ಶುಕ್ರವಾರ, ಆಗಸ್ಟ್ 12, 2022
27 °C
ಸಾವಿಗೇಕೆ ಬಯಸುವುದೀ ಮನ?

PV Web Exclusive | ನಿಮ್ಮ ನೀವು ಕೊನೆಗಾಣಿಸುವ ಮುನ್ನ...

ರಶ್ಮಿ ಎಸ್‌ Updated:

ಅಕ್ಷರ ಗಾತ್ರ : | |

Prajavani

ಹತಾಶೆ, ಒತ್ತಡ, ಒಂಟಿತನ ಇವುಗಳನ್ನು ಅಂತ್ಯಗೊಳಿಸಿ, ಜನರೊಳಗೆ ಒಂದಾಗುವುದು ಬಿಟ್ಟು, ತಮ್ಮನ್ನು ಅಂತ್ಯಗೊಳಿಸಿಕೊಳ್ಳುವ ತೀರ್ಮಾನಕ್ಕೆ ಬರುವವರ ಸುತ್ತಲಿನ ವಿಷಯಗಳಿವು... ತಮ್ಮನ್ನು ತಾವು ಕೊನೆಗೊಳಿಸುವ ಬಗೆಯನ್ನು ನಿರ್ಧರಿಸುವ ಮುನ್ನ ಇದೆಲ್ಲ ಯೋಚಿಸ್ತಾರಂತೆ ನಿಮಗೆ ಗೊತ್ತೆ? ಸೆ.10 ಆತ್ಮಹತ್ಯೆ ತಡೆ ದಿನ. ಯಾರಿಗಾದರೂ ನಾವು ಸಹಾಯ ಹಸ್ತ ಚಾಚುವಂತಾದರೆ... 

 ನಿಮಗಿದು ಗೊತ್ತಾ.. ಈ ಲೇಖನ ಓದಬೇಕು ಅಂತ ನಿರ್ಧರಿಸಿ, ನೀವು ಈ ವಾಕ್ಯವನ್ನು, ಈ ಪ್ಯಾರಾಗ್ರಾಫ್‌ ಓದುವುದರಲ್ಲಿ ಒಬ್ಬರು ಈ ಲೋಕದಿಂದ ಸಾವಿನ ಮನೆಗೆ ಸ್ವ ಇಚ್ಛೆಯಿಂದ ಹೊರಟಿರುತ್ತಾರೆ. ತಾವಾಗಿಯೇ ಸಾವನ್ನು ಆಹ್ವಾನಿಸಿಕೊಂಡು, ಅದರೊಟ್ಟಿಗೆ ಹೆಜ್ಜೆ ಹಾಕುತ್ತಾರೆ. ಸಾವು ಅಲ್ಪಾಯು. ಒಂದೆರಡು ಕ್ಷಣಗಳಲ್ಲಿ ತನ್ನ ಕೆಲಸ ಮುಗಿಸುತ್ತದೆ. 40 ಸೆಕೆಂಡಿಗೆ ಒಬ್ಬರಂತೆ ವಿಶ್ವದ ಎಲ್ಲೆಡೆಯೂ ಜನರು ಸಾವನ್ನು ಬಯಸುತ್ತಾರೆ. ತಾವಾಗಿಯೇ ಚಿರನಿದ್ರೆಯ ಮೋಹಕ್ಕೆ ಒಳಗಾಗಿ ಸಾವಿನ ಮನೆಯ ಹೊಸಿಲಿಗೆ ತಮ್ಮ ನೊಸಲನ್ನೊತ್ತಿ ಬಿಡುತ್ತಾರೆ.

ಕಾರಣಗಳೇನೆ ಇರಲಿ, ಒತ್ತಡ, ಹತಾಶೆ, ನಿರಾಶೆ ಏನಾದರೂ ಹೆಸರಿಸಿ. ನಮಗೆ ಗೊತ್ತೇ ಆಗಲಿಲ್ಲ... ನೆನ್ನೆ ರಾತ್ರಿಯವರೆಗೂ ನಗನಗ್ತಾ ಇದ್ರಪ್ಪ, ನೆನ್ನೆಯೇ ಮಾತಾಡಿದ್ರಪ್ಪ.. ಮೊನ್ನೆಯೇ ಸಿಕ್ಕಿದ್ರಪ್ಪ.. ಛೆ.. ಯಾರ ಮನದಲ್ಲೇನು ಅಡಗಿದೆಯೋ? ಅದೊಂದು ದುರ್ಬಲ ಗಳಿಗೆ ದಾಟಿದ್ದರೆ ಬದುಕ್ಕೊಂಡು ಬಿಡ್ತಿದ್ರು...

ಇಂಥ ಮಾತುಗಳು ಉಳಿದವರನ್ನು, ಅಳಿಯುವವರೆಗೂ ಕೊರೆಯುವ ಕೂರಂಬುಗಳಾಗಿರುತ್ತವೆ. ಸೂಕ್ಷ್ಮಗ್ರಾಹಿಗಳಿದ್ದರೆ ಆತ್ಮಹತ್ಯೆಯಂಥ ನಿರ್ಧಾರ ಕೈಗೊಳ್ಳುವವರನ್ನು ಮೊದಲೇ ಗುರುತಿಸಬಹುದು ಅಂತಾರೆ ತಜ್ಞರು.

ಜೀವಕೊನೆಗಾಣಿಸುವ ಮೊದಲಿನ ದಿನಗಳು..:

* ಸ್ವಯಂ ನೈರ್ಮಲ್ಯದತ್ತ ಗಮನವಿರುವುದಿಲ್ಲ: ದಿನಗಟ್ಟಲೆ ಸ್ನಾನ ಮಾಡುವುದಿಲ್ಲ. ಮೇಲಿಂದ ಮೇಲೆ ಹಾಕಿದ್ದೇ ಬಟ್ಟೆ ಹಾಕುತ್ತಾರೆ. ಅವನ್ನು ಒಗೆಯಲು ಹಾಕುವುದಿಲ್ಲ. ತಲೆಬಾಚುವುದಿಲ್ಲ, ದೇಹದ ಬಗೆಗೆ ಸಲ್ಲದ ನಿರ್ಲಕ್ಷ್ಯ ತೋರುತ್ತಾರೆ.

* ತಮ್ಮಿಷ್ಟದ ಕೆಲಸಗಳನ್ನ ಕೈಬಿಡ್ತಾರೆ: ಅವರ ಹವ್ಯಾಸಗಳಿಂದ ದೂರ ಸರಿಯುತ್ತಾರೆ. ಎಲ್ಲದರಲ್ಲೂ ಅಸಡ್ಡೆ ಭಾವ ತೋರುತ್ತಾರೆ. ಸಕಲವನ್ನೂ ಕಾಟಾಚಾರಕ್ಕೆ ಎಂಬಂತೆ ನಿಭಾಯಿಸುತ್ತಾರೆ.

* ವರ್ತನಾ ಸಮಸ್ಯೆ: ಇದ್ದಕ್ಕಿದ್ದಂತೆ ಮೌನಿಗಳಾಗ್ತಾರೆ, ಇದ್ದಕ್ಕಿದ್ದಂತೆ ಸಿಡುಕುತ್ತಾರೆ. ಒಂಟಿಯಾಗಿ ಅಳುತ್ತಾರೆ. ದಿನದ ಹೊತ್ತಿನಲ್ಲೂ ನಿದ್ದೆಯ ಮೊರೆಹೋಗುತ್ತಾರೆ. ಹೆಚ್ಚಾಗಿ ಇವರ ದಿಂಬಿನ ಅಂಚುಗಳು ನೆನೆದಿರುತ್ತವೆ. ಮಲಗುವ ಮುನ್ನ ಕಣ್ಣೀರು ಹಾಕುವುದು ಇವರಿಗೆ ಅಭ್ಯಾಸವಾಗಿರುತ್ತದೆ.

* ಊಟ, ತಿಂಡಿ: ಇವುಗಳ ವಿಷಯದಲ್ಲಿ ವ್ಯತಿರಿಕ್ತ ವರ್ತನೆ ತೋರಬಹುದು. ಎಲ್ಲವೂ ಇಷ್ಟ ಎಂದು ತಿನ್ನಬಹುದು. ಇಲ್ಲವೇ ನಿರಾಸಕ್ತಿಯನ್ನೂ ತೋರಬಹುದು. ಮೆಚ್ಚುವುದು ಅಥವಾ ಟೀಕಿಸುವುದು ಎರಡೂ ಮಾಡುವುದಿಲ್ಲ. ಉಣ್ಣುವುದನ್ನು ಆಸ್ವಾದಿಸದೆ, ಹೊಟ್ಟೆತುಂಬಿಸುವ ಕೆಲಸದಂತೆ ಮಾಡುತ್ತಾರೆ.

* ಮಾತು ಮೌನ: ಗುಂಪಿನಲ್ಲಿ ಮೌನವಾಗಿರುವ ಇವರು, ಮಾತಾಡುವಾಗಲೆಲ್ಲ ನಾನಿಲ್ಲದಿದ್ದರೆ... ನಾನು ಸತ್ತಮೇಲೆ, ನಾನಿರದಿದ್ದಲ್ಲಿ.. ಇಂಥ ಮಾತುಗಳನ್ನಾಡುತ್ತಾರೆ.

* ಶೋಧವ ನೋಡಿ: ಅವರ ಬ್ರೌಸಿಂಗ್‌ ಇತಿಹಾಸದಲ್ಲಿ ನೋವಿಲ್ಲದ ಸಾವಿನ ಬಗೆಯನ್ನು ಹುಡುಕಿರುತ್ತಾರೆ. ಸರಳ ಸಾವಿನ ಬಗ್ಗೆ ಹುಡುಕಿರುತ್ತಾರೆ. ಕೈ ನರ ಕತ್ತರಿಸಿದರೆ, ನೇಣು ಹಾಕಿಕೊಂಡರೆ, ವಿಷ ಸೇವಿಸಿದರೆ, ನೀರಿಗೆ ಜಿಗಿದರೆ.. ಹೀಗೆ ಯಾವುದು ಹೆಚ್ಚು ಯಾತನಾಮಯ, ಯಾವುದರಿಂದ ಎಷ್ಟು ಹೊತ್ತಿನಲ್ಲಿ ಸಾವನ್ನಪ್ಪಬಹುದು ಎಂಬುದನ್ನೆಲ್ಲ ಹುಡುಕಿ ಓದಿರುತ್ತಾರೆ.

*ದಿಢೀರ್‌ ಭೇಟಿ, ಉಡುಗೊರೆ: ಇನ್ನೂ ಕೆಲವರು ತಮ್ಮ ಸ್ನೇಹಿತರು, ಸಂಬಂಧಿಕರನ್ನು ದಿಢೀರ್‌ ಭೇಟಿಯಾಗುವುದು, ಕೊಡುಗೆಗಳನ್ನು ನೀಡುವುದು ಮಾಡುತ್ತಾರೆ.. ಮಾತಿನ ಭರದಲ್ಲಿ ತಮಾಷೆಗೆ ಎಂಬಂತೆ ಆದರೂ ತಾವಿಲ್ಲದಿದ್ದಲ್ಲಿ.. ಎಂಬಂಥ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ.

* ಕೊಡುಗೆ, ಉಡುಗೊರೆ: ತಮ್ಮ ಆಪ್ತರಿಗೆ, ಅಮ್ಮ–ಅಪ್ಪನಿಗೆ, ಒಡಹುಟ್ಟಿದವರಿಗೆ, ಸ್ನೇಹಿತರಿಗೆ ಏನಾದರೂ ಉಡುಗೊರೆ ಕೊಡುವ ಖಯಾಲಿ ಬಂದಿರುತ್ತದೆ. ತಮ್ಮದೇ ವಸ್ತು, ಚಿತ್ರ, ‍ಪುಸ್ತಕ, ತಮ್ಮಿಷ್ಟದ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ.

 ಈ ಎಲ್ಲ ಲಕ್ಷಣಗಳಲ್ಲಿ ಒಂದಾದರೂ ಬಾಹ್ಯ ಸ್ವರೂಪದಲ್ಲಿ ಪ್ರದರ್ಶನಕ್ಕೆ ಬಂದಿರುತ್ತವೆ. ಆಗಲೇ ನೇರವಾಗಿ ಪ್ರಶ್ನಿಸದೆ ಅವರ ವರ್ತನೆಯನ್ನು ಗಮನಿಸಬೇಕು. ಮಾತಾಡಬೇಕು. ಏನಾದರೂ ತೊಂದರೆಗಳನ್ನು ಎದುರಿಸುತ್ತಿದ್ದಾರೆಯೇ ಎಂಬುದನ್ನು ಕೇಳಬಹುದು. ಅಗತ್ಯಬಿದ್ದರೆ ಸಮಾಲೋಚಕರ ಬಳಿ ಕರೆದೊಯ್ಯಬಹುದು.

ಹದಿಹರೆಯದವರಲ್ಲಿ ಈ ಲಕ್ಷಣಗಳು ಇನ್ನೂ ತೀವ್ರವಾಗಿರುತ್ತವೆ. ಆಗೆಲ್ಲ ಹೀಯಾಳಿಸದೆ, ಹೀಗಳೆಯದೆ, ಬೈಯ್ಯದೆ ಜೋರು ಮಾಡದೆ, ಸಮಧಾನದಲ್ಲಿ ಮಾತನಾಡಿದರೆ ಜೀವಕೊನೆಗಾಣಿಸುವ ಯೋಚನೆಗಳನ್ನು ಮೊಳಕೆಯೊಡೆಯುವಾಗಲೇ ಚಿವುಟಬಹುದು.

ಸತ್ತವರು ಬದುಕಿದರು, ಬದುಕಿದವರು ಸತ್ತರು:

ಕೆಲವೊಮ್ಮೆ ಏನೇ ಪ್ರಯತ್ನ ಮಾಡಿದರೂ ಆತ್ಮಹತ್ಯೆಯನ್ನು ತಡೆಯಲಾಗುವುದಿಲ್ಲ. ನಂತರದ ದಿನಗಳಲ್ಲಿ ಪ್ರತಿ ಕುಟುಂಬವೂ ಛಿದ್ರಛಿದ್ರವಾಗಿ ಹೋಗುತ್ತದೆ. ಬದುಕುಕೊನೆಗಾಣಿಸಿಕೊಂಡವರು ಇವರ ಮನದೊಳಗೆ ಬದುಕುಳಿಯುತ್ತಾರೆ. ಬದುಕುಳಿದವರ ಜೀವಚ್ಛವವಾಗುತ್ತಾರೆ. ಅಂಥ ಸಂದರ್ಭದಲ್ಲಿ ಬದುಕುಳಿದವರಿಗೂ ಸಮಾಲೋಚನೆಯ ಅಗತ್ಯವಿರುತ್ತದೆ.

ಮೊದಲ ಪ್ರಶ್ನೆ ಡೆತ್‌ನೋಟ್‌ ಏನು ಮಾಡುವುದು? ಎರಡನೆಯದ್ದು ಅವರ ಬಟ್ಟೆ,ಬರೆ, ಅವರಿಗೆ ಸೇರಿದ ವಸ್ತುಗಳ ವಿಲೆ ಹೇಗೆ? ಮೂರನೆಯದ್ದು ಉಳಿದವರನ್ನು ಸಮಾಧಾನಿಸುವುದು ಹೇಗೆ?

ಇಂಟರ್‌ ನ್ಯಾಷನಲ್‌ ಸೂಸೈಡ್‌ ಪ್ರಿವೆನ್ಶನ್‌ ಸೊಸೈಟಿ ಪ್ರಕಾರ ಒಂದು ಆತ್ಮಹತ್ಯೆಯ ನಂತರ ಸರಾಸರಿ 120 ಜೀವಗಳ ಮಾನಸಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಅವರ ಕುಟುಂಬದ ಸದಸ್ಯರು, ಸದಸ್ಯರ ಕುಟುಂಬಗಳು, ಸತ್ತವರ ಸ್ನೇಹಿತರು, ಅವರ ಕುಟುಂಬ.. ಹೀಗೆ ಸರಾಸರಿ 120 ಜನರೆಂದು ಹೇಳುತ್ತಾರೆ. ಅದರಲ್ಲಿ ಮೃತರಾದವರ ಮೂಲವಲಯದಲ್ಲಿ ಬರುವ ಎಲ್ಲರೂ ಸೇರಿರುತ್ತಾರೆ.

ಈ ನೂರಿಪ್ಪತ್ತು ಜೀವಗಳಲ್ಲಿ ಮೊದಲ ಹತ್ತು ಜೀವಗಳು ನಾಜೂಕಿನ ತಂತಿಯ ಮೇಲಿರುತ್ತವೆ. ಮೃತರ ಸಹೋದ್ಯೋಗಿ, ಸ್ನೇಹಿತರು, ಜೀವನಸಂಗಾತಿ, ಕುಟುಂಬ ಸದಸ್ಯರು, ಸಾಲ ಕೊಟ್ಟವರು, ಪಡೆದವರು ಇವರೆಲ್ಲರೂ ಈ ಮೊದಲ ವರ್ತುಲದಲ್ಲಿ ಬರುತ್ತಾರೆ. ಅವರಿಗೂ ಮೊದಲ ಕೆಲವು ದಿನಗಳಲ್ಲಿ ಇನ್ನಿಲ್ಲದ ಆತಂಕ ಮತ್ತು ಒತ್ತಡ ಕಾಡುತ್ತದೆ. ಕೆಲವು ಪ್ರಶ್ನೆಗಳು ಇವರನ್ನು ಹತಾಶೆಯ ಸುರಂಗದೊಳಗೆ ನೂಕುತ್ತದೆ.

ಏನಿರಬಹುದು ಡೆತ್‌ನೋಟ್‌ನಲ್ಲಿ: ಬಹುತೇಕವಾಗಿ ತಮ್ಮಿಂದ ಯಾರಿಗೂ ತೊಂದರೆಯಾಗಬಾರದು ಎಂದೇ ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿರುತ್ತಾರೆ. ಬರೆದಿರುವುದನ್ನು ಅರ್ಥ ಮಾಡಿಕೊಂಡರೆ ಸಾಕು. ಜೀವನ ಸುಲಭವಾಗುತ್ತದೆ. ಕೆಲವೊಮ್ಮೆ ಮಾತ್ರ ಯಾರ ಮೇಲಾದರೂ ಆರೋಪ ಹೊರಿಸಿರುತ್ತಾರೆ. ಸಾಕಷ್ಟು ಕ್ಷಮಾಪಣೆಗಳನ್ನು ಕೇಳಿರುತ್ತಾರೆ. ತಮ್ಮ ನಂತರದ ಕ್ರಿಯೆಗಳ ಬಗ್ಗೆ ತಿಳಿಸಿರುತ್ತಾರೆ.

ಈ ಡೆತ್‌ನೋಟ್‌ ಏನು ಮಾಡಬೇಕು? ಎಲ್ಲ ಕ್ರಮಗಳ ನಂತರ ಅದನ್ನು ಮೃತರ ವಾರಸುದಾರರಿಗೆ ಒಪ್ಪಿಸಲಾಗುತ್ತದೆ. ಕೆಲವರು ಇದನ್ನು ಕಂಡಾಗಲೆಲ್ಲ ಖಿನ್ನತೆಗೆ ಜಾರುತ್ತಾರೆ. ಇನ್ನೂ ಕೆಲವರು, ತಮ್ಮ ಪ್ರೀತಿಪಾತ್ರರ ಕೊನೆಯ ನೆನಪು ಎಂಬಂತೆ ಎತ್ತಿಟ್ಟುಕೊಳ್ಳುತ್ತಾರೆ. ಈ ವಿಷಯ ಕುಟುಂಬದ ಆದ್ಯತೆ ಮತ್ತು ಆಯ್ಕೆಗೆ ಬಿಟ್ಟಿದ್ದು. ಆದರೆ ಯಾವುದೇ ಕಾರಣಕ್ಕೂ ಇದು ನಿಮ್ಮನ್ನು ಖಿನ್ನತೆಗೆ ನೂಕುತ್ತಿದ್ದಲ್ಲಿ, ಆಪ್ತ ಸಮಾಲೋಚನೆಯ ಅಗತ್ಯವಿದೆ ಎಂದೇ ಅರ್ಥ.

ಕೊನೆಗೊಳಿಸುವ ಮುನ್ನ

ಸಾವನ್ನು ಸಂಭ್ರಮಿಸುವ ಮುನ್ನ ಅಥವಾ ತಬ್ಬುವ ಮುನ್ನ, ಒಂದೇ ಒಂದು ಕ್ಷಣ ನಿಮ್ಮ ಅವಲಂಬಿತರ ಬಗ್ಗೆ ಯೋಚಿಸಿದರೆ ಈ ನಿರ್ಧಾರದಿಂದ ದೂರ ಬರಬಹುದು. ಹಾಗೆ ಯೋಚಿಸುವಂತೆ ಮಾಡುವ ಮೊದಲೇ ನಮ್ಮ ನಿಮ್ಮೆಲ್ಲರ ಸಹಾಯಹಸ್ತ ಅವರಿಗೆ ದೊರೆತರೆ, ಸಾವನ್ನು ಅಪ್ಪಲು ಅಗತ್ಯವಿರುವುದಕ್ಕಿಂತ ಕಡಿಮೆ ಸ್ಥೈರ್ಯ ಸಾಕು.. ಬದುಕನ್ನು ಒಪ್ಪಿಕೊಳ್ಳಲು ಎಂಬುದು ಅರಿವಾಗುತ್ತದೆ.

ಯಾವುದೋ ತಿರುವಿನಲ್ಲಿ ಬಂದೆರಗುವ ಅಥವಾ ನಾವೇ ಓಡಿ ಹೋಗಿ ಅಪ್ಪುವ ಸಾವಿಗೂ ಒಮ್ಮೆ ಸವಾಲು ಹಾಕಬೇಕು.. ಧೈರ್ಯವಿದ್ದರೆ ಎದುರಿಸು ನನ್ನನ್ನು ಎಂದು.. ಜೀವನದತ್ತ ಮುಖಮಾಡಿ, ಬೆಂಬಿಡದ ಯೋಚನೆಗಳೂ ದೂರವಾಗುತ್ತವೆ. ಜೀವನಪ್ರೀತಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಇಷ್ಟಕ್ಕೂ ಯಾರ ಬದುಕೂ ಪರಿಪೂರ್ಣ ಅಲ್ಲ. ಯಾರೂ ಪರಿಣತರಲ್ಲ. ಸಾವನ್ನು ಮೋಹಿಸುವಾಗ, ಜೀವನವನ್ನೂ ಪ್ರೀತಿಸುವುದು ಕಲಿತರೆ ಆಯ್ತು. ಸಹಾಯ ಹಸ್ತಗಳು ಬಂದು ನಮ್ಮನ್ನು ತಬ್ಬಿಕೊಳ್ಳುತ್ತವೆ. 

ಆತ್ಮಹತ್ಯೆ ತಡೆ ಹೇಗೆ? ಪ್ರಜಾವಾಣಿ ಪಾಡ್‌ಕಾಸ್ಟ್‌: https://anchor.fm/prajavani/episodes/ep-ehrruk/a-a2t3nv2 

*****

ಜೀವ ಕೊನೆಗೊಳಿಸಿಕೊಳ್ಳಬೇಕು ಎನ್ನುವುದು ಧಿಡೀರ್‌ ನಿರ್ಧಾರವಲ್ಲ. ಅದು ಮನಸಿನೊಳಗಿನ ನೀರ್ಗಲ್ಲು. ಪ್ರೀತಿಯ ಕಾವು ಸಿಕ್ಕರೆ ಇದನ್ನು ಕರಗಿಸಬಹುದು

– ಡಾ.ಪಲ್ಲವಿ ಅಡಿಗ, ಮನಃಶಾಸ್ತ್ರಜ್ಞರು ವಿಜಯಪುರ

ಹೀಗೆ ಮಾಡಿ...

* ನಿಮ್ಮನ್ನು ಶಿಕ್ಷಿಸಿಕೊಳ್ಳಬೇಡಿ

* ಅನಾವಶ್ಯಕವಾಗಿ ಅಪರಾಧಿಭಾವ ಬೆಳೆಸಿಕೊಳ್ಳಬೇಡಿ

* ಜನ ಏನೆನ್ನಬಹುದು ಎಂಬುದನ್ನು ಚಿಂತಿಸದಿರಿ

* ಕೆಟ್ಟ ಯೋಚನೆಗಳು ಬಂದಾಗಲೆಲ್ಲ ಎದ್ದು ಒಂಚೂರು ವಾಕ್‌ ಮಾಡಿ

* ನೃತ್ಯ, ಚಿತ್ರಕಲೆ, ಸಂಗೀತದಂಥ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ

* ನಿಮ್ಮನ್ನು ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳದಿರಿ

* ನೀವಂದಕೊಂಡಿರುವುದಕ್ಕಿಂತಲೂ ನೀವು ಗಟ್ಟಿಯಾಗಿರುವಿರಿ ಎಂಬುದನ್ನು ಮರೆಯಬೇಡಿ

 ಸಹಾಯವಾಣಿ

* +91-80-25497777 ಸಹಾಯ್‌ ಸಹಾಯವಾಣಿ ಆತ್ಮಹತ್ಯೆ ತಡೆಗೆ ಯತ್ನಿಸುತ್ತಿರುವ ಸಂಸ್ಥೆಯ ಸಂಪರ್ಕಸಂಖ್ಯೆಯಾಗಿದೆ.

* 91-9820466726 ಆಸರಾ ಆತ್ಮಹತ್ಯೆ ತಡೆ ಸಹಾಯವಾಣಿ 24*7

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು