ಭಾನುವಾರ, ಆಗಸ್ಟ್ 25, 2019
21 °C

ಸಂಗೀತ–ನೃತ್ಯಕ್ಕೆ ವ್ಯಾಯಾಮದ ಆಯಾಮ

Published:
Updated:
Prajavani

ಲ್ಯಾಟಿನ್ ಅಮೆರಿಕ ಎಂದರೆ ಸಾಂಬಾ, ಸಾಲ್ಸಾ, ಝುಂಬಾ ಜನರ ನಾಲಿಗೆಯಲ್ಲಿ ಕುಣಿಯುತ್ತವೆ.  ಝುಂಬಾ ಮೂಲಕ ಜಗತ್ತಿನ ಎಲ್ಲ ನೃತ್ಯ ಪ್ರಕಾರಗಳನ್ನು ಒಲಿಸಿಕೊಳ್ಳಬಹುದಾಗಿದೆ. ಇದನ್ನು ನೋಡುತ್ತಿದ್ದರೆ ವ್ಯಾಯಾಮವೋ, ನೃತ್ಯವೋ ಎಂಬ ಸಂದೇಹ ಬಾರದೇ ಇರದು. ದಶಕದ ಹಿಂದೆ ಮುಂಬೈಗೆ ಕಾಲಿರಿಸಿದ ಝುಂಬಾ ಇದೀಗ ಭಾರತದ ಎಲ್ಲ ನಗರಗಳಿಗೂ ವ್ಯಾಪಿಸಿದೆ.

ಫಿಟ್‌ನೆಸ್ ಕೇಂದ್ರಗಳಲ್ಲಿ ಏರೋಬಿಕ್ಸ್ ಜೊತೆಗೆ ಝುಂಬಾ ಹೆಸರೂ ಚಾಲ್ತಿಯಲ್ಲಿದೆ. ಬಹಳಷ್ಟು ಜನರು ಇವೆರಡು ಒಂದೇ ಎಂದುಕೊಳ್ಳುತ್ತಾರೆ. ಎರಡಕ್ಕೂ ಸಾಮ್ಯತೆ ಇದ್ದರೂ ಝುಂಬಾದ ಪ್ರತಿ ಚಲನೆಗೂ ನೃತ್ಯದ ಸ್ಪರ್ಶವಿರುತ್ತದೆ. ಹಿಪ್ ಹಾಪ್, ಮೆರೆಂಗ್ಯು, ಸೋಕಾ ನೃತ್ಯ ಪ್ರಕಾರಗಳಲ್ಲದೆ, ಭಾರತದ ಜಾನಪದ ನೃತ್ಯಗಳಾದ ಭಾಂಗ್ರಾ, ಗಾರ್ಬಾ ಮೊದಲಾದವನ್ನು ಅಳವಡಿಸಲಾಗಿದೆ. ಹೀಗಾಗಿಯೇ ಸಂಗೀತ ಪ್ರಿಯರು ಫಿಟ್‌ನೆಸ್‌ ಕಾಪಾಡಿಕೊಳ್ಳಲು ಝುಂಬಾ ಮೊರೆಹೋಗುತ್ತಾರೆ.

ಜಿಮ್‌ ಬೇಸರವಾದರೆ ಝುಂಬಾ

ಸ್ಥೂಲ ಕಾಯದವರು ತಮ್ಮ ತೂಕ ಇಳಿಸಿಕೊಳ್ಳಲು ನೃತ್ಯ ಶಾಲೆಗಳಿಗೆ ದೌಡಾಯಿಸುವುದು ದಶಕದಿಂದ ಈಚೆಗೆ ಸಾಮಾನ್ಯವಾಗಿದೆ. ಜಿಮ್‌ಗಳಿಗೆ ಹೋಗಲಾಗದವರೂ, ಅಲ್ಲಿ ವರ್ಕ್‌ಔಟ್‌ ಮಾಡುವುದು ಕಷ್ಟ ಎನ್ನುವವರಿಗೆ ‘ಝುಂಬಾ’ ಪ್ರಿಯವಾಗಿದೆ. ಸ್ಪ್ರಿಂಗಿನಂತೆ ಜಿಗಿಯುವ, ಬಳಕುವ ಸ್ವಾತಂತ್ರ್ಯನೀಡುವ ‘ಝುಂಬಾ’ ಇಷ್ಟವಾಗುತ್ತದೆ.  

ನೃತ್ಯ 60 ನಿಮಿಷ

ನಿಧಾನವಾಗಿ ತಾಳ ಮತ್ತು ಲಯಕ್ಕೆ (ರಿದಂ ಮತ್ತು ಟೆಂಪೋ) ತಕ್ಕಂತೆ ಆರಂಭವಾಗುವ ನೃತ್ಯಾಭ್ಯಾಸ ಹಂತಹಂತವಾಗಿ ಏರುತ್ತಲೇ ಹೋಗುತ್ತದೆ. 30 ನಿಮಿಷಕ್ಕೆ ತಲುಪಿದ ಮೇಲೆ ಗತಿ ಇಳಿಮುಖವಾಗುತ್ತದೆ. ಯಾವ ‘ಟೆಂಪೊದಲ್ಲಿ’ ನೃತ್ಯ ಶುರು ಮಾಡಿರುತ್ತೇವೆಯೋ ಅಲ್ಲಿಗೇ ಬರುತ್ತೇವೆ. ಅಭ್ಯಾಸ 60 ನಿಮಿಷದಲ್ಲಿ ಮುಗಿಯುತ್ತದೆ.

ಕರಗುವ ಕೊಬ್ಬು

60 ನಿಮಿಷ ನೃತ್ಯ ಮಾಡಿದರೆ 400ರಿಂದ 600 ಕ್ಯಾಲರಿ ಕರಗುತ್ತದೆ. ಬೊಜ್ಜು ಕರಗಿಸುವ ಮೂಲಕ ಉದ್ದೇಶಿತ ಫಲಿತಾಂಶ ಕಾಣಬಹುದು. ಸರಳವಾದ ವ್ಯಾಯಾಮ, ತಾಳಕ್ಕೆ ತಕ್ಕಂತೆ ವ್ಯಾಯಾಮ ಜೊತೆಗೆ ಸಾಗುತ್ತದೆ. ಸುಸ್ತಾಗುವುದು ಕಡಿಮೆ. ಸಮೂಹ ನೃತ್ಯ ಝುಂಬಾವನ್ನು ಇಷ್ಟಪಟ್ಟು ಅಭ್ಯಾಸ ಮಾಡಬಹುದು. 

ಇದು ಜಿಮ್‌ಗಿಂತ ವಿಭಿನ್ನ. ಇಲ್ಲಿ ಗಾಯಗಳಾಗುವುದು ಕಡಿಮೆ. ಸ್ನಾಯುಗಳಿಗೆ ಒತ್ತಡ ಆಗೇ ಆಗುತ್ತದೆ. ವೇಗಕ್ಕೆ ಒತ್ತು ಕೊಡದೇ ಯೋಜಿತ ರೀತಿಯಲ್ಲಿ ಉತ್ತಮ ತರಬೇತುದಾರರೊಂದಿಗೆ ಅಭ್ಯಾಸ ನಡೆಸಿದರೆ ಗಾಯಗಳಾಗುವುದು ಕಡಿಮೆ. ಬೆನ್ನು, ಕತ್ತು , ಕೀಲು ನೋವುಗಳಿಂದ ಬಳಲುವವರಿಗಾಗಿ ‘ಝುಂಬಾ ಗೋಲ್ಡ್’ ಎಂಬ ಪ್ರಕಾರವೇ ಇದೆ ಎನ್ನುತ್ತಾರೆ ಬೆಂಗಳೂರಿನ ಕೋರಮಂಗಲದಲ್ಲಿರುವ ‘ರಿದಮಿಕ್‌ ಫೀಟ್‌’ ಫಿಟ್‌ನೆಸ್‌ ಕೇಂದ್ರದ ತರಬೇತುಗಾರ್ತಿ ಝಿನ್‌ ಜೂಲಿ ಮಸೀ. 

ವಯೋ ಮಿತಿಯಿಲ್ಲ, ಮಾರ್ಗದರ್ಶನ ಅಗತ್ಯ

ಯಾರು ಬೇಕಾದರೂ ಝುಂಬಾಗೆ ಸೇರಬಹುದು. ವಯಸ್ಸಿನ ಮಿತಿ ಎಂಬುದಿಲ್ಲ. ವಯೋಮಾನಕ್ಕೆ ತಕ್ಕಂತೆ ತರಬೇತಿ ನೀಡಲಾಗುತ್ತದೆ. 4ರಿಂದ 14ವರ್ಷದ ಮಕ್ಕಳಿಗೆ ‘ಝುಂಬಾ ಕಿಡ್ಸ್’ ಪ್ರಕಾರವಿದೆ. ಸ್ಟೆಪ್‌ ಅಪ್‌, ಪವರ್‌ ಝುಂಬಾ ಮಾದರಿಗಳು ಇವೆ. ‘ಆಕ್ವಾ ಝುಂಬಾ’ ಈಜುಕೊಳದಲ್ಲಿ ಮಾಡುವ ನೃತ್ಯ–ವ್ಯಾಯಾಮ. 

ಜಾಲತಾಣಗಳ ಮೂಲಕ ಝುಂಬಾ ಕಲಿಯ ಬಹುದು. ಇಲ್ಲಿ ಬಹಳಷ್ಟು ನಕಲಿಗಳೇ ಇರುತ್ತವೆ. ಮೊದಲು ಫಿಟ್‌ನೆಸ್‌ ಕೇಂದ್ರಗಳಲ್ಲಿ ನುರಿತ ತರಬೇತು ದಾರರಿಂದ ಕಲಿತು, ಮನೆಯಲ್ಲೇ ಅಭ್ಯಾಸ ಮುಂದುವರಿಸಬಹುದು ಎನ್ನುತ್ತಾರೆ ಝಿನ್‌ ಜೂಲಿ ಮಸೀ.

‘ಬೆಟೊ’ ಮರೆತ ಕ್ಯಾಸೆಟ್‌!

ಕೊಲಂಬಿಯಾದ ನೃತ್ಯಪಟು ಆಲ್ಬರ್ಟೊ ಬೆಟೊ ಪೆರೇಜ್‌ 1990ರ ಸುಮಾರು ಈ ಝುಂಬಾ ನೃತ್ಯ ಮತ್ತು ವ್ಯಾಯಾಮ ಪ್ರಕಾರ ಅನ್ವೇಷಿಸಿದ. ಆಗ ಕ್ಯಾಸೆಟ್‌ಗಳಿಂದ ನೃತ್ಯಾಭ್ಯಾಸ ಮಾಡುತ್ತಿದ್ದ ಕಾಲ. ಒಂದು ದಿನ ತಾನು ತರಗತಿಗಳನ್ನು ನೀಡುತ್ತಿದ್ದ ಶಾಲೆಗೆ ಆಡಿಯೊ ಕ್ಯಾಸೆಟ್‌ ತರಲಿಲ್ಲ. ವಿದ್ಯಾರ್ಥಿಗಳನ್ನು ವಾಪಸ್‌ ಕಳುಹಿಸಲು ಅವನ ಮನಸ್ಸು ಒಪ್ಪಲಿಲ್ಲ. ತಾಳ ಹಾಕುತ್ತಾ ವ್ಯಾಯಾಮದಂತೆ ನೃತ್ಯ ಕಲಿಸಲು ಆರಂಭಿಸಿದ. ಆಗ ಹೊಳೆದದ್ದೇ ಝುಂಬಾ.

2001ರಲ್ಲಿ ಅಮೆರಿಕದ ಫ್ಲಾರಿಡಾಗೆ ತೆರಳಿದ ಝುಂಬಾ ಎಲ್ಲರನ್ನು ಸೆಳೆಯಿತು. ಎರಡೇ ವರ್ಷದಲ್ಲಿ 200 ಝುಂಬಾ ಸ್ಟುಡಿಯೊಗಳನ್ನು ಆರಂಭಿಸಿದ ಬೆಟೊ. ಇಂದು ವಿಶ್ವದ 186 ದೇಶಗಳಲ್ಲಿ ಝುಂಬಾ ಅಸ್ತಿತ್ವದಲ್ಲಿದೆ. ಅನೇಕ ನೃತ್ಯಪಟುಗಳು ಝುಂಬಾ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.

***

ಮಹಿಳೆಯ ಆಪ್ತ ಸಂಗಾತಿ ಮಹಿ ಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಆಪ್ತ ಸಂಗಾತಿ

ಆಪ್ತ ಸಂಗಾತಿ, ಆಪ್ತ ಸಂಗಾತಿ

Post Comments (+)