ಬುಧವಾರ, ಜನವರಿ 19, 2022
26 °C

ಸದೃಢ ಶರೀರಕ್ಕೆ ಯೋಗದ ದಾರಿ: ಫಿಟ್‌ನೆಸ್‌ನ ಹೊಸ ಸೂತ್ರಗಳು ಇಲ್ಲಿವೆ ನೋಡಿ

ಶಿವಕುಮಾರ್‌ ಬಿ. Updated:

ಅಕ್ಷರ ಗಾತ್ರ : | |

ಮನೋಮಯ ಕೋಶದಲ್ಲಾಗುವ ಏರುಪೇರುಗಳು ನಮ್ಮ ಅನ್ನಮಯ ಕೋಶದ (ದೇಹದ) ಮೇಲೆ ಪರಿಣಾಮ ಉಂಟುಮಾಡುತ್ತವೆ. ಆದ್ದರಿಂದ ಮನೋಮಯ ಕೋಶವನ್ನು ಸ್ವಸ್ಥವಾಗಿ ಇಟ್ಟುಕೊಳ್ಳುವತ್ತ ಯೋಗವು ಗಮನ ಕೇಂದ್ರೀಕರಿಸುತ್ತದೆ.

ಮನುಷ್ಯನಿಗೆ ಆದಿಜ ವ್ಯಾಧಿ ಮತ್ತು ಅನಾದಿಜ ವ್ಯಾಧಿ ಎಂಬ ಎರಡು ಪ್ರಕಾರದ ಕಾಯಿಲೆಗಳು ಬರುತ್ತವೆ. ಆದಿಜ ವ್ಯಾಧಿಯು ಮನಸ್ಸಿನ ಒತ್ತಡದಿಂದ ಬರುವಂಥದ್ದು. ಅನಾದಿಜ ವ್ಯಾಧಿ ಎಂದರೆ ಬಾಹ್ಯ ವೈರಸ್‌ಗಳಿಂದ ಬರುವುದು. ಆದ್ದರಿಂದ ಮನಸ್ಸನ್ನು ಸಮಾಧಾನದ ಸ್ಥಿತಿಗೆ ತಂದಲ್ಲಿ ಆದಿಜ ವ್ಯಾಧಿಯಿಂದ ಬರುವ ಅದೆಷ್ಟೋ ಸಮಸ್ಯೆಗಳನ್ನು ನಿವಾರಿಸಬಹುದು. ಇದು ಯೋಗ ಮಾರ್ಗದಿಂದ ಸಾಧ್ಯ. 

ಮನೋಮಯ ಕೋಶದಲ್ಲಾಗುವ ಏರುಪೇರುಗಳು ನಮ್ಮ ಅನ್ನಮಯ ಕೋಶದ (ದೇಹದ) ಮೇಲೆ ಪರಿಣಾಮ ಉಂಟುಮಾಡುತ್ತವೆ. ಆದ್ದರಿಂದ ಮನೋಮಯ ಕೋಶವನ್ನು ಸ್ವಸ್ಥವಾಗಿ ಇಟ್ಟುಕೊಳ್ಳುವತ್ತ ಯೋಗವು ಗಮನ ಕೇಂದ್ರೀಕರಿಸುತ್ತದೆ. 

ಯೋಗ ಅಂದರೆ ಒಂದಿಷ್ಟು ವ್ಯಾಯಾಮ ಎಂದಲ್ಲ. ಅದು ಒಂದು ಜೀವನಕ್ರಮ. ಯೋಗ ಆಸನ ಅನ್ನುವುದು ಸ್ಥಿರವಾದ ಸುಖವಾದ ಆಸನವಾಗಿಯೇ ಇರಬೇಕು. ಅದು ದೇಹ ದಂಡನೆ ಅಲ್ಲ. ಅದಕ್ಕಾಗಿಯೇ ಪ್ರತಿ ಆಸನದ ಬಳಿಕ ಕೆಲಕ್ಷಣ ವಿಶ್ರಾಂತಿ ನೀಡಲಾಗುತ್ತದೆ. ಹಾಗೆಂದು ಯೋಗಾಸನಗಳನ್ನೂ ನೇರವಾಗಿ ಮಾಡಬಾರದು. ಮೂಲ, ಸಾಮಾನ್ಯ ವ್ಯಾಯಾಮಗಳ ಬಳಿಕ (ದೇಹ ಸಡಿಲವಾದ ಮೇಲೆ) ಮಾತ್ರ ಒಂದೊಂದೇ ಆಸನಗಳನ್ನು ಮಾಡಬೇಕು. ಈ ಆಸನಗಳು ಸ್ಥಿರ, ಸುಖ ಆಸನವಾಗಿರಬೇಕು. ಇಲ್ಲಿ ಯಾವುದೇ ದ್ವಂದ್ವಗಳಿರುವುದಿಲ್ಲ. ಆಸನ ಸಿದ್ಧಿ ಆಗಲು ಅಭ್ಯಾಸ ಬೇಕು. ಆಸನಗಳಿಂದ ಅನಗತ್ಯ ಕೊಬ್ಬು ಮಾತ್ರ ಕರಗಿ ಹೋಗುತ್ತದೆ. ದೇಹದ ತೇಜೋವರ್ಧನೆಗೆ ಪೂರಕವಾಗುತ್ತದೆ. 

ಯೋಗದಲ್ಲಿ ಕೇಂದ್ರೀಕರಿಸುವ ಪ್ರಧಾನ ವಿಷಯಗಳೆಂದರೆ ಸ್ನಾಯುಗಳು ಆರಾಮವಾಗಿರಬೇಕು. ಮನಸ್ಸು ಶಾಂತವಾಗಿರಬೇಕು. ದೇಹಕ್ಕೆ ಪ್ರಾಣಶಕ್ತಿ ಸಮರ್ಪಕವಾಗಿ ಹರಿಯಬೇಕು. ಆದರೆ, ಇದ್ಯಾವುದೇ ಪರಿಣಾಮ ಆಗಬೇಕಾದರೆ ಯೋಗವನ್ನು ಗುರುಮುಖೇನವೇ ಕಲಿಯಬೇಕು.

ಉದಾಹರಣೆಗೆ ತ್ರಿಕೋನಾಸನ, ಶಲಬಾಸನ ಸ್ನಾಯುವ್ಯವಸ್ಥೆಯನ್ನು ಬಲಪಡಿಸುತ್ತದೆ. ಭುಜಂಗಾಸನದಲ್ಲಿ ಬೆನ್ನುಹುರಿ ಸಕ್ರಿಯಗೊಳ್ಳುತ್ತದೆ. ಪ್ರಾಣಾಯಾಮದಿಂದ ಒಟ್ಟಾರೆ ದೇಹ ಸದೃಢವಾಗುತ್ತದೆ. ಹಾಗೆಂದು ಅತಿಯಾಗಿ ದೇಹದಂಡನೆ ಮಾಡಬಾರದು. ಎಲ್ಲ ಆಸನಗಳು ಮುಗಿದ ಬಳಿಕ ಕೊನೆಯಲ್ಲಿ 15 ನಿಮಿಷಗಳ ಕಾಲ ಶವಾಸನ ಮಾಡಬೇಕು. 15 ನಿಮಿಷಗಳ ಶವಾಸನ ನಾಲ್ಕು ಗಂಟೆಗಳ ನಿದ್ದೆಗೆ ಸಮ. ದೇಹ ಇಡೀ ದಿನ ಚೈತನ್ಯದಿಂದ ಇರುತ್ತದೆ. 

ವಿಷಾದವೆಂದರೆ ಇಂದು ನಮ್ಮ ಯಾವ ಆಹಾರವೂ ಶುದ್ಧವಲ್ಲ. ಎಲ್ಲವೂ ರಾಸಾಯನಿಕಯುಕ್ತವಾಗಿವೆ. ಆದ್ದರಿಂದ ಆಹಾರ ಸೇವನೆಯಲ್ಲಿ ಇತಿಮಿತಿ ಇರಲಿ. ಜಿಮ್‌ಗೆ ಹೋಗುವವರು ಸ್ಟಿರಾಯ್ಡ್‌ಗಳಿಂದ ದೂರವಿರಿ. ಸಾಮಾನ್ಯ ವ್ಯಕ್ತಿಯೊಬ್ಬ ಪ್ರತಿದಿನ ಸೂರ್ಯ ನಮಸ್ಕಾರ, ಅರ್ಧಚಕ್ರಾಸನ, ತ್ರಿಕೋನಾಸನ, ಪಾದಹಸ್ತಾಸನ, ಶಲಭಾಸನ, ಭುಜಂಗಾಸನ, ಪಶ್ಚಿಮೋತ್ಥಾಸನ, ಬದ್ಧಕೋನಾಸನ ಮಾಡಬಹುದು.

ಮುಖ್ಯವಾಗಿ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಅತಿಯಾಸೆ, ನೆಮ್ಮದಿ ಕೆಡಿಸುವ ಸಂಗತಿಗಳು ಬೇಡ. ಎಲ್ಲವೂ ಅವಶ್ಯಕತೆಗೆ ಅನುಗುಣವಾಗಿರಬೇಕು ಅಷ್ಟೆ. 

ಲೇಖಕ: ಬೆಂಗಳೂರಿನಲ್ಲಿ ಯೋಗ ಶಿಕ್ಷಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು