ಎಂಬುದು ಶಸ್ತ್ರಚಿಕಿತ್ಸೆಯಲ್ಲದ ವಿಕಿರಣ ಚಿಕಿತ್ಸೆಯಾಗಿದ್ದು, ಮೆದುಳಿನ ಸಣ್ಣ ಗಡ್ಡೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದು ಸಾಂಪ್ರದಾಯಿಕ ಚಿಕಿತ್ಸೆಗಿಂತ ಕಡಿಮೆ-ಹೆಚ್ಚಿನ ಚಿಕಿತ್ಸೆಗಳಲ್ಲಿ ನಿಖರವಾಗಿ ಉದ್ದೇಶಿತ ವಿಕಿರಣವನ್ನು ತಲುಪಿಸುತ್ತದೆ, ಇದು ಆರೋಗ್ಯಕರ ಅಂಗಾಂಶಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಸೈಬರ್ ನೈಫ್ ಮತ್ತು ಗಾಮಾ ನೈಫ್ ಎಸ್‌ಆರ್‌ಎಸ್‌ನ ವಿಧಗಳಾಗಿವೆ, ಅವು ಗೆಡ್ಡೆಯನ್ನು ನೇರವಾಗಿ ಗುರಿಯಾಗಿರಿಸಿಕೊಂಡು ಕಾರ್ಯ ನಿರ್ವಹಿಸುವ ಹೆಚ್ಚು ಕೇಂದ್ರೀಕೃತ ವಿಕಿರಣಗಳಾಗಿವೆ. ಗಾಮಾ ನೈಫ್ ರೇಡಿಯೊಸರ್ಜರಿಯು ಸಾಮಾನ್ಯವಾಗಿ ಒಂದೇ ದಿನದಲ್ಲಿ ಪೂರ್ಣಗೊಳ್ಳುವ ಒಂದು ಚಿಕಿತ್ಸೆಯಾಗಿದೆ.

ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಕನಿಷ್ಠ ಆಕ್ರಮಣಶೀಲ (ಇನವೇಸಿವ್) ಶಸ್ತ್ರಚಿಕಿತ್ಸೆಯಾಗಿದ್ದು ಅದು ತೆರೆದ ಕ್ರಾನಿಯೊಟೊಮಿ ತಪ್ಪಿಸಬಹುದು. ಅಂತಹ ಶಸ್ತ್ರಚಿಕಿತ್ಸೆಯಲ್ಲಿ, ಪಿಟ್ಯುಟರಿ ಗೆಡ್ಡೆಗಳನ್ನು ಮೂಗಿನ ಮೂಲಕ ತೆಗೆದುಹಾಕಲಾಗುತ್ತದೆ. ಹೆಚ್ಚಿನ ಪ್ರಯೋಜನವೆಂದರೆ ತಲೆಯ ಮೇಲೆ ಕಲೆಗಳು ಗೋಚರಿಸುವುದಿಲ್ಲ.

ವೈದ್ಯಕೀಯ ವಿಜ್ಞಾನಗಳಲ್ಲಿನ ಅತ್ಯಾಧುನಿಕ ತಂತ್ರಜ್ಞಾನವು ಇರುವುದರಿಂದ ಈಗ ಯಾವುದೇ ರೋಗವೂ ಮಾರಣಾಂತಿಕವಲ್ಲ.‌ ಹೀಗಾಗಿ ಯಾರೂ ಸಹ ಭಯ ಪಡುವ ಅವಶ್ಯಕತೆ ಇಲ್ಲ.

(ಲೇಖಕರು: ಡಾ.ಗಣೇಶ್ ವೀರಭದ್ರಯ್ಯ, ಮೆದುಳು ಮತ್ತು ಮೂಳೆ, ನ್ಯೂರೋ ಎಂಡೋವಾಸ್ಕುಲರ್ ಸರ್ಜರಿ, ಫೋರ್ಟಿಸ್ ಆಸ್ಪತ್ರೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT